ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೆ ಕೀರ್ತಿ ತಂದರೂ ತಾರತಮ್ಯ ಏಕೆ: ಅಶ್ವಿನಿ

Last Updated 2 ಜುಲೈ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಡಬಲ್ಸ್‌ ವಿಭಾಗದಲ್ಲಿ ಎಷ್ಟೇ ದೊಡ್ಡ ಸಾಧನೆ ಮಾಡಿದರೂ ನಮ್ಮನ್ನು ಯಾರೂ ಗುರುತಿಸುವುದಿಲ್ಲ. ಹೊರಗಿನವರ ಮಾತುಬಿಡಿ. ರಾಷ್ಟ್ರೀಯ ತಂಡದ ತರಬೇತುದಾರರೇ ನಮ್ಮ ಸಾಧನೆಗೆ ಖುಷಿ ಪಡುವುದಿಲ್ಲ. ಈ ತಾರತಮ್ಯದಿಂದಲೇ ಭಾರತದಲ್ಲಿ ಡಬಲ್ಸ್‌ ವಿಭಾಗ ಹಿಂದುಳಿದಿದೆ...’

ಮೂರು ದಿನಗಳ ಹಿಂದೆ ಕೆನಡಾ ಗ್ರ್ಯಾಂಡ್‌ ಪ್ರೀ ಗೋಲ್ಡ್‌ ಬ್ಯಾಡ್ಮಿಂಟನ್‌ ಟೂರ್ನಿಯ ಡಬಲ್ಸ್‌ನಲ್ಲಿ ಜ್ವಾಲಾ ಗುಟ್ಟಾ ಜೊತೆ ಸೇರಿ ಪ್ರಶಸ್ತಿ ಜಯಿಸಿದ್ದ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಅವರ ಬೇಸರದ ನುಡಿಯಿದು.

ಇತ್ತೀಚಿನ ದಿನಗಳಲ್ಲಿ ಭಾರತದ ಬ್ಯಾಡ್ಮಿಂಟನ್ ರಂಗದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ‘ಡಬಲ್ಸ್‌ ವಿಭಾಗದ ಸಾಧನೆಗೆ ಬೆಲೆಯಿಲ್ಲವೇ. ಕಾಮನ್‌ವೆಲ್ತ್‌, ಏಷ್ಯನ್‌ ಕ್ರೀಡಾಕೂಟ, ವಿಶ್ವ ಚಾಂಪಿಯನ್‌ ಷಿಪ್‌ನಲ್ಲಿ ನಾವು ಪ್ರಶಸ್ತಿ ಗೆದ್ದಾಗ ದೇಶಕ್ಕೆ ಕೀರ್ತಿ ಬಂದಿಲ್ಲವೇ. ಹಾಗಿದ್ದರೂ ಈ ತಾರತಮ್ಯ ಏಕೆ‘ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆಲ್ಲಾ ರಾಷ್ಟ್ರೀಯ ತಂಡದ ಮುಖ್ಯ ಕೋಚ್‌ ಪುಲ್ಲೇಲ ಗೋಪಿಚಂದ್ ಕಾರಣ ಎಂದೂ ಆರೋಪಿಸಿದ್ದಾರೆ.  ಆದರೆ, ಅವರು ಎಲ್ಲೂ ಗೋಪಿಚಂದ್ ಹೆಸರನ್ನು ಬಳಸಲಿಲ್ಲ. ಅಶ್ವಿನಿ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ವಿವರ ಇಲ್ಲಿದೆ.

*2015ರಲ್ಲಿ ಮೊದಲ ಪ್ರಶಸ್ತಿ ಜಯಿಸಿದ್ದೀರಿ. ಈ ಬಗ್ಗೆ ಹೇಳಿ?
ಭಾರತದಲ್ಲಿ ಡಬಲ್ಸ್‌ ವಿಭಾಗ ಸಂಕಷ್ಟದಲ್ಲಿದೆ. ಆದ್ದರಿಂದ  ನಾವು ಪ್ರಶಸ್ತಿ ಗೆಲ್ಲುವುದು ಅನಿವಾರ್ಯ ವಾಗಿತ್ತು.  ಈ ವರ್ಷ ಇಂಡಿಯಾ ಓಪನ್‌, ಆಲ್‌ ಇಂಗ್ಲೆಂಡ್‌ ಓಪನ್‌ ಟೂರ್ನಿಗಳಲ್ಲಿ ನಿರಾಸೆ ಕಂಡಿದ್ದೆವು. ಮುಂದಿನ ವರ್ಷ ನಡೆಯುವ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ಸದ್ಯದ ನಮ್ಮ ಗುರಿ. ಈ ಗುರಿ ಈಡೇರಿಸಿಕೊಳ್ಳಲು ಕೆನಡಾ ಟೂರ್ನಿ ಯಲ್ಲಿ ಜಯಿಸಿದ ಪ್ರಶಸ್ತಿ ಸ್ಫೂರ್ತಿ ಯಾಗಿದೆ.

*ಭಾರತದಲ್ಲಿ ಡಬಲ್ಸ್‌ ವಿಭಾಗ ಯಾಕೆ ಸಂಕಷ್ಟದಲ್ಲಿದೆ?
ಈ ವಿಭಾಗದಲ್ಲಿ ಎಷ್ಟೇ ದೊಡ್ಡ ಸಾಧನೆ ಮಾಡಿದರೂ ನಮ್ಮನ್ನು ಯಾರೂ ಕೇಳುವುದಿಲ್ಲ. ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದರಷ್ಟೇ ಮಹತ್ವ. ನಮ್ಮ ರಾಷ್ಟ್ರೀಯ ತಂಡದ ತರಬೇತುದಾರರೇ ತಾರತಮ್ಯ ಮಾಡುತ್ತಾರೆ. ಡಬಲ್ಸ್‌ ವಿಭಾಗಕ್ಕೆ ಕಿಂಚಿತ್ತೂ  ಪ್ರೋತ್ಸಾಹ ನೀಡುವುದಿಲ್ಲ.

*ತಾರತಮ್ಯವೆಂದು ಅದು ಹೇಗೆ ಹೇಳುತ್ತೀರಿ?
ರಾಷ್ಟ್ರೀಯ ತಂಡದ ತರಬೇತು ದಾರರಿಗೆ ಭಾರತದಲ್ಲಿ ಬ್ಯಾಡ್ಮಿಂಟನ್‌ ಅಭಿವೃದ್ಧಿಯಾವುದು ಬೇಕಿಲ್ಲ. ಅವರ ಅಕಾಡೆಮಿಯಲ್ಲಿ ತರಬೇತಿ ಪಡೆದ ಆಟಗಾರರಿಗೆ ಮಾತ್ರ ರಾಷ್ಟ್ರೀಯ ತಂಡದಲ್ಲಿ ಮಹತ್ವ ನೀಡುತ್ತಾರೆ. ಸರ್ಕಾರದಿಂದ ಸೌಲಭ್ಯಗಳನ್ನು ಒದಗಿಸಿಕೊಡುತ್ತಾರೆ. ಒಲಿಂಪಿಕ್ಸ್‌ಗೆ ಸಜ್ಜಾಗಲು ಕೇಂದ್ರ ಸರ್ಕಾರ ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಮ್‌ (ಟಾಪ್) ಯೋಜನೆ ಆರಂಭಿಸಿದೆ.

ಇದರಲ್ಲಿ ಆರು ಜನ ಬ್ಯಾಡ್ಮಿಂಟನ್‌ ಆಟಗಾರರು ಇದ್ದಾರೆ. ಅದರಲ್ಲಿ ಐದು ಜನ ರಾಷ್ಟ್ರೀಯ ತಂಡದ ತರಬೇತುದಾರರ ಕ್ಲಬ್‌ನಲ್ಲಿ ತರಬೇತಿ ಪಡೆದವರೇ. ಆದರೆ, ನಾವು ಅವರ ಅಕಾಡೆಮಿಯಲ್ಲಿ ತರಬೇತಿ ಪಡೆದಿಲ್ಲ. ಆದ್ದರಿಂದ ನಾವು ಏನೇ ಸಾಧನೆ ಮಾಡಿದರೂ ಗುರುತಿಸುವುದಿಲ್ಲ.

*ಹಾಗಾದರೆ ಭಾರತದ ಬ್ಯಾಡ್ಮಿಂಟನ್‌ನಲ್ಲಿ ಎರಡು ಗುಂಪುಗಳಿವೆಯೇ?
ಈ ವಿಷಯ ಈಗ ಗುಟ್ಟಾಗಿ ಉಳಿದಿಲ್ಲ. ವಿಮಲ್‌ ಕುಮಾರ್‌ ಬಳಿ ತರಬೇತಿ ಪಡೆಯುತ್ತಿರುವ ಸೈನಾ ನೆಹ್ವಾಲ್‌ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿ ದ್ದಾರೆ ಎನ್ನುವ ಕಾರಣಕ್ಕಾಗಿಯಷ್ಟೇ ಟಾಪ್‌ನಲ್ಲಿ ಸ್ಥಾನ ಲಭಿಸಿದೆ.

*ಕೋಚ್‌ ತಾರತಮ್ಯ ಮಾಡುತ್ತಾರೆ ಎಂದು ಹೇಳುತ್ತೀರಿ. ಈ ವಿಷಯ ಭಾರತ ಬ್ಯಾಡ್ಮಿಂಟನ್‌ ಸಂಸ್ಥೆಗೆ ಗೊತ್ತಿಲ್ಲವೇ?
ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯವೇ. ಈ ಬಗ್ಗೆ ಜ್ವಾಲಾ ಹಾಗೂ ನಾನು ಸಾಕಷ್ಟು ಸಲ ಬ್ಯಾಡ್ಮಿಂಟನ್‌ ಸಂಸ್ಥೆಯ ಅಧಿಕಾರಿಗಳ ಗಮನಕ್ಕೆ ತಂದಿ ದ್ದೇವೆ. ಆದರೆ ಏನೂ ಪ್ರಯೋಜನ ವಾಗಿಲ್ಲ.

*ಟಾಪ್‌ ಯೋಜನೆಗೆ ಡಬಲ್ಸ್‌  ಆಟಗಾರರನ್ನು ಸೇರ್ಪಡೆ ಮಾಡದಿರಲು ಕಾರಣವೇನು?
ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಪ್ರಮುಖ ಸ್ಪರ್ಧಿಗಳನ್ನು ಗುರುತಿಸಿ ಟಾಪ್‌ ಯೋಜನೆಗೆ ಆಯ್ಕೆ ಮಾಡಲಾಗುತ್ತದೆ. ಜ್ವಾಲಾ ಜೊತೆ ವಿಶ್ವ ಚಾಂಪಿಯನ್‌ ಷಿಪ್‌ನಲ್ಲಿ ಕಂಚು, 2010ರ ಕಾಮನ್‌ ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಹೀಗೆ ಸಾಕಷ್ಟು ಪದಕಗಳನ್ನು ಜಯಿಸಿದ್ದೇನೆ. ನಮಗೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಸಾಮರ್ಥ್ಯವಿಲ್ಲವೇ. ಈ ಯೋಜನೆಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡಲು ಸಮಿತಿಯಿದೆ.  ನಮ್ಮನ್ನು ಏಕೆ ಆಯ್ಕೆ ಮಾಡಿಲ್ಲ ಎನ್ನುವುದನ್ನು ಅವರನ್ನೇ ಪ್ರಶ್ನಿಸಿ.

*ಡಬಲ್ಸ್‌ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಭಾರತದ ಭವಿಷ್ಯ ಹೇಗಿದೆ?
ರಾಷ್ಟ್ರೀಯ ತಂಡಕ್ಕೆ ಕೋಚ್‌ ಆದವರು ಯಾವುದೇ ಅಕಾಡೆಮಿ ಹೊಂದಿರಬಾರದು ಎನ್ನುವ ನಿಯಮ ವಿದೆ. ಒಂದು ವೇಳೆ ಅಕಾಡೆಮಿ ಹೊಂದಿದ್ದರೆ ಅವರಿಗೆ ದೇಶದ ಕ್ರೀಡಾಪಟುಗಳಿಗಿಂತ ತಮ್ಮ ಅಕಾಡೆಮಿ ಯಲ್ಲಿ ತರಬೇತಿ ಪಡೆಯುವ ಆಟಗಾರರ ಹಿತವೇ ಮುಖ್ಯವಾಗುತ್ತದೆ. ಇದು ಹಿತಾಸಕ್ತಿ ಸಂಘರ್ಷವಲ್ಲವೇ. ಬ್ಯಾಡ್ಮಿಂಟನ್‌ ಬೆಳಸಬೇಕಾದವರೇ ಹೀಗೆ ತುಳಿಯುತ್ತಾ ಹೋದರೆ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್‌  ಭವಿಷ್ಯದ ಬಗ್ಗೆ ಏನು ಹೇಳಲು ಸಾಧ್ಯ.

*ಕೆನಡಾ ಓಪನ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದಾಗ ರಾಷ್ಟ್ರೀಯ ತಂಡದ ಕೋಚ್‌ ಪ್ರತಿಕ್ರಿಯೆ ಏನಿತ್ತು?
ನಮ್ಮ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾಕಷ್ಟು ಗಣ್ಯರು ಅಭಿನಂದಿಸಿದರು.  ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ ಶುಭ ಹಾರೈಸಿತು. ಆದರೆ, ರಾಷ್ಟ್ರೀಯ ತಂಡದ ಕೋಚ್‌ ಅಭಿನಂದನೆ ಹೇಳುವ ಕನಿಷ್ಠ ಸೌಜನ್ಯವೂ ತೋರಲಿಲ್ಲ.

*2016ರ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ವಿಶ್ವಾಸವಿದೆಯೇ?
ಭಾರತದ ಬ್ಯಾಡ್ಮಿಂಟನ್‌ ರಂಗದಲ್ಲಿ ಇತ್ತೀಚಿಗೆ ಆಗುತ್ತಿರುವ ಬೆಳವಣಿಗೆಗಳು ಬೇಸರ ತರಿಸಿವೆ. ಇದರಿಂದ ನಾವು ಕುಗ್ಗಿಲ್ಲ. ಸಿಂಗಲ್ಸ್‌ನಲ್ಲಿ ಸಾಧನೆ ಮಾಡುವುದು ಸುಲಭ. ಇಬ್ಬರ ನಡುವೆ ಹೊಂದಾಣಿಕೆ ಇದ್ದರಷ್ಟೇ ಡಬಲ್ಸ್‌ನಲ್ಲಿ ಪ್ರಶಸ್ತಿ ಜಯಿಸಲು ಸಾಧ್ಯ. ಮುಂದಿನ ವರ್ಷದ ಮೇ ಒಳಗೆ ವಿಶ್ವ ರ್‍ಯಾಂಕಿಂಗ್‌ನಲ್ಲಿ ಮೊದಲ ಹತ್ತರಲ್ಲಿ ಸ್ಥಾನ ಪಡೆದಿರಬೇಕು. ಆಗಷ್ಟೇ ಒಲಿಂಪಿಕ್ಸ್‌ಗೆ ಅರ್ಹತೆ ಲಭಿಸುತ್ತದೆ. ಒಲಿಂಪಿಕ್ಸ್‌ನಲ್ಲೂ ಪದಕ ಗೆಲ್ಲುತ್ತೇವೆ. ಆಗಲಾದರೂ ನಮ್ಮ ರಾಷ್ಟ್ರೀಯ ತಂಡದ ಕೋಚ್‌ ಬದಲಾಗುತ್ತಾರೆಯೇ ನೋಡೋಣ.
*
ಮುಖ್ಯಾಂಶಗಳು
* ರಾಷ್ಟ್ರೀಯ ತಂಡದ ಕೋಚ್‌ಗೆ ದೇಶಕ್ಕಿಂತ ಅಕಾಡೆಮಿ ಮುಖ್ಯ: ಅಶ್ವಿನಿ
* ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ವಿಶ್ವಾಸವಿದೆ
* ನಮ್ಮ ಮನವಿಗೆ ಸರ್ಕಾರ ಸ್ಪಂದಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT