ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನ್ ಹಾಸ್ಯದ ರುಜು

ಮಿನುಗು ಮಿಂಚು
Last Updated 18 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ದೇವನ್ ವರ್ಮ ತಾನು ನಟಿಸಿದ ಸಿನಿಮಾಗಳ ಸ್ಟಾರ್ ಆಗಿರಲಿಲ್ಲವಾದರೂ ಕೌಟುಂಬಿಕ ಹಾಸ್ಯ ದೃಶ್ಯಗಳಿಂದ ಜನಮಾನಸದಲ್ಲಿ ಉಳಿದವರು. 1970, 1980ರ ದಶಕದಲ್ಲಿ ಸಂಸಾರ ಸಮೇತ ನೋಡಬಹುದಾದ ಹಾಸ್ಯ ಪ್ರಧಾನ ಸಿನಿಮಾಗಳಲ್ಲಿ ದೇವನ್ ವರ್ಮ ಅವರ ಉಪಸ್ಥಿತಿ ಇದ್ದೇ ಇರುತ್ತಿತ್ತು. ಹಾಸ್ಯ ಸಂಭಾಷಣೆ ಹೇಳುವ ತನ್ನದೇ ಶೈಲಿಯಿಂದ ಗುರುತಾಗಿದ್ದ ದೇವನ್, ನಿಸ್ತೇಜ ಭಾವವನ್ನು ಹೊಮ್ಮಿಸುತ್ತಿದ್ದ ರೀತಿ ನೋಡಿಯೇ ಅನೇಕರಿಗೆ ನಗು ಬರುತ್ತಿತ್ತು.

ದೇವನ್ ವರ್ಮ 1961ರಲ್ಲಿ ಚಿತ್ರರಂಗ ಪ್ರವೇಶಿಸಿದರು. ವೇದಿಕೆಯೊಂದರ ಪ್ರದರ್ಶನದಲ್ಲಿ ಅವರ ಪ್ರತಿಭೆಯನ್ನು ಮೊದಲು ಗುರ್ತಿಸಿದವರು ಬಿ.ಆರ್. ಚೋಪ್ರ. ಮೊದಲ ಹಿಂದಿ ಸಿನಿಮಾ ಪ್ರಾರಂಭವಾದ ಮೇಲೆ ದೇವನ್, ಎವಿಎಂ ಸ್ಟುಡಿಯೋಸ್ ಜೊತೆ ಮೂರು ವರ್ಷಗಳ ಅವಧಿಯ ಒಪ್ಪಂದ ಮಾಡಿಕೊಂಡು ಚೆನ್ನೈಗೆ ಹೋದರು. ಈ ನಡುವೆ ಅವರು ಹಾಸ್ಯಪಾತ್ರದಲ್ಲಿ ಅಭಿನಯಿಸಿದ್ದ ‘ಗುಮ್ರಾಹ್’ ಸಿನಿಮಾ ಹಿಟ್ ಆಯಿತು. ಹಾಗಾಗಿ ಮುಂಬೈಗೆ ಮರಳಲು ನಿರ್ಧರಿಸಿದರು. ನಿಧನಿಧಾನವಾಗಿ ಚಿತ್ರರಂಗದಲ್ಲಿ ಅವರು ನೆಲೆನಿಂತರು. ಎರಡನೇ ಮುಖ್ಯ ಪಾತ್ರ ಅವರಿಗೆ ಸಿಗಲಾರಂಭಿಸಿತು. ಇದಕ್ಕೆ ಉದಾಹರಣೆ, ‘ದೇವರ್’ ಹಾಗೂ ‘ಅನುಪಮ’ ಚಿತ್ರಗಳು.

1975ರಲ್ಲಿ ತೆರೆಕಂಡ ‘ಚೋರಿ ಮೇರಾ ಕಾಮ್’ ದೇವನ್ ವರ್ಮ ಅವರಿಗೆ ದೊಡ್ಡ ಯಶಸ್ಸನ್ನು ಕೊಟ್ಟಿತು. ಆ ಸಿನಿಮಾ ಅಭಿನಯಕ್ಕಾಗಿಯೇ ಶ್ರೇಷ್ಠ ಹಾಸ್ಯನಟ ಫಿಲ್ಮ್‌ಫೇರ್ ಪ್ರಶಸ್ತಿ ಅವರಿಗೆ ಸಂದಿತು. ಇದು ಅವರಿಗೆ ಸಂದ ಮೊದಲ ಫಿಲ್ಮ್‌ಫೇರ್ ಪ್ರಶಸ್ತಿ. ಆಪ್ತಮಿತ್ರ ಅಥವಾ ಸಹೋದರನ ಪಾತ್ರಗಳಲ್ಲಿ ದೇವನ್ ಮಿಂಚತೊಡಗಿದರು. ಅವರ ಸ್ಮರಣೀಯ ಅಭಿನಯ ಹೆಚ್ಚಾಗಿ ಮೂಡಿಬಂದದ್ದು ಹೃಷಿಕೇಶ್ ಮುಖರ್ಜಿ, ಬಸು ಚಟರ್ಜಿ ಹಾಗೂ ಗುಲ್ಜಾರ್ ನಿರ್ದೇಶನದ ಹಿಂದಿ ಸಿನಿಮಾಗಳಲ್ಲಿ.

ಗುಲ್ಜಾರ್ ನಿರ್ದೇಶನದ ‘ಅಂಗೂರ್‌’ನಲ್ಲಿ ದ್ವಿಪಾತ್ರದ ಮೂಲಕ ಗಮನಸೆಳೆದ ದೇವನ್, ಶ್ರೇಷ್ಠ ಹಾಸ್ಯನಟ ಎಂದು ಮೂರನೇ ಪ್ರಶಸ್ತಿಯನ್ನೂ ಆ ಸಿನಿಮಾ ಅಭಿನಯಕ್ಕಾಗಿ ಪಡೆದರು. ಅದು ವಿಲಿಯಂ ಶೇಕ್ಸ್‌ಪಿಯರ್‌ನ ‘ಕಾಮಿಡಿ ಆಫ್ ಎರರ್ಸ್‌’ ಆಧರಿಸಿದ ಸಿನಿಮಾ. ಕನ್ನಡದಲ್ಲಿ ‘ಉಲ್ಟಾ ಪಲ್ಟಾ’ ಸಿನಿಮಾ ಬಂದಿತಲ್ಲ; ಅದರ ಕಥಾಮೂಲವೂ ಇದೇ. ‘ಗೋಲ್‌ಮಾಲ್’, ‘ರಂಗ್‌ಭಿರಂಗಿ’ ಹಾಗೂ ‘ಖಟ್ಟಾ ಮೀಠಾ’ ಅವರ ಹಾಸ್ಯಾಭಿರುಚಿಯ ನೆನಪನ್ನು ಉಳಿಸಿರುವ ಸಿನಿಮಾಗಳು. ‘ದಿಲ್ ತೊ ಪಾಗಲ್ ಹೈ’, ‘ಕ್ಯಾ ಕೆಹನಾ’ ಹಾಗೂ ‘ಇಶ್ಕ್’ ಚಿತ್ರಗಳ ನಂತರ ಅವರು ಸಿನಿಮಾರಂಗದಿಂದ ದೂರವೇ ಉಳಿದರು. ಕಳೆದ ವರ್ಷ ಡಿಸೆಂಬರ್ 2ರಂದು ಪುಣೆಯಲ್ಲಿ ಅವರು ಕೊನೆಯುಸಿರೆಳೆದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT