ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ಆಹಾರ ‘ಪರ್ಸಿಮನ್’

Last Updated 5 ಅಕ್ಟೋಬರ್ 2015, 19:34 IST
ಅಕ್ಷರ ಗಾತ್ರ

ಕ್ಯಾಲಿಫೋರ್ನಿಯಾದ ಕುಪರ್ಟಿನೋದಲ್ಲಿರುವ ತಂಗಿ ಮನೆಯ ಹಿತ್ತಲಲ್ಲಿ ಒಂದು ಪುಟ್ಟ ಮರ. ಅದರ ತುಂಬ ಕೊಂಬೆ ಜಗ್ಗುವಷ್ಟು ಚೆಂಡಿನ ಗಾತ್ರದ ಹಣ್ಣುಗಳು. ಹಳದಿ, ಕಿತ್ತಳೆ ಬಣ್ಣದ ಆ ಹಣ್ಣುಗಳನ್ನು ನಾನು ಇದುವರೆಗೂ ಕಂಡಿರಲಿಲ್ಲ. ತಂಗಿಯಲ್ಲಿ ಕೇಳಿದೆ. ಅವಳು ಅದು ‘ಪರ್ಸಿಮನ್ ಹಣ್ಣು’ ಎಂದಳು.

ಪರ್ಸಿಮನ್ ವಿದೇಶಿ ಕಾಡು ಹಣ್ಣು. ಆಕಾರಕ್ಕೆ ಅನುಗುಣವಾಗಿ ಇದರಲ್ಲಿ ಎರಡು ವಿಧ. ಒಂದು ಚಪ್ಪಟೆ ಆಕಾರದ, ನೋಡಲು ಟೊಮೆಟೊ ಅಥವಾ ಚಿಕ್ಕ ಸಿಹಿಕುಂಬಳದಂತೆ ಕಾಣುವ ಹಣ್ಣು. ಇದರ ರುಚಿ ಹಣ್ಣಾದಾಗ ತುಂಬ ಸಿಹಿ. ಇನ್ನೊಂದು, ದುಂಡಗೆ ಇರುವ ಹಣ್ಣು. ಇದು ಬಲಿತಾಗ ಒಗರು. ಹಣ್ಣಾದ ಮೇಲಷ್ಟೇ ಸಿಹಿ.

ಎರಡೂ ಜಾತಿಯ ಹಣ್ಣೂ ಅತ್ಯಂತ ಸ್ವಾದಿಷ್ಟ. ನಮ್ಮ ಆರೋಗ್ಯಕ್ಕೆ ಬೇಕಾದ ವಿಟಮಿನ್‌ಗಳು, ಖನಿಜಾಂಶಗಳು, ಆ್ಯಂಟಿಯಾಕ್ಸಿಡೆಂಟುಗಳನ್ನು ಹೊಂದಿದೆ. ಲ್ಯಾಟಿನ್ ಭಾಷೆಯಲ್ಲಿ ಪರ್ಸಿಮನ್ ಎಂದರೆ ‘ದೇವರ ಆಹಾರ’ ಎಂದು ಅರ್ಥ. ಇದರ ವೈಜ್ಞಾನಿಕ ಹೆಸರು Diospyros  virginiana.  ಇದರ ಮೂಲ ಚೈನಾ. ನಂತರ ಕೊರಿಯಾ, ಜಪಾನ್ ದೇಶಗಳಿಗೂ ಹಬ್ಬಿತು. 19ನೇ ಶತಮಾನದ ಮಧ್ಯಭಾಗದಲ್ಲಿ ಕ್ಯಾಲಿಫೋರ್ನಿಯಾ ರಾಜ್ಯಕ್ಕೆ ಕಾಲಿಟ್ಟಿತು.

ಪರ್ಸಿಮನ್ ಮರ 25 ಅಡಿಯಷ್ಟು ಎತ್ತರ ಮತ್ತು ಹರಡಿ ಬೆಳೆಯುತ್ತದೆ. ಎಲೆಗಳು ಹಸಿರು ಬಣ್ಣದಿಂದ ಕೂಡಿದ್ದು 7ಇಂಚಿನಷ್ಟು ಉದ್ದ ಮತ್ತು 4 ಇಂಚಿನಷ್ಟು ಅಗಲ ಇರುತ್ತವೆ. ಫಾಲ್ ಸೀಸನ್(ಎಲೆ ಉದುರುವ ಕಾಲ) ನಲ್ಲಿ ಎಲೆಗಳು ಹಳದಿ, ಕಿತ್ತಳೆ ಮತ್ತು ಕೆಂಪು ಬಣ್ಣಕ್ಕೆ ತಿರುಗುತ್ತವೆ. ಇದನ್ನು ಆಲಂಕಾರಿಕ ಮರವಾಗಿಯೂ ಬೆಳೆಸುತ್ತಾರೆ. ಚಳಿ ಮತ್ತು ಸಣ್ಣ ಮಟ್ಟಿನ ಬೇಸಿಗೆ ಇರುವಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದು ತೀವ್ರ ಚಳಿಯನ್ನು ತಾಳಿಕೊಳ್ಳಬಲ್ಲುದು. ಆದರೆ ಕಡು ಬಿಸಿಲಿನ ತಾಪಮಾನ ಇದ್ದರೆ ಎಲೆಗಳು ಸಾಯುತ್ತವೆ.

ಕೊಂಬೆಗಳು ಬೆಳೆಯುವುದಿಲ್ಲ. ಒಳ್ಳೆ ಬೆಳಕು ಮತ್ತು ಗಾಳಿ ಈ ಗಿಡದ ಬೆಳವಣಿಗೆಗೆ ಅವಶ್ಯಕ. ಆದರೂ ಸ್ವಲ್ಪ ಮಟ್ಟಿನ ನೆರಳನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದು ಬರಗಾಲವನ್ನು ಎದುರಿಸಬಲ್ಲುದು. ನೀರು, ಗೊಬ್ಬರ ಹಾಕದಿದ್ದರೂ ಹಣ್ಣುಗಳನ್ನು ಬಿಡುತ್ತದೆ. ತಂಪು ಪ್ರದೇಶದಲ್ಲಿ ಆರು ವಾರಕ್ಕೊಮ್ಮೆ ನೀರುಣಿಸಿದರೆ ದೊಡ್ಡ ಗಾತ್ರದ ಮತ್ತು ಗುಣಮಟ್ಟದ ಹಣ್ಣು ದೊರೆಯುತ್ತದೆ. ಏಪ್ರಿಲ್ - ಜುಲೈ ತಿಂಗಳಲ್ಲಿ ಹೂಗಳನ್ನು ಬಿಡುತ್ತದೆ. ಸೆಪ್ಟೆಂಬರ್ - ಅಕ್ಟೋಬರ್ ತಿಂಗಳು ಹಣ್ಣುಗಳು ಯಥೇಚ್ಛವಾಗಿ ಸಿಗುವ ಕಾಲ.

ಸಾಮಾನ್ಯವಾಗಿ ಈ ಮರಕ್ಕೆ ಕೀಟ, ರೋಗ ಬಾಧೆ ಇರುವುದಿಲ್ಲ. ಅಳಿಲು, ಗೋಫರ್, ಇಲಿ, ಹಕ್ಕಿಗಳು ಈ ಹಣ್ಣನ್ನು ತುಂಬ ಇಷ್ಟ ಪಡುತ್ತವೆ. ಹಣ್ಣಿನ ಒಳಗೆ ಸಪೋಟ ಬೀಜದ ಆಕಾರದ ಚಿಕ್ಕಚಿಕ್ಕ ಬೀಜಗಳು ಇರುತ್ತವೆ. ಪಶು-ಪಕ್ಷಿಗಳ ಮೂಲಕ ಬೀಜ ಪ್ರಸಾರ ಆಗಿ ಸಸ್ಯಾಭಿವೃದ್ಧಿ ಆಗುತ್ತದೆ. ನೆಟ್ಟ 3–4 ವರ್ಷಗಳಲ್ಲಿ ಹಣ್ಣು ಬಿಡಲು ಶುರು.

ಈ ಹಣ್ಣನ್ನು ಒಣಗಿಸಿ ತಿನ್ನಲೂ ರುಚಿಯಾಗಿರುತ್ತದೆ. ಕುಕೀಸ್, ಕೇಕ್, ಮಫಿನ್, ಪುಡ್ಡಿಂಗ್, ಸಲಾಡ್, ಬ್ರೆಡ್, ಬೆಳಗಿನ ಉಪಾಹಾರ ಹಾಗೂ ಸೀರಿಯಲ್‌ಗಳಲ್ಲೂ ಬಳಸುತ್ತಾರೆ. ಹಣ್ಣುಗಳನ್ನು ಭಟ್ಟಿ ಇಳಿಸಿ ಬಿಯರ್, ಬ್ರಾಂಡಿ ತಯಾರಿಸುತ್ತಾರೆ.

ಪರ್ಸಿಮನ್ ಹಣ್ಣು ಸೀಸನ್ ಸಮಯದಲ್ಲಿ ಕ್ಯಾಲಿಫೋರ್ನಿಯಾದ ಸೂಪರ್‌ಮಾರ್ಕೆಟ್‌ಗಳಲ್ಲಿ ಸಣ್ಣ ಪ್ರಮಾಣದಲ್ಲಿ ಕಂಡುಬರುತ್ತದೆ. ಮಾರುವುದಕ್ಕಲ್ಲದಿದ್ದರೂ ತಿನ್ನುವ ಉದ್ದೇಶದಿಂದಲಾದರೂ ತಂಪು ಹವೆ ಇರುವ ನಮ್ಮ ರಾಜ್ಯದ ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಈ ಹಣ್ಣು ಬೆಳೆಯುವ ಪ್ರಯತ್ನ ಮಾಡಬಹುದೋ ಏನೊ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT