ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸೀ ಬೀಜ ತಂದೀರಾ?

Last Updated 30 ನವೆಂಬರ್ 2015, 19:59 IST
ಅಕ್ಷರ ಗಾತ್ರ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕಳೆದ ವಾರ ಏರ್ಪಡಿಸಿದ್ದ ಕೃಷಿ ಮೇಳದಲ್ಲಿ ಕಂಡ ಆ ಸನ್ನಿವೇಶ ಬಲು ಮೋಜಿನಿಂದ ಕೂಡಿತ್ತು. ‘ಹಸಿರು ಕ್ರಾಂತಿ’ಯ ಸುವರ್ಣ ಸಂಭ್ರಮಾಚರಣೆ ನಡೆದಿದ್ದ ಸಭಾಂಗಣದಲ್ಲಿ ಬೆರಳೆಣಿಕೆಯಷ್ಟು ಮಂದಿಯಷ್ಟೇ ಇದ್ದರೆ, ಪಕ್ಕದ ಸಾವಯವ ಉತ್ಪನ್ನಗಳ ಮಳಿಗೆಗಳಲ್ಲಿ ದೇಸೀ ಬೀಜಗಳ ಖರೀದಿಗೆ ಜನಸಾಗರವೇ ಹರಿದುಬಂದಿತ್ತು. ಆ ಎರಡೂ ಸನ್ನಿವೇಶಗಳನ್ನು ಸಮೀಕರಿಸಿ ನೋಡಿದಾಗ ಕಳೆದ ಐವತ್ತು ವರ್ಷಗಳಲ್ಲಿ ದೇಶದ ಕೃಷಿಚಕ್ರ ಒಂದು ಸುತ್ತನ್ನು ಪೂರೈಸಿದಂತೆ ಭಾಸವಾಯಿತು.

‘ಹಸಿರು ಕ್ರಾಂತಿ’ಯ ಪ್ರವಾಹಕ್ಕೆ ಸಿಕ್ಕು ಐದು ದಶಕಗಳ ಹಿಂದೆ ಎಲ್ಲಿಂದ ಹೊರಟಿದ್ದೆವೋ ಈಗ ಅಲ್ಲಿಗೇ ಬಂದು ನಿಂತಿದ್ದೇವೆ. ಹಸಿದ ಹೊಟ್ಟೆಯನ್ನು ತುಂಬಿಸುವ ನೆಪದಲ್ಲಿ ‘ಹಸಿರು ಕ್ರಾಂತಿ’ ಮೂಲಕ ಲೆಕ್ಕವಿಲ್ಲದಷ್ಟು ಹೈಬ್ರೀಡ್‌ ತಳಿಗಳು ಬಂದು ನಮ್ಮ ಹೊಲಗಳಲ್ಲಿ ಬೇರೂರಿವೆ. ಆದರೆ, ಜನರಿಗೀಗ ಸಾವಯವ ಕೃಷಿ ಉತ್ಪನ್ನಗಳ ಹಸಿವು ಆವರಿಸಿಬಿಟ್ಟಿದೆ! ಅಡುಗೆ ಮನೆಯಲ್ಲಿ ಸಾವಯವ ಧಾನ್ಯ ಹಾಗೂ ತರಕಾರಿಗಳೇ ಇರಬೇಕು ಎನ್ನುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ವೈರುಧ್ಯ ನೋಡಿ, ಆಗ ಬೇಕಾದಷ್ಟಿದ್ದ ದೇಸೀ ತಳಿಗಳನ್ನು ಮೂಲೆಗುಂಪು ಮಾಡಲಾಯಿತು. ಈಗ ಅದೇ ತಳಿಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ಅವುಗಳ ಸುಳಿವೇ ಇಲ್ಲ. ದೇಸೀ ತಳಿಗಳು ಮತ್ತೆ ನಮ್ಮ ನೆಲದಲ್ಲಿ ನಳನಳಿಸಬೇಕು ಎಂಬ ಪಣ ತೊಟ್ಟಿರುವ ಬೀಜ ಸಂರಕ್ಷಕರ ಜಾಲವೊಂದು ದೇಶದಾದ್ಯಂತ ಹರಡಿದ್ದು, ಸದ್ದಿಲ್ಲದೆ ಕಾರ್ಯಮಗ್ನವಾಗಿದೆ.

ಒಡಿಶಾದ ರಾಯಗಢ ಜಿಲ್ಲೆಯ ನಿಯಮಗಿರಿ ಬೆಟ್ಟಗಳ ಮಧ್ಯದ ನಿಸರ್ಗದ ತೊಟ್ಟಿಲಲ್ಲಿ ಭತ್ತದ ನೂರಾರು ದೇಸೀ ತಳಿಗಳನ್ನು ಸಂರಕ್ಷಣೆ ಮಾಡುತ್ತಿರುವ ದೇಬಲ್ ದೇವ್ ಅವರಂತಹ ವಿಜ್ಞಾನಿಯಿಂದ ಹಿಡಿದು ಹತ್ತಿಯಲ್ಲಿ ‘ದೇಸೀ’ತನ ಉಳಿಸಿಕೊಂಡ ಹಾವೇರಿ ಜಿಲ್ಲೆಯ ಮಕರಿ ಗ್ರಾಮದ ನಾಗಪ್ಪ ನಿಂಬೆಗೊಂದಿ ಅವರಂತಹ ರೈತರವರೆಗೆ ‘ಬೀಜ ರಕ್ಷಕ’ರ ದೊಡ್ಡ ಸೈನ್ಯವೇ ಈಗ ಸಿದ್ಧವಾಗಿದೆ.

‘ಹಸಿರು ಕ್ರಾಂತಿ’ಯ ನಂತರದ ಅವಧಿಯಲ್ಲಿ ಸೂಕ್ತ ದಾಖಲೀಕರಣ ಮಾಡದೇ, ಸಂರಕ್ಷಣೆಗೆ ಕಾಳಜಿಯನ್ನೂ ತೋರದೇ ಇದ್ದುದರಿಂದ ಎಷ್ಟೋ ತಳಿಗಳು ಪೂರ್ತಿಯಾಗಿ ಕಣ್ಮರೆಯಾಗಿವೆ. ಆ ತಳಿಗಳಿಗೆ ಸಂಬಂಧಿಸಿದ ಅಪರೂಪದ ರೈತ ಜ್ಞಾನವೂ ನಶಿಸಿಹೊರಟಿದೆ. ಇದರ ನಡುವೆಯೇ ಪೇಟೆಂಟ್‌ ‘ಅಸ್ತ್ರ’ ಹಿಡಿದ ಬಹುರಾಷ್ಟ್ರೀಯ ಕಂಪೆನಿಗಳು ದೇಸೀ ಬೀಜಗಳನ್ನು ಸಂಪೂರ್ಣ ನಿರ್ಮೂಲನೆ ಮಾಡಲು ದಂಡೆತ್ತಿ ಬಂದಿವೆ.

ಹೈಬ್ರೀಡ್‌ ತಳಿಗಳ ಈ ಬೀಜಾಸುರ ಕಂಪೆನಿಗಳು ದೊಡ್ಡ ದೊಡ್ಡ ಗೋದಾಮುಗಳಲ್ಲಿ ಬೀಜ ಸಂಗ್ರಹಿಸಿ, ಹಳ್ಳಿ ಹಳ್ಳಿಗೂ ಲೋಡುಗಟ್ಟಲೆ ಬೀಜದ ಲಾರಿಗಳನ್ನು ನುಗ್ಗಿಸಿದರೆ, ಮಣ್ಣಿನ ಮಡಿಕೆಯಲ್ಲೋ, ಮೇವಿನ ಮಧ್ಯದಲ್ಲೋ ಸಂಗ್ರಹಿಸಡಲಾದ ದೇಸೀ ಬೀಜಗಳು ವಿನಿಮಯದ ಮೂಲಕ ನಿಧಾನವಾಗಿ ಸೀಮೋಲ್ಲಂಘನ ಮಾಡುತ್ತಿವೆ. ಆದರೆ, ಹೋದಲ್ಲೆಲ್ಲ ಸುಸ್ಥಿರವಾಗಿ ಬೇರೂರುತ್ತಿವೆ.

ನಾಟಿ ಬೀಜ ಸಂರಕ್ಷಣೆಯತ್ತ ರೈತರನ್ನು ಸೆಳೆಯುವ ಮೂಲಕ ಪೇಟೆಂಟ್‌ ದಾಳಿಯ ವಿರುದ್ಧ ಹೋರಾಟಕ್ಕೆ ನಾಂದಿಹಾಡಲಾಗಿದೆ. ‘ಸಹಜ ಸೀಡ್ಸ್‌’ನಂತಹ ಕೃಷಿಕರೇ ಹುಟ್ಟುಹಾಕಿದ ಸಂಸ್ಥೆಗಳು ತಳಿ ಶುದ್ಧತೆ ಮತ್ತು ಬೀಜ ಸಂರಕ್ಷಣೆಗೆ ಒತ್ತು ನೀಡುತ್ತಿದ್ದು, ಪರಸ್ಪರ ವಿನಿಮಯದ ಮೂಲಕ ದೇಸೀ ಬೀಜ ಬ್ಯಾಂಕ್‌ಗಳನ್ನು ಬೆಳೆಸುತ್ತಿವೆ.

ದೇಸೀತನದ ಗುಟ್ಟು
ಮುಕ್ತ ಪರಾಗಸ್ಪರ್ಶದಿಂದ ಸಾವಯವ ಪದ್ಧತಿಯಲ್ಲಿ ಬೀಜಗಳನ್ನು ಉತ್ಪಾದನೆ ಮಾಡುವುದು ದೇಸೀತನದ ಹೆಚ್ಚುಗಾರಿಕೆ. ಗಾಳಿ ಹಾಗೂ ಕೀಟಗಳಿಂದ ಸಹಜವಾಗಿ ಪರಾಗಸ್ಪರ್ಶ ಆಗುವುದು ಮತ್ತು ಅದರಿಂದ ಬೀಜದ ತೆನೆ ಮೂಡುವುದು ನೈಸರ್ಗಿಕ ಕ್ರಿಯೆ. ಪ್ರಕೃತಿ ತನ್ನ ಮಕ್ಕಳಿಗೆ ಮೊಗೆದು ಕೊಟ್ಟದ್ದೆಲ್ಲ ಪರಿಶುದ್ಧವೇ ಎಂಬುದು ಪಾರಂಪರಿಕ ಕೃಷಿ ಪದ್ಧತಿಯಲ್ಲಿ ಬೇರೂರಿರುವ ಬಲವಾದ ನಂಬಿಕೆ.

ರೈತರಿಂದ ದೇಸೀ ಬೀಜ ತಂದು ಸಾವಯವ ಕೃಷಿ ಪದ್ಧತಿಯಲ್ಲಿ ಅವುಗಳ ಮರು ಉತ್ಪಾದನೆ ಮಾಡಲು ಸಾಧ್ಯ. ಬಹುರಾಷ್ಟ್ರೀಯ ಕಂಪೆನಿಗಳಿಂದ ತರುವ ಕುಲಾಂತರಿ ತಳಿಗಳ ಬೀಜಗಳಿಂದ ಮರು ಉತ್ಪಾದನೆ ಸಾಧ್ಯವೇ ಇಲ್ಲ. ಬೀಜೋತ್ಪಾದನೆಯಲ್ಲಿ ಸ್ವಾವಲಂಬಿ ಆಗಿದ್ದ ರೈತರೆಲ್ಲ ಕಳೆದ ಐವತ್ತು ವರ್ಷಗಳಲ್ಲಿ ಪರಾವಲಂಬಿ ಆಗಿರುವ ಕಥೆ ಇದು.

‘ಸಾವಿರಾರು ವರ್ಷಗಳ ನಮ್ಮ ಕೃಷಿ ಪರಂಪರೆಯಲ್ಲಿ ದೇಸೀ ತಳಿಯ ಬೀಜಗಳನ್ನು ಜತನದಿಂದ ಕಾಪಾಡಿಕೊಂಡು ಬರಲಾಗಿತ್ತು. ಸ್ವಾವಲಂಬಿಯಾಗಿದ್ದ ನಮ್ಮ ಕೃಷಿ ವ್ಯವಸ್ಥೆ ಬರುಬರುತ್ತಾ ಬಹುರಾಷ್ಟ್ರೀಯ ಕಂಪೆನಿಗಳ ಹಿಡಿತಕ್ಕೆ ಬೀಜಗಳನ್ನು ಒಪ್ಪಿಸಿ ಪರಾವಲಂಬಿ ಆಯಿತು’ ಎನ್ನುತ್ತಾ ವಿಷಾದದ ನಿಟ್ಟುಸಿರು ಬಿಡುತ್ತಾರೆ ‘ಸಹಜ ಸೀಡ್ಸ್‌’ನ ನಿರ್ದೇಶಕ ಜಿ.ಕೃಷ್ಣಪ್ರಸಾದ್‌.

‘ಸಮುದಾಯದ ಆಸ್ತಿಯಾಗಿರುವ ದೇಸೀ ಬೀಜಗಳನ್ನು ಎಲ್ಲರೂ ಉತ್ಪಾದನೆ ಮಾಡುವಂತೆ ನಾವು ಮನ ಒಲಿಸುತ್ತೇವೆ. ಪೀಳಿಗೆಯಿಂದ ಪೀಳಿಗೆಗೆ ಈ ತಳಿಗಳನ್ನು ಸಂರಕ್ಷಿಸಿ ದಾಟಿಸುವ ಹೊಣೆ ಎಲ್ಲರದು. ನಮ್ಮ ಪೂರ್ವಜರು ಈ ದೇಸೀ ತಳಿಗಳನ್ನು ಅದೇ ವಿಧಾನದಲ್ಲಿ ನಮಗೆ ಬಳುವಳಿಯಾಗಿ ಕೊಟ್ಟಿದ್ದಾರೆ’ ಎಂದು ಅವರು ವಿವರಿಸುತ್ತಾರೆ.

ನಮ್ಮ ಕೃಷಿ ವಿಶ್ವವಿದ್ಯಾಲಯಗಳು ಸಹ ಪ್ರತಿವರ್ಷ ಹೊಸ, ಹೊಸ ಹೈಬ್ರೀಡ್‌ ತಳಿಗಳನ್ನು ಬಿಡುಗಡೆ ಮಾಡುತ್ತಿವೆ. ಅವುಗಳು ಇದುವರೆಗೆ ಬಿಡುಗಡೆ ಮಾಡಿದ ತಳಿಗಳ ಸಂಖ್ಯೆ ಲೆಕ್ಕ ಹಾಕುತ್ತಾ ಹೋದರೆ ಅದು ಹನುಮನ ಬಾಲದಂತೆ ಬೆಳೆಯುತ್ತದೆ. ಆದರೆ, ಯಶಸ್ಸು ಕಂಡಿದ್ದು ಎಲ್ಲೋ ಅಲ್ಲೊಂದು ಇಲ್ಲೊಂದು ಮಾತ್ರ.

ಸಾವಯವ ಕೃಷಿ ಪದ್ಧತಿಯಲ್ಲಿ ಬೀಜ ಉತ್ಪಾದನೆಗೆ ಕೃತಕ ಪರಾಗಸ್ಪರ್ಶ ಬೇಕಾಗಿಲ್ಲ. ಅಲ್ಲದೆ ಯಾವ ವಿಶೇಷ ತಂತ್ರಜ್ಞಾನದ ಅಗತ್ಯ ಕೂಡ ಇಲ್ಲ. ಸಾವಿರಾರು ವರ್ಷಗಳಿಂದ ನಮ್ಮ ರೈತರು ಈ ತಳಿಗಳನ್ನು ಅವುಗಳ ಮೂಲ ಸ್ವರೂಪದಲ್ಲೇ ಸಂರಕ್ಷಿಸಿಕೊಂಡು ಬಂದಿಲ್ಲವೆ, ಮತ್ತೆ?

ಹಾವೇರಿ ಜಿಲ್ಲೆಯು ರಾಜ್ಯದ ದೇಸೀ ಬೀಜಗಳ ಬಟ್ಟಲು ಎನಿಸಿದೆ. ಅಲ್ಲಿನ ಮಕರಿ ಗ್ರಾಮದ ನಿಂಬೆಗೊಂದಿ ಅವರಲ್ಲದೆ ಹಿರೇಯಡಚಿಯ ಈಶ್ವರಪ್ಪ ಬಣಕಾರ, ಚಿನ್ನಿಕಟ್ಟಿಯ ಮೂಕಪ್ಪ ಪೂಜಾರ ಕೂಡ ರೈತರ ತಂಡ ಕಟ್ಟಿಕೊಂಡು ದೇಸೀ ಬೀಜಗಳ ಉತ್ಪಾದನೆಯಲ್ಲಿ ತೊಡಗಿದ್ದಾರೆ. ಮಂಡ್ಯ ಜಿಲ್ಲೆಯ ಕಿರುಗಾವಲಿನ ಸೈಯದ್‌ ಘನಿಖಾನ್‌ ಅವರಂತೂ 750 ಭತ್ತದ ತಳಿಗಳನ್ನು ಕಾಪಾಡಿಕೊಂಡು ಬಂದಿದ್ದಾರೆ.

ದಾವಣಗೆರೆ ಜಿಲ್ಲೆಯ ಕುಂಬಳೂರು ಗ್ರಾಮದ ಅಂದನೂರು ಆಂಜನೇಯ ನೂರಾರು ಕ್ವಿಂಟಾಲ್‌ ದೇಸೀ ಬೀಜ ಉತ್ಪಾದಿಸಿ ಮಾರಾಟ ಮಾಡಿದ್ದಾರೆ. ಶಿವಮೊಗ್ಗ, ಚಾಮರಾಜನಗರ ಹಾಗೂ ಕೊಪ್ಪಳ ಜಿಲ್ಲೆಗಳಲ್ಲೂ ದೇಸೀ ಬೀಜದ ಒಕ್ಕಲು ನಡೆಯುತ್ತಿದೆ. 

ಮೈಸೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳೂ ಬೀಜೋತ್ಪಾದನೆಯಲ್ಲಿ ಕೈಜೋಡಿಸುವ ಮೂಲಕ ‘ದೇಸೀ’ತನ ಮೆರೆಯುತ್ತಿವೆ. ಈ ಜಿಲ್ಲೆಗಳಲ್ಲಿ ತರಕಾರಿ ಬೀಜಗಳನ್ನೇ ಹೆಚ್ಚಾಗಿ ಉತ್ಪಾದನೆ ಮಾಡುತ್ತಿರುವುದು ವಿಶೇಷವಾಗಿದೆ.

‘ಬೀಜ ಖರೀದಿಸಲು ಪೇಟೆಯಲ್ಲಿ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವುದು ಬಲು ಸೋಜಿಗದ ವಿದ್ಯಮಾನ. ನಮ್ಮ ಹೊಲದಲ್ಲೇ ನಮಗೆ ಅಗತ್ಯವಾದಷ್ಟು ಬೀಜ ಉತ್ಪಾದನೆ ಮಾಡಲು ಸಾಧ್ಯವಿದ್ದರೂ ಕಂಪೆನಿಗಳು ಕೊಡುವ ಬೀಜಗಳಿಗೆ ಕೈಯೊಡ್ಡುವುದು ಏಕೆ’ ಎಂದು ಬೀಜೋತ್ಪಾದನೆಯಲ್ಲಿ ತೊಡಗಿರುವ ರೈತರು ಒಕ್ಕೊರಲಿನಿಂದ ಪ್ರಶ್ನಿಸುತ್ತಾರೆ.

ಈಗ ಮತ್ತೆ ಬೆಂಗಳೂರಿನ ಕೃಷಿ ಮೇಳಕ್ಕೆ ಬರೋಣ. ಮೇಳಕ್ಕೆ ರೈತಾಪಿ ವರ್ಗಕ್ಕಿಂತ ಹೆಚ್ಚಾಗಿ ನಗರವಾಸಿಗಳೇ ಬಂದಿದ್ದರು. ತಮ್ಮ ತಾರಸಿ ತೋಟದಲ್ಲಿ ಸಾವಯವ ವಿಧಾನದಲ್ಲೇ ತರಕಾರಿ ಬೆಳೆಸಬೇಕೆಂಬ ಉತ್ಸಾಹ ಅವರಲ್ಲಿತ್ತು. ರೋಗರಹಿತ, ರುಚಿಯಾದ ಹಾಗೂ ಪೌಷ್ಟಿಕಾಂಶದಿಂದ ಕೂಡಿದ ತರಕಾರಿಯನ್ನೇ ತಿನ್ನಬೇಕೆಂಬ ಇಂತಹ ಹಂಬಲ ಹೆಚ್ಚಿದ್ದರಿಂದಲೇ ದೇಸೀ ಬೀಜಗಳ ಮಾರಾಟ ಮಳಿಗೆ ಮುಂದೆ ನೂಕುನುಗ್ಗಲು ಉಂಟಾಗಿತ್ತು. ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ತಳಿಗಳು ಬೇಕೋ, ಪೌಷ್ಟಿಕವಾದುದನ್ನು ಕೊಡುವ ತಳಿಗಳು ಬೇಕೋ ಎಂಬ ಪ್ರಶ್ನೆಗೆ ಉತ್ತರ ಈಗ ನಿಚ್ಚಳವಾಗಿದೆ.

‘ಫಾಸ್ಟ್‌ ಫುಡ್‌’ ಸಂಸ್ಕೃತಿ ಪಸರಿಸಿದ ಪ್ರದೇಶದಲ್ಲೇ ಪಾರಂಪರಿಕ ಊಟಕ್ಕೂ ಬೆಲೆ ಬಂದಿದೆ. ಸಾವಯವ ಉತ್ಪನ್ನಗಳ ರುಚಿಯನ್ನು ನಾಲಗೆ ಬೇಡುತ್ತಿದೆ. ಐವತ್ತು ವರ್ಷಗಳ ಹಿಂದೆ ದಿಗ್ಗನೆ ಉಲ್ಕೆಯಂತೆ ಗೋಚರಿಸಿದ ‘ಹಸಿರು ಕ್ರಾಂತಿ’ ಈಗ ಉರಿದು ಹೋಗಿದ್ದರೂ ಅದರ ಬಿಸಿ ರೈತರಿಗೆ ಇನ್ನೂ ತಟ್ಟುತ್ತಲೇ ಇದೆ. ಆಗ ಎಲ್ಲಿಯೋ ಅಗೋಚರ ಪ್ರದೇಶದಲ್ಲಿ ಮಿಣುಕುತ್ತಿದ್ದ ದೇಸೀ ಬೀಜದ ಹಣತೆ ಮಾತ್ರ ದೇಶದ ಸಾವಯವ ಕೃಷಿಭೂಮಿಯ ತುಂಬಾ ತಂಪಾದ ಬೆಳದಿಂಗಳನ್ನು ಹರಡಿದೆ! 

***
ಅದೇನ್‌ಕೇಳ್ತೆ, ಅಜಿಪಸಾಲೆ!
ಕಳೆದುಹೋದ ನೂರಾರು ತಳಿಗಳ ದೇಸೀ ಬೀಜಗಳನ್ನು ರೈತರು ಈಗ ಮರುಶೋಧ ನಡೆಸಿ ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅಂತಹ ಕೆಲವು ದೇಸೀ ತಳಿಗಳ ಒಂದು ಸಣ್ಣ ಝಲಕ್‌ ಇಲ್ಲಿದೆ:
ಭತ್ತ: ಅಜಿಪಸಾಲೆ, ಅದೇನ್‌ಕೇಳ್ತೆ, ಕೊಳಕೆದೊಡ್ರ, ಕುಮೇರು, ಗಂಧಸಾಲೆ, ಚಾರೆ, ಜೀರಿಗೆಸಣ್ಣ, ಪೀಟ್‌ಸಾಲೆ, ಮಸ್ಕತಿ, ರತ್ನಚೂಡಿ, ಹಲ್ಲಿಂಗ, ಜುಗಲ್‌

ಸಿರಿಧಾನ್ಯ: ಹಾಲುನವಣೆ, ಕೆಂಪುಕಡ್ಡಿ ರಾಗಿ

ಬದನೆ: ಮುಸುಕು, ಕೊತ್ತಿತಲೆ, ಗೋಮುಖ, ಮರ, ಮುಳ್ಳು, ಮೈಸೂರು, ಕಡೂರು, ಕೊಪ್ಪಳ

ಟೊಮೆಟೊ: ಮದನಪಲ್ಲಿ, ಚೆರ್ರಿ, ಕುಂಕುಮ ಕೇಸರಿ, ಝೀಬ್ರಾ

ಬೆಂಡೆ: ಮಿಕದ ಕೊಂಬು, ಮರ, ಶ್ರೀಲಂಕಾ; ಅಲ್ಲದೆ ಎಲ್ಲ ವಿಧದ ತರಕಾರಿಯಲ್ಲೂ ಸುಮಾರು 90 ದೇಸೀ ತಳಿಗಳು ಲಭ್ಯವಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT