ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹವೆಂದರೆ ಓ ಮನುಜ..!

Last Updated 28 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

‘ರ್‍ಯಾಂಪ್‌ ಮೇಲೆ ಹೇಗೆ ಹೆಜ್ಜೆ ಹಾಕಬೇಕೆಂಬುದನ್ನು ತಿಳಿದುಕೊಂಡರೆ, ಎಂಜಿನಿಯರಿಂಗ್‌ ಕೋರ್ಸ್‌ ಮಾಡಲು ಅದು ಹೇಗೆ ನೆರವಾಗುತ್ತದೆ? ಕಾಲೇಜುಗಳಲ್ಲಿ ಸೌಂದರ್ಯ ಸ್ಪರ್ಧೆ ನಡೆಸುವುದು ಕಲಿಕೆಗೆ ಹೇಗೆ ನೆರವಾಗುತ್ತದೆ?’

–ಮದ್ರಾಸ್‌ ಹೈಕೋರ್ಟಿನ ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಂ ಈ ಪ್ರಶ್ನೆಗಳನ್ನು ಕೇಳುತ್ತಿದ್ದರೆ, ವಾದಿ ಮತ್ತು ಪ್ರತಿವಾದಿ ಇಬ್ಬರ ಪರ ವಕೀಲರಲ್ಲೂ ಉತ್ತರ ಇರಲಿಲ್ಲ. ನ್ಯಾಯಾಧೀಶರು ನೇರವಾಗಿ ಮಧ್ಯಂತರ ಆದೇಶ ಹೊರಡಿಸಿದರು. ‘ಪ್ರಕರಣದ ಇತ್ಯರ್ಥ ಆಮೇಲೆ ಮಾಡೋಣ. ಮುಂದಿನ ಆದೇಶ ನೀಡುವವರೆಗೆ ತಮಿಳ್ನಾಡಿನ ಎಲ್ಲ ಕಾಲೇಜುಗಳಲ್ಲೂ, ವಿಶ್ವವಿದ್ಯಾಲಯಗಳಲ್ಲೂ ಫ್ಯಾಶನ್‌ ಷೋ ಅಥವಾ ಸ್ಪರ್ಧೆಗಳನ್ನು ನಿಷೇಧಿಸಿ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಈ ಆದೇಶ ಪಾಲಿಸಲು ತಿಳಿಸಿ’.

ನಡೆದದ್ದಿಷ್ಟು: ಕಳೆದ ವರ್ಷ ಫೆಬ್ರುವರಿಯಲ್ಲಿ ಅಣ್ಣಾ ವಿಶ್ವವಿದ್ಯಾನಿಲಯದ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ನಲ್ಲಿ ಟೆಕ್‌ ಕಾಲೇಜುಗಳ ಉತ್ಸವ ನಡೆಯಿತು. ಅದರಲ್ಲಿ ಫ್ಯಾಶನ್‌ ಷೋ ಸ್ಪರ್ಧೆ ಕೂಡಾ ಇತ್ತು. ಹಲವಾರು ಎಂಜಿನಿಯರಿಂಗ್‌ ಕಾಲೇಜುಗಳ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಗೆದ್ದವರಿಗೆ ಭಾರೀ ಬಹುಮಾನವನ್ನೂ ಘೋಷಿಸಲಾಗಿತ್ತು. ಲಕ್ಷ್ಮೀ ಸುರೇಶ್‌ ಎಂಬವರ ಮಗಳು ಮೊದಲ ಬಹುಮಾನ ಗೆದ್ದಳು. ಆದರೆ ಆಕೆಗೆ ನಗದು ಬಹುಮಾನ ಸಿಗಲೇ ಇಲ್ಲ. ಸಂಘಟಕರನ್ನು ಒಂದು ವರ್ಷದಿಂದ ಬೆನ್ನು ಹತ್ತಿದರೂ ಸ್ಪಷ್ಟ ಉತ್ತರ ಸಿಗಲಿಲ್ಲ. ಹೆಚ್ಚು ಒತ್ತಾಯಿಸಿದಾಗ ಒಂದು ಪ್ರಶಸ್ತಿ ಪತ್ರವನ್ನು ಕಳುಹಿಸಿದರು. ಆದರೆ ಅದೂ ಫೋರ್ಜರಿ ಪತ್ರವಾಗಿತ್ತು.

ಲಕ್ಷ್ಮೀ ಸುರೇಶ್‌ ಮದ್ರಾಸ್‌ ಹೈಕೋರ್ಟಿನ ಮೊರೆ ಹೋದರು. ‘ನನ್ನ ಮಗಳ ಘನತೆ ಮತ್ತು ಡೀಸೆನ್ಸಿಗೆ ಇದರಿಂದ ಕುಂದುಂಟಾಗಿದೆ. ಐದು ಲಕ್ಷ ರೂಪಾಯಿ ಪರಿಹಾರ ಕೊಡಿಸಿ’ ಎನ್ನುವುದು ಅವರ ವಾದ.

ವಿಚಾರಣೆಯಲ್ಲಿ ನ್ಯಾಯಾಧೀಶರು ಎತ್ತಿರುವ ಪ್ರಶ್ನೆಗಳಿಗೆ ಅಣ್ಣಾ ವಿವಿ ಮ್ಯಾನೇಜ್‌ಮೆಂಟ್‌ ಬಳಿಯಲ್ಲೂ ಉತ್ತರ ಇರಲಿಲ್ಲ. ‘ಕಾಲೇಜುಗಳಲ್ಲಿ ಹುಡುಗ ಹುಡುಗಿಯರ ದೇಹ ಪ್ರದರ್ಶನದ ಅಗತ್ಯ ಇದೆಯೆ? ಚೆನ್ನಾಗಿ ಕಾಣಿಸುವ ಸ್ಪರ್ಧೆಗಳು ಬೇಕೆ? ಈ ಸ್ಪರ್ಧೆಗಳಿಗೆ ಏನಾದರೂ ಮಾನದಂಡಗಳನ್ನು ರೂಪಿಸಿದ್ದೀರಾ? ಇದಕ್ಕೆ ದುಡ್ಡು ಎಲ್ಲಿಂದ ಖರ್ಚು ಮಾಡುತ್ತಿದ್ದೀರಿ? ಇದಕ್ಕೇ ಪ್ರತ್ಯೇಕ ಫಂಡ್‌ ಇಟ್ಟಿದ್ದೀರಾ?
ಕಾಲೇಜಿನ ಆಡಳಿತ ಮಂಡಳಿಗೆ ಈ ಸ್ಪರ್ಧೆಯ ಮೇಲೆ ನಿಯಂತ್ರಣ ಇದೆಯಾ? ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಫ್ಯಾಶನ್‌ ಷೋ ಏಕಿರಬೇಕು?’ ಎನ್ನುವ ಎಲ್ಲ ಪ್ರಶ್ನೆಗಳಿಗೂ ಆಡಳಿತ ಮಂಡಳಿ ನೀಡಿದ್ದು ಒಂದೇ ಉತ್ತರ- ಸಾಂಸ್ಕೃತಿಕ ಉತ್ಸವದಲ್ಲಿ ಫ್ಯಾಶನ್‌ ಷೋ ನಡೆಯುತ್ತದೆ ಎನ್ನುವುದು ನಮಗೆ ಗೊತ್ತಿರಲಿಲ್ಲ! ‘ಕಾಲೇಜ್‌ ಒಳಗಡೆ ಏನು ನಡೆಯುತ್ತದೆ ಎನ್ನುವುದು ಆಡಳಿತ ಮಂಡಳಿಗೆ ಗೊತ್ತಿಲ್ಲವೆ?! ಆಹ್ವಾನ ಪತ್ರಿಕೆಯಲ್ಲಿ ಇದ್ದದ್ದನ್ನೂ ನೀವು ನೋಡಿಲ್ಲವೆ?!’ ಎನ್ನುವುದು ನ್ಯಾಯಾಧೀಶರ ಆಶ್ಚರ್ಯ.

ಸದ್ಯಕ್ಕಂತೂ ತಮಿಳ್ನಾಡಿನ ಕಾಲೇಜುಗಳಲ್ಲಿ ಫ್ಯಾಶನ್‌ ಷೋಗಳನ್ನು ನಿಷೇಧಿಸಲಾಗಿದೆ. ಅಂತಿಮ ತೀರ್ಪು ಬಂದಾಗ ಏನಾಗುತ್ತೋ ಗೊತ್ತಿಲ್ಲ.

ಈ ತೀರ್ಪಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಿರುಸಿನ  ಪರ- ವಿರೋಧ ಚರ್ಚೆಗಳು ನಡೆಯುತ್ತಿವೆ. ಬಹುತೇಕ ಯುವಜನರು ಎತ್ತಿರುವ ಪ್ರಶ್ನೆಯೆಂದರೆ, ‘ಸಾಂಸ್ಕೃತಿಕ ಕಾರ್ಯಕ್ರಮಗಳು ಪಠ್ಯಕ್ರಮದ ಒಂದು ಭಾಗವೇ ಆಗಿ ಬಹಳ ವರ್ಷಗಳೇ ಆಗಿವೆ. ಉಡುಪಿನಲ್ಲಿ ಅಶ್ಲೀಲತೆಯ ಪ್ರಶ್ನೆ ಈಗ ಇಲ್ಲ. ಚೆನ್ನಾಗಿ ಕಾಣಿಸಿಕೊಳ್ಳಬೇಕು ಎನ್ನುವುದು ವಿದ್ಯಾರ್ಥಿಗಳು ಮಾತ್ರವಲ್ಲ, ಎಲ್ಲ ವಯಸ್ಸಿನವರಲ್ಲೂ ಕಾಣುವ ಈಗಿನ ಸಹಜಗುಣ. ಅದರಲ್ಲೇನು ತಪ್ಪು?’

ನ್ಯಾಯಾಧೀಶರ ತೀರ್ಪನ್ನು ಬೆಂಬಲಿಸಿದವರ ಸಂಖ್ಯೆಯೂ ಸಾಕಷ್ಟಿದೆ. ಅವರ ವಾದದ ಒಟ್ಟು ಸಾರಾಂಶ: ‘ಇತ್ತೀಚೆಗೆ ಶಾಲಾ ಕಾಲೇಜುಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಸಂಬದ್ಧ ಮತ್ತು ಅಶ್ಲೀಲ ನೃತ್ಯ ಮತ್ತು ಹಾಡುಗಳೇ ಹೆಚ್ಚಾಗಿವೆ. ಶಿಕ್ಷಕರೂ ಮಕ್ಕಳಿಂದ ಇಂತಹ ಅಸಂಬದ್ಧ ಮತ್ತು ಅಶ್ಲೀಲ ನೃತ್ಯಗಳನ್ನೇ ಮಾಡಿಸುತ್ತಾರೆ. ಬಹುತೇಕ ಸಿನಿಮಾ ಹಾಡುಗಳು. ಎಲ್‌ಕೆಜಿಗಳಲ್ಲೇ ಇಂತಹ ಪ್ರವೃತ್ತಿ ಹೆಚ್ಚಾಗಿದೆ. ಇವೆಲ್ಲವನ್ನೂ ನಿಷೇಧಿಸಬೇಕು...’
***
‘ಮಾನವಾ, ಮೂಳೆ ಮಾಂಸದ ತಡಿಕೆ...’ ಎನ್ನುವುದು ಕನ್ನಡದ ಜನಪ್ರಿಯ ಸಿನಿಮಾ ಹಾಡು. ‘ಭಕ್ತ ಕುಂಬಾರ’ ಸಿನಿಮಾಕ್ಕೆ ಹುಣಸೂರು ಕೃಷ್ಣಮೂರ್ತಿ ಅವರು ಬರೆದ ಹಾಡಿದು. ತಮಾಷೆಯೆಂದರೆ ಇವತ್ತಿನ ಸೌಂದರ್ಯ ಸ್ಪರ್ಧೆಗಳ ಆಯೋಜಕರದ್ದೂ ಅದೇ ಹಾಡು. ಮೂಳೆ ಎದ್ದು ಕಾಣಿಸಬೇಕು, ಮೈಮೇಲೆ ಮಾಂಸ ಇದ್ದೂ ಇಲ್ಲದಂತಿರಬೇಕು. ದೇಹವೆಂಬ ತಡಿಕೆಯ ಮೇಲೆ ಹೊಲಿದ ಬಟ್ಟೆ ನೇತಾಡುವಂತಿರಬೇಕು!

ಫ್ಯಾಶನ್‌ ಷೋ ಎನ್ನುವುದು ಹಳ್ಳಿಯಿಂದ ಡಿಲ್ಲಿಯವರೆಗೆ ಎಗ್ಗಿಲ್ಲದೆ ನಡೆಯುತ್ತಿದೆ. ಅದರಲ್ಲೂ ಶಾಲಾ ಕಾಲೇಜುಗಳ ಉತ್ಸವಗಳಲ್ಲಿ ಅದಿಲ್ಲದೆ ಕಾರ್ಯಕ್ರಮವೇ ಇಲ್ಲ. ವೇದಿಕೆಯ ಮೇಲೆ ಚಿತ್ರವಿಚಿತ್ರ ಬಟ್ಟೆಗಳನ್ನು ತೊಟ್ಟ ಸುಂದರಿಯರು ನಡು ಬಳುಕಿಸುತ್ತಾ, ಬೆಕ್ಕಿನ ಹೆಜ್ಜೆಗಳನ್ನು ಇಡುತ್ತಾ ನಡೆದು ಬರುತ್ತಿದ್ದರೆ, ನೋಡುವವರ ಕಣ್ಣುಗಳಲ್ಲಿ ನೂರು ದೀಪಗಳ ಬೆಳಕು. ಬಟ್ಟೆಯನ್ನು ತೋರಿಸುವುದು ಫ್ಯಾಶನ್‌ ಷೋ ಉದ್ದೇಶ. ಆದರೆ ಬಟ್ಟೆಯ ಒಳಗಿನದನ್ನು ನೋಡುವವರದ್ದೇ ಮೇಲುಗೈ.

‘ಸೌಂದರ್ಯದ ನೈಜ ಪರಿಭಾಷೆ ಏನು?’ ಎಂದು ಯಾರಾದರೂ ಕೇಳಿದರೆ, ಉತ್ತರ ನಿಜಕ್ಕೂ ಅಸ್ಪಷ್ಟ. ನೂರೆಂಟು ಪ್ರಭಾವಶಾಲಿ ವ್ಯಾಖ್ಯೆಗಳನ್ನು ಮುಂದಿಡುವವರಿದ್ದಾರೆ. ಆದರೆ ಸೌಂದರ್ಯ ಸ್ಪರ್ಧೆಗಳನ್ನು ನಡೆಸುವವರ ಬಳಿ ತಮ್ಮದೇ ಆದ ಸ್ಪಷ್ಟ ಅಳತೆಗೋಲುಗಳಿವೆ. ‘ಹುಡುಗಿ ಎತ್ತರಕ್ಕೆ ಇರಬೇಕು ಮತ್ತು ತೆಳ್ಳಗಿರಬೇಕು’ ಎನ್ನುವುದು ಅವುಗಳಲ್ಲಿ ಮುಖ್ಯವಾದದ್ದು. ಎಷ್ಟು ತೆಳ್ಳಗೆ.. ಎನ್ನುವ ಪ್ರಶ್ನೆಗೆ ಇರುವ ಉತ್ತರ- ಝೀರೊ ಸೈಜ್‌. ಹುಡುಗಿಯ ಸೌಂದರ್ಯವನ್ನು ಅಳೆಯುವುದಕ್ಕೆ ಬಾಡಿ ಮಾಸ್‌ ಇಂಡೆಕ್ಸ್‌ (Body Mass Index) ಇದೆ. ಗೂಗಲ್‌ನಲ್ಲಿ ಹುಡುಕಾಡಿದರೆ ಅದರ ರೆಡಿಮೇಡ್‌ ಸೂತ್ರವೂ ಸಿಗುತ್ತದೆ.

ಎತ್ತರ ಮತ್ತು ದೇಹತೂಕವನ್ನು ವಿಭಜಿಸಿ ಪಡೆಯುವ ಸೂತ್ರ. ಹಲವು ದೇಶಗಳಲ್ಲಿ ಇದಕ್ಕೆ ಸಂಬಂಧಿಸಿ ಕಾನೂನುಗಳೇ ಆಗಿವೆ. ಸ್ಪೇನ್‌ ಮತ್ತು ಇಟಲಿಗಳಲ್ಲಿ ಈ ‘ಬಾಡಿ ಮಾಸ್‌ ಇಂಡೆಕ್ಸ್‌’ ಅನ್ನು ಸರ್ಕಾರವೇ ನಿಯಂತ್ರಿಸುತ್ತದೆ. ಇಸ್ರೇಲ್‌ನಲ್ಲಿ BMI ಕನಿಷ್ಠ 18.5 ಇರಲೇಬೇಕು, ಅದಕ್ಕಿಂತ ಕಡಿಮೆ ಆಗುವಂತಿಲ್ಲ ಎಂಬ ಕಾನೂನೇ ಇದೆ. ಅಮೆರಿಕದಲ್ಲಿ ಮಹಿಳೆಯ ಸರಾಸರಿ BMI 26.5 ಇರಬೇಕಂತೆ. ಇದೆಲ್ಲ ಏಕೆಂದರೆ ಈ  ಮಾಡೆಲಿಂಗ್‌ ಬೆಡಗಿಯರು ಫ್ಯಾಶನ್‌ ಷೋನಲ್ಲಿ ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕು, ಅದರ ಅಳತೆ ಎಷ್ಟಿರಬೇಕು ಎನ್ನುವುದನ್ನು ನಿರ್ಧರಿಸುವವರು ಉಡುಪು ತಯಾರಿಕಾ ಕಂಪೆನಿಗಳವರು. ಅವರು ಸೈಜ್‌ 14 ಅಂದರೆ ಅದು ಅಷ್ಟೇ ಇರಬೇಕು.

ಅಮೆರಿಕದಲ್ಲಿ ಮತ್ತು ಯೂರೋಪಿನ ಬಹುತೇಕ ದೇಶಗಳಲ್ಲಿ 10-12ರ ಹರೆಯದಲ್ಲೇ  ಹೆಣ್ಣು ಮಕ್ಕಳು ತಿನ್ನುವುದರ ಮೇಲೆ ನಿಯಂತ್ರಣ ಸಾಧಿಸಲು ಶುರು ಮಾಡುತ್ತಾರೆ. ಅದಕ್ಕೆ ಕಾರಣ BMI ವ್ಯಾಮೋಹ. BMI 18.5ಕ್ಕಿಂತ ಕೆಳಗಿದ್ದರೆ ಅದು ಅಂಡರ್‌ವೈಟ್‌. 25ರಿಂದ 29.9 ಇದ್ದರೆ ಅದು ಓವರ್‌ವೈಟ್‌. 30ರ ಮೇಲಿದ್ದರೆ ಬೊಜ್ಜು.  ನಿಜಕ್ಕೂ ಆಕೆ ಪರಿಪೂರ್ಣ ಸುಂದರಿ ಎಂದಾದರೆ BMI 18.5ರಿಂದ 24.9 ರೊಳಗೇ ಇರಬೇಕು. ಎದೆ ಇಷ್ಟು, ಸೊಂಟ ಇಷ್ಟು, ನಿತಂಬ ಇಷ್ಟು. ಅದರಿಂದ ಒಂದು ಸೆಂಟಿ ಮೀಟರ್ರೂ ಆಚೀಚೆ ಇರುವಂತಿಲ್ಲ!

ಇದಕ್ಕೊಂದು ಆಕರ್ಷಕ ಹೆಸರಿದೆ- Photoshoped body ಅಂತ. ಎಳವೆಯಲ್ಲೇ ಹೆಣ್ಣು ಮಕ್ಕಳು ಕಡಿಮೆ ತಿನ್ನಲು ತೊಡಗುತ್ತಾರೆ. ತಿನ್ನುವುದಕ್ಕೆ Thin ಎನ್ನುವುದೇ ಮೂಲಮಂತ್ರ! ಅಮೆರಿಕದಲ್ಲಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರ ಪ್ರಕಾರ, ಶೇಕಡಾ 89ರಷ್ಟು ಹೆಣ್ಣುಮಕ್ಕಳು ಫ್ಯಾಶನ್‌ ಉದ್ಯಮದ ಒತ್ತಡಕ್ಕೆ ಒಳಗಾಗಿದ್ದಾರೆ! 10-12ರ ವಯಸ್ಸಿನಲ್ಲೇ ಹಸಿವೆಯಾದರೂ ತಡೆದುಕೊಳ್ಳಲು ತೊಡಗುತ್ತಾರೆ. ತಿನ್ನುವುದನ್ನು ಕಡಿಮೆ ಮಾಡುತ್ತಾರೆ. ಇದರಿಂದ ಅರ್ಧಕ್ಕರ್ಧ ಹೆಣ್ಣುಮಕ್ಕಳಲ್ಲಿ ‘ಅನೊರೆಕ್ಸಿಯಾ’ ಅಥವಾ ‘ಬುಲಿಮಿಯಾ’ ರೋಗಲಕ್ಷಣಗಳು ಕಾಣಿಸಿಕೊಂಡಿವೆ.

ಹಸಿವೆಯೇ ಆಗದಿರುವುದು, ನಿಗದಿತ ಸಮಯವಿಲ್ಲದೆ ತಿನ್ನುವುದು, ಅಥವಾ ಸಮಯವೇ ಇಲ್ಲದವರ ಹಾಗೆ ಗಬಗಬನೆ ತಿನ್ನುವುದು. ‘ಬುಲಿಮಿಯಾ’ ಪೀಡಿತರಿಗೆ ಒಬ್ಬರೇ ಇದ್ದಾಗ, ಬೋರ್‌ ಆದಾಗ ಅಥವಾ ಒತ್ತಡ ಹೆಚ್ಚಾದಾಗ ಏನಾದರೂ ತಿನ್ನಬೇಕು ಅನ್ನಿಸುತ್ತದಂತೆ.

ಮಾಡೆಲಿಂಗ್‌ ಮತ್ತು ಫ್ಯಾಶನ್‌ ಷೋ ಇವತ್ತು ಅಮೆರಿಕ ಮತ್ತು ಯೂರೋಪಿನ ದೇಶಗಳಲ್ಲಿ ಬಿಲಿಯಗಟ್ಟಳೆ ಹಣ ದುಡಿಯುವ ಉದ್ಯಮ. ಅದು ಬರೀ ಮುಖ, ಸೊಂಟ ಅಥವಾ ಜಘನದ ಪ್ರಶ್ನೆಯಲ್ಲ. ಲಿಪ್‌ಸ್ಟಿಕ್‌, ಐ ಬ್ರೋ, ನೈಲ್‌ ಪಾಲಿಶ್‌, ಬಾಡಿ ಶಾಂಪೂ, ಫೇಸಿಯಲ್‌, ಶೂ, ಚಪ್ಪಲಿ, ರಿಂಗ್‌, ಕೂದಲೆಣ್ಣೆ, ಕೂದಲ ಬಣ್ಣ, ಬಾಯಿಗೆ ಸ್ಪ್ರೇ ಮಾಡುವ ಸೆಂಟ್‌, ಮೈಗೆ ಒರೆಸುವ ಸೆಂಟ್‌, ಒಳ ಉಡುಪು, ಹೊರ ಉಡುಪು, ನೂರೆಂಟು ಪರಿಮಳ ದ್ರವ್ಯಗಳು, ವ್ಯಾನಿಟಿ ಬ್ಯಾಗ್‌- ಹೀಗೆ ಒಂದಕ್ಕೊಂದು ನಿಕಟ ಸಂಬಂಧವಿದೆ. ಒಂದು ಉದ್ಯಮದಲ್ಲಿ ದುಡ್ಡು ಹರಿದುಬಂದರೆ, ಇನ್ನೊಂದು ಉದ್ಯಮ ಬದುಕುತ್ತದೆ, ಬೆಳೆಯುತ್ತದೆ.

ಜಗತ್ತಿನಲ್ಲೇ ಅತ್ಯಂತ ಹೆಚ್ಚು ದುಡಿಯುತ್ತಿರುವ ಬ್ರೆಝಿಲ್‌ನ ಸೂಪರ್‌ ಮಾಡೆಲ್‌ ಗಿಸೆಲ್‌ ಬಂಚೆನ್‌ಳನ್ನೇ ಗಮನಿಸಿ. 14ರ ಹರೆಯದಲ್ಲಿ ಯಾವುದೋ ಶಾಲಾ ಪ್ರವಾಸಕ್ಕೆ ಹೋಗಿದ್ದ ಈಕೆಯನ್ನು ಅಂಗಡಿಯೊಂದರಲ್ಲಿ ನೋಡಿದ ಫ್ಯಾಶನ್‌ ಆಯೋಜಕರೊಬ್ಬರು ಮಾಡೆಲಿಂಗ್‌ಗೆ ಎಳೆದೊಯ್ದರು. ಅಲ್ಲಿಂದೀಚೆಗೆ ಆಕೆ ಚಿನ್ನದ ಗಣಿಯಂತೆ ದುಡಿದಳು. ಈಕೆ ರ್‍ಯಾಂಪ್‌ ಮೇಲೆ ಹೆಜ್ಜೆ ಊರಿದರೆ ಸಾಕು ಹಣ ಸುರಿಯುತ್ತದೆ. ಈಗ ಈಕೆಗೆ 34ರ ಹರೆಯ. ಕಳೆದ ಒಂದೇ ವರ್ಷ ಆಕೆಯ ಒಟ್ಟು ಆದಾಯ ಬರೋಬ್ಬರಿ 47 ದಶಲಕ್ಷ ಡಾಲರ್‌.

ಹಾಲಿವುಡ್‌ನವರು ಕರೆದರೂ ಹೋಗಲು ಪುರುಸೊತ್ತಿಲ್ಲ. (ಒಂದೆರಡು ಸಿನಿಮಾಗಳಲ್ಲಷ್ಟೇ ಮುಖ ತೋರಿಸಿದ್ದಾಳೆ). ಟೀವಿ ಜಾಹೀರಾತುಗಳಲ್ಲಿ ಈಕೆಯದ್ದು ಅತ್ಯಂತ ಜನಪ್ರಿಯ ಮುಖ. ವರ್ಷಕ್ಕೆ 6000ಕ್ಕೂ ಹೆಚ್ಚು ಟಿವಿ ಜಾಹೀರಾತುಗಳಲ್ಲಿ ಈಕೆ ಕಾಣಿಸಿಕೊಳ್ಳುತ್ತಾಳೆ. ವರ್ಷಕ್ಕೆ 50-60 ರಷ್ಟು ಫ್ಯಾಶನ್ ಷೋಗಳಲ್ಲಿ ಹೆಜ್ಜೆ ಹಾಕುತ್ತಾಳೆ.  2008ರಲ್ಲಿ ಇರ್ವಿಂಗ್‌ ಪೆನ್‌ ಎಂಬಾತ ತೆಗೆದ ಈಕೆಯ ಒಂದು ಕಪ್ಪು-ಬಿಳುಪು ಫೋಟೊ 1.93 ಲಕ್ಷ ಡಾಲರ್‌ಗೆ ಹರಾಜಾಗಿ ದಾಖಲೆ ನಿರ್ಮಿಸಿತ್ತು. 

ಬ್ರೆಝಿಲ್‌ನಲ್ಲಿ 2006ರಲ್ಲಿ 36 ಸಾವಿರ ಹೆಣ್ಣುಮಕ್ಕಳು ಈಕೆಯಿಂದ ಪ್ರಭಾವಿತರಾಗಿ ಸ್ತನ ಉಬ್ಬಿಸುವ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡರೆಂದು ಒಂದು ಸಮೀಕ್ಷೆ ಹೇಳುತ್ತಿದೆ. ಇಂಗ್ಲೆಂಡ್‌ ಒಂದರಲ್ಲೇ ಕಳೆದ ವರ್ಷ ಒಂದು ಲಕ್ಷ ಮಹಿಳೆಯರು ಸ್ತನದ ಸರ್ಜರಿ ಮಾಡಿಸಿಕೊಂಡಿದ್ದಾರೆಂದು ಅಂಕಿ ಅಂಶ ಹೇಳುತ್ತದೆ. ಜಗತ್ತಿನಾದ್ಯಂತ ನಡೆಯುತ್ತಿರುವ ಪ್ಲಾಸ್ಟಿಕ್‌ ಸರ್ಜರಿಗಳಲ್ಲಿ ಸ್ತನದ ಗಾತ್ರ ಬದಲಾವಣೆಯ ಪ್ಲಾಸ್ಟಿಕ್‌ ಸರ್ಜರಿ ಎರಡನೇ ಸ್ಥಾನದಲ್ಲಿದೆ! ಹಾಲೆಂಡಿನ ಸೂಪರ್‌ ಮಾಡೆಲ್‌ ಡಾಚೆನ್ ಕ್ರೋಸ್‌, ಕ್ಲಾಡಿಯಾ ಶಿಫರ್‌, ಸಿಂಡಿ ಕ್ರಾಫರ್ಡ್‌ ಎಲ್ಲರದ್ದೂ ಬಿಡುವಿಲ್ಲದ ದುಡಿಮೆ. ಎರಡು ವರ್ಷಗಳ ಹಿಂದೆ ರ್‍ಯಾಂಪ್‌ ಹತ್ತಿದ ಕೀಟ್‌ ಅಪ್ಟನ್‌ ಎಂಬ ಎಳೇ ಹುಡುಗಿಯೂ ವರ್ಷಕ್ಕೆ  70 ಲಕ್ಷ ಡಾಲರ್‌ ದುಡಿಯುತ್ತಿದ್ದಾಳೆ.

ಭಾರತದಲ್ಲೂ..
ಸಾಮಾಜಿಕ ಜಾಲತಾಣಗಳಿಗೆ ದೇಶ ಕಾಲಗಳ ಹಂಗಿಲ್ಲ. ಟೀವಿ ಜಾಹೀರಾತುಗಳಂತೂ ಈಗ ವಿಶ್ವವ್ಯಾಪಿ. ಬೆಳಿಗ್ಗೆ ಅಮೆರಿಕದಲ್ಲಿ ಕಂಡದ್ದು ಸಂಜೆ ಮುಂಬೈಯಲ್ಲಿ ಆಗಲೇಬೇಕು. ಭಾರತದ ಹೆಣ್ಣುಮಕ್ಕಳಿಗೂ ಮಾಡೆಲಿಂಗ್‌ನ ಹುಚ್ಚು ಹಿಡಿದಿದೆ. ಇಲ್ಲಿ ಮಾಡೆಲಿಂಗ್‌ ಅಂದರೆ ವೇದಿಕೆಯ ಮೇಲೇ ಹೋಗಬೇಕೆಂದಿಲ್ಲ. ರಸ್ತೆಯಲ್ಲಿ ನಡೆದಾಡುವಾಗಲೂ ಬಾಡಿ ಮಾಸ್‌ ಇಂಡೆಕ್ಸ್‌ ಮೇಲೆ ಒಂದು ಕಣ್ಣಿರಲೇಬೇಕು. ತಿನ್ನುವುದರ ಮೇಲೆ ನಿಯಂತ್ರಣ ಸಾಧಿಸಬೇಕು. ತಿನ್ನುವುದನ್ನು ಕಡಿಮೆ ಮಾಡಬೇಕು. ಅದನ್ನು ತಿನ್ನಬಾರದು, ಇದನ್ನು ಮುಟ್ಟಬಾರದು.

ಹಾಗೆ ನೋಡಿದರೆ ನಮ್ಮಲ್ಲಿ ಮಾಡೆಲಿಂಗ್‌ ಕ್ಷೇತ್ರದಲ್ಲಿ ಹಣದ ಹರಿವು ಅಷ್ಟಾಗಿಲ್ಲ. ಆರಂಭಿಕ ಹಂತದಲ್ಲಿರುವ ಮಾಡೆಲ್‌ಗಳಿಗೆ ಒಂದು ಷೋಗೆ 5-10 ಸಾವಿರ ರೂಪಾಯಿಗಳಷ್ಟೇ ಸಿಗುತ್ತದೆ. ಮಧ್ಯಮ ಮಟ್ಟದಲ್ಲಿ ಹೆಸರು ಮಾಡಿದವರು ಒಂದು ಷೋಗೆ 25-30 ಸಾವಿರ ರೂಪಾಯಿ ದುಡಿಯುತ್ತಾರೆ. ಸೀನಿಯರ್‌ಗಳಿಗೆ 45-50 ಸಾವಿರ ರೂಪಾಯಿ. ಒಂದು ಷೋ ಎಂದರೆ ಅದು ಇಡೀ ದಿನದ ಕೆಲಸವೂ ಹೌದು. ಆದರೆ ಸೀನಿಯರ್‌ಗಳಿಗೆ ಟೀವಿ ಜಾಹೀರಾತುಗಳಲ್ಲಿ ಹಣ ಹರಿದುಬರುತ್ತದೆ. ಅಲ್ಲಿಂದ ಬಾಲಿವುಡ್‌ಗೆ.

ಇಲ್ಲಿ ಹಣ ಗುಡ್ಡೆ ಹಾಕಿಕೊಂಡು ಕುಳಿತವರು ಬಾಲಿವುಡ್‌ ಮತ್ತು ಕ್ರಿಕೆಟ್‌ ಮಂದಿ. ಮಾಡೆಲಿಂಗ್‌ನಲ್ಲಿ ಹೆಸರು ಬಂದರೆ ಸಾಕು, ಬಾಲಿವುಡ್‌ ಕೈಬೀಸಿ ಕರೆಯುತ್ತದೆ. ಝೀನತ್‌ ಅಮಾನ್‌, ನಫೀಸಾ ಅಲಿ, ಜೂಹಿ ಚಾವ್ಲಾ ಮುಂತಾದ ಮೊದಲ ತಲೆಮಾರಿನ ಮಾಡೆಲಿಂಗ್‌ ಸುಂದರಿಯರದ್ದು ಹಳೇ ಕಾಲ. ಈಗ ಬಾಲಿವುಡ್‌ ಅನ್ನು ಆಳುತ್ತಿರುವವರು ಬಹುತೇಕ ರ್‍ಯಾಂಪ್‌ನಿಂದಲೇ ಉದಿಸಿ ಬಂದವರು. ಐಶ್ವರ್ಯ ರೈ, ಸುಶ್ಮಿತಾ ಸೇನ್‌, ಅನೂಷ್ಕಾ ಶರ್ಮಾ, ದೀಪಿಕಾ ಪಡುಕೋಣೆ, ಕತ್ರೀನಾ ಕೈಫ್‌, ಬಿಪಾಸಾ ಬಸು, ಪ್ರಿಯಾಂಕಾ ಚೋಪ್ರ, ನೇಹಾ ದೂಪಿಯಾ, ದಿಯಾ ಮಿರ್ಜಾ- ಪಟ್ಟಿ ಉದ್ದವಿದೆ.

ಹಣ ಮತ್ತು ಖ್ಯಾತಿಯ ಹರಿವು ಒಂದೆಡೆ ಇರಲಿ. ಇತ್ತೀಚೆಗೆ ಮಾಡೆಲಿಂಗ್‌ ಕ್ಷೇತ್ರದ BMI ಮಾನದಂಡಗಳ ಬಗ್ಗೆಯೇ ಬಿಸಿ ಚರ್ಚೆ ಶುರುವಾಗಿದೆ. ತೆಳ್ಳಗಿನ ದೇಹವನ್ನು 30ರ ಬಳಿಕವೂ ಉಳಿಸಿಕೊಳ್ಳಲು ಹೆಣಗಾಡಿದ ಇಬ್ಬರು ಮಾಡೆಲ್‌ಗಳು ಸಾವನ್ನಪ್ಪಿದ ಪ್ರಕರಣ ಯೂರೋಪ್‌ ಮತ್ತು ಅಮೆರಿಕದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ಮನುಷ್ಯನ ದೇಹದ ಆಕಾರ ಇಡೀ ಜಗತ್ತಿನಲ್ಲೇ ಒಂದೇ ತರಹ ಇರಬೇಕೆಂದು ಬಯಸುವುದು ಸಾಧುವೆ? ಆಫ್ರಿಕಾದ ಸುಂದರಿಯ ದೇಹಕ್ಕೂ, ಬ್ರೆಝಿಲ್‌ನ ಸುಂದರಿಯ ದೇಹಕ್ಕೂ ಒಂದೇ ರೀತಿಯ ಬಾಡಿ ಮಾಸ್‌ ಇಂಡೆಕ್ಸ್‌ ಯಾಕಿರಬೇಕು? ಸ್ಪೇನ್‌ನ ಆರೋಗ್ಯವಂತ ದೇಹ, ಜಿಂಬಾಬ್ವೆಯ ಮಟ್ಟಿಗೆ ಅನಾರೋಗ್ಯಪೀಡಿತ ದೇಹವಲ್ಲವೆ? ಸೌಂದರ್ಯ ಬಿಡಿ, ಸೌಂದರ್ಯ ಸ್ಪರ್ಧೆಯಲ್ಲಿ ಸೊಂಟ, ನಿತಂಬ, ಸ್ತನಗಳು ಇಷ್ಟೇ ಇದ್ದರೆ ಮಾತ್ರ ಅವಕಾಶ ನೀಡಲು ಸಾಧ್ಯ ಎಂದು ನಿರ್ಧರಿಸಲು ಅಮೆರಿಕನ್ನರಿಗೆ ಅಧಿಕಾರ ನೀಡಿದವರು ಯಾರು?

ಆರಂಭದ ವಿಷಯಕ್ಕೆ ಬಂದರೆ, ನಮ್ಮ ನ್ಯಾಯಾಧೀಶರು ಎತ್ತಿರುವುದು ಮನಸ್ಸಿಗೆ ಸಂಬಂಧಿಸಿದ ನೈತಿಕ ಪ್ರಶ್ನೆಗಳನ್ನು. ಪಾಶ್ಚಾತ್ಯರಲ್ಲಿ ಎದ್ದಿರುವುದು ದೇಹಕ್ಕೇ ಸಂಬಂಧಿಸಿದ ನೈತಿಕ ಪ್ರಶ್ನೆ. ಆದರೆ ಈ ಪ್ರಶ್ನೆಗಳಿಗೆ ಉತ್ತರ ಹುಡುಕುವಷ್ಟು ಸಾವಧಾನ ಫ್ಯಾಶನ್‌ ಉದ್ಯಮಕ್ಕಿಲ್ಲ. ಅದೀಗ ಜಾಗತೀಕರಣದ ಅಲೆಯಲ್ಲಿ, ಹಣದ ಹೊಳೆಯಲ್ಲಿ ತೇಲುತ್ತಿದೆ. ನೈತಿಕ ಪ್ರಶ್ನೆಗಳನ್ನು ಕಟ್ಟಿಕೊಂಡು ಯಾರಿಗೆ ಏನಾಗಬೇಕಿದೆ? ‘ಬೇಕಿದ್ದರೆ ಈ ಪ್ರಶ್ನೆಗಳನ್ನು ಎತ್ತಿಕೊಂಡು ಇನ್ನಷ್ಟು ಚರ್ಚೆ ನಡೆಸೋಣ. ನವಮಾಧ್ಯಮಗಳಲ್ಲಿ ಈ ಚರ್ಚೆ ಬಿರುಸು ಪಡೆದುಕೊಂಡರೆ ಫ್ಯಾಶನ್‌ ಉದ್ಯಮದಲ್ಲಿ ಇನ್ನಷ್ಟು ಹಣದ ಹರಿವು ಹೆಚ್ಚಾಗುವುದಂತೂ ಖಂಡಿತ!’ ಎನ್ನುವುದು ಉದ್ಯಮದ ಉತ್ತರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT