ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಹೈಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್‌

ಪ್ರಿಯಾ ಪಿಳ್ಳೈ ಪ್ರವಾಸಕ್ಕೆ ಅಡ್ಡಿ
Last Updated 28 ಜನವರಿ 2015, 10:05 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್‌): ‘ಗ್ರೀನ್‌ಪೀಸ್‌’ ಸಂಘಟನೆಯ ಕಾರ್ಯಕರ್ತೆ ಪ್ರಿಯಾ ಪಿಳ್ಳೈ ಅವರ ಲಂಡನ್‌ ಪ್ರವಾಸಕ್ಕೆ ಅಡ್ಡಿಯುಂಟು ಮಾಡಿದ ಬಗ್ಗೆ ದೆಹಲಿ ಹೈಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಬುಧವಾರ ನೋಟಿಸ್‌ ಜಾರಿ ಮಾಡಿದೆ.

ಜನವರಿ 11ರಂದು ಪ್ರಿಯಾ ಪಿಳ್ಳೈ ಲಂಡನ್‌ಗೆ ಹೊರಟಿದ್ದರು. ದೆಹಲಿಯ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವೇಳೆ ಅವರ ವಿಸಾ ಅನೂರ್ಜಿತ ಎಂಬ ಕಾರಣ ನೀಡಿದ್ದ ವಲಸೆ ಪ್ರಾಧಿಕಾರ ಹಾಗೂ ಭದ್ರತಾ ಸಿಬ್ಬಂದಿ ಅವರು ಪ್ರಯಾಣಕ್ಕೆ ಅನುಮತಿ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಪ್ರಿಯಾ ಅವರು ಮಂಗಳವಾರ (ಜ. 27) ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಪ್ರಿಯಾ ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜೀವ್‌ ಷಕ್ದೆರ್‌ ಅವರು ಕೇಂದ್ರ ಗೃಹ ಇಲಾಖೆ, ವಲಸೆ ಪ್ರಾಧಿಕಾರ ಮತ್ತು ಕೇಂದ್ರ ಗುಪ್ತಚರ ಇಲಾಖೆಗೆ ನೋಟಿಸ್‌ ಜಾರಿ ಮಾಡಿದ್ದು, ಫೆಬ್ರುವರಿ 6ರೊಳಗೆ ನೋಟಿಸ್‌ಗೆ ಉತ್ತರಿಸುವಂತೆ ಸೂಚಿಸಲಾಗಿದೆ.

ಜನವರಿ 14ರಂದು ಬ್ರಿಟನ್‌ ಸಂಸತ್ತನ್ನು ಉದ್ದೇಶಿಸಿ ಮಾತನಾಡಲು ಪ್ರಿಯಾ ಲಂಡನ್‌ಗೆ ಹೊರಟಿದ್ದರು. ‘ನಾನು ಲಂಡನ್‌ ಪ್ರವಾಸಕ್ಕೆ ಆರು ತಿಂಗಳ ವಾಣಿಜ್ಯ ವಿಸಾ ಹೊಂದಿದ್ದೆ. ಆದರೂ ಅಧಿಕಾರಿಗಳು ನನ್ನ ಪ್ರವಾಸಕ್ಕೆ ಅಡ್ಡಿಯುಂಟು ಮಾಡಿದ್ದಾರೆ. ಈ ಘಟನೆಯಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ’ ಎಂದು ಪ್ರಿಯಾ ಆರೋಪಿಸಿದ್ದಾರೆ.

‘ಫೆಬ್ರುವರಿ 11ರಂದು ಲಂಡನ್‌ನಲ್ಲಿ ಆಯೋಜನೆಯಾಗಿರುವ ಸಭೆಯೊಂದರಲ್ಲಿ ಪಾಲ್ಗೊಳ್ಳಲು ಪ್ರಿಯಾ ಅವರಿಗೆ ಆಹ್ವಾನ ಬಂದಿದೆ. ಹೀಗಾಗಿ ಅವರ ಪ್ರವಾಸಕ್ಕೆ ಮಧ್ಯಂತರ ಅನುಮತಿ ನೀಡಬೇಕು’ ಎಂದು ಅವರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT