ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಿಗೂ ಪ್ರಾಬ್ಲಮ್ಮು!

Last Updated 25 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಮನುಷ್ಯರ ಬದುಕಿನ ಚಿತ್ರ ವಿಚಿತ್ರ ಸಮಸ್ಯೆಗಳಿಗೆ ದೇವರು ಉತ್ತರದಾಯಿ. ಆದರೆ, ಸರ್ವಶಕ್ತನಾದ ಭಗವಂತನಿಗೂ ನೂರೆಂಟು ಕಷ್ಟಕೋಟಲೆ. ಕೆಲವು ನಿಮಿಷ ನಿಮ್ಮ ಸಮಸ್ಯೆ ಮರೆತು, ದೇವರ ಅಳಲನ್ನು ಆಲಿಸಿ.

ಯಾರಿಗ್ಹೇಳೊಣ ನನ್ನ ಪ್ರಾಬ್ಲಮ್? ಹೇಳಿಕೊಂಡರೆ– ‘‘ಆಯ್ಯೊ, ದೇವರೆ, ನಿನಗೂ ತೊಂದರೆಗಳಾ? ನಾವಾದರೆ ಹುಲು ಮಾನವರು. ನಮಗೆ ತೊಂದರೆಗಳು, ತಾಪತ್ರಯಗಳು ಸಾಮಾನ್ಯ. ಅವೇ  ನಮ್ಮ ಜೀವನದ ಹೆಗ್ಗುರುತು, ಆದರೆ ನಿನಗೆ? ನಮ್ಮ ಪರಿಪಾಟಲುಗಳನ್ನು ನಿನ್ನ ಬಳಿ ಹೇಳಿಕೊಳುತ್ತೆವೆ, ನೀನೆ ಕಷ್ಟ ಎಂದು ಹೇಳಲು ಶುರು ಮಾಡಿದರೆ ನಾವಾರ ಬಳಿ ಹೋಗಬೇಕಯ್ಯ?’’ ಎಂದು ದಬಾಯಿಸೇ ಬಿಡುತ್ತಾರೆ ಜನ.

ನನ್ನ ಕಷ್ಟ ನನಗೆ ಗೊತ್ತು. ನಿಮಗೆಲ್ಲ ಒಂದೇ ಸಂಸಾರ (ಕೆಲವರಿಗೆ ಎರಡಿರಬಹುದು. ಅದು ಅವರ ಹಣೆ ಬರಹ!). ನನಗೆ? ಎಷ್ಟು ಜನರ ಜವಾಬ್ದಾರಿ! ಎಲ್ಲೋ ಕೆಲವರನ್ನು ಬಿಟ್ಟರೆ, ಉಳಿದವರೆಲ್ಲ ಒಂದಲ್ಲಾ ಒಂದು ಬಗೆಯಲ್ಲಿ ಭಿಕ್ಷುಕರೇ! ಅದು ಬೇಕು, ಇದು ಬೇಡ, ಇನ್ನೂ ಬೇಕು, ಮತ್ತಷ್ಟೂ ಬೇಕು... ಒಂದೆ ಎರಡೇ... ಅಬ್ಬಬ್ಬ! ಒಮ್ಮೆ ನನ್ನ ಜಾಗದಲ್ಲಿದ್ದು ನೋಡ್ರಿ, ನನ್ನ ಗತಿ ಏನು ಅಂತ. ಮೂರು ಹೊತ್ತು ಇವರ ‘ಬೇಕು’ಗಳನ್ನು ಕೇಳಿ ತಲೆ ಚಿಟ್ಟು ಹಿಡಿದು ಹೋಗುತ್ತದೆ.

ಆದರೆ, ಏನು ಮಾಡುವುದು– ಇವರ ಪೂರ್ವ ಜನುಮದ ಫಲಗಳನ್ನು ನಾನು ಅಳಿಸಲು ಸಾಧ್ಯವೇ ಇಲ್ಲ. ಎಷ್ಟು ವಿವೇಚನೆ ಮಾಡುವ ಶಕ್ತಿ ಕೊಟ್ಟರೂ ಮೂಢರಂತೆ ವರ್ತಿಸುವವ ರಿಗೆ ಮಾಡುವುದಾದರೂ ಏನು? ಪಾಪಕೃತ್ಯಗಳು, ತಪ್ಪು ಮಾತುಗಳು, ವರ್ತನೆ, ಅಷ್ಟೇ ಯಾಕೆ, ತಪ್ಪು ಯೋಚನೆ ಗಳು ಸಹ ನಮ್ಮ ಕರ್ಮಕ್ಕೆ ಸೇರಿಸಲ್ಪಡುತ್ತವೆ ಎಂದು ಗೊತ್ತಿದ್ದೂ ಮಾಡುತ್ತಾರಲ್ಲ, ನಾನೇನು ಮಾಡಲಿ? ಮಾಡುವುದೆಲ್ಲವನ್ನೂ ಮಾಡಿ– ದೇವಾ ಯಾಕೀ ತರಹ ಮಾಡಿದೆ, ಎಂದು ನನ್ನನ್ನು ದೂರಿದರೇನು ಫಲ?

ಅದು ಕೊಡು, ಇದು ಕೊಡು ಎಂದು ಕಾಡಿಸುವವರು ಬಹಳವಾದರೆ, ನನ್ನ ಹೆಸರಿನಲ್ಲಿ ಜನರನ್ನು ಸುಲಿಗೆ ಮಾಡುವವರು ಕೂಡ ಇದ್ದಾರೆ. ನಿಮಗೆ ಆಸ್ತಿ ಸಿಗಬೇಕೆ? ನಿಮ್ಮ ಶತ್ರು ಒದ್ದಾಡಬೇಕೆ? ನಿಮ್ಮ ದಾಯಾದಿಗಳು ನೆಮ್ಮದಿ ಕೆಡಿಸಿಕೊಳ್ಳಬೇಕೆ? ನಿಮ್ಮ ಮಗಳಿಗೆ ಒಳ್ಳೆಯ ಮನೆ ಸಿಗಬೇಕೆ? ಮಗ ವಿದೇಶಕ್ಕೆ ಹೋಗಬೇಕೆ? ಇಲ್ಲಿ ಬನ್ನಿ, ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರವಿದೆ. ಇಕೋ, ಈ ಹಾರ ಕೊಂಡುಕೊಳ್ಳಿ, ಈ ವಿಗ್ರಹ ನಿಮ್ಮ ಮನೆಯ ದೇವರ ಕೊಠಡಿಯಲ್ಲಿಡಿ, ಆ ಹೋಮ ಮಾಡಿಸಿ, ದೇವಾಲಯಕ್ಕೆ ದೇಣಿಗೆ ಕೊಡಿ.

ಅಬ್ಬಾ... ಜನರ ಆಸೆಗಳಿಗಿಂತ ಇವರ ಪರಿಹಾರಗಳೇ ಜಾಸ್ತಿ. ಗಣಕ ಯಂತ್ರದ ಬಳಕೆ, ಆಂಗ್ಲ ಭಾಷೆಯ ಮೇಲೆ ಹಿಡಿತವಿದ್ದರಂತೂ, ಅವರೇ ದೇವರು. ಆಶ್ಚರ್ಯ ಏನು ಗೊತ್ತಾ? ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳಿ, ಹಸಿವಿನಿಂದ ನರಳುತ್ತಿರುವ ಬಡವನಿಗೆ ಅನ್ನ ಕೊಡಿ, ಅಷ್ಟೆಲ್ಲ ಬಿಡಿ, ನಿಮ್ಮ ಸೊಸೆಯನ್ನು ಮಗಳಂತೆ ಕಾಣಿ, ನಿಮ್ಮ ಮನೆ ಕೆಲಸದವರಿಗೆ ಬಿಸಿ ಊಟ ಕೊಡಿ... ಇಂಥಹುದನ್ನೆಲ್ಲ ಯಾರೂ ಹೇಳುವುದೇ ಇಲ್ಲ. ನನ್ನನ್ನು ತಲುಪುವ ಸುಲಭ ಮಾರ್ಗಗಳನೆಲ್ಲ ಬಿಟ್ಟು, ಕಷ್ಟ ಪಡುತ್ತಿರುವ ಇವರಿಗೆ ನಾನೇನು ಹೇಳುವುದು...

“ಓ ದೇವರೇ, ನನ್ನ ಗೆಳೆಯ ನನಗಿಂತಲೂ ಕಡಿಮೆ ಅಂಕ ತೆಗೆದವನು, ಅವನಿಗೆ ಒಳ್ಳೆಯ ಕೆಲಸ ಸಿಕ್ಕಿತು, ನನಗೆ ಈ ಕೋತಿ ಬಾಸ್ ಸಹವಾಸ, ಸಂಬಳವೂ ಕಡಿಮೆ”. “ನನ್ನ ಗೆಳತಿ ನೋಡುವುದಕ್ಕೆ ಕಾಡು ಕೋಣ, ನನ್ನಷ್ಟು ಓದಿಲ್ಲ, ಹಣವಿಲ್ಲ, ಆದರೆ ಅವಳ ಗಂಡ? ಅಬ್ಬಬ್ಬಾ, ಯಾವ ಜನ್ಮದ ಪುಣ್ಯವೋ ಅಂಥ ಹುಡುಗ ಸಿಕ್ಕುವುದು”. “ನೀನೊಬ್ಬ ದೇವರಾ? ನನ್ನತ್ತೆ ನನ್ನನ್ನು ಹುರಿದು ಮುಕ್ಕುತ್ತಾಳೆ, ಅವಳಿಗೆ ಆಯುಸ್ಸು ಕೊಟ್ಟಿರುವೆ, ಅದೇ ನನ್ನ ತಂಗಿಯ ಅತ್ತೆ, ಚಿನ್ನದಂತಹ ಹೆಂಗಸು, ಎಷ್ಟು ಬೇಗ ಕರೆಸಿಕೊಂಡುಬಿಟ್ಟೆಯಲ್ಲಾ?’’.

“ಅಯ್ಯೊ ದೇವರೆ, ನನ್ನ ಸೊಸೆಯ ಹಿಂದೆ ನನ್ನ ಮಗ ಸುತ್ತುತಾನಲ್ಲ, ಅದೇ ರೀತಿ ನನ್ನಳಿಯ ನನ್ನ ಮಗಳ ಹಿಂದಿರಬಾರದೆ?’’. ‘‘ನನ್ನ ಸಹೋದ್ಯೋಗಿಗೆ ಬಡ್ತಿ ಸಿಗುವ ಹಾಗೆ ಮಾಡಿದೆಯಲ್ಲ, ಅವನು ಕಳೆದ ಮೀಟಿಂಗಲ್ಲಿ ನನ್ನನ್ನು ಅವಮಾನಿಸಿದನಲ್ಲ”– ಇಂಥ ದೂರುಗಳಿಗೆ ಕೊನೆ ಮೊದಲೇನಾದರೂ ಉಂಟಾ? ಬೇರೆಯವರನ್ನು ನೋಡಿ, ಕರುಬಿ, ಕರುಬಿ, ತಮ್ಮ ಬದುಕನ್ನು ನರಕ ಮಾಡಿಕೊಳ್ಳುವ ಜನರೇ ಹೆಚ್ಚು. ಅಮೇಲೆ ನನ್ನ ತಲೆಯ ಮೇಲೆ ಗೂಬೆ ಕೂರಿಸಿಬಿಡುತ್ತಾರೆ.

ಇನ್ನು ಕೆಲವರು– ಮುಖ್ಯವಾಗಿ ಶ್ರೀಮಂತರು, ಅಧಿಕಾರ ಉಳ್ಳವರು– ಬೇಕಾದಷ್ಟು ಮೋಸ, ವಂಚನೆ ದರೋಡೆ ಮಾಡಿ ಆಮೇಲೆ ಸಾಕಷ್ಟು ದಾನ, ಧರ್ಮ ಮಾಡುತ್ತಾರೆ, ಪಾಪಗಳನ್ನು ತೊಳೆದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ದೇಗುಲಗಳ ನಿರ್ಮಾಣ, ಅವುಗಳ ಜೀರ್ಣೋದ್ದಾರ, ಅನಾಥರಿಗೆ ಹಣ ಸಹಾಯ, ಹೀಗೆ ಪಾಪ ಕಳೆದುಕೊಳ್ಳುವ ಕೆಲಸಗಳು ನಡೆಯುತ್ತವೆ. ಆಮೇಲೆ ನನ್ನ ಬಳಿ ಬಂದು (ಎಲ್ಲ  ನೋಡುತ್ತಿರುವ, ತಿಳಿದಿರುವ ನನಗೆ ಮತ್ತೆ ಸ್ಪೆಶಲ್ ಆಗಿ!) ಹೇಳಿಕೊಳ್ಳುತ್ತಾರೆ. ‘ನಾನು ಮಾಡಿದೆ, ಈಗ ಒಳ್ಳೆಯದನ್ನು ಮಾಡಿರುವೆ, ಈಗ ನೀನು ನನಗೆ ಒಳ್ಳೆಯದು ಮಾಡು’ ಎಂದು ತರ್ಕ ಮಂಡಿಸುತ್ತಾರೆ, ರೋಪು ಹಾಕುತ್ತಾರೆ.

ಜಾತಿ, ಜನಾಂಗ, ಕೋಮುಗಳನ್ನು ನನ್ನ ಹೆಸರಿನಲ್ಲಿ ಸೃಷ್ಟಿಸುವ ಪ್ರಯತ್ನಗಳು ಎಲ್ಲರಿಗಿಂತ ಮಿಗಿಲಾಗಿ ನನಗೆ ಬೇಸರ ಉಂಟು ಮಾಡುತ್ತವೆ. ‘ನಮ್ಮ ದೇವರು ನಿಮ್ಮ ದೇವರಿಗಿಂತ ದೊಡ್ಡವನು’, ‘ನೀವು ಕೀಳು’ ಎಂದೆಲ್ಲ ಅಲ್ಲಗಳೆಯುವುದು ನನಗೆ ಸೇರದು. ನನ್ನ ಆಲಯಗಳನ್ನು ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತಾಡಲು ಬಳಸುವುದು. ನನ್ನ ಹೆಸರಿನಲ್ಲಿ ಅತ್ಯಾಚಾರ ಎಸಗುವುದು, ಹಣ ಸಂಗ್ರಹಿಸುವುದು, ಪ್ರಾಣಿ ಬಲಿ ಕೊಡುವುದು– ದೇವರನ್ನು ಬಲಿ ಹಾಕಲು ಮನುಷ್ಯರು ಬಳಸುವ ಮಾರ್ಗಗಳು ಒಂದೆರಡೇ...

ಬೇರೆಯವರನ್ನು, ಮಾನಸಿಕವಾಗಿ, ನಿರ್ಮಲ ಮನಸ್ಸಿನಿಂದ ಪ್ರೀತಿಸಿ ಬಾಳಲು ಸಾಧ್ಯವಿಲ್ಲದ ಮನುಷ್ಯ ನನ್ನನ್ನು ದೂರುತ್ತಲೇ ಇರುತ್ತಾನೆ. ಅಥವಾ ನನ್ನನ್ನು ದ್ವೇಷಿಸುತ್ತಲೇ ಜೀವನವನ್ನು ನಡೆಸುತ್ತಾನೆ. ಪ್ರೇಮ, ವಿಶ್ವಾಸ, ಸಹನೆ, ತಾಳ್ಮೆಗಳನ್ನು ರೂಢಿಸಿಕೊಂಡರೆ ಬದುಕು ಬಹಳ ಸುಂದರ. ಆದರೆ, ದ್ವೇಷ, ಅಸೂಯೆ, ಹಗೆತನ, ದುರಾಸೆ, ಕಾಮ, ಮದ, ಮುಂತಾದ ಕೀಳು ಭಾವನೆಗಳಿಂದ ತಮ್ಮ ಬದುಕನ್ನು ತಾವೇ ಹಾಳು ಮಾಡಿಕೊಳ್ಳುವವರನ್ನು ಕಂಡರೆ ನನಗೆ ನೋವು ಹಾಗು ಮರುಕ ಉಂಟಾಗುತ್ತದೆ.

‘ದೇವರು ಇಲ್ಲವೇ ಇಲ್ಲ’ ಎಂದು ವಾದಿಸುವವರನ್ನು ಕಂಡರೆ ನನಗೆ ಖಂಡಿತಾ ಸಿಟ್ಟಿಲ್ಲ. ಎಲ್ಲರೂ ತಂತಮ್ಮ ಮನಸ್ಸಾಕ್ಷಿಗೆ ತಕ್ಕಂತೆ, ಸಮಾಜದ ಹಿತಕ್ಕೆ ಸರಿಯಾಗಿ ನಡೆದುಕೊಂಡು, ಎಲ್ಲರು ಸುಖವಾಗಿದ್ದರೆ ನನಗಷ್ಟೇ ಸಾಕು. ಈಗ ಗೊತ್ತಾಯಿತೆ ನನ್ನ ಕಷ್ಟಗಳು? 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT