ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶವೆಂದರೆ ಮಣ್ಣು ಅಲ್ಲವೊ ದೇಶವೆಂದರೆ ಮನುಷರೊ...

Last Updated 30 ಏಪ್ರಿಲ್ 2016, 19:36 IST
ಅಕ್ಷರ ಗಾತ್ರ

ತೆಲುಗು ಕವಿ ಗುರಜಾಡರ ‘ದೇಶಭಕ್ತಿ’ ನೂರಾಹದಿನೈದು ವರ್ಷಗಳ ಹಿಂದೆ ರಚನೆಗೊಂಡ ಕವಿತೆ. ‘ದೇಶಭಕ್ತಿ’ಯ ಕುರಿತ ಪ್ರಸ್ತುತ ನಡೆಯುತ್ತಿರುವ ಚರ್ಚೆಯ ಹಿನ್ನೆಲೆಯಲ್ಲಿ, ನಿಜವಾದ ದೇಶಪ್ರೇಮ ಯಾವುದು ಎನ್ನುವುದನ್ನು ಎತ್ತಿತೋರಿಸುವ ಗುರಜಾಡರ ಕವಿತೆ ‘ಎದೆಯಿಂದ ಎದೆಗೆ ಅಮೃತವಾಹಿನಿ’ಯನ್ನು ಹರಿಸುವ ಅಪೂರ್ವ ‘ಮಾನವಗೀತೆ’ಯಂತಿದೆ.

ತೆಲುಗು ಆಧುನಿಕ ಸಣ್ಣಕಥೆಗಳ ಮಾರ್ಗ ನಿರ್ಮಾಪಕ ಎನ್ನುವ ಅಗ್ಗಳಿಕೆ ಗುರಜಾಡ (ಗುರಜಾಡ ವೇಂಕಟ ಅಪ್ಪಾರಾವು. 1862–1915) ಅವರದು. ತಮ್ಮ ಕವಿತೆ, ಕಥನಕವಿತೆಗಳ ಮೂಲಕ ಇಂದಿಗೂ ಅವರ ಹೆಸರು ಸಾಹಿತ್ಯ ಚರ್ಚೆಗಳಲ್ಲಿ ಮತ್ತೆ ಮತ್ತೆ ಪ್ರಸ್ತಾಪಕ್ಕೆ ಬರುತ್ತಿರುತ್ತದೆ. ಇವರ ‘ವರಕಟ್ನಂ’ ನಾಟಕವನ್ನು ಹೊರತುಪಡಿಸಿ ತೆಲುಗು ನಾಟಕಗಳ ವಿಮರ್ಶೆ, ಚರ್ಚೆಗಳು ಮುಂದೆಸಾಗುವುದಿಲ್ಲ.

ಮೊದಲ ಕಥೆ ‘ದಿದ್ದುಬಾಟು’ (1910) ಸೇರಿದಂತೆ ಗುರಜಾಡರ ಎಲ್ಲ ಕಥೆಗಳು ಆಧುನಿಕ ಪ್ರಗತಿಶೀಲ ದೃಷ್ಟಿಯುಳ್ಳವು, ಅಭ್ಯುದಯಾಕಾಂಕ್ಷೆ ಉಳ್ಳವು, ಸ್ತ್ರೀ ಶಿಕ್ಷಣ – ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಂತವು. ಅಂದಹಾಗೆ, ಗುರಜಾಡರು ಬರೆದುದು ಐದೇ ಕಥೆಗಳು. ಆದರೂ ಶತಮಾನ ಕಳೆದರೂ ತೆಲುಗು ಸಣ್ಣಕಥೆಗಳ ಮೇಲಿನ ಅವರ ಪ್ರಭಾವ ಕಡಿಮೆಯಾಗಿಲ್ಲ.

ನೂರಾಐದು ವರ್ಷಗಳ ಹಿಂದೆಯೇ ಧರ್ಮದ ಒಳಹೊರಗುಗಳನ್ನು ತಮ್ಮ ಕಥೆಗಳ ಮೂಲಕ ಶೋಧಿಸಿ, ಅದರ ಹಿಂದಿನ ಕುಟಿಲತೆಯನ್ನು (‘ಮೀಪೇರೇಮಿಟಿ’ ಕಥೆ) ತೆರೆದಿಟ್ಟ ಗುರಜಾಡರು, ಬುದ್ಧಿ ಮೂಲವಾದ ವೈಚಾರಿಕತೆ ವಾಸ್ತವದೆದುರು ಪಲಾಯನ ಮಾಡುತ್ತದೆ ಎಂಬುದನ್ನು ‘ಸಂಸ್ಕರಣ’ ಕಥೆಯಲ್ಲಿ ಪ್ರತಿಪಾದಿಸಿದ್ದಾರೆ.

ಗುರಜಾಡರು ತಮ್ಮ ಕಥೆ, ಕವಿತೆ, ನಾಟಕಗಳ ಮೂಲಕ ತೆಲುಗಿನ ಎಲ್ಲಾ ಪಂಥ, ವಾದಗಳವರಿಗೂ ಪ್ರಸ್ತುತರಾಗಿದ್ದಾರೆ. ‘ತೆಲುಗು ಕುಲಕೆ ಗೌರವ, ಜನ(ಆಡು) ನುಡಿಗೆ ಗೊಬ್ಬರ, ಮಹಾಕವಿ ಶ್ರೀಶ್ರೀಗೆ ಗುರು’ ಎಂಬ ಖ್ಯಾತಿ ಅವರದು.

ತಮ್ಮ ಐದೇ ಐದು ಕಥೆಗಳ ಮೂಲಕ ಆಧುನಿಕ ತೆಲುಗು ಸಣ್ಣಕಥೆಗಳಿಗೆ ಪೂರ್ಣ ವಿಕಾಸದ ದಾರಿ ತೋರಿಸಿದ ಗುರಜಾಡರ ಕವಿತೆಗಳು ಕೂಡ ದೊಡ್ಡ ಸಂಖ್ಯೆಯಲ್ಲಿಲ್ಲ. ಪ್ರಕಟವಾಗಿರುವ ಅವರ ‘ಕವಿತಲ ಸಂಪುಟಂ’ನಲ್ಲಿ ಮೂವತ್ತೈದು ಕವಿತೆಗಳು ಹಾಗೂ ಕೆಲವು ಮಕ್ಕಳ ಪದ್ಯಗಳಿವೆ. ಅವುಗಳನ್ನು ‘ಕಥನ ಕವಿತೆಗಳು’, ‘ದೇಶಭಕ್ತಿ’, ‘ನೀಲಗಿರಿ ಹಾಡುಗಳು’, ‘ಸಂಪ್ರದಾಯ ಕವಿತೆಗಳು’, ‘ಇಂಗ್ಲಿಷ್ ಗೀತೆ’ಗಳೆಂದು ವಿಭಾಗಿಸಲಾಗಿದೆ.

‘ಇಂಗ್ಲಿಷ್ ಗೀತೆ’ಗಳ ವಿಭಾಗದಲ್ಲಿ ‘ಸಾರಂಗಧರ’, ‘ಕಾಂಗ್ರೆಸ್ ಮಹಾಸಭೆ ಮದ್ರಾಸ್’ (1908), ‘ದಿ ಎಮರಾಲ್ಡ್‌ಸ್’ ಎಂಬ ಕವಿತೆಗಳಿವೆ. ‘ಕಾಂಗ್ರೆಸ್ ಮಹಾಸಭೆ ಮದ್ರಾಸ್’ ಕವಿತೆ ಇಂಗ್ಲಿಷ್‌ನಲ್ಲಿದ್ದರೂ ಶೀರ್ಷಿಕೆ ಮಾತ್ರ ತೆಲುಗಿನದು.

ಸಂಪ್ರದಾಯ ಕವಿತೆಗಳನ್ನು ಬಿಟ್ಟರೆ ಉಳಿದವೆಲ್ಲ ಅಚ್ಚ (ತೇಟ) ತೆಲುಗಿನವು. ‘ನೀಲಗಿರಿ ಹಾಡುಗಳು’ ರಾಗ – ಸ್ವರಪ್ರಸ್ತಾರ ಸಹಿತವಾಗಿವೆ. ‘ದೇಶಭಕ್ತಿ’ ಕವಿತೆಗೆ ಪ್ರಸಿದ್ಧ ಸಂಗೀತಗಾರ ದ್ವಾರಂ ವೆಂಕಟಸ್ವಾಮಿ ನಾಯುಡು ಅವರು ರಾಗ ಸಂಯೋಜನೆ ಮಾಡಿದ್ದಾರೆ.

ಗುರಜಾಡರ ನಾಟಕ, ಕಥೆಗಳಂತೆಯೇ ಅವರ ‘ಮುತ್ಯಾಲ ಸರಾಲು’ (ಮುತ್ತುಗಳ ಮಾಲೆಗಳು), ‘ಕನ್ಯಕ’, ‘ಪೂರ್ಣಮ್ಮ’ ಹಾಗೂ ‘ಮತ್ತೆ ಕೆಲವು ಕವಿತೆಗಳು’ ಇಂದಿಗೂ ಜನಪ್ರಿಯ. ಅವುಗಳಲ್ಲಿ ‘ದೇಶಭಕ್ತಿ’ ಕವಿತೆ ವಿಶಿಷ್ಟವಾದುದು, ಹೆಚ್ಚು ಜನಮನ ಮುಟ್ಟಿರುವಂತಹದ್ದು. ಅದನ್ನು ಪದವಿಡಿದೋದಿ ಆಡುವ ಮೊದಲ ಮಾತಿಗೆ ಬೋಧನಾ ಗೀತೆ ಅನ್ನಬಹುದು. ಈ ಕವಿತೆ ಯಾವ ದೇಶ-ಕಾಲಕ್ಕೂ ಸಲ್ಲುವಂತಹದ್ದು.

‘ದೇಶಭಕ್ತಿ’ ದೇಶದ ಕಾಲ ಕಟ್ಟಿಸಿದ ಕವಿತೆ. ಹಾಗಾಗಿ ಇದರಲ್ಲಿ ಅಂದನ್ನೂ ಇಂದನ್ನೂ ನಾಳೆಯನ್ನೂ ಗುರುತಿಸಲಾಗುವುದು. ಇದರಲ್ಲಿ ಸಮಾಜನೀತಿ, ಆರ್ಥಿಕನೀತಿ, ದೇಸೀಯತೆ, ಶಿಕ್ಷಣ, ಸಹಭ್ರಾತೃತ್ವ, ರಾಷ್ಟ್ರೀಯ ಸಮಗ್ರತೆ ನಿಬಿಡಗೊಂಡಿವೆ. ಸರಳತೆಯಲ್ಲಿ ಗಹನತೆ ತುಂಬಿ ಬರುವುದು ಹೇಗೆಂಬುದಕ್ಕೆ ಇರುವ ಅನೇಕ ಉದಾಹರಣೆಗಳಲ್ಲಿ ಈ ಕವಿತೆಯೂ ಒಂದು.

ನೇರನುಡಿ, ಸ್ಪಷ್ಟ ವೈಚಾರಿಕತೆ, ಅವಕ್ಕೆ ಕಾವ್ಯಕಾಂತಿ, ಕಾಂತೀಯ ಲೇಪನ ಕವಿತೆಯ ವೈಶಿಷ್ಟ್ಯಗಳು. ಈ ಕವಿತೆಯ ಮೂಲಕ ಗುರಜಾಡರು ಮಹಾಪಂಡಿತರಿಗೆ ಮಾತ್ರ ಕಾವ್ಯ ಸಾಧ್ಯವೆಂಬ ಭ್ರಮೆಯನ್ನೂ ನಿವಾರಿಸಿ, ಸಾಮಾನ್ಯ ಭಾಷೆ–ಭಾವವಿರುವವರೂ ಒಳ್ಳೆಯ ಕವಿತೆ ಬರೆಯಲು ಸಾಧ್ಯ ಎನ್ನುವುದನ್ನು ನಿರೂಪಿಸಿದ್ದಾರೆ.

ಹದಿನಾಲ್ಕು ನುಡಿಗಳ, ಐವತ್ತಾರು ಸಾಲುಗಳ ‘ದೇಶಭಕ್ತಿ’ ಕವಿತೆಯಲ್ಲಿನ ‘ದೇಶಮಂಟೇ ಮಟ್ಟಿಕಾದೋಯ್, ದೇಶಮಂಟೇ ಮನುಷುಲೋಯ್’ (ದೇಶವೆಂದರೆ ಮಣ್ಣು ಅಲ್ಲವೊ, ದೇಶವೆಂದರೆ ಮನುಷರೋ) ಎನ್ನುವ ಎರಡು ಸಾಲುಗಳು ತೆಲುಗರ ಬಾಯಲ್ಲಿ ‘ನಿತ್ಯ ನುಡಿತ, ನಿತ್ಯ ಕುಣಿತ’ ಎಂಬುದು ಅತಿಶಯೋಕ್ತಿಯಲ್ಲ.

‘ವಟ್ಟಿ ಮಾಟಲು ಕಟ್ಟಿಪೆಟ್ಟೋಯ್’ ಎಂಬುದಂತೂ ಮತ್ತೂ ಜನಜನಿತ. ಸಾಮಾನ್ಯರೂ ಒಳಗೊಂಡು ರಾಜಕಾರಣಿಗಳನ್ನು, ಒಣ ಜಂಬದ ಕೋಳಿಗಳನ್ನು ಛೇಡಿಸಲೂ ಟೀಕಿಸಲೂ ಇದು ಬಳಕೆಗೊಳ್ಳುತ್ತದೆ. ಕನ್ನಡದ ‘ಬಂಡ್ವಾಳವಿಲ್ಲದ ಬಡಾಯಿ’ ಎಂಬ ನುಡಿಗಟ್ಟಿಗೆ ಇದು ಸಮವಾದುದು.

ಪ್ರಜಾಪ್ರಭುತ್ವವೆಂದರೆ ಜನರಿಂದಾದ ಸರ್ಕಾರ (ಆಡಳಿತ) ಎಂಬುದು ರಾಜಕೀಯ ಅರ್ಥದಲ್ಲಿ ಸರಿಯಿದ್ದೀತು. ಪ್ರಜಾಪ್ರಭುತ್ವವೆಂದರೆ ಜನಜೀವನದ ಮಗ್ಗುಲುಗಳನ್ನು ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಮಾನವೀಯ ಸಂಸ್ಕಾರದೊಂದಿಗೆ ಸದೃಢವಾಗಿ ನಿರ್ಮಿಸುವುದು.

ಸ್ವಾತಂತ್ರ್ಯ, ಸಮಾನತೆ, ಸಹೋದರತೆಗೆ ಇದು ತಳಹದಿ. ಇದನ್ನು ಬಲ್ಲ ಕವಿಯಷ್ಟೇ ‘ದೇಶಭಕ್ತಿ’ಯಂಥ ಕವಿತೆಯನ್ನು ಕೊಡಬಲ್ಲ. ಇದು ತೆಲುಗಿನ ಶತಮಾನದ ಕವಿತೆ. ‘ಹಾಡು ಹಳೆಯದಾದರೇನು, ಭಾವ ನವನವೀನ’ ಎನ್ನುವುದಕ್ಕೆ ತಕ್ಕ ಹಾಗಿರುವ ಕವಿತೆ.

ಸರ್ವೋದಯ ತತ್ವದ್ದು ಇದು. ಆ ಸರ್ವೋದಯವು ದೇಸೀಯತೆಯ ಮೂಲದ್ದು. ರಾಷ್ಟ್ರೀಯ ಆರ್ಥಿಕತೆ ಇದರಿಂದ ರಕ್ಷಿತವಾಗಬೇಕು. ಕೃಷಿ, ಕೈಗಾರಿಕೆ ಹಾಗೂ ಇತರೆ ಸಾಮಾಜಿಕ ಸೇವೆಗಳಲ್ಲಿ ತೊಡಗುವುದರಲ್ಲಿ ದೇಶದ ಪ್ರಗತಿ-ಶಕ್ತಿ ಅಡಗಿದೆ. ಜನರ ಪ್ರಗತಿಯ ಹೊಣೆಯನ್ನು ಹೆಗಲಿಗೇರಿಸಿಕೊಳ್ಳುವುದು ಪ್ರಜಾಪ್ರಭುತ್ವದ ಕರ್ತವ್ಯವೆಂಬುದು ಗುರಜಾಡರ ಪ್ರಜ್ಞಾಪ್ರವಾಹದಲ್ಲಿ ಕಂಡುಬರುತ್ತದೆ.

‘ತೊಡಗಿ ಏನಾದರೊಂದು ಒಳಿತನು / ಮಾಡಿ ಜನರಿಗೆ ತೋರಿಸೊ’ ಎನ್ನುವ ಕವಿತೆ, ಉತ್ಪಾದನೆ ಮತ್ತು ಮಾರುಕಟ್ಟೆಯ ವಿಚಾರವಾಗಿ ಇಂದಿಗೂ ಹೊಸ ಅರ್ಥಗಳನ್ನು ಹೊಳೆಯಿಸುವಂತಿದೆ. ಬಹುರಾಷ್ಟ್ರೀಯ ಕಂಪೆನಿಗಳ ಹಾಗೂ ವಿದೇಶಿ ಬಂಡವಾಳಿಗರ ಸರಕು–ಮಾರುಕಟ್ಟೆಯ ದಾಳಿಯನ್ನು ದೇಸೀಯ ಕಾರ್ಯಕ್ರಮಗಳ ಮೂಲಕ ಎದುರಿಸಬೇಕಾದ ರೀತಿ ನೀತಿಯನ್ನು ಆಲೋಚನೆಯ ಪರಿಧಿಗೆ ತರುತ್ತದೆ.

***
‘ದೇಶವೆಂದರೆ ಮನುಷರೊ’ ಎನ್ನುವುದು ಗುರಜಾಡರ ಆಧುನಿಕ ಕಾಣ್ಕೆ. ಸಂಪೂರ್ಣ ದೇಶ ಭಾರತವನ್ನು ಜನರಾಗಿ ಕಂಡ ಮೊದಲ ಕವಿ ಅವರು. ‘ನನ್ನದು ಜನಾಂದೋಲನ. ಯಾರನ್ನು ಸಂತೋಷಪಡಿಸಲೂ ಅದನ್ನು ಬಿಟ್ಟುಬಿಡುವುದಿಲ್ಲ’ ಎಂದು ಹೇಳಿದ ಕವಿಯ ಆತ್ಮವಿಶ್ವಾಸ ಅವರ ಕಥೆ, ಕಾವ್ಯ, ನಾಟಕಗಳಲ್ಲಿ ಪ್ರತಿಧ್ವನಿಸುತ್ತದೆ, ಅವರು ಜನತಂತ್ರವಾದಿ ಎಂಬುದನ್ನೂ ಸಾರುತ್ತವೆ.

‘ಗುರಜಾಡರ ‘ದೇಶಭಕ್ತಿ’ ತೆಲುಗರಿಗೆ ಅನಧಿಕೃತ ನಾಡಗೀತೆ’ ಎಂದು ತೆಲುಗಿನ ವಿಮರ್ಶಕ, ವಿಚಾರವಾದಿ ಕೆ.ವಿ. ರಮಣಾರೆಡ್ಡಿಯವರು ಹೇಳಿದರೆ, ಮಹಾಕವಿ ಶ್ರೀಶ್ರೀ ‘ದೇಶಭಕ್ತಿಗೀತೆ ತೆಲುಗರಿಗೆ ಮಾತ್ರವಲ್ಲ, ಸಮಸ್ತ ಮಾನವ ಕುಲಕ್ಕೆ ನಾಡಗೀತೆಯಾಗಬಲ್ಲ ಅರ್ಹತೆಯುಳ್ಳದ್ದು’ ಎಂದು ಪ್ರಶಂಸಿಸಿದ್ದಾರೆ.

‘ದೇಶಭಕ್ತಿ’ ಕವಿತೆಯನ್ನು ಓದಿ, ‘ದೇಶವೆಂದರೆ ಮನುಷರೊ’ ಎಂಬ ಪ್ರಣಾಳಿಕೆ ಧ್ವನಿಯ ಹಿನ್ನೆಲೆಯಲ್ಲಿ ಪ್ರಾಸಂಗಿಕವಾಗಿ ಬಂಕಿಮ ಚಂದ್ರರ ‘ವಂದೇ ಮಾತರಂ’ ಮತ್ತು ಕುವೆಂಪು ಅವರ ‘ಜೈ ಭಾರತಜನನಿಯ ತನುಜಾತೆ’ ಕವಿತೆಗಳನ್ನು ನೆನಪಿಸಿಕೊಳ್ಳಬಹುದು.

‘ವಂದೇ ಮಾತರಂ’ನಲ್ಲಿ ಬಂಕಿಮರು ಮಾತೃಭೂಮಿಯನ್ನು ಅದರ ಸೌಂದರ್ಯ, ವೈಭವಗಳ ಮೂಲಕ ದೇಶಭಕ್ತಿಯ ಭಾವವನ್ನು ಕಟ್ಟಿಕೊಡುತ್ತಾರೆ. ದೇಶಭಕ್ತಿ ಒಳಗಿನದೆ ಹೊರತು ಹೊರಗಿನದಲ್ಲ. ಅದನ್ನು ಎದೆಯಿಂದಲೆದೆಗೆ ಪ್ರವಾಹಗೊಳಿಸಲು ನುಡಿಯಾಶ್ರಯದಲ್ಲಿ ಕಟ್ಟುವಕ್ರಿಯೆಯಿಂದ ಅದಕ್ಕೆ ಧ್ವನಿ ಹಾಗೂ ಪ್ರಭಾವವುಂಟು ಮಾಡುವ ಕಸುವನ್ನು ತುಂಬಿಕೊಡುವ ಪ್ರತಿಭೆ–ಪ್ರಭೆ ಕವಿಯದು.

ಇದು ಬಂಕಿಮರಲ್ಲಿ ಯಶಸ್ವಿಯಾಗಿ ನಡೆದಿದೆ. ದೇಶಾಭಿಮಾನ ಮೂಡಿ, ಸಂಚರಿಸುವಂತೆ ಮಾತೃಭೂಮಿಯ ನೈಸರ್ಗಿಕ ಸಮೃದ್ಧಿಯನ್ನು ವರ್ಣಿಸಲಾಗಿದೆ. ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯಶ್ಯಾಮಲಾಂ... ಅವಳು ವೀರಮಾತೆ. ಅವಳ ಸಂತಾನವೂ ಬೀರತನದ್ದು ಎನ್ನುವಾಗ ಪ್ರಜೆಗಳು ಕಾಣಿಸಿಕೊಳ್ಳುತ್ತಾರೆ.

ಕುವೆಂಪು ಅವರ ನಾಡಗೀತೆಯಲ್ಲಿ ಕನ್ನಡ ನಾಡಿನ ನಿಡುಚರಿತ್ರೆಯನ್ನು ಹೇಳುವಾಗ ಪ್ರಜೆಗಳೂ ಇದ್ದಾರೆ. (ಸರ್ವಜನಾಂಗದ ಶಾಂತಿಯ ತೋಟ). ಗುರಜಾಡರದು ಕ್ರಾಂತಿಕಾರಕ ಮುಂದಡಿ. ಅದು ಪ್ರಜಾಪ್ರಭುತ್ವದ ಸಮತಾವಾದ. ಕುವೆಂಪು ಹೇಳುವ ‘ಸರ್ವಜನಾಂಗದ ಶಾಂತಿಯ ತೋಟ’ ಆಗಲು ಏನಾಗಬೇಕು ಎಂಬುದರ ಚಿಂತನೆ ಗುರಜಾಡರಲ್ಲಿದೆ.

‘ದೇಶಭಕ್ತಿ’ ಕವಿತೆ ರಚನೆಯಾಗಿ ಒಂದುನೂರ ಹದಿನೈದು ವರ್ಷಗಳಾಗಿವೆ. ಇಂದಿನ ದೇಶದ ವಿದ್ಯಮಾನಗಳನ್ನು ಗಮನಿಸಿದಾಗ ‘ದೇಶಭಕ್ತಿ’ ಇಂದಿನದೂ ಆಗಿ ಕಾಣುತ್ತದೆ. ಇದು ದೇಶಗಳ ಪ್ರಗತಿಗೀತೆ ಮತ್ತು ಪ್ರಣಾಳಿಕೆ ಎಂಬುದು ಕವಿತೆಯನ್ನು ಅರಿಯುತ್ತ ಹೋದಾಗ ಅರ್ಥವಾಗುತ್ತದೆ. ನಿಜದೇಶಭಕ್ತರು ಏನನ್ನು ಹಂಬಲಿಸಬೇಕು, ಆಶಿಸಬೇಕು ಹಾಗೂ ಅರಸಬೇಕು ಎನ್ನುವುದಕ್ಕೆ ಗುರುಜಾಡರ ಮಾರ್ಗ ಅತ್ಯುತ್ತಮ ಮಾದರಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT