ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋನಿ ನಾಯಕತ್ವಕ್ಕೆ ಅಗ್ನಿಪರೀಕ್ಷೆಯ ಸರಣಿ

Last Updated 11 ಜನವರಿ 2016, 19:54 IST
ಅಕ್ಷರ ಗಾತ್ರ

ಪರ್ತ್ (ಪಿಟಿಐ/ಐಎಎನ್‌ಎಸ್‌): ಆತಿಥೇಯರ ಬತ್ತಳಿಕೆಯಲ್ಲಿ ವೇಗದ ಅಸ್ತ್ರ, ಪ್ರವಾಸಿ ತಂಡಕ್ಕೆ ಸ್ಪಿನ್ನರ್‌ಗಳ ಬಲ.   ಇವರಲ್ಲಿ ಮೇಲುಗೈ ಸಾಧಿಸುವವರು ಯಾರು?

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಣ ಏಕದಿನ  ಸರಣಿ ಹುಟ್ಟು ಹಾಕಿರುವ ಕುತೂಹಲವಿದು. ಐದು ಪಂದ್ಯಗಳ ಸರಣಿಯ ಮೊದಲ ಹಣಾಹಣಿ ಮಂಗಳವಾರ ನಡೆಯಲಿದ್ದು, ಗೆಲುವಿನ ಆರಂಭ ಪಡೆಯಲು ಎರಡೂ ತಂಡಗಳು ಕಾತರದಿಂದ ಕಾಯುತ್ತಿವೆ.
ಮಹೇಂದ್ರ ಸಿಂಗ್‌ ದೋನಿ ನಾಯಕತ್ವದ ಭಾರತ ತಂಡ ಈ ಪ್ರವಾಸದಲ್ಲಿ ಏಕದಿನ ಸರಣಿ ಜೊತೆ ಮೂರು ಪಂದ್ಯಗಳ ಟ್ವೆಂಟಿ–20 ಸರಣಿಯನ್ನೂ ಆಡಲಿದೆ. ಮಾರ್ಚ್‌ ಹಾಗೂ ಏಪ್ರಿಲ್‌ನಲ್ಲಿ ಭಾರತದಲ್ಲಿ ವಿಶ್ವ ಟ್ವೆಂಟಿ–20 ಟೂರ್ನಿ ನಡೆಯಲಿದೆ. ಮಹತ್ವದ ಆ ಟೂರ್ನಿಗೆ ಸಜ್ಜಾಗಲು ಆಸ್ಟ್ರೇಲಿಯಾ ಪ್ರವಾಸ ವೇದಿಕೆ ಎನಿಸಿದೆ.

ಚುಟುಕು ಕ್ರಿಕೆಟ್‌ ಟೂರ್ನಿಗೂ ಮೊದಲು ಏಕದಿನ ಸರಣಿಯಲ್ಲಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು ಪ್ರವಾಸಿ ತಂಡದ ಗುರಿಯಾಗಿದೆ.

ಅಂದುಕೊಂಡಷ್ಟು ಸುಲಭವಾಗಿ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ ತಂಡವನ್ನು ಮಣಿಸುವುದು ಕಷ್ಟ. ಏಕೆಂದರೆ ಸ್ಟೀವನ್‌ ಸ್ಮಿತ್‌ ನಾಯಕತ್ವದ ತಂಡ 2014ರ ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ಏಕದಿನ ಪಂದ್ಯ ಸೋತಿತ್ತು ಆ ಬಳಿಕ ಆಡಿದ 14 ಪಂದ್ಯಗಳಲ್ಲಿ ಒಮ್ಮೆಯೂ ನಿರಾಸೆ ಕಂಡಿಲ್ಲ. ಅಷ್ಟೇ ಅಲ್ಲ, ಹೋದ ವರ್ಷ ತವರಿನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ನಲ್ಲೂ ಚಾಂಪಿಯನ್‌ ಆಗಿತ್ತು.
ಆದರೆ ಭಾರತ ತಂಡ ಹಿಂದಿನ ಒಂದು ವರ್ಷದಲ್ಲಿ ಏಕದಿನ ಸರಣಿಯನ್ನೇ ಗೆದ್ದಿಲ್ಲ. ಬಾಂಗ್ಲಾದೇಶ ಎದುರಿನ ಮೂರು ಪಂದ್ಯಗಳ ಸರಣಿಯಲ್ಲಿ 1–2ರಲ್ಲಿ ಸೋಲು ಕಂಡಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲೂ 2–3ರಲ್ಲಿ ಪರಾಭವಗೊಂಡಿತ್ತು. ಆದ್ದರಿಂದ ದೋನಿ  ನಾಯಕತ್ವಕ್ಕೂ ಈ ಸರಣಿ ಅಗ್ನಿಪರೀಕ್ಷೆ ಎನಿಸಿದೆ.

ವಿಶ್ವಾಸದಲ್ಲಿ: ಕಾಂಗರೂಗಳ ನಾಡಿನ ವಾತಾವರಣಕ್ಕೆ ಹೊಂದಿಕೊಳ್ಳುವ ಸಲುವಾಗಿ ಭಾರತ ತಂಡ ಕೆಲ ದಿನಗಳ ಮೊದಲೇ ಇಲ್ಲಿಗೆ ಬಂದು ವೆಸ್ಟರ್ನ್‌ ಆಸ್ಟ್ರೇಲಿಯಾ ಎದುರು ಎರಡು  ಅಭ್ಯಾಸ ಪಂದ್ಯಗಳನ್ನು ಆಡಿದೆ.

ಪರ್ತ್‌ನಲ್ಲಿ ನಡೆದಿದ್ದ 20 ಓವರ್‌ಗಳ ಮೊದಲ ಪಂದ್ಯದಲ್ಲಿ ಪ್ರವಾಸಿ ತಂಡ 74 ರನ್‌ಗಳ ಗೆಲುವು ಪಡೆದಿತ್ತು. 50 ಓವರ್‌ಗಳ ಇನ್ನೊಂದು ಅಭ್ಯಾಸ ಪಂದ್ಯದಲ್ಲಿ 64 ರನ್‌ಗಳ ಜಯ ಸಾಧಿಸಿತ್ತು.

ವೇಗದ ಬೌಲರ್‌ಗಳಿಗೆ ನೆರವಾಗುವ ಪಿಚ್‌ನಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಮಿಂಚಿದ್ದರು. ರೋಹಿತ್‌ ಶರ್ಮಾ, ಮನೀಷ್‌ ಪಾಂಡೆ, ಶಿಖರ್ ಧವನ್‌ ಹಾಗೂ ವಿರಾಟ್‌ ಕೊಹ್ಲಿ ಅರ್ಧಶತಕ ಗಳಿಸಿದ್ದರು. ಅಭ್ಯಾಸ ಪಂದ್ಯಗಳಲ್ಲಿ ನೀಡಿದ ಪ್ರದರ್ಶನ ಏಕದಿನ ಸರಣಿಗೆ ಅನುಕೂಲವಾಗಲಿದೆ.

ರೋಹಿತ್‌ ಶರ್ಮಾ ಮತ್ತು ಧವನ್‌ ಇನಿಂಗ್ಸ್ ಆರಂಭಿಸುವುದು ಖಚಿತ. ಮೂರನೇ ಕ್ರಮಾಂಕದಲ್ಲಿ ಕೊಹ್ಲಿ ಬ್ಯಾಟ್‌ ಮಾಡಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ ಹಾಗೂ ದೋನಿ ತಂಡದ ಶಕ್ತಿ ಎನಿಸಿದ್ದಾರೆ. ಆದರೆ  ಮನೀಷ್ ಪಾಂಡೆ ಮತ್ತು ಗುರುಕೀರತ್‌  ನಡುವೆ ಅಂತಿಮ ಹನ್ನೊಂದರ ತಂಡದಲ್ಲಿ ಸ್ಥಾನ ಪಡೆಯಲು ಪೈಪೋಟಿ ನಡೆಯುತ್ತಿದೆ.

26 ವರ್ಷದ ಮನೀಷ್‌ ಹೋದ ವರ್ಷ ಜಿಂಬಾಬ್ವೆ ಎದುರು ಒಂದು ಏಕದಿನ ಪಂದ್ಯವಾಡಿ ಅರ್ಧಶತಕ ಬಾರಿಸಿದ್ದರು. ಎರಡು ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯಗಳನ್ನೂ ಆಡಿದ್ದರು. ಕರ್ನಾಟಕದ ಆಟಗಾರ ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಭರವಸೆ ಮೂಡಿ ಸಿರುವ ಕಾರಣ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ.

ಆದರೆ, ಆತಿಥೇಯ ವೇಗಿಗಳನ್ನು ಎದುರಿಸುವುದೇ ಭಾರತದ ಬ್ಯಾಟ್ಸ್‌ಮನ್‌ಗಳ ಮುಂದಿರುವ ದೊಡ್ಡ ಸವಾಲು.  ಈ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ವೇಗಿಗಳಾದ ಸ್ಕಾಟ್‌ ಬೊಲಾಂಡ್‌ ಮತ್ತು ಜೊಯೆಲ್‌ ಪ್ಯಾರಿಸ್‌ ಅವರನ್ನು ಕಣಕ್ಕಿಳಿಸಲಿದೆ. ಇವರಿಬ್ಬರಿಗೂ ಇದು ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯ. ಜೊತೆಗೆ ಜೋಶ್‌ ಹ್ಯಾಜಲ್‌ವುಡ್‌, ಮಿಷೆಲ್‌ ಮಾರ್ಷ್‌ ಹಾಗೂ ಜೇಮ್ಸ್ ಫಾಕ್ನರ್‌ ಅವರೂ ಮೊದಲ ಪಂದ್ಯದಲ್ಲಿ ಆಡಲಿದ್ದಾರೆ. ಆಸ್ಟ್ರೇಲಿಯಾ ತಂಡ ಪಂದ್ಯಕ್ಕೂ ಒಂದು ದಿನ ಮೊದಲೇ ಅಂತಿಮ ಹನ್ನೊಂದರ ತಂಡವನ್ನು ಪ್ರಕಟಿಸಿದೆ.
ಸ್ಪಿನ್‌ ಶಕ್ತಿ: ಹೋದ ತಿಂಗಳು ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿ ಗೆಲ್ಲಲು ಕಾರಣರಾದ ಆರ್‌. ಅಶ್ವಿನ್‌ ಮತ್ತು ರವೀಂದ್ರ ಜಡೇಜ ಅವರ ಬಲ ಭಾರತ ತಂಡಕ್ಕಿದೆ.

ಹರಿಣಗಳ ಎದುರು ಸ್ಪಿನ್ನರ್‌ಗಳಾದ ಅಶ್ವಿನ್‌ 31 ಮತ್ತು ಜಡೇಜ 23 ವಿಕೆಟ್‌ಗಳನ್ನು ಕಬಳಿಸಿದ್ದರು. ಇದರಿಂದ ಎರಡು ಟೆಸ್ಟ್‌ ಪಂದ್ಯಗಳು ಮೂರೇ ದಿನಗಳಲ್ಲಿ ಮುಗಿದು ಹೋಗಿದ್ದವು. ಹೀಗಾಗಿ ಭಾರತ ತಂಡ ಸ್ಪಿನ್ನರ್‌ಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.

ವೇಗಿಗಳಾದ ಇಶಾಂತ್‌ ಶರ್ಮಾ, ಭುವನೇಶ್ವರ್‌ ಕುಮಾರ್‌, ರಿಷಿ ಧವನ್‌, ಉಮೇಶ್‌ ಯಾದವ್‌, ಬರೀಂದರ್‌ ಸ್ರಾನ್‌ ತಂಡದಲ್ಲಿದ್ದಾರೆ. ಸರಣಿ ಆರಂಭಕ್ಕೂ ಮೊದಲೇ ಮೊಹಮ್ಮದ್‌ ಶಮಿ ಗಾಯಗೊಂಡ ಕಾರಣ ಭುವನೇಶ್ವರ್‌ಗೆ ಅವಕಾಶ ಲಭಿಸಿದೆ. ಇಶಾಂತ್‌ ಅವರನ್ನು ಹೊರತು ಪಡಿಸಿದರೆ ಆಸ್ಟ್ರೇಲಿಯಾದ ನೆಲದಲ್ಲಿ ಆಡಿದ ಅನುಭವಿಗಳು ಕಡಿಮೆಯಿದ್ದಾರೆ. ವೇಗಿಗಳ ಮುಂದೆ ಆತಿಥೇಯ ಬ್ಯಾಟ್ಸ್‌ಮನ್‌ಗಳನ್ನು  ಬೇಗನೆ ಕಟ್ಟಿ ಹಾಕಬೇಕಾದ ಸವಾಲಿದೆ.

ತಂಡ ಇಂತಿದೆ: ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ/ವಿಕೆಟ್‌ ಕೀಪರ್), ಶಿಖರ್‌ ಧವನ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಅಜಿಂಕ್ಯ ರಹಾನೆ, ಗುರುಕೀರತ್‌ ಸಿಂಗ್‌ ಮಾನ್‌, ಮನೀಷ್‌ ಪಾಂಡೆ, ಆರ್‌. ಅಶ್ವಿನ್‌, ರವೀಂದ್ರ ಜಡೇಜ, ಇಶಾಂತ್‌ ಶರ್ಮಾ, ಉಮೇಶ್‌ ಯಾದವ್‌, ಬರೀಂದರ್ ಸ್ರಾನ್‌, ಭುವನೇಶ್ವರ್‌ ಕುಮಾರ್‌, ಅಕ್ಷರ್‌ ಪಟೇಲ್‌ ಮತ್ತು ರಿಷಿ ಧವನ್‌.

ಆಸ್ಟ್ರೇಲಿಯಾ: ಸ್ಟೀವನ್‌ ಸ್ಮಿತ್‌ (ನಾಯಕ), ಆ್ಯರನ್ ಫಿಂಚ್‌, ಡೇವಿಡ್‌ ವಾರ್ನರ್‌, ಜಾರ್ಜ್‌ ಬೇಲಿ, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಿಷೆಲ್‌ ಮಾರ್ಷ್‌, ಮ್ಯಾಥ್ಯೂ ವೇಡ್‌ (ವಿಕೆಟ್‌ ಕೀಪರ್‌), ಜೇಮ್ಸ್‌ ಫಾಕ್ನರ್‌, ಸ್ಕಾಟ್‌ ಬೊಲಾಂಡ್‌, ಜೋಶ್‌ ಹ್ಯಾಜ್ಲೆವುಡ್‌ ಹಾಗೂ ಜೊಯೆಲ್‌ ಪ್ಯಾರಿಸ್‌.

ಪಂದ್ಯ ಆರಂಭ: ಬೆಳಿಗ್ಗೆ 8.50 (ಭಾರತೀಯ ಕಾಲಮಾನ)
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT