ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ಸ್ವಂತ ನಾಡಿನಲ್ಲಿ ಪಿಣರಾಯಿ ‘ವಿಜಯ’

Last Updated 20 ಮೇ 2016, 19:41 IST
ಅಕ್ಷರ ಗಾತ್ರ

ತಿರುವನಂತಪುರ (ಪಿಟಿಐ): ಕೇರಳದಲ್ಲಿ ಎಲ್‌ಡಿಎಫ್‌ ಈ ಬಾರಿ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯನ್ನು ಪ್ರಕಟಿಸದೆಯೇ ಚುನಾವಣೆ ಎದುರಿಸಿತ್ತು. ಆದರೂ ಎಲ್‌ಡಿಎಫ್‌ ಗೆದ್ದರೆ ವಿ.ಎಸ್‌. ಅಚ್ಯುತಾನಂದನ್‌ ಮತ್ತು ಪಿಣರಾಯಿ ವಿಜಯನ್‌ ಅವರಲ್ಲಿ ಒಬ್ಬರು ಈ ಹುದ್ದೆ ಅಲಂಕರಿಸುವುದು ಖಚಿತವಾಗಿತ್ತು.

ಮುಖ್ಯಮಂತ್ರಿ ಗಾದಿಯ ಸ್ಪರ್ಧೆಯಲ್ಲಿ 93ರ ಹರೆಯದ ಅಚ್ಯುತಾನಂದನ್‌ ಅವರನ್ನು ಹಿಂದಿಕ್ಕುವಲ್ಲಿ ಪಿಣರಾಯಿ ಯಶಸ್ವಿಯಾಗಿದ್ದು, ‘ದೇವರ ಸ್ವಂತ ನಾಡಿನ’ 12ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ವಿವಾದಗಳು, ಭಿನ್ನಾಭಿಪ್ರಾಯ ಮತ್ತು ಸಂದಿಗ್ಧ ಪರಿಸ್ಥಿತಿಯಲ್ಲೂ ತಮ್ಮ ಸಿದ್ಧಾಂತದಲ್ಲಿ ದೃಢವಾಗಿ ನಿಂತು ಪಕ್ಷವನ್ನು ಹಲವು ಸಲ ಬಿಕ್ಕಟ್ಟಿನಿಂದ ಪಾರುಮಾಡಿರುವ ಶ್ರೇಯ ವಿಜಯನ್‌ ಅವರಿಗೆ  ಸಲ್ಲುತ್ತದೆ. 

ಶೇಂದಿ ಇಳಿಸುವ ವೃತ್ತಿಯ ಬಡ ಕುಟುಂಬದಿಂದ ಬಂದ  ಅವರದ್ದು ಹೋರಾಟದ ಬದುಕು. ಸಂಘಟನಾ ಚತುರರಾಗಿರುವ ಜತೆಗೆ ಪಕ್ಷದ ಕಾರ್ಯಕರ್ತರನ್ನು ಹೇಗೆ ದುಡಿಸಬೇಕು ಎಂಬ ಕಲೆ ಅವರಿಗೆ ಚೆನ್ನಾಗಿ ತಿಳಿದಿದೆ. ಕೇರಳದಲ್ಲಿ ಕಮ್ಯುನಿಸ್ಟ್‌ ಚಳವಳಿ ಆರಂಭವಾದ ಕಣ್ಣೂರು ಜಿಲ್ಲೆಯ ಪಿಣರಾಯಿಯಲ್ಲಿ 1944ರ ಮಾರ್ಚ್‌ 21 ರಂದು ಜನಿಸಿದ ಅವರು, ವಿದ್ಯಾರ್ಥಿಯಾಗಿದ್ದಾಗಲೇ ರಾಜಕೀಯದತ್ತ ಒಲವು ಬೆಳೆಸಿದ್ದರು.

ತಲಶ್ಶೇರಿಯ ಬ್ರೆನ್ನನ್‌ ಕಾಲೇಜಿನಲ್ಲಿ ಬಿ.ಎ (ಅರ್ಥಶಾಸ್ತ್ರ) ಪದವಿ ಪಡೆಯುತ್ತಿದ್ದ ಸಂದರ್ಭದಲ್ಲಿ ಕೇರಳ ಸ್ಟೂಡೆಂಟ್ಸ್‌ ಫೆಡರೇಷನ್‌ನ (ಕೆಎಸ್‌ಎಫ್‌) ಕಣ್ಣೂರು ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಆ ಬಳಿಕ ಕೆಎಸ್‌ಎಫ್‌ ರಾಜ್ಯ ಕಾರ್ಯದರ್ಶಿ ಮತ್ತು 1968 ರಲ್ಲಿ ರಾಜ್ಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಇದೇ ಅವಧಿಯಲ್ಲಿ ಸಿಪಿಎಂ ಕಣ್ಣೂರು ಜಿಲ್ಲಾ ಸಮಿತಿಯಲ್ಲೂ ಸ್ಥಾನ ಪಡೆದಿದ್ದರು. 1970ರ ವಿಧಾನಸಭಾ ಚುನಾವಣೆಯಲ್ಲಿ ಕೂತುಪರಂಬ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿ ಶಾಸನಸಭೆಗೆ ಆಯ್ಕೆಯಾಗಿದ್ದರು. ಇ.ಕೆ. ನಾಯನಾರ್‌ ಮುಖ್ಯಮಂತ್ರಿಯಾಗಿದ್ದಾಗ 1996 ರಿಂದ 98ರ ಅವಧಿಯಲ್ಲಿ ಅವರು ಇಂಧನ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 

ವಿವಾದಗಳಿಂದ ಹೊರತಾಗಿಲ್ಲ: ಪಿಣರಾಯಿ ವಿವಾದಗಳಿಂದ ಹೊರತಾಗಿರಲಿಲ್ಲ. ಆದರೆ ಇದ್ಯಾವುದನ್ನೂ ಲೆಕ್ಕಿಸದೆ ಪಕ್ಷವನ್ನು ಬಲಪಡಿಸುವುದರತ್ತ ಅವರು ಗಮನ ನೀಡಿದ್ದರು. ಮೂರು ಜಲವಿದ್ಯುತ್‌ ಸ್ಥಾವರಗಳನ್ನು ಆಧುನೀಕರಣಗೊಳಿಸಲು ಕೆನಡಾದ ಎಸ್‌ಎನ್‌ಸಿ–ಲ್ಯಾವ್ಲಿನ್‌ ಕಂಪೆನಿ ಜತೆಗಿನ ಒಪ್ಪಂದದಲ್ಲಿ ಅವ್ಯವಹಾರ ನಡೆದಿದ್ದು ಕೇರಳದ ರಾಜಕೀಯದಲ್ಲಿ ಬಿರುಗಾಳಿಯೆಬ್ಬಿಸಿತ್ತು.

1998ರಲ್ಲಿ ನಡೆದಿದ್ದ ಈ ಭ್ರಷ್ಟಾಚಾರ ಪ್ರಕರಣದಲ್ಲಿ ಪಿಣರಾಯಿ ಅವರ ಹೆಸರೂ ಕೇಳಿಬಂದಿತ್ತು. ಕೇರಳ ಹೈಕೋರ್ಟ್‌ ಸೂಚನೆಯಂತೆ ಸಿಬಿಐ ತನಿಖೆ ನಡೆಸಿತ್ತಲ್ಲದೆ, ಪಿಣರಾಯಿ ಅವರನ್ನು 9ನೇ ಆರೋಪಿಯಾಗಿ ಹೆಸರಿಸಿತ್ತು. 2013 ರಲ್ಲಿ ಸಿಬಿಐ ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಿತ್ತು. 2007 ರ ಫೆಬ್ರುವರಿ 16 ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ವಿಜಯನ್‌ ಅವರ ಬ್ಯಾಗ್‌ನಲ್ಲಿ ಐದು ಗುಂಡುಗಳು ದೊರೆತಿದ್ದವು.

ಪರವಾನಗಿ ತೋರಿಸಿದ ಬಳಿಕ ಅವರನ್ನು  ಬಿಟ್ಟುಬಿಡಲಾಗಿತ್ತು. ಪಿಣರಾಯಿ ಅವರು ಅಚ್ಯುತಾನಂದನ್‌ ಜತೆಗಿನ ‘ಕಚ್ಚಾಟ’ದಿಂದ ಹಲವು ಸಲ ಸುದ್ದಿಯಾಗಿದ್ದರು. 2007 ರಲ್ಲಿ ಪರಸ್ಪರ ಬಹಿರಂಗವಾಗಿ ಟೀಕಾಪ್ರಹಾರ ನಡೆಸಿದ್ದಕ್ಕೆ ಇಬ್ಬರನ್ನೂ ಸಿಪಿಎಂ ಪಾಲಿಟ್‌ಬ್ಯೂರೊದಿಂದ ಅಮಾನತು ಮಾಡಲಾಗಿತ್ತು. ಬಳಿಕ ಈ ಅಮಾನತನ್ನು ರದ್ದುಗೊಳಿಸಲಾಗಿತ್ತು.

ಕೇರಳ ವಿಧಾನಸಭೆಯಲ್ಲಿ ಚಾರಿತ್ರಿಕ ಭಾಷಣ
ಹಲವಾರು ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಪಿಣರಾಯಿ ಅವರನ್ನು ತುರ್ತುಪರಿಸ್ಥಿತಿ ಅವಧಿಯಲ್ಲಿ 18 ತಿಂಗಳು ಕಣ್ಣೂರು ಸೆಂಟ್ರಲ್‌ ಜೈಲಿನಲ್ಲಿ ಬಂಧಿಸಿಡಲಾಗಿತ್ತು. 1975ರ ಸೆಪ್ಟೆಂಬರ್‌ 28 ರಂದು ರಾತ್ರಿ ಆರು ಪೊಲೀಸರು ಸೇರಿ ಪ್ರಜ್ಞೆ ತಪ್ಪುವವರೆಗೆ ಪಿಣರಾಯಿ ಅವರನ್ನು ಥಳಿಸಿದ್ದರು.

ಜೈಲಿನಿಂದ ಬಿಡುಗಡೆ ಹೊಂದಿದ ನಂತರ ಶಾಸನಸಭೆಗೆ ಬರುವ ವೇಳೆ ರಕ್ತಸಿಕ್ತ ಅಂಗಿಯನ್ನೂ ತಂದಿದ್ದರು. ಆ ಅಂಗಿಯನ್ನು ಎತ್ತಿತೋರಿಸಿ ಪೊಲೀಸರು ನಡೆಸಿದ್ದ ಕ್ರೌರ್ಯವನ್ನು ವಿವರಿಸಿದ್ದರು. ಅಂದಿನ ಗೃಹ ಸಚಿವ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದ ಕೆ. ಕರುಣಾಕರನ್‌ ಅವರನ್ನು ಟೀಕಿಸಿ ‘ಬೆಂಕಿ’ಯುಗುಳಿದ್ದರು. ಆ ಭಾಷಣ ಕೇರಳದ ಶಾಸಕಾಂಗದ ದಾಖಲೆಯಲ್ಲಿ ಇಂದಿಗೂ ಒಂದು ಚರಿತ್ರಾರ್ಹ ಭಾಷಣ ಎನಿಸಿಕೊಂಡಿದೆ.

* 26ನೇ ವಯಸ್ಸಿನಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆ
* 1970, 77, 91, 96 ಮತ್ತು 2016 ರಲ್ಲಿ ವಿಧಾಸಭೆಗೆ ಆಯ್ಕೆ
* ವಿವಾದಗಳಿಗೆ ಬೆದರದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT