ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹದ ಬಲ ಗಟ್ಟಿಗೊಳ್ಳುವ ಸಮಯ...

Last Updated 21 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ವಯೋಮಾನದ ಕ್ರಿಕೆಟ್‌ನ ಪ್ರಮುಖ ಟೂರ್ನಿಗಳಲ್ಲಿ ಒಂದಾಗಿರುವ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಪಂದ್ಯಗಳಲ್ಲಿ ಆಡುವ ಆಟಗಾರರ ಗರಿಷ್ಠ ವಯೋಮಿತಿಯಲ್ಲಿ ಏರಿಳಿತ ಮಾಡುತ್ತ ಬಂದಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ  ಕೊನೆಗೆ ‘23’ರಲ್ಲಿ ಬಂದು ನಿಂತಿದೆ. 39 ವರ್ಷಗಳ ಇತಿಹಾಸದ ಈ ಟೂರ್ನಿ ಮೊದಲು 19 ವರ್ಷದೊಳಗಿನವರ ಸ್ಪರ್ಧೆಯಾಗಿತ್ತು.

ನಂತರ ವಯೋಮಿತಿಯನ್ನು 22ಕ್ಕೆ ಏರಿಸಿತು. ಮೂರು ವರ್ಷಗಳ ಹಿಂದೆ 25 ವರ್ಷಗಳಿಗೆ ಏರಿದ ವಯಸ್ಸಿನ ಮಿತಿ ಈ ವರ್ಷ 23ಕ್ಕೆ ಇಳಿದಿದೆ. ಟ್ರೈನರ್‌ಗಳು ಮತ್ತು ಫಿಸಿಯೊ ಅಭಿಪ್ರಾಯದಂತೆ ಆಟಗಾರರ ಫಿಟ್‌ನೆಸ್ ದೃಷ್ಟಿಯಲ್ಲಿ ಸ್ವಯಂ ಕಾಳಜಿ ವಹಿಸುವ ಮತ್ತು ಮಾಹಿತಿ ಗಳನ್ನು ಪಡೆದುಕೊಳ್ಳಲು ಮುಂದಾಗುವ ವಯಸ್ಸು ಇದು. ಹೀಗಾಗಿ ಸಿ.ಕೆ.ನಾಯ್ಡು ಟ್ರೋಫಿ ಟೂರ್ನಿಯ ಪಂದ್ಯಗಳು ಈಗ ಪ್ರತಿ ರಾಜ್ಯಗಳ ಆಟಗಾರರಿಗೆ ದೈಹಿಕ ಕ್ಷಮತೆಯನ್ನು ಸ್ವಯಂ ತಿಳಿದುಕೊಳ್ಳುವ ಸವಾಲನ್ನು ಕೂಡ ಮುಂದಿಟ್ಟಿದೆ.

ಭಾರತದಲ್ಲಿ ಸಣ್ಣ ವಯಸ್ಸಿನಲ್ಲೇ ಮಕ್ಕಳಿಗೆ ದೈಹಿಕ ಶಕ್ತಿಯನ್ನು ಹೇಳಿಕೊಡುವ ಪದ್ಧತಿ ಇಲ್ಲ. ಆದ್ದರಿಂದ ಸುಮಾರು ಹದಿನಾಲ್ಕು ವರ್ಷಗಳವರೆಗೆ ತನ್ನ ದೇಹದ ಶಕ್ತಿ ಸಾಮರ್ಥ್ಯದ ಬಗ್ಗೆ ಬಹುತೇಕ ಆಟಗಾರನಿಗೆ ಯಾವುದೇ ಕಲ್ಪನೆ ಇರುವುದಿಲ್ಲ. ಹದಿನಾರರಿಂದ 19 ವರ್ಷದೊಳಗಿನವರು ಅಲ್ಪ ಸ್ವಲ್ಪ ತಿಳಿದುಕೊಂಡಿರುತ್ತಾರೆ. 22–23 ವರ್ಷ ಆಗುತ್ತಿದ್ದಂತೆ ಹೆಚ್ಚು ತಿಳಿದುಕೊಳ್ಳುವ ಆಸಕ್ತಿ ಮೂಡಿರುತ್ತದೆ. ಹೀಗಾಗಿ ಈ ವಯಸ್ಸಿನ ಆಟಗಾರರಿಗೆ ಸರಿಯಾದ ಮಾಹಿತಿ ನೀಡ ಬೇಕಾಗುತ್ತದೆ ಎಂಬುದು ಫಿಟ್‌ನೆಸ್ ತರಬೇತುದಾರರ ಅನಿಸಿಕೆ.

‘ಹದಿನಾಲ್ಕು ಅಥವಾ ಹದಿನೈದರ ಆಸುಪಾಸಿನವರಲ್ಲಿ ಫಿಟ್‌ನೆಸ್ ಪರಿಕಲ್ಪನೆ ಮೂಡಿರುವುದಿಲ್ಲ. ಹೀಗಾಗಿ ಇದು ತುಂಬ ಸೂಕ್ಷ್ಮ ಸಮಯ. ಗಾಯ ಎಂದರೇನು, ಅದರ ಪರಿಣಾಮಗಳೇನು ಎಂಬಿತ್ಯಾದಿ ಮಾಹಿತಿಗಳನ್ನು ಅವರಿಗೆ ನೀಡಬೇಕಾಗುತ್ತದೆ. ಸಮಸ್ಯೆಗಳನ್ನು ಲಘುವಾಗಿ ತೆಗೆದುಕೊಳ್ಳುವಷ್ಟು ಮನೋಸ್ಥೈರ್ಯ ಮೂಡಿಸುವ ಕೆಲಸ ಕೂಡ ಆಗಬೇಕು. ಹದಿನಾರು–ಹದಿನೇಳು ವರ್ಷ ವಯಸ್ಸಾಗುತ್ತಿದ್ದಂತೆ ನೋವು ತಡೆದುಕೊಳ್ಳುವ ಶಕ್ತಿ ಮೈಗೂಡಿಸಿಕೊಂಡಿರುತ್ತಾರೆ.

20 ವರ್ಷ ದಾಟುತ್ತಿದ್ದಂತೆ ದೈಹಿಕ ಕಸರತ್ತಿನ ಕಡೆಗೆ ಹೆಚ್ಚು ಆಸಕ್ತಿ ವಹಿಸುವುದು ಸಾಮಾನ್ಯ. ಇನ್ನೂ ಒಂದೆರಡು ವರ್ಷ ಆಗುತ್ತಿದ್ದಂತೆ ದೇಹದ ಸಾಮರ್ಥ್ಯದ ಬಗ್ಗೆ ಸ್ಪಷ್ಟ ಚಿತ್ರಣ ಮೂಡಿರುತ್ತದೆ’ ಎಂದು ವಿಶ್ಲೇಷಿಸುತ್ತಾರೆ 23 ವರ್ಷದೊಳ ಗಿನವರ ಕರ್ನಾಟಕ ಕ್ರಿಕೆಟ್ ತಂಡದ ಫಿಜಿಯೊ ಗೌತಮ್ ಎಚ್.ಎಸ್.

‘ವಯೋಮಾನದ ಆಧಾರದಲ್ಲಿ ಇಪ್ಪತ್ತರ ಆಸುಪಾಸು ಕ್ರೀಡಾ ಪಟುವಿನ ಪ್ರಮುಖ ಹಂತವಾಗಿರುವುದರಿಂದ ಈ ಸಂದರ್ಭದಲ್ಲಿ ಅವರಿಗೆ ಸರಿಯಾದ ದೈಹಿಕ ತರಬೇತಿ ನೀಡುವ ಜವಾಬ್ದಾರಿ ಟ್ರೇನರ್ ಮತ್ತು ಫಿಜಿಯೋ ಮೇಲಿದೆ. ಕ್ರಿಕೆಟ್ ಆಟಗಾರ ಆಗಿದ್ದರೆ ರಣಜಿಯಂಥ ಪ್ರಮುಖ ಟೂರ್ನಿಗಳಲ್ಲಿ ಆಡಿ ರಾಷ್ಟ್ರೀಯ ತಂಡದ ಕದ ತಟ್ಟುವ ಕಾಲವಿದು. ಹೀಗಾಗಿ ಈ ವಯಸ್ಸಿನಲ್ಲಿ ಫಿಟ್‌ನೆಸ್ ಬಗ್ಗೆ ಹೆಚ್ಚು ಕಾಳಜಿ ಬೇಕಾಗುತ್ತದೆ’ ಎಂಬುದು ಅವರ ಅಭಿಪ್ರಾಯ.

ಮಹಿಳಾ ವಿಭಾಗದಲ್ಲಿ ಮುಂಬೈ ಕ್ರಿಕೆಟ್‌ನ ‘ಶಕ್ತಿ’ಯಾಗಿರುವ ಸ್ಟ್ರೆಂಥನಿಂಗ್ ಅಂಡ್ ಕಂಡೀಷನಿಂಗ್ ಕೋಚ್ ಅಮೋಘ್‌ ಅನಿಲ್ ಪಂಡಿತ್ ಪ್ರಕಾರ ಹದಿನಾಲ್ಕರಿಂದ 16 ವಯೋಮಾನ ಕ್ರೀಡಾಪಟು ವಿನ ಫಿಟ್‌ನೆಸ್‌ಗೆ ಸಂಬಂಧಿಸಿ ತಳಪಾಯ ಹಾಕುವ ಅವಧಿ. 19–20ರ ವಯಸ್ಸಿನಲ್ಲಿ ಈ ತಳಪಾಯ ಗಟ್ಟಿಯಾಗುತ್ತದೆ. 22–23ರ ಸಂದರ್ಭದಲ್ಲಿ ಅದಕ್ಕೊಂದು ಸ್ಪಷ್ಟ ಚಿತ್ರಣ ಮೂಡುತ್ತದೆ. ಈ ಸಂದರ್ಭದಲ್ಲಿ ಆಟಗಾರರಿಗೆ ಸರಿಯಾದ ಮಾಹಿತಿಯಷ್ಟೇ ಸಿಕ್ಕಿದರೆ ಸಾಕಾಗುತ್ತದೆ, ಉಳಿದದ್ದೆಲ್ಲವನ್ನು ಅವರೇ ಮಾಡಿಕೊಳ್ಳುವ ಜವಾಬ್ದಾರಿ ಬೆಳೆದಿರುತ್ತದೆ.

‘ಗಾಯ, ನೋವು, ಇತ್ಯಾದಿ ಒಬ್ಬೊಬ್ಬರಲ್ಲಿ ಒಂದೊಂದು ಬಗೆ ಇರುತ್ತದೆ. ದೈಹಿಕ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕೂ ಮಾನಸಿಕ ಆರೋಗ್ಯಕ್ಕೂ ಸಂಬಂಧವಿರುತ್ತದೆ. ಮುಂಬೈಯಲ್ಲಿ ಅಭಿಷೇಕ್ ನಾಯರ್ ತರಹ ಮತ್ತೊಬ್ಬರು ಇರುವುದಿಲ್ಲ. ಅಭಿಷೇಕ್ ಎಲ್ಲವನ್ನೂ ಮುಕ್ತವಾಗಿ ಹೇಳುವ ಗುಣದವರು. ನೋವು ನುಂಗಿ ಸುಮ್ಮನೇ ಕುಳಿತುಕೊಳ್ಳುವ ಸ್ವಭಾವದ ವ್ಯಕ್ತಿಯೂ ಅಲ್ಲಿದ್ದಾರೆ.

ಭಿನ್ನ ಗುಣಗಳ ಇಂಥ ಆಟಗಾರರನ್ನು ಅರ್ಥೈಸಿಕೊಂಡು ನೋವು, ಗಾಯಕ್ಕೆ ಚಿಕಿತ್ಸೆ ನೀಡಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಆಟಗಾರನಿಗೆ ಮನೋ ವೈದ್ಯಕೀಯ ತರಬೇತಿ ನೀಡುವ ಕೋಚ್ ಕೂಡ ಇದ್ದರೆ ಒಳಿತು ಎನಿಸುತ್ತದೆ’ ಎನ್ನುವ ಅವರು ಆಟಗಾರನನ್ನು ವೈದ್ಯಕೀಯವಾಗಿ ಮತ್ತು ದೈಹಿಕವಾಗಿ ಫಿಟ್ ಆಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಟ್ರೇನರ್ ಮತ್ತು ಫಿಸಿಯೋ ಮೇಲಿದೆ. ಆಟಕ್ಕೆ ಫಿಟ್ ಆಗಿದ್ದಾನೋ ಇಲ್ಲವೋ ಎಂಬುದನ್ನು ನಿರ್ಧರಿಸುವ ಕೆಲಸ ಕೋಚ್‌ಗೆ ಸೇರಿದ್ದು. ಹೀಗಾಗಿ ಈ ಮೂವರ ಸಹಯೋಗದಲ್ಲಿ ಉತ್ತಮ ಆಟಗಾರ ಸೃಷ್ಟಿಯಾಗುತ್ತಾನೆ’ ಎನ್ನುತ್ತಾರೆ.

ಫಿಟ್‌ನೆಸ್ ಕುರಿತು ತಿಳಿದುಕೊಳ್ಳಲು ಅತ್ಯಂತ ಸೂಕ್ತ ಸಮಯ ವೆಂದರೆ 22 ಮತ್ತು 23ರ ಆಸುಪಾಸಿನ ವಯಸ್ಸು. ಈ ಸಂದರ್ಭದಲ್ಲಿ ದೈಹಿಕ ಆರೋಗ್ಯದ ಬಗ್ಗೆ ತಿಳಿದುಕೊಳ್ಳದ ಆಟಗಾರನಿಗೆ ಮತ್ತೆ ಎಂದಿಗೂ ಆ ಕಡೆಗೆ ಗಮನ ಹರಿಸಲು ಸಾಧ್ಯವಿಲ್ಲ ಎಂಬುದು ದೆಹಲಿಯ 23 ವರ್ಷದೊಳಗಿನವರ ಕ್ರಿಕೆಟ್ ತಂಡದ ಟ್ರೇನರ್ ಅಬ್ದುಲ್ ಸತ್ತಾರ್ ಅಭಿಮತ.

‘ಆಟದ ತಂತ್ರಗಳನ್ನು ಕಲಿಯುವುದರೊಂದಿಗೆ ಫಿಟ್‌ನೆಸ್ ಪಾಠ ತಿಳಿಯುವುದಕ್ಕೂ 14ರ ಆಸುಪಾಸಿನ ವಯಸ್ಸು ಸೂಕ್ತ. 16 ವಯಸ್ಸಾಗುತ್ತಿದ್ದಂತೆ ದೇಹವನ್ನು ಹುರಿಗೊಳಿಸುವುದನ್ನು ಕಲಿಸಬೇಕು. ಹೀಗೆ ಹಂತಹಂತವಾಗಿ ತರಬೇತಿ ಲಭಿಸಿದವರ ವಯಸ್ಸು 22–23 ಆಗುತ್ತಿದ್ದಂತೆ ಗಟ್ಟಿಯಾಗುತ್ತಾರೆ.

ಸ್ವಂತವಾಗಿ ಎಲ್ಲವನ್ನೂ ತಿಳಿದುಕೊಳ್ಳುವ ಸಾಮರ್ಥ್ಯ ರೂಢಿಸಿಕೊಳ್ಳುವ ಈ ಸಂದರ್ಭದಲ್ಲಿ ಅವರಿಗೆ ಸರಿಯಾದ ಮಾಹಿತಿ ಅಗತ್ಯ. ಪ್ರತಿ ಕ್ರಿಕೆಟ್ ಋತು ಆರಂಭವಾಗುವುದಕ್ಕೆ ಮುನ್ನ ಆಯಾ ವಯೋಮಾನದವರಿಗೆ ತಕ್ಕಂತೆ ವಿಶೇಷ ಫಿಟ್ನೆಸ್ ತರಬೇತಿ ನೀಡುವುದನ್ನು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ರೂಢಿಸಿಕೊಂಡು ಬಂದಿದೆ’ ಎಂದು ಅವರು ತಿಳಿಸಿದರು.

ಫಿಟ್‌ನೆಸ್‌ಗೆ ವಯಸ್ಸಿನ ಹಂಗಿಲ್ಲ
ಆಟಗಾರನ ಫಿಟ್‌ನೆಸ್‌ಗೆ ಸಂಬಂಧಿಸಿ ಎಲ್ಲ ಕಾಲವೂ ಮುಖ್ಯ. ಸಣ್ಣ ವಯಸ್ಸಿನಿಂದಲೇ ಫಿಟ್‌ನೆಸ್ ಕಾಪಾಡಿಕೊಂಡು ಬಂದರೆ ಮಾತ್ರ ಉತ್ತಮ ಕ್ರೀಡಾಪಟುವಾಗಿ ಬೆಳೆಯಲು ಸಾಧ್ಯ. ಒಂದೊಂದು ಕ್ರೀಡೆಗೂ ಒಂದೊಂದು ಬಗೆಯ ಫಿಟ್‌ನೆಸ್ ಸೂತ್ರ ಅಳವಡಿಸಿಕೊಳ್ಳಬೇಕಾಗುತ್ತದೆ. ಬಲ (ಸ್ಟ್ರೆಂಥ್), ವೇಗ (ಸ್ಪೀಡ್), ಸಹಿಷ್ಣುತೆ (ಎಂಡೂರೆನ್ಸ್), ಬಳುಕಾಟ (ಫ್ಲೆಕ್ಸಿಬಿಲಿಟಿ) ಮತ್ತು ಸಂಯೋಜನೆ (ಕೋಆರ್ಡಿನೇಷನ್) ಕ್ರೀಡಾಪಟುವಿಗೆ ಇರಬೇಕಾದ ಪ್ರಾಥಮಿಕ ಗುಣಗಳು.

ಇವುಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಅದಲು ಬದಲು ಮಾಡಿ ಕ್ರೀಡಾಪಟುವನ್ನು ಬೆಳೆಸ ಬೇಕಾಗುತ್ತದೆ. ಹರಯಕ್ಕೆ ಬರುತ್ತಿದ್ದಂತೆ ತನ್ನ ಶಕ್ತಿಯನ್ನು ತಿಳಿದುಕೊಳ್ಳುವ ಸಾಮರ್ಥ್ಯ ಕ್ರೀಡಾಪಟು ಮೈಗೂಡಿಸಿಕೊಂಡಿ ರುತ್ತಾನೆ ಅದಕ್ಕೊಂದು ದಿಸೆ ತೋರಿಸುವುದು ಮಾತ್ರ ಟ್ರೇನರ್ ಮತ್ತು ಫಿಸಿಯೋ ಕೆಲಸ.
–ಡಾ.ಕಿರಣ ಕುಲಕರ್ಣಿ,  ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT