ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋನಿ ನಾಯಕತ್ವಕ್ಕೆ ಸವಾಲಿನ ಸರಣಿ

ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಕ್ರಿಕೆಟ್‌ ಪಂದ್ಯ ಇಂದು: ಭಾರತಕ್ಕೆ ಹೊಸ ಆಟಗಾರರೇ ಬಲ
Last Updated 10 ಜೂನ್ 2016, 19:30 IST
ಅಕ್ಷರ ಗಾತ್ರ

ಹರಾರೆ (ಪಿಟಿಐ):  ಭಾರತ ಮತ್ತು  ಜಿಂಬಾಬ್ವೆ ನಡುವಣ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಗೆ ಶನಿವಾರ ಚಾಲನೆ ದೊರೆಯಲಿದ್ದು, ಯುವ ಆಟಗಾರರನ್ನೇ ನೆಚ್ಚಿಕೊಂಡು ತಂಡವನ್ನು ಮುನ್ನಡೆಸಬೇಕಾದ ಸವಾಲು ನಾಯಕ ಮಹೇಂದ್ರ ಸಿಂಗ್ ದೋನಿ ಅವರ ಮುಂದಿದೆ.

ಸತತ ಟೂರ್ನಿಗಳನ್ನು ಆಡಿರುವ ಕಾರಣ ಅನುಭವಿ ಆಟಗಾರರಾದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಶಿಖರ್‌ ಧವನ್‌ ಮತ್ತು ಆಫ್‌ ಸ್ಪಿನ್ನರ್ ಆರ್‌. ಅಶ್ವಿನ್‌ ಅವರಿಗೆ  ಬಿಸಿಸಿಐ ಆಯ್ಕೆ ಸಮಿತಿ ವಿಶ್ರಾಂತಿ ನೀಡಿದೆ.

ಇವರ ಬದಲಾಗಿ ಒಂದೂ ಅಂತರರಾಷ್ಟ್ರೀಯ ಏಕದಿನ ಪಂದ್ಯ ವಾಡದ ಕೆ.ಎಲ್‌. ರಾಹುಲ್‌, ಕರುಣ್ ನಾಯರ್‌, ಫಯಾಜ್‌ ಫಜಲ್‌, ಮನದೀಪ್‌ ಸಿಂಗ್‌, ಜಯಂತ್ ಯಾದವ್‌ ಮತ್ತು ಯಜುವೇಂದ್ರ ಚಾಹಲ್‌ ಅವರಿಗೆ ಅವಕಾಶ ಲಭಿಸಿದೆ.

ಕರ್ನಾಟಕದ ರಾಹುಲ್‌ ಈಗಾಗಲೇ ಐದು ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. 2014ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆದರೆ ಈ ಬಲಗೈ ಬ್ಯಾಟ್ಸ್‌ಮನ್‌ಗೆ ಏಕದಿನ ಪಂದ್ಯ ಆಡುವ ಅವಕಾಶ ಲಭಿಸಿಲ್ಲ.

ಐಪಿಎಲ್‌ ಟೂರ್ನಿಯಲ್ಲಿ ಚೆನ್ನಾಗಿ ಆಡಿ ಭರವಸೆ ಮೂಡಿಸಿರುವ ಕರುಣ್‌ ನಾಯರ್‌ ಹೋದ ವರ್ಷ ಶ್ರೀಲಂಕಾ ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯ ಕೊನೆಯ ಪಂದ್ಯಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ, ಅಂತಿಮ ಹನ್ನೊಂದರಲ್ಲಿ ಆಡಲು ಅವಕಾಶ ಲಭಿಸಿರಲಿಲ್ಲ.

ಜಿಂಬಾಬ್ವೆ ಸರಣಿಗೆ ಸ್ಥಾನ ಪಡೆದಿರುವ  ಭಾರತದ 15 ಆಟಗಾರರ ಪೈಕಿ ಏಳು ಜನ ಹತ್ತಕ್ಕಿಂತಲೂ ಹೆಚ್ಚು  ಏಕದಿನ ಪಂದ್ಯಗಳನ್ನು ಆಡಿಲ್ಲ. ಮನೀಷ್‌ ಪಾಂಡೆ (4), ಕೇದಾರ್‌ ಜಾಧವ್‌ (4), ರಿಷಿ ಧವನ್‌ (3), ಜಸ್‌ಪ್ರೀತ್‌ ಬೂಮ್ರಾ (1), ಜಯದೇವ್ ಉನದ್ಕತ್‌ (7) ಮತ್ತು ಧವಳ್‌ ಕುಲಕರ್ಣಿ (8) ಮಾತ್ರ ಅಲ್ಪ ಅನುಭವ ಹೊಂದಿದ್ದಾರೆ. ಅಂಬಟಿ ರಾಯುಡು (31 ಪಂದ್ಯ) ಮತ್ತು ಅಕ್ಷರ್‌ ಪಟೇಲ್‌ (22) ಮಾತ್ರ ಹೆಚ್ಚು ಪಂದ್ಯಗಳಲ್ಲಿ ಆಡಿದ್ದಾರೆ.

ಇವರ ಜೊತೆಗೆ ಹೊಸ ಆಟಗಾರರಿಗೆ ಅವಕಾಶ ಕೊಟ್ಟು ತಂಡವನ್ನು ಯಶಸ್ಸಿನ ಹಾದಿಯನ್ನು ಮುನ್ನಡೆಸಬೇಕಾದ ಸವಾಲು ದೋನಿ ಅವರ ಮುಂದಿದೆ.
ಚಾಣಾಕ್ಷ ನಾಯಕತ್ವಕ್ಕೆ ಹೆಸರಾಗಿರುವ ದೋನಿ ಆಫ್ರಿಕಾದ ನೆಲದಲ್ಲಿ 11 ವರ್ಷಗಳ ಬಳಿಕ ಆಡು ತ್ತಿದ್ದಾರೆ. 2005ರಲ್ಲಿ ಸೌರವ್ ಗಂಗೂಲಿ ನಾಯಕರಾಗಿದ್ದ ವೇಳೆ ದೋನಿ ತಂಡದಲ್ಲಿದ್ದರು.

ರಾಂಚಿಯ ಆಟಗಾರ  ಕ್ರಿಕೆಟ್‌ ಆಡಲು ಮೊದಲ ಬಾರಿಗೆ ಇಲ್ಲಿಗೆ ಬಂದಾಗ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಆರು ತಿಂಗಳಷ್ಟೇ ಕಳೆದಿತ್ತು.

ಭಾರತ ತಂಡ ಈ ಪ್ರವಾಸದಲ್ಲಿ ಮೂರು ಏಕದಿನ ಮತ್ತು ಮೂರು ಟ್ವೆಂಟಿ–20 ಪಂದ್ಯಗಳ ಸರಣಿ ಆಡಲಿದೆ. ಎಲ್ಲಾ ಪಂದ್ಯಗಳು ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನ ಕ್ರೀಡಾಂಗಣದಲ್ಲಿ ಆಯೋಜನೆ ಯಾಗಿವೆ. ಆದ್ದರಿಂದ ಎರಡೂ ತಂಡಗಳ ಆಟಗಾರರಿಗೆ ಪದೇ ಪದೇ ಪ್ರಯಾಣದ ಚಿಂತೆಯಿಲ್ಲ.

ಭಾರತ 2013 ಮತ್ತು 2015ರಲ್ಲಿ ಇಲ್ಲಿ ಸರಣಿ ಆಡಿತ್ತು. ಈ ಎರಡೂ ಸರಣಿಗಳಲ್ಲಿ ಭಾರತ ತಂಡವೇ ಕ್ಲೀನ್‌ ಸ್ವೀಪ್‌ ಸಾಧಿಸಿತ್ತು. ಇತಿಹಾಸದ ಗೆಲುವಿನ ಬಲವೂ ಭಾರತದ ಬೆನ್ನಿಗಿದೆ.

ಹೊಸಬರಿಗೆ ಉತ್ತಮ ಅವಕಾಶ: ಭಾರತ ತಂಡ ಮುಂದಿನ ಒಂದು ವರ್ಷದ ಅವಧಿಯಲ್ಲಿ 13 ಟೆಸ್ಟ್‌, ಎಂಟು ಏಕದಿನ ಮತ್ತು  ಮೂರು ಟ್ವೆಂಟಿ–20 ಪಂದ್ಯ ಗಳನ್ನು ಆಡಲಿದೆ.

ಈ ಪಂದ್ಯಗಳು ಇಂಗ್ಲೆಂಡ್, ನ್ಯೂಜಿಲೆಂಡ್‌ ಮತ್ತು ಆಸ್ಟ್ರೇಲಿಯಾದ ವಿರುದ್ಧ ಆಯೋಜನೆಯಾಗಿವೆ. ಆ ಸರಣಿಗ ಳಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಲು ಹೊಸ ಆಟಗಾರರಿಗೆ ಜಿಂಬಾಬ್ವೆ ಪ್ರವಾಸ ಮಹದ್ದೆನಿಸಿದೆ.

ಸಂಕಷ್ಟದಲ್ಲಿ ಆತಿಥೇಯರು: ಅಸ್ಥಿರ ಪ್ರದರ್ಶನದಿಂದ ಪರದಾಡುತ್ತಿರುವ ಆತಿಥೇಯ ತಂಡಕ್ಕೆ ಈ ಸರಣಿ ಸವಾಲು ಎನಿಸಿದೆ. ಜಿಂಬಾಬ್ವೆ ಕ್ರಿಕೆಟ್‌ ಆಡಳಿತ ಕೆಲ ದಿನಗಳ ಹಿಂದೆಯಷ್ಟೇ ನಾಯಕ ಮತ್ತು ಕೋಚ್‌ ಅವರನ್ನು ಬದಲಾಯಿಸಿದೆ. ಆದ್ದರಿಂದ ಗ್ರೇಮ್‌ ಕ್ರೀಮರ್‌ ತಂಡವನ್ನು ಮುನ್ನಡೆಸಲಿದ್ದಾರೆ.

ತಂಡಗಳು: ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ಕೆ.ಎಲ್‌. ರಾಹುಲ್‌, ಫಯಾಜ್‌ ಫಜಲ್‌, ಮನೀಷ್‌ ಪಾಂಡೆ, ಕರುಣ್ ನಾಯರ್, ಅಂಬಟಿ ರಾಯುಡು, ಕೇದಾರ್ ಜಾಧ ವ್‌, ಮನದೀಪ್‌ ಸಿಂಗ್‌, ರಿಷಿ ಧವನ್‌, ಜಸ್‌ಪ್ರೀತ್‌ ಬೂಮ್ರಾ, ಜಯಂತ್ ಯಾದವ್, ಯಜುವೇಂದ್ರ ಚಾಹಲ್‌, ಜಯದೇವ್‌ ಉನದ್ಕತ್‌, ಧವಳ್‌ ಕುಲಕರ್ಣಿ ಮತ್ತು ಅಕ್ಷರ್‌ ಪಟೇಲ್‌.

ಜಿಂಬಾಬ್ವೆ: ಗ್ರೇಮ್‌ ಕ್ರಿಮರ್‌ (ನಾಯಕ), ತೆಂಡೈ ಚಿತಾರ, ಚಾಮು ಸಿಬುಂದಾ, ಎಲ್ಟನ್‌ ಚಿಗುಂಬರಾ, ತೆಂಡೈ ಚಿಸೊರೊ, ಕ್ರೆಗ್‌ ಎವಿನ್‌, ನೆವಿಲ್ಲೆ ಮಾಡ್ಜೀವ, ಟಿ. ಮರುಮಾ, ಹ್ಯಾಮಿಲ್ಟನ್‌ ಮಸಕಜಾ, ವೆಲಿಂಗ್ಟನ್‌ ಮಸಕಜಾ, ಪೀಟರ್‌ ಮೂರ್‌, ತ್ವನಾಡ ಮುಪರಿವಾ, ರಿಚರ್ಡ್‌  ಮುತುಂಬಮಿ, ತಾರುಯಿ ಮುಜರಾಬನಿ,  ವಸಿಮುಜಿ ಸಿಬಂದಾ, ಸಿಕಂದರ್ ರಾಜಾ, ಡೊನಾಲ್ಡ್‌ ತಿರಿಪನೊ ಮತ್ತು ಸೇನ್‌ ವಿಲಿಯಮ್ಸ್‌.

ಪಂದ್ಯ ಆರಂಭ: ಮಧ್ಯಾಹ್ನ 12.30 (ಭಾರತೀಯ ಕಾಲಮಾನ)ನೇರ  ಪ್ರಸಾರ:  ಟೆನ್‌ ನೆಟ್‌ವರ್ಕ್‌

ಮನೀಷ್ ಪಾಂಡೆಗೆ ಎರಡನೇ ಪ್ರವಾಸ
ಕರ್ನಾಟಕದ ಮನೀಶ್ ಪಾಂಡೆಎಗ ಇದು ಜಿಂಬಾಬ್ವೆಯಲ್ಲಿ ಆಡಲು ಲಭಿಸಿದರು ಎರಡನೇ ಅವಕಾಶ. ಅವರು ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು ಹರಾರೆಯಲ್ಲಿ ಆಡಿದ್ದರು. ಆ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಗಮನ ಸೆಳೆದಿದ್ದರು.

ಈ ಬಾರಿ ಮತ್ತೆ ಅವರಿಗೆ ಹರಾರೆಯಲ್ಲಿ ಆಡುವ ಅವಕಾಶ ಸಿಕ್ಕಿದೆ. ಅವರೊಂದಿಗೆ ಕರ್ನಾಟಕದ ಕರುಣ್ ನಾಯರ್, ಕೆ.ಎಲ್. ರಾಹುಲ್ ಕೂಡ ಆಡಲಿದ್ದಾರೆ.

ಚಿಗುಂಬರಾಗೆ 200ನೇ ಪಂದ್ಯ
ಹರಾರೆ (ಪಿಟಿಐ): ಜಿಂಬಾಬ್ವೆ ತಂಡದ ಆಲ್‌ರೌಂಡರ್‌ ಎಲ್ಟನ್‌ ಚಿಗುಂಬರಾ ಪಾಲಿಗೆ ಶನಿವಾರ ಸ್ಮರಣೀಯ ದಿನ. ಏಕೆಂದರೆ ಅವರು 200ನೇ ಅಂತರ ರಾಷ್ಟ್ರೀಯ ಏಕದಿನ ಪಂದ್ಯವಾಡ ಲಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್‌ ಮತ್ತು ವೇಗದ ಬೌಲರ್‌ ಚಿಗುಂಬರಾ 2004ರಲ್ಲಿ ಬುಲವಾಯೊದಲ್ಲಿ ಶ್ರೀಲಂಕಾ ವಿರುದ್ಧ ಚೊಚ್ಚಲ ಪಂದ್ಯವಾಡಿದ್ದರು.
ಚಿಗುಂಬರಾ 199 ಪಂದ್ಯಗಳಿಂದ ಒಟ್ಟು 4179 ರನ್‌ ಗಳಿಸಿದ್ದಾರೆ. 101 ವಿಕೆಟ್‌ ಪಡೆದಿದ್ದಾರೆ.

ಈ ಆಟಗಾರ 200 ಪಂದ್ಯಗಳನ್ನು ಆಡುವ ಜಿಂಬಾಬ್ವೆಯ ಮೂರನೇ ಆಟಗಾರ ಎನ್ನುವ ಕೀರ್ತಿ ಪಡೆಯಲಿದ್ದಾರೆ. ಸಹೋದರ ಜೋಡಿ  ಆ್ಯಂಡಿ  ಫ್ಲವರ್‌  213  ಮತ್ತು ಗ್ರಾಂಟ್‌ ಫ್ಲವರ್‌ 221 ಪಂದ್ಯಗಳನ್ನು ಆಡಿದ್ದಾರೆ.

ಮುಖ್ಯಾಂಶಗಳು
* ಒಟ್ಟು ಮೂರು ಪಂದ್ಯಗಳ ಏಕದಿನ ಮತ್ತು ಟ್ವೆಂಟಿ–20 ಸರಣಿ ನಡೆಯಲಿದೆ
* ದೋನಿ 11 ವರ್ಷಗಳ ಬಳಿಕ ಜಿಂಬಾಬ್ವೆಯಲ್ಲಿ ಆಡುತ್ತಿದ್ದಾರೆ
*ಅವಕಾಶದ ನಿರೀಕ್ಷೆಯಲ್ಲಿ ಕರುಣ್‌ ನಾಯರ್‌, ರಾಹುಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT