ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಉದ್ಯಾನಕ್ಕೂ ನಾಮಕರಣ ವಿವಾದ

ಕೆ.ಎಂ. ಹನುಮಂತರಾಯಪ್ಪ ಬದಲು ‘ಬಯಲು ಬಸವಣ್ಣ’ ಹೆಸರಿಡುವಂತೆ ಒತ್ತಾಯ
Last Updated 25 ಅಕ್ಟೋಬರ್ 2014, 8:49 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದ ಕೊಂಗಾಡಿಯಪ್ಪ ಕಾಲೇಜು ರಸ್ತೆಯಲ್ಲಿರುವ ಬಯಲು ಬಸವಣ್ಣ ದೇವಾಲಯದ ಬಳಿ ನಗರಸಭೆ ವತಿಯಿಂದ ನೂತನವಾಗಿ ನಿರ್ಮಾಣವಾಗುತ್ತಿರುವ ಉದ್ಯಾನಕ್ಕೆ ಪುರಸಭೆ ಮಾಜಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ ಅವರ ಹೆಸರನ್ನು ಇಡುವುದನ್ನು ಕೈಬಿಟ್ಟು, ‘ಬಯಲು ಬಸವಣ್ಣ ಉದ್ಯಾನ’ ಎಂದು ನಾಮಕರಣ ಮಾಡುವುದಕ್ಕೆ ಬಯಲು ಬಸವಣ್ಣ ದೇವಸ್ಥಾನ ಸೇವಾ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಕುರಿತು ಶುಕ್ರವಾರ ದೇವಾಲಯ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಯಲು ಬಸವಣ್ಣ ದೇವಸ್ಥಾನ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಮಂಜುನಾಥ್ ಮತ್ತು ಶ್ರೀನಿವಾಸ್, ಕರೇನಹಳ್ಳಿ ಸರ್ವೆ ನಂ.೫೪ರಲ್ಲಿ ೦.೩೭ ಗುಂಟೆ ಜಮೀನಿನಲ್ಲಿ ೦.೨೨ ಗುಂಟೆ ಜಾಗದಲ್ಲಿ ೨೦೦೪-–೦೫ರಲ್ಲಿ ತಹಶೀಲ್ದಾರ್ ಆದೇಶ ಪತ್ರದಂತೆ ಉದ್ಯಾನ ನಿರ್ಮಿಸಲು ಅನುಮತಿ ನೀಡಿದ್ದರು. ಈ ಬಗ್ಗೆ ನಗರಸಭೆಯಿಂದ ಅನುಮತಿ ಪಡೆಯಲು ಹೋದಾಗ ಆಗಿನ ನಗರಸಭೆ ಅಧ್ಯಕ್ಷರು ನಗರಸಭೆಯಿಂದಲೇ ಬಯಲು ಬಸವಣ್ಣ ಉದ್ಯಾನ ನಿರ್ಮಿಸಲು ಕಾಮಗಾರಿ ಆರಂಭಿಸಿರುವ ವಿಚಾರ ತಿಳಿಸಿದರು. ಉದ್ಯಾನಕ್ಕೆ  ‘ಶ್ರೀ ಬಯಲು ಬಸವಣ್ಣ’ ಹೆಸರಿಡಬೇಕು. ಯಾವುದೇ ರಾಜಕಾರಣಿಯ ಹೆಸರಿಡಬಾರದು ಎನ್ನುವ ಒತ್ತಾಯಕ್ಕೆ ಸಮ್ಮತಿ ಸೂಚಿಸಿದ್ದರು. ಆದರೆ, ಈಗ ಉದ್ಯಾನಕ್ಕೆ ಪುರಸಭಾ ಮಾಜಿ ಅಧ್ಯಕ್ಷ ಬಿಜೆಪಿ ಮುಖಂಡ ಕೆ.ಎಂ.ಹನುಮಂತರಾಯಪ್ಪ ಅವರ ಹೆಸರನ್ನು ನಾಮಕರಣ  ಮಾಡಿದ್ದಾರೆ ಎಂದು ವಿವರಿಸಿದರು.

ನಗರಸಭೆಯ ಈ ನಿರ್ಣಯಕ್ಕೆ ಜಿಲ್ಲಾಧಿಕಾರಿಗಳ ಅನುಮೋದನೆ ಪಡೆಯದೆ ಹೆಸರಿಟ್ಟಿರುವುದು ನಿಯಮಬಾಹಿರ. ಈ ಬಗ್ಗೆ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳ ಗಮನಕ್ಕೂ ತರಲಾಗಿದೆ. ದೇವಾಲಯದ ಸ್ವತ್ತಿಗೆ ರಾಜಕಾರಣಿಯೊಬ್ಬರ ಹೆಸರಿಟ್ಟಿರುವುದು ಇಲ್ಲಿನ ಜನರ ಭಾವನೆಗಳಿಗೆ ಧಕ್ಕೆಯಾಗಿದೆ. ಪುರಸಭಾ ಮಾಜಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ ಅವರ ಮೇಲೆ ನಮಗೆ ಗೌರವವಿದೆ. ಆದರೆ ವಾಸ್ತವ ಅರ್ಥ ಮಾಡಿಕೊಂಡು, ಈಗ ಇಟ್ಟಿರುವ ಹೆಸರನ್ನು ಕೈಬಿಡುವುದು ಸೂಕ್ತವಾಗಿದೆ ಎಂದರು.

ಕೆ.ಎಂ. ಹನುಮಂತರಾಯಪ್ಪ ಅವರ ಹೆಸರಿಟ್ಟಿರುವ ಬಗ್ಗೆ ಇಲ್ಲಿನ ನಗರಸಭಾ ಸದಸ್ಯರು ಹಾಗೂ ನಗರದ ಎಲ್ಲ ಸದಸ್ಯರು ಪರಿಶೀಲಿಸಿ ‘ಬಯಲು ಬಸವಣ್ಣ’ ಹೆಸರಿಡಲು ನಗರಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು. ಇಲ್ಲವಾದಲ್ಲಿ ಇಲ್ಲಿನ ಜನರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಸಮಿತಿಯ ಪದಾಧಿಕಾರಿಗಳು ಎಚ್ಚರಿಸಿದ್ದಾರೆ. ಸಭೆಯಲ್ಲಿ ಶ್ರೀಬಯಲು ಬಸವಣ್ಣ ದೇವಸ್ಥಾನ ಸೇವಾ ಟ್ರಸ್ಟ್‌ನ ಮಾಜಿ ಅಧ್ಯಕ್ಷರಾದ ಡಿ.ಎಂ. ನಾಗ­ರಾಜ್, ವಿ.ನಾಗರಾಜ್, ಮುಖಂಡ­­ರಾದ ವೇಣುಗೋಪಾಲ್, ಮಂಜು­ನಾಥ್, ರವಿಕುಮಾರ್ ಹಾಜರಿದ್ದರು.

‘ವ್ಯಕ್ತಿಯ ತೇಜೋವಧೆ ಸಲ್ಲ’
‘2012ರಲ್ಲಿಯೇ ನಗರಸಭೆ  ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯ ಅಂಗೀಕರಿಸುವ ಮೂಲಕವೇ ಬಯಲು ಬಸವಣ್ಣ ಸಮೀಪ ನಗರಸಭೆ ವತಿಯಿಂದ ಅಭಿವೃದ್ಧಿ ಪಡಿಸುತ್ತಿರುವ ಸಾರ್ವಜನಿಕ ಉದ್ಯಾನಕ್ಕೆ ಕೆ.ಎಂ.ಹನುಮಂತರಾಯಪ್ಪ ಅವರ ಹೆಸರನ್ನು ಇಡಲಾಗಿದೆ. ಈಗ ವಿರೋಧಿಸುವುದು ಸಮಂಜಸವಲ್ಲ. ಇದರಿಂದ ವ್ಯಕ್ತಿಯ ತೇಜೋವಧೆಗೆ ಕಾರಣವಾಗಲಿದೆ. ಈ ಹಿಂದೆಯೆ ತಹಶೀಲ್ದಾರರು ಬಯಲು ಬಸವಣ್ಣ ಸಮೀಪದ ಸ್ಥಳವನ್ನು ನಗರಸಭೆಗೆ ಅಧಿಕೃತವಾಗಿ ಹಸ್ತಾಂತರ ಮಾಡಿದ್ದಾರೆ. ಇದಾದ ನಂತರವೇ  ನಗರಸಭೆ ವತಿಯಿಂದ ಅಭಿವೃದ್ಧಿ ಕೆಲಸ ಆರಂಭಿಸಲಾಗಿದೆ. ಈ ಸ್ಥಳ ಬಯಲು ಬಸವಣ್ಣ ಸಮಿತಿಗೆ ಸೇರಿಲ್ಲ’
–ಟಿ.ಎನ್‌.ಪ್ರಭುದೇವ್‌, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT