ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡ ಪ್ರಮಾಣದ ಒತ್ತುವರಿದಾರರ ವಿರುದ್ಧ ಕ್ರಮ

ಕೋಟಿ ವೃಕ್ಷ ಅಭಿಯಾನ ಅಡಿ ಮಹಾನಗರ ವ್ಯಾಪ್ತಿಯಲ್ಲಿ ಹಸಿರೀಕರಣ
Last Updated 2 ಜುಲೈ 2016, 5:12 IST
ಅಕ್ಷರ ಗಾತ್ರ

ಮಂಗಳೂರು: 1978 ರ ಪೂರ್ವದಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿರುವ ಹಾಗೂ 1980 ರ ನಂತರ ಮಂಜೂರಾತಿ ಸಾಗುವಳಿ ಪ್ರಮಾಣ ಪತ್ರ ಪಡೆದಿರುವ ಬಗರ್‌ಹುಕಂ ಸಾಗುವಳಿದಾರರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸದಂತೆ ಅಧಿಕಾರಿಗಳಿಗೆ  ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಅರಣ್ಯ ಪರಿಸರ ಮತ್ತು ಜೀವ ಶಾಸ್ತ್ರ ಸಚಿವ ರಮಾನಾಥ ರೈ  ಹೇಳಿದರು.

ನಗರದ ಲೇಡಿಹಿಲ್‌ ವೃತ್ತದಲ್ಲಿ  ಮಹಾನಗರ ವ್ಯಾಪ್ತಿಯಲ್ಲಿ ಕೋಟಿ ವೃಕ್ಷ ಅಭಿಯಾನ ಅಡಿಯಲ್ಲಿ ನಗರ ಹಸಿರೀಕರಣ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅರಣ್ಯ ನಾಶ ಮಾಡುವುದನ್ನು ಯಾವುದೇ ಕಾರಣಕ್ಕೂ ಸರ್ಕಾರ ಸಹಿಸಲ್ಲ. ಸಣ್ಣ ಹಾಗೂ 3 ಎಕರೆಯಷ್ಟು  ಪ್ರಮಾಣದ ಬಗರ್‌ಹುಕಂ ಸಾಗುವಳಿದಾರರಿಗೆ ಅಧಿಕಾರಿಗಳು ಕಿರುಕುಳ ನೀಡುವುದಿಲ್ಲ. ದೊಡ್ಡ ಪ್ರಮಾಣದಲ್ಲಿ ಅರಣ್ಯ ನಾಶ ಮಾಡಿದವರನ್ನು ತೆರವು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಸರ್ಕಾರ ಅರಣ್ಯ ಬೆಳೆಸುವ ಸಲುವಾಗಿ ಹಲವಾರು ಯೋಜನೆ ಹಮ್ಮಿಕೊಳ್ಳುತ್ತಿದೆ. ಅರಣ್ಯ ನಾಶಕ್ಕೆ ಮುಂದಾಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.

ಬಗರ್‌ಹುಕಂ ಸಾಗುವಳಿದಾರರು ದೀರ್ಘ ಕಾಲದಿಂದ ಕಡಿಮೆ ಪ್ರಮಾಣದ ಭೂಮಿ ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಿದ್ದರೆ, ಕಾನೂನು ಪ್ರಕಾರ ಸರ್ಕಾರ ಮಂಜೂರಿ ಮಾಡಿರುವ ಸಾಗುವಳಿ ಪ್ರಮಾಣ ಪತ್ರ ಹೊಂದಿದ್ದರೆ ಅಂಥ ಒತ್ತುವರಿಗೆ ಯಾವುದೇ ಬಾಧಕ ಇಲ್ಲ.  ಇನ್ನು ಮನೆ ನಿರ್ಮಾಣ ಮಾಡಿಕೊಂಡವರಿಗೂ ಯಾವುದೇ ಸಮಸ್ಯೆ ಉಂಟು ಮಾಡದಂತೆ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ.  ಅರಣ್ಯ ಒತ್ತುವರಿ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಅರಣ್ಯ ನಾಶ ಮಾಡಿದವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಹಸಿರೀಕರಣಕ್ಕೆ ಒತ್ತು: ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಈ ಬಾರಿ ವ್ಯಾಪಕ ರೀತಿ ತಾಪಮಾನ ಉಂಟಾಗಿರುವುದನ್ನು ನಾವೆಲ್ಲರೂ ಅನುಭವಿಸಿದ್ದೇವೆ.  ಇದು ಎಲ್ಲರಿಗೂ ಒಂದು ರೀತಿಯ ಪಾಠ. ಅರಣ್ಯ ನಾಶದಿಂದ ಪರಿಸರಕ್ಕೆ ವ್ಯತಿರಕ್ತ ಹಾನಿ ಆಗುವುದರ ಜತೆಗೆ ಎಲ್ಲ ಪ್ರಾಣಿ ಸಂಕುಲಗಳು ಅದರ ಪರಿಣಾಮವನ್ನು ಯಾವ ರೀತಿಯಲ್ಲಿ ಎದುರಿಸಬೇಕಾಗುತ್ತದೆ ಎಂಬುದನ್ನು ಊಹೆ ಮಾಡುವುದು ಕಷ್ಟ ಎಂದು ಅವರು ಹೇಳಿದರು.

ಇಂಥ ಪರಿಣಾಮಗಳನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಸರ್ಕಾರ ಅರಣ್ಯ ಬೆಳೆಸುವ ಮೂಲಕ ಹಸಿರೀಕರಣಕ್ಕೆ ಜಾಗೃತಿ ಆಂದೋಲನಕ್ಕೆ ಮುಂದಾಗಿದೆ.ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋಟಿ ವೃಕ್ಷ ಅಭಿಯಾನ ಅಡಿಯಲ್ಲಿ ಗಿಡ ನೆಡುವ ಕಾರ್ಯಕ್ಕೆ ಮುಂದಾಗಿದ್ದು, ಒಟ್ಟು 8 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ಬೆಳೆಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.

ಗಿಡಗಳನ್ನು ಬೆಳೆಸುವ ಕಾರ್ಯಕ್ಕೆ ಎಲ್ಲರೂ ಮುಂದಾಗಬೇಕು. ಪರಿಸರ ಚೆಂದವಾಗಿದ್ದರೆ ಎಲ್ಲರೂ ಚೆನ್ನಾಗಿ ಇರಲು ಸಾಧ್ಯ. ಬದುಕು ನಡೆಸಲು  ಸ್ವಚ್ಛ ಪರಿಸರ ಬೇಕು. ಅದನ್ನು ನೀಡುವ ಕಾರ್ಯಗಳನ್ನು ಮರಗಳು ಮಾಡುತ್ತವೆ. ಗಿಡಗಳನ್ನು ನೆಡುವ ಮೂಲಕ ಹಸಿರು ಪರಿಸರ ನಿರ್ಮಾಣಕ್ಕೆ ಎಲ್ಲರೂ ಮುಂದಾಗುವಂತೆ ಅವರು ಕರೆ ನೀಡಿದರು.

ಮಹಾನಗರ ಪಾಲಿಕೆ ಮೇಯರ್‌ ಹರಿನಾಥ, ವಿಧಾನ ಪರಿಷತ್‌ ಸದಸ್ಯ ಗಣೇಶ ಕಾರ್ಣಿಕ್‌, ಶಾಸಕ ಜೆ. ಆರ್‌. ಲೋಬೊ, ಉಪಮೇಯರ್‌ ಸುಮಿತ್ರಾ ಕರಿಯಾ, ಮುಖ್ಯ ಸಚೇತಕ ಶಶಿಧರ ಹೆಗಡೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ, ವಿವಿಧ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT