ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಭಕ್ತಿ ಬಿಂಬಿಸಿದ ನೃತ್ಯ, ಗಮನ ಸೆಳೆದ ವೇಷಭೂಷಣ

Last Updated 27 ಜನವರಿ 2015, 11:35 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಾದ್ಯಂತ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್‌ ಧ್ವಜಾರೋಹಣ ನೆರವೇರಿಸಿದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿಲ್ಲಾ ಕೇಂದ್ರದ ನಾಲ್ಕು ಶಾಲೆಗಳಿಂದ ತಲಾ 250ರಂತೆ ಒಟ್ಟು 1000 ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ಸಾಮೂಹಿಕ ನೃತ್ಯ ಪ್ರದರ್ಶನ ಮಾಡಿದರು. ಜತೆಗೆ ಮಕ್ಕಳು ಮಹಾತ್ಮ ಗಾಂಧೀಜಿ, ಸುಭಾಷ್‌ ಚಂದ್ರಬೋಸ್‌, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಸೇರಿದಂತೆ ಹಲವು ಸ್ವಾತಂತ್ರ್ಯ ಹೋರಾಟಗಾರರ ವೇಷಧರಿಸಿ ಗಮನ ಸೆಳೆದರು.

ಅತ್ಯತ್ತಮ ನೃತ್ಯ ಪ್ರದರ್ಶಿಸಿದ ಶರತ್‌ ಮೆಮೋರಿಯಲ್‌ ಶಾಲೆಗೆ ಪ್ರಥಮ ಬಹುಮಾನ ನೀಡಲಾಯಿತು. ಸೇಂಟ್‌ ಮೈಕಲ್‌ ಇಂಗ್ಲಿಷ್‌ ಸ್ಕೂಲ್‌, ಮರಿಯಂ ಶಾಲೆಗೆ ಕ್ರಮವಾಗಿ ಎರಡು ಮತ್ತು ಮೂರನೇ ಬಹುಮಾನ ದೊರೆಯಿತು.

ಜಿಲ್ಲಾ ನ್ಯಾಯಾಧೀಶರಾದ ಶ್ರೀನಿವಾಸ್‌, ಮಂಜುಳಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ಎ.ಇಕ್ಬಾಲ್‌ ಹುಸೇನ್‌, ಉಪಾಧ್ಯಕ್ಷೆ ಸೌಭಾಗ್ಯಮ್ಮ, ನಗರಸಭೆ ಅಧ್ಯಕ್ಷ ಆರಿಫ್‌ ಖುರೇಶಿ, ತಾ.ಪಂ ಅಧ್ಯಕ್ಷೆ ಶೋಭಾ ಲಕ್ಷ್ಮಣ್‌ ಕುಮಾರ್‌, ಉಪಾಧ್ಯಕ್ಷೆ ಶೋಭಾ ಅಪ್ಪಾಜಿ, ಜಿಲ್ಲಾಧಿಕಾರಿ ಎಫ್‌.ಆರ್‌.ಜಮಾದಾರ್‌, ಎಸ್ಪಿ ಡಾ. ಚಂದ್ರಗುಪ್ತ, ಜಿ.ಪಂ ಸಿಇಒ ಕೆ.ಎಸ್‌.ಮಂಜುನಾಥ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜ್‌ ಉಪಸ್ಥಿತರಿದ್ದರು.

ಮಾಗಡಿ ವರದಿ
ತಾಲ್ಲೂಕು ಆಡಳಿತ ಹಾಗೂ ನಾಡಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಮುಂಜಾನೆ ಕೋಟೆ ಬಯಲಿನಲ್ಲಿ ಭಾರತದ 66ನೇ ಗಣರಾಜ್ಯೋತ್ಸವ ದಿನಾಚರಣೆ ಸಡಗರ, ಸಂಭ್ರಮದಿಂದ ನಡೆಯಿತು. ಪಟ್ಟಣದ ಎಲ್ಲ ಶಾಲಾ ಕಾಲೇಜುಗಳ ಆರು ಸಾವಿರ ಮಕ್ಕಳು ಕೋಟೆ ಬಯಲಿನಲ್ಲಿ ಸೇರಿ ಧ್ವಜವಂದನೆ ಸಲ್ಲಿಸಿದರು.

ತಹಶೀಲ್ದಾರ್ ಹಾಗೂ ನಾಡಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಸಿ.ಎಚ್.ಶಿವಕುಮಾರ್ ಮಾತನಾಡಿ, ರಾಗಿ ಖರೀದಿ ಕೇಂದ್ರದಿಂದ 1 ಸಾವಿರ ಕ್ವಿಂಟಲ್ ರಾಗಿ ಖರೀದಿಸಿದ್ದು, ₨50 ಲಕ್ಷ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಶಾಸಕ ಎಚ್.ಸಿ.ಬಾಲಕೃಷ್ಣ ಅಧ್ಯಕ್ಷತೆವಹಿಸಿದ್ದರು. 1971ರ ಪಾಕಿಸ್ತಾನದ ಯುದ್ಧದಲ್ಲಿ ಭಾಗವಹಿಸಿದ್ದ ಮಾಜಿ ಯೋಧ ಸಾಸ್ಲು ತಿಮ್ಮಯ್ಯ, ಅಮೃತಸರದಲ್ಲಿ ನಡೆದ ಬ್ಲೂ ಸ್ಟಾರ್ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಮಾಜಿ ಯೋಧ ಹುಚ್ಚಯ್ಯ ತಮ್ಮ ಅನುಭವಗಳನ್ನು ಹಂಚಿಕೊಂಡರು.

ನಿವೃತ್ತ ಯೋಧ ಬಾಳಿಕಟ್ಟೆ ಮರಿಯಪ್ಪ, ಚಕ್ರಭಾವಿ ಬಸವೇಗೌಡ ಸನ್ಮಾನಿತರಾಗಿ ಮಾತನಾಡಿದರು. ವಿದ್ಯಾರ್ಥಿನಿ ಸಹನ ಚರ್ಚಾ ಸ್ಪರ್ಧೆಯಲ್ಲಿ ಮಾಡಿದ್ದ ಭಾಷಣವನ್ನು ವೇದಿಕೆಯಲ್ಲಿ ಮಂಡಿಸಿ ಪ್ರಶಸ್ತಿ ಪಡೆದಳು. ಪುರಸಭಾಧ್ಯಕ್ಷೆ ನಿರ್ಮಲ ಪಿ.ವಿ.ಸೀತಾರಾಂ, ತಾ.ಪಂ ಇ.ಒ ಜಯರಂಗ, ಜಿ.ಪಂ ಸದಸ್ಯ ವಿಜಯ್ ಕುಮಾರ್, ಹಾಲು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ, ತಾ.ಪಂ ಅಧ್ಯಕ್ಷೆ ಅನುಸೂಯ ಮರೀಗೌಡ, ಆರಕ್ಷಕ ವೃತ್ತ ನಿರೀಕ್ಷಕ ಯಲಗಯ್ಯ, ಪುರಸಭಾ ಸದಸ್ಯರಾದ ರಘು, ನಾಗೇಂದ್ರ, ಬಸವರಾಜ, ಹೊಂಬಮ್ಮನರಸಿಂಹಮೂರ್ತಿ ಹಾಜರಿದ್ದರು. ಅಬಕಾರಿ ಇಲಾಖೆ ವತಿಯಿಂದ ಆರು ಸಾವಿರ ಮಕ್ಕಳಿಗೆ ಉಪ್ಪಿಟ್ಟು, ಕೇಸರಿ ಬಾತ್ ಮಾಡಿ ವಿತರಿಸಿದರು. ವಾಸವಿ ವಿದ್ಯಾನಿಕೇತನ್ ಶಾಲೆಯ ಮಕ್ಕಳು ದೇಶಭಕ್ತಿ ಗೀತೆಗೆ ವೇಷಭೂಷಣಗಳೊಂದಿಗೆ ನೃತ್ಯ ನೀಡಿ ಗಮನ ಸೆಳೆದರು. ಮಕ್ಕಳಿಂದ ಆಕರ್ಷಕ ಕವಾಯತು, ಧ್ವಜ ವಂದನೆ ಏರ್ಪಡಿಸಲಾಗಿತ್ತು. ಬಿ.ಇ.ಒ ಎ.ಆರ್. ರಂಗಸ್ವಾಮಿ ಸ್ವಾಗತಿಸಿ, ಜಯಸಿಂಹ ನಿರೂಪಿಸಿ ಸಿ.ಬಿ.ಅಶೋಕ್ ವಂದಿಸಿದರು.

ಕನಕಪುರ ವರದಿ:
ಹಲವು ಭಾಷೆ, ಜಾತಿ ಧರ್ಮಗಳಿದ್ದರೂ ದೇಶದಲ್ಲಿ ಗಣರಾಜ್ಯ ವ್ಯವಸ್ಥೆಯಲ್ಲಿ ಒಟ್ಟಾಗಿ ಬಾಳುತ್ತಿದ್ದೇವೆ ಎಂದು  ಸಂಸದ ಡಿ.ಕೆ.ಸುರೆಶ್ ತಿಳಿಸಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ 66ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಶಾಲೆಗಳಲ್ಲಿ ಸ್ವಚ್ಛತಾ ಆಂದೋಲನದಡಿ ನಡೆಸಿದ ಕಾರ್ಯಕ್ರಮಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾತನ ವಿತರಣೆ ಮಾಡಿದರು. ಪಟ್ಟಣದ ಸೆಂಟ್‌ಮೈಕೆಲ್‌, ಬ್ಲಾಸಂ, ನೀಲಕಂಠೇಶ್ವರ, ಬಾಣಂತ ಮಾರಮ್ಮ ಸರ್ಕಾರಿ ಶಾಲೆ, ಮಾನಸ ಶಾಲೆ, ಜೆಟ್‌ ಪಬ್ಲಿಕ್‌ ಶಾಲೆ, ಸೆಂಟ್‌ರೀಟಾ ಶಾಲೆ ಗಳಿಂದ ಉತ್ತಮವಾಗಿ ದೇಶ ಭಕ್ತಿಗೀತೆ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಅವರಿಗೆ ಬಹುಮಾನ ವಿತರಿಸಲಾಯಿತು.    ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ, ತಹಶೀಲ್ದಾರ್ ಹನುಮಂತರಾಯಪ್ಪ ಧ್ವಜವಂದನೆ ಸ್ವೀಕರಿಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಎಸ್‌.ರವಿ, ಪುರಸಭೆ ಅಧ್ಯಕ್ಷ ರಾಮಚಂದ್ರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಸ್‌.ಉಮೇಶ್‌, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಡಿ.ವಿಜಯದೇವು, ಸ್ಥಾಯಿ ಸಮಿತಿ ಅಧ್ಯಕ್ಷ ರಾಜು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಎನ್‌.ದಿಲೀಪ್‌ ಸೇರಿದಂತೆ ಪುರಸಭೆ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

  ಚನ್ನಪಟ್ಟಣ ವರದಿ
ನಮ್ಮ ದೇಶ ದಿನದಿಂದ ದಿನಕ್ಕೆ ಬಲಾಢ್ಯವಾಗುತ್ತಿದೆ. ಇದು ದೇಶದ ಸುಭದ್ರತೆ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಅಭಿಪ್ರಾಯಪಟ್ಟರು.

ಪಟ್ಟಣದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅರ್ಥಶಾಸ್ತ್ರ ಉಪನ್ಯಾಸಕ ದೊಡ್ಡಬೋರಯ್ಯ ಉಪನ್ಯಾಸ ನೀಡಿ ಮಾತನಾಡಿ, ಇಂದು ದೆಹಲಿಯಲ್ಲಿ ಚನ್ನಪಟ್ಟಣದ ಗೊಂಬೆಗಳ ವಿಶೇಷ ಸಾರುವ ಸ್ತಬ್ದಚಿತ್ರ ಪ್ರದರ್ಶನವಾಗುತ್ತಿದೆ. ಇದು ನಮ್ಮ ನೆಲದ ಕಲಾವಿದರು ಹಾಗೂ ಕುಶಲಕರ್ಮಿಗಳ ಶ್ರಮದ ಫಲವಾಗಿದ್ದು, ರಾಜ್ಯದ ಕೀರ್ತಿ ಪ್ರಜ್ವಲಿಸುತ್ತಿದೆ. ಈ ಎಲ್ಲಾ ಕಲಾವಿದರನ್ನೂ ಅಭಿನಂದಿಸಬೇಕು ಎಂದರು.

ತಹಶೀಲ್ದಾರ್ ಅರುಣಪ್ರಭ ಧ್ವಜಾರೋಹಣ ನೆರವೇರಿಸಿದರು. ಹಿರಿಯ ಹೋರಾಟಗಾರ ಡಾ.ವರದಪ್ಪ, ವೀರಯೋಧ ದಿ.ಸೋಮೇಗೌಡರ ಪತ್ನಿ ಪುಟ್ಟಮಣಿ, ಉಪನ್ಯಾಸಕ ದೊಡ್ಡಬೋರಯ್ಯ, ಲೇಖಕ ಎಲೇಕೇರಿ ಶಿವರಾಮು, ಯುವ ಕ್ರೀಡಾಪಟು ಅಭಿಷೇಕ್ ಅವರನ್ನು ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಅಖಿಲಾಭಾನು, ಉಪಾಧ್ಯಕ್ಷ ಮುದ್ದುಕೃಷ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸವಿತಾ, ಉಪಾಧ್ಯಕ್ಷೆ ಪವಿತ್ರ, ಕ್ಷೇತ್ರಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ, ಪೌರಾಯುಕ್ತ ಜಗದೀಶ್‌, ತಾ.ಪಂ. ಇಒ ರೆಡ್ಡಪ್ಪ ಮುಂತಾದವರು ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೂ ಮೊದಲು ನಗರಸಭೆ ಬಳಿಯಿಂದ ಭಾವಚಿತ್ರಗಳ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಪಟ್ಟಣದ ವಿವಿಧ ಶಾಲೆಗಳ ಮಕ್ಕಳು ಭಾಗವಹಿಸಿದ್ದರು. ನಂತರ ಮೈದಾನದಲ್ಲಿ ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಯಿತು.
ಇದೇ ವೇಳೆ ಗಣರಾಜ್ಯೋತ್ಸವದ ಪ್ರಯುಕ್ತ ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಲಾಯಿತು.

ಪ್ರಬಂಧಸ್ಪರ್ಧೆಯಲ್ಲಿ ಸೇಂಟ್ ಜೋಸೆಫ್ ಶಾಲೆಯ ತನುಶ್ರೀ ಪ್ರಥಮ ಸ್ಥಾನ, ಕೇಂಬ್ರಿಜ್‌ ಶಾಲೆಯ ಅಕ್ಷಯಶ್ರೀ ದ್ವಿತೀಯ ಸ್ಥಾನ, ಅಕ್ಕೂರುಹೊಸಹಳ್ಳಿ ಶಾಲೆಯ ಹರ್ಷ ತೃತೀಯ ಸ್ಥಾನ. ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ಚಕ್ಕೆರೆ ಶಾಲೆಯ ಕೀತನ ಪ್ರಥಮ ಸ್ಥಾನ, ಕೇಂಬ್ರಿಜ್‌ ಶಾಲೆಯ ಪುಣ್ಯಶ್ರೀ ದ್ವಿತೀಯ ಸ್ಥಾನ, ಸಾಧನ ಶಾಲೆಯ ಹಿತೇಶ್ ತೃತೀಯ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT