ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಸುತ್ತಿದ ಸೋಲಾರ್‌ ಕಾರ್

ಅಕ್ಷರ ಗಾತ್ರ

ಪೆಟ್ರೋಲ್, ಡೀಸೆಲ್ ಬೆಲೆಗಳ ಕಣ್ಣುಮುಚ್ಚಾಲೆ, ಇವುಗಳಿಂದಾಗುವ ಪ್ರದೂಷಣೆ, ವಾಹನಗಳ ಶಬ್ದಮಾಲಿನ್ಯ, ಇಂಧನದ ಕೊರತೆ... ಹೀಗೆ ಸಮಸ್ಯೆಗಳು ತುಂಬಿರಲು, ಅವುಗಳಿಂದ ಸ್ವಲ್ಪ ಮಟ್ಟಿಗಾದರೂ ಮುಕ್ತಿ ಕಾಣಲು ಸೌರಶಕ್ತಿಯನ್ನು ಬಳಸಿ ಕಾರು ತಯಾರಿಸಿ ಅದರಲ್ಲಿಯೇ ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದ ಸೈಯದ್‌ ಸಜದ್‌ ಅಹಮದ್‌.

  ಸೋಲಾರ್‌ ಕಾರನ್ನು ನಿರ್ಮಿಸಿ ಪರ್ಯಾಯ ಇಂಧನದ ಮೂಲವನ್ನು ಸಮರ್ಥವಾಗಿ ಬಳಸುವ ನಿಟ್ಟಿನಲ್ಲಿ ಇವರ ಸಂಶೋಧನೆ ನಡೆದಿದೆ. 2004ರಲ್ಲಿಯೇ ಸೋಲಾರ್‌ ಕಾರು ತಯಾರಿಸಿದ್ದರೂ, ಈವರೆಗೆ 10 ಬಾರಿ ಕಾರನ್ನು ಮರು ವಿನ್ಯಾಸ ಮಾಡಿ ಈಗ ಹೊಸ ಕಾರು ಸಿದ್ಧಗೊಳಿಸಿದ್ದಾರೆ. ಕಾರನ್ನು ಇನ್ನಷ್ಟು ಸಣ್ಣದಾಗಿ (ಕಾಂಪ್ಯಾಕ್ಟ್‌) ಮಾಡಿ ಹೆಚ್ಚು ವೇಗ ಮತ್ತು ಹೆಚ್ಚು ದೂರ ಕ್ರಮಿಸುವ ಕ್ಷಮತೆ ನೀಡುವ ಗುರಿ ಹೊಂದಿದ್ದಾರೆ.

ಅರ್ಧ ಬ್ಯಾಟರಿ ಮತ್ತು ಅರ್ಧ ಸೌರ ಶಕ್ತಿಯಿಂದ ಚಲಿಸುವ ಈ ಕಾರು ಸ್ವಲ್ಪವೂ ಶಬ್ದ ಮಾಡದು. 40 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ದಿನಕ್ಕೆ 100 ಕಿ.ಮೀಗಳನ್ನು ಪಯಣಿಸಬಹುದು. ಚಾಲಕ ಸೇರಿದಂತೆ ನಾಲ್ವರು ಆರಾಮಾಗಿ ಪ್ರಯಾಣ ಮಾಡಬಹುದಾದ ಕಾರಿದು.

400 ಕೆ.ಜಿ ತೂಕದ ಈ ಕಾರಿಗೆ ನಾಲ್ಕು ಸೋಲಾರ್ ಪ್ಯಾನೆಲ್‌ಗಳನ್ನು ಹಾಗೂ ಬ್ಯಾಟರಿಗಳನ್ನು ಅಳವಡಿಸಲಾಗಿದೆ. ದಿನಕ್ಕೆ 4–6 ಗಂಟೆ ಚಾರ್ಜ್‌ ಮಾಡಿದರೆ ಸಾಕು, ಕಾರು ಓಡುವ ಸಮಯದಲ್ಲಿ ಸೋಲಾರ್‌ ಫಲಕಗಳು ಬಿಸಿಲಿನಿಂದಲೇ ಚಾರ್ಜ್‌ ಆಗಿ ದಿನಕ್ಕೆ 100 ಕಿ.ಮೀಗಳವರೆಗೆ ಚಲಿಸುತ್ತದೆ. ಈ ನಿಟ್ಟಿನಲ್ಲಿಯೂ ಹೊಸ ಪ್ರಯೋಗಕ್ಕೆ ಕೈ ಹಾಕಿರುವ ಸೈಯದ್‌, ಸೋಲಾರ್ ಮತ್ತು ಬ್ಯಾಟರಿ ಚಾರ್ಜರ್‌ ಎರಡನ್ನೂ ಒಂದೇ ಪ್ಯಾನಲ್‌ಗೆ ಅಳವಡಿಸಿ ಕಾರನ್ನು ಇನ್ನಷ್ಟು ಕಿರಿದಾಗಿಸುವ ನಿಟ್ಟಿನಲ್ಲಿ ತೊಡಗಿದ್ದಾರೆ.

ತಮ್ಮ ಕಾರಿಗೆ ಬೇಕಾದ ಮೂಲ ವಸ್ತುಗಳನ್ನು ಸ್ಥಳೀಯವಾಗಿಯೇ ಹೊಂದಿಸಿಕೊಂಡಿರುವ ಇವರು ಲೂನಾದ ಚಕ್ರಗಳನ್ನು ತಮ್ಮ ಕಾರಿಗೆ ಅಳವಡಿಸಿದ್ದಾರೆ. ಇಂಥದ್ದೊಂದು ಹೊಸ ಪ್ರಯೋಗಕ್ಕೆ ಎಕ್ಸೈಡ್‌ ಕಂಪೆನಿ ಒಂದು ಲಕ್ಷ ಬೆಲೆ ಬಾಳುವ ಬ್ಯಾಟರಿ ಮೋಟಾರ್ ನೀಡಿದೆ. ‘ಇದು ಪರಿಸರ ಸ್ನೇಹಿ. ಇದನ್ನು ಮತ್ತಷ್ಟು ಜನಪ್ರಿಯಗೊಳಿಸಲು ಸಾಕಷ್ಟು ಬಾರಿ ಮೂಲ ವಿನ್ಯಾಸದಲ್ಲಿ ಬದಲಾವಣೆ ಮಾಡಿದ್ದೇನೆ. ಆದರೆ ಇದಕ್ಕೆ ತಗಲುವ ವೆಚ್ಚ ದುಬಾರಿ. ಎಲ್ಲದಕ್ಕೂ ನಾನೇ ಹಣ ವ್ಯಯಿಸಬೇಕು. ಸರ್ಕಾರವಾಗಲಿ ಸಂಘ ಸಂಸ್ಥೆಗಳಾಗಲಿ ಇದುವರೆಗೆ ನೆರವು ನೀಡಿಲ್ಲ’ ಎಂದು ವಿಷಾದಿಸುತ್ತಾರೆ.

ದೇಶ ಪರ್ಯಟನೆ
ಸೈಯದ್‌ ಸಜಾದ್‌ ಅವರು ತಾವು ತಯಾರಿಸಿದ ಕಾರಿನಲ್ಲಿಯೇ ದೆಹಲಿ, ಕೊಚ್ಚಿನ್‌, ಚೆನೈ, ಕನ್ಯಾಕುಮಾರಿ, ಮೈಸೂರು ಸೇರಿದಂತೆ ಹಲವು ನಗರಗಳ ಪ್ರದಕ್ಷಿಣೆ ಮಾಡಿದ್ದಾರೆ. ಅಣ್ಣಾ ಹಜಾರೆಯವರು ಪ್ರಾರಂಭಿಸಿದ್ದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಇದೇ ಕಾರಿನಲ್ಲಿ ಹೊರಟ ಇವರು, 25 ದಿನಗಳಲ್ಲಿ 2000 ಕಿ.ಮೀ  ಕ್ರಮಿಸಿ ದೆಹಲಿ ತಲುಪಿದ್ದರು.

ಬೆಂಗಳೂರಿನಿಂದ ಇದೇ ಕಾರಿನಲ್ಲಿ ಬಂದ ಇವರನ್ನು ಕಂಡು ದೆಹಲಿ ಜನ  ಬೆರಗಾಗಿದ್ದರು. ಅಣ್ಣಾ ಹಜಾರೆಯವರೂ ಇವರ ಕಾರಿನಲ್ಲಿ ದೆಹಲಿ ಸುತ್ತಿದ್ದಾಗಿ ಇವರು ನೆನೆಯುತ್ತಾರೆ.

 ಬೆಂಗಳೂರಿನಿಂದ ಕೊಚ್ಚಿ, ಕನ್ಯಾಕುಮಾರಿ ಪ್ರವಾಸ ಮಾಡಿರುವ ಇವರು, ದಾರಿಯಲ್ಲಿ ಸಿಗುವ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಪರ್ಯಾಯ ಇಂಧನ ಮೂಲಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದಾರೆ. ಅನೇಕ ಸಾಮಾಜಿಕ ಸಂಘಗಳೊಂದಿಗೆ ಗುರುತಿಸಿಕೊಂಡಿರುವ ಸೈಯದ್‌, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಸಲುವಾಗಿ ಶಾಲಾ–ಕಾಲೇಜುಗಳಿಗೆ ತೆರಳಿ ಉಪನ್ಯಾಸಗಳನ್ನು ನೀಡುತ್ತಿರುತ್ತಾರೆ.

ಪ್ರಖ್ಯಾತರು ಹತ್ತಿರುವ ಕಾರು
ಇವರ ಕಾರಿನಲ್ಲಿ ದೇಶದ ಹಾಗೂ ನಾಡಿನ ಪ್ರಖ್ಯಾತರು ಸವಾರಿ ಮಾಡಿದ್ದಾರೆ. ಅಣ್ಣಾ ಹಜಾರೆ, ಕಿರಣ್ ಬೇಡಿ, ಪ್ರಖ್ಯಾತ ಖಗೋಳಯಾನಿ ಲೀ ಮೋರಿನ್‌, ಹೋರಾಟಗಾರ ದೊರೆಸ್ವಾಮಿ ಮುಂತಾದ ಪ್ರಖ್ಯಾತರು ಇವರ ಸೋಲಾರ್ ಕಾರಿನಲ್ಲಿ ಪಯಣಿಸಿದ್ದಾರೆ.

ಇತರ ಸಂಶೋಧನೆಗಳು
ಕೇವಲ ಸೋಲಾರ್ ಕಾರಷ್ಟೇ ಅಲ್ಲದೆ, ರೇಷ್ಮೆ ನೂಲು ಉದ್ದಿಮೆಯಲ್ಲಿಯೂ ಹೊಸ ಪ್ರಯೋಗ ಮಾಡಿದ್ದಾರೆ. ಅಸುರಕ್ಷಿತ ಹಾಗೂ ಪರಿಸರಕ್ಕೆ ಹಾನಿ ಉಂಟುಮಾಡುವ ಮಾದರಿಯಲ್ಲಿ ರೇಷ್ಮೆ ನೂಲು ತೆಗೆಯುವ ಹಳೆಯ ವಿಧಾನವನ್ನು ಬದಲಾಯಿಸಲು ಇವರು ಹಬೆ ಮತ್ತು ಸೋಲಾರ್ ಶಕ್ತಿ ಬಳಸಿ ರೇಷ್ಮೆ ನೂಲು ತೆಗೆಯುವ ಹಾಗೂ ಒಣಗಿಸುವ ಯಂತ್ರವನ್ನು ಸಂಶೋಧಿಸಿದ್ದಾರೆ. ಹೊಸ ಯಂತ್ರದಿಂದಾಗಿ ರೇಷ್ಮೆ ನೂಲು ಕಾರ್ಮಿಕರು ಸ್ವಚ್ಛ ಪರಿಸರದಲ್ಲಿ ಕಾರ್ಯ ನಿರ್ವಹಿಸಬಹುದಾಗಿದ್ದು, ಪರಿಸರಕ್ಕೆ ಆಗಬಹುದಾದ ಹಾನಿಯನ್ನೂ ತಡೆಯಲು ಸಾಧ್ಯ ಎನ್ನುತ್ತಾರೆ.

ಇಷ್ಟಲ್ಲದೇ, ಒಂದೇ ಸೋಲಾರ್ ಪ್ಯಾನಲ್‌ ನಲ್ಲಿ ಬಿಸಿ ನೀರು ಕಾಯಿಸುವ ಹಾಗೂ ವಿದ್ಯುತ್‌ ಉತ್ಪಾದನೆ ಮಾಡುವ ಯಂತ್ರವನ್ನು ಇವರು ಅಭಿವೃದ್ಧಿಪಡಿಸುತ್ತಿದ್ದಾರೆ. ಕೇವಲ ಪಿ.ಯು.ಸಿ ಓದಿರುವ ಸೈಯದ್‌ ಅವರು ಪ್ರಪಂಚದ ಅತ್ಯುತ್ತಮ ಸಂಶೋಧನೆಗಳು ಹಾಗೂ ಸಂಶೋಧಕರ ಬಗ್ಗೆ ನಿರರ್ಗಳವಾಗಿ ಮಾತನಾಡಬಲ್ಲರು, ಭಾರತದಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಕಡಿಮೆ ಇದ್ದು, ವಿದ್ಯಾರ್ಥಿಗಳಿಗೆ ಪ್ರಯೋಗಾತ್ಮಕ ಪಠ್ಯಗಳನ್ನು ಅಳವಡಿಸುವ ಮೂಲಕ ಸಂಶೋಧನಾ ಪ್ರವೃತ್ತಿಯನ್ನು ಎಳವೆಯಿಂದಲೇ ಬೆಳೆಸಬೇಕು ಎಂಬುದು ಇವರ ಅಭಿಪ್ರಾಯ.

ಪ್ರಶಸ್ತಿ ಸನ್ಮಾನ
ಸೈಯದ್‌ ಅವರ ಸಂಶೋಧನೆ ಮತ್ತು ಪರಿಸರ ಪ್ರೀತಿಯಿಂದಾಗಿ ಹಲವು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಕರ್ನಾಟಕ ಸರ್ಕಾರ ಡಾ.ಅಬ್ದುಲ್‌ ಕಲಾಂ ಪರಿಸರ ಪ್ರಶಸ್ತಿ ನೀಡಿ ಗೌರವಿಸಿದೆ, ನೆಹರು ರಾಷ್ಟ್ರೀಯ ಪ್ರಶಸ್ತಿ, ಮುಂಬೈ ಇಕೋ ಸಂಸ್ಥೆಯ  ಸ್ಪಾಟ್‌ಲೈಟ್‌ ಆನರ್‌ ಪ್ರಶಸ್ತಿಗಳು ಇವರಿಗೆ ಲಭಿಸಿದ್ದು, ಮೈಸೂರಿನ ಪ್ರತಿಷ್ಠಿತ ಮಹಾಜನ್ ಕಾಲೇಜು ಬೆಂಗಳೂರಿನ ನ್ಯಾಷನಲ್ ಕಾಲೇಜುಗಳು ಇವರ ಸಾಧನೆ ಮೆಚ್ಚಿ ಸನ್ಮಾನಿಸಿವೆ. ಸಂಪರ್ಕಕ್ಕೆ: 9845229757

"ನನ್ನದು ನಿರಂತರ ಪ್ರಯೋಗ, ವೈಜ್ಞಾನಿಕ ಚಿಂತನೆ ಮತ್ತು ಪ್ರಯೋಗಶೀಲತೆ. ಆದರೆ ಸರ್ಕಾರ ಮಾತ್ರ ನನ್ನ ಸಂಶೋಧನೆಗಳ ಬಗ್ಗೆ ಅಸಡ್ಡೆ ತೋರಿರುವುದು ನಿರಾಸೆ ಉಂಟು ಮಾಡಿದೆ. ಹಲವಾರು ಇಲಾಖೆಯ ಉನ್ನತ ಅಧಿಕಾರಿಗಳು ನನ್ನ ಸಂಶೋಧನೆಗಳನ್ನು ವೀಕ್ಷಿಸಿದ್ದು ಬೆನ್ನು ತಟ್ಟಿ ಪ್ರೋತ್ಸಾಹದ ಮಾತನ್ನಾಡಿ ಮರೆತು ಬಿಡುತ್ತಾರೆಯೇ ವಿನಃ ಯಂತ್ರಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಕಡೆ ಗಮನವಹಿಸುದಿಲ್ಲ"                                          
  –ಸೈಯದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT