ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದೆಲ್ಲೆಡೆ ‘ಜನೌಷಧಿ’ ಮಳಿಗೆ

Last Updated 1 ಸೆಪ್ಟೆಂಬರ್ 2014, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇಂದ್ರ ಸರ್ಕಾರವು ದೇಶದ ಎಲ್ಲ ಜನರಿಗೆ ಶೇ 50 ರಷ್ಟು ಕಡಿಮೆ ದರದಲ್ಲಿ ಜೀವನಾವಶ್ಯಕ ಔಷಧಿ­ಗ­ಳನ್ನು ಪೂರೈಸುವ ‘ಜನೌಷಧಿ’ ಎಂಬ ಮಳಿಗೆಗಳನ್ನು ತೆರೆಯುವ ಅಭಿಯಾನ ಹಮ್ಮಿ­ಕೊಂಡಿದೆ’ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಸಚಿವ ಅನಂತ ಕುಮಾರ್‌ ಹೇಳಿದರು.

ನಗರದಲ್ಲಿ ಸೋಮವಾರ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ ಆಯೋಜಿಸಿದ್ದ ನೂತನ ಕಾಲಭೈರವೇಶ್ವರಸ್ವಾಮಿ ಆಯುರ್ವೇದಿಕ್ ಕಾಲೇಜು ಮತ್ತು ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ  ಮಾತನಾಡಿದರು.

‘ರಾಜ್ಯ ಸರ್ಕಾರದ ಸಹಯೋಗದಲ್ಲಿ  ಕೇಂದ್ರವು ಪ್ರತಿಯೊಂದು ಜಿಲ್ಲಾ ಆಸ್ಪತ್ರೆ ಸೇರಿದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ‘ಜನೌಷಧಿ’ ಮಳಿಗೆ ತೆರೆಯಲು ಸಿದ್ಧವಿದೆ. ರಾಜ್ಯ ಸರ್ಕಾರ ಈ ಯೋಜನೆಯನ್ನು ಪರಿಣಾಮ­ಕಾರಿಯಾಗಿ ಬಳಸಿಕೊಳ್ಳಬೇಕು. ಮುಂಬರುವ ಕೆಲ ದಿನಗಳಲ್ಲಿ ಯೋಜನಾ ವರದಿ ಸಿದ್ಧಪಡಿಸಿ, ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದರೆ ಶೀಘ್ರದಲ್ಲಿಯೇ ರಾಜ್ಯದ­ಲ್ಲಿಯೂ ಮಳಿಗೆಗಳು ಕಾರ್ಯಾರಂಭ ಮಾಡಲಿವೆ’ ಎಂದು ಅನಂತ ಕುಮಾರ್ ಅವರು ತಿಳಿಸಿದರು.

‘ದೇಶದಾದ್ಯಂತ ಇರುವ ಮುಖ್ಯ ರೈಲ್ವೆ ನಿಲ್ದಾಣಗಳು ಮತ್ತು ಇಎಸ್‌ಐ ಆಸ್ಪತ್ರೆಗಳಲ್ಲಿ ಕೂಡ ‘ಜನೌಷಧಿ’ ಮಳಿಗೆ ಗಳನ್ನು ತೆರೆಯಬೇಕೆನ್ನುವ ಚಿಂತನೆ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ರೈಲ್ವೆ ಮತ್ತು ಕಾರ್ಮಿಕ ಸಚಿವರೊಂದಿಗೆ ಮಾತುಕತೆ ನಡೆಸಿದ್ದು, ಅವರು ಸಕಾ­ರಾತ್ಮಕ ಪ್ರತಿಕ್ರಿಯೆ ತೋರಿಸಿದ್ದಾರೆ’ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ‘ಕೇಂದ್ರ ಸರ್ಕಾರ ರಾಜ್ಯದಲ್ಲಿ ರಸಗೊಬ್ಬರ ಮತ್ತು ಔಷಧಿ ತಯಾರಿಕೆ ಕಾರ್ಖಾನೆಗಳನ್ನು ಸ್ಥಾಪಿಸುವು­ದಾದರೆ ರಾಜ್ಯ ಸರ್ಕಾರ ಅದಕ್ಕೆ ಅಗತ್ಯವಾದ ನೆರವು ನೀಡುವುದು. ಹಿಂದಿನ ಮಠಾಧೀಶ ಬಾಲಗಂಗಾಧರ­ನಾಥ ಸ್ವಾಮೀಜಿ ಅವರ ಹುಟ್ಟೂರನ್ನು ಅಭಿವೃದ್ಧಿ­ಪಡಿಸಲು ಸರ್ಕಾರ ಅನುದಾನ ನೀಡಲಿದೆ’ ಎಂದು ಸಿದ್ದರಾಮಯ್ಯ ಅವರು ಭರವಸೆ ನೀಡಿದರು.

ಆರೋಗ್ಯ ಸಚಿವ ಯು.ಟಿ. ಖಾದರ್, ‘ಶಾಲಾ ಮಕ್ಕಳ ಆರೋಗ್ಯದ ಮೇಲೆ  ನಿಗಾವಹಿಸುವ ದೃಷ್ಟಿ­ಯಿಂದ ಪ್ರತಿಯೊಂದು ತಾಲೂಕಿನಲ್ಲಿ ತಂಡಗಳನ್ನು ರಚಿಸ­ಲಾಗಿದೆ. ಒಬ್ಬ ವೈದ್ಯ ಮತ್ತು ನರ್ಸ್‌ ಇರುವ ಎರಡು ವಾಹನಗಳು ತಾಲೂಕಿನ ಶಾಲೆಗಳಿಗೆ ನಿಯಮಿತವಾಗಿ ಭೇಟಿ ನೀಡಿ, ಉಚಿತವಾಗಿ ಮಕ್ಕಳ ಆರೋಗ್ಯ ತಪಾಸಣೆ ಜತೆಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ.

ಮುಂಬರುವ ದಿನಗಳಲ್ಲಿ ಆರೋಗ್ಯ ವಿಮೆ­ಯನ್ನು ಎಪಿಎಲ್‌ ಫಲಾನುಭವಿಗಳಿಗೂ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ’ ಎಂದರು.
ಆದಿಚುಂಚನಗಿರಿ ಮಠದ ನಿರ್ಮಲಾನಂದ­ನಾಥ ಸ್ವಾಮೀಜಿ, ಮಠದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾ­ನಂದನಾಥ ಸ್ವಾಮೀಜಿ, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಶಾಸಕರಾದ ಆರ್.­ಅಶೋಕ್, ಎಂ.ಕೃಷ್ಣಪ್ಪ,  ಮುನಿರಾಜು, ಪ್ರಿಯಕೃಷ್ಣ, ವಿಧಾನಪರಿಷತ್ ಸದಸ್ಯರಾದ ವಿ.ಸೋಮಣ್ಣ ಮತ್ತು ಅಶ್ವತ್ಥನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT