ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಗಡಿ ಕಾಯಲು‘ತೇಜಸ್‌’

ಜುಲೈ 1 ರಂದು ಎಚ್‌ಎಎಲ್‌ನಿಂದ ಎರಡು ವಿಮಾನ ಹಸ್ತಾಂತರ
Last Updated 28 ಜೂನ್ 2016, 23:30 IST
ಅಕ್ಷರ ಗಾತ್ರ

ನವದೆಹಲಿ:  ಸ್ವದೇಶಿ ನಿರ್ಮಿತ ಹಗುರ ಯುದ್ಧ ವಿಮಾನ ‘ತೇಜಸ್’ ಮುಂದಿನ ವರ್ಷ ಭಾರತೀಯ ವಾಯುಪಡೆಯಲ್ಲಿ ಸೇವೆಗೆ ನಿಯೋಜನೆಯಾಗಲಿದ್ದು, ಗಡಿ ಕಾಯುವ ಕೆಲಸಕ್ಕೆ ಬಳಕೆಯಾಗಲಿದೆ.

ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಜುಲೈ 1 ರಂದು ಬೆಂಗಳೂರಿನಲ್ಲಿ ಎರಡು ಯುದ್ಧ ವಿಮಾನಗಳನ್ನು ವಾಯುಪಡೆಗೆ  ಹಸ್ತಾಂತರಿಸಲಿದೆ.

ಮೊದಲ ಎರಡು ವರ್ಷಗಳವರೆಗೆ ವಿಮಾನಗಳು ಬೆಂಗಳೂರಿನಲ್ಲಿ ಇರಲಿದ್ದು, ಆ ಬಳಿಕ ತಮಿಳುನಾಡಿನ ಸೂಲೂರಿನಲ್ಲಿರುವ ವಾಯುಪಡೆ ನೆಲೆಗೆ ಸ್ಥಳಾಂತರಗೊಳ್ಳಲಿವೆ.

ಎಚ್‌ಎಎಲ್‌ ನಿರ್ಮಿಸಿರುವ ಆರು ತೇಜಸ್‌ ವಿಮಾನಗಳು ಈ ವರ್ಷದಲ್ಲೇ ವಾಯುಪಡೆಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. 2017 ಮತ್ತು 18ರ ವೇಳೆಗೆ ಒಟ್ಟು 20 ತೇಜಸ್‌ ಯುದ್ಧ ವಿಮಾನಗಳು (ಒಂದು ಆಸನದ 16 ಮತ್ತು ಎರಡು ಆಸನಗಳ 4)  ವಾಯುಪಡೆಯಲ್ಲಿ ಸೇವೆಗೆ ನಿಯೋಜನೆಯಾಗಲಿವೆ.

ಭಾರತೀಯ ವಾಯುಪಡೆ ತೇಜಸ್ ವಿಮಾನಗಳನ್ನು ದೇಶದ ಪ್ರಮುಖ ವಾಯುನೆಲೆಗಳಲ್ಲಿ ನಿಯೋಜಿಸಲು ಚಿಂತಿಸುತ್ತಿದೆ ಎಂದು ವಾಯುಪಡೆ ಮೂಲಗಳು ತಿಳಿಸಿವೆ.

‘ಈಗಿರುವ ಆಗಸದಿಂದ ಆಗಸಕ್ಕೆ ಚಿಮ್ಮುವ, ಆಗಸದಿಂದ ಭೂಮಿಯ ಮೇಲಿನ ನಿರ್ದಿಷ್ಟ ಗುರಿ ತಲುಪಬಲ್ಲ ಕ್ಷಿಪಣಿಗಳನ್ನು ತೇಜಸ್‌ ವಿಮಾನಗಳಲ್ಲಿ ಅಳವಡಿಸಬಹುದಾಗಿದೆ. ಮೊದಲ ಆರು ವಿಮಾನಗಳು ನಮ್ಮ ಕೈಸೇರಿದ ಬಳಿಕ ಮುಂಚೂಣಿಯ ನೆಲೆಗಳಲ್ಲಿ ಬಳಸಲಾಗುವುದು’ ಎಂದು ಮೂಲಗಳು ಹೇಳಿವೆ. ತೇಜಸ್‌ ವಿಮಾನಗಳನ್ನು ಯುದ್ಧಕ್ಕೆ ಬಳಸುವುದನ್ನು ವಾಯುಪಡೆಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ರಷ್ಯಾದ ಮಿಗ್‌–21 ಸರಣಿಯ ವಿಮಾನಗಳ ಸ್ಥಾನ ತುಂಬಲು ಹಗುರ ಯುದ್ಧ ವಿಮಾನಗಳನ್ನು ಸ್ವದೇಶದಲ್ಲೇ ನಿರ್ಮಿಸುವ ಯೋಜನೆಯನ್ನು ಕೇಂದ್ರ ಸರ್ಕಾರ 1983 ರಲ್ಲಿ ಕೈಗೆತ್ತಿಕೊಂಡಿತ್ತು.

ಮಿಗ್‌–21 ವಿಮಾನಗಳ ಬಳಕೆಯನ್ನು 1990 ರಲ್ಲಿ ಕೈಬಿಡುವುದು ಸರ್ಕಾರದ ಉದ್ದೇಶವಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಯ ಕಾರಣ ತೇಜಸ್‌ ವಿಮಾನ ನಿರ್ಮಾಣದ ಕಾರ್ಯ ಕುಂಟುತ್ತಾ ಸಾಗಿತು. ಇದರಿಂದ ಐಎಎಫ್‌ಗೆ ಮಿಗ್‌–21 ವಿಮಾನಗಳ ಸೇವೆಯನ್ನು ವಿಸ್ತರಿಸದೆ ಅನ್ಯ ಮಾರ್ಗವಿರಲಿಲ್ಲ.

ಇದೀಗ ಮೂರು ದಶಕಗಳ ಬಳಿಕ ತೇಜಸ್‌ ವಿಮಾನ ವಾಯುಪಡೆಗೆ ಸೇರಲು ಸಜ್ಜಾಗಿದೆ. 20 ವಿಮಾನಗಳಲ್ಲಿ 16 ವಿಮಾನಗಳು ಸೇವೆಗೆ ನಿಯೋಜನೆಗೊಳ್ಳಲಿದ್ದು, ನಾಲ್ಕು ವಿಮಾನಗಳನ್ನು ತುರ್ತು ಪರಿಸ್ಥಿತಿಗೆ ಕಾಯ್ದಿರಿಸಲಾಗುವುದು ಎಂದು ಮೂಲಗಳು ಹೇಳಿವೆ.

ಸುಧಾರಿತ ವಿಮಾನ: ತೇಜಸ್‌ ವಿಮಾನಗಳು ವಾಯುಪಡೆಗೆ ಸೇರ್ಪಡೆಯಾದ ಬಳಿಕವೂ ಅದರ ಸುಧಾರಣಾ ಪ್ರಕ್ರಿಯೆ ಮುಂದುವರಿಯಲಿದೆ.
ಈಗ ಹಸ್ತಾಂತರಿಸಲಿರುವ ವಿಮಾನಗಳು ಆಗಸದಲ್ಲೇ ಇಂಧನ ತುಂಬಿಸುವ ಮತ್ತು ದೃಷ್ಟಿಗೆ ನಿಲುಕದ ಗುರಿ ತಲುಪಬಲ್ಲ ಕ್ಷಿಪಣಿಗಳನ್ನು  ಬಳಸುವ ಸಾಮರ್ಥ್ಯವನ್ನು ಹೊಂದಿಲ್ಲ. ಆದರೆ ಸುಧಾರಿತ ವಿಮಾನ ಈ ಎರಡೂ ಸೌಲಭ್ಯಗಳನ್ನು ಹೊಂದಿರಲಿದೆ.

ಸುಧಾರಿತ ವಿಮಾನಕ್ಕೆ ತೇಜಸ್‌ ಎಂಕೆ–1ಎ ಎಂಬ ಹೆಸರಿಡಲಾಗುವುದು.  ಇಂತಹ 80 ವಿಮಾನಗಳನ್ನು ವಾಯುಪಡೆಗೆ ಸೇರಿಸಿಕೊಳ್ಳಲು ಐಎಎಫ್‌ ಚಿಂತನೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT