ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋನಿ ಬಳಗಕ್ಕೆ ಎರಡು ಸವಾಲು

Last Updated 7 ಫೆಬ್ರುವರಿ 2016, 19:31 IST
ಅಕ್ಷರ ಗಾತ್ರ

‘ಚುಟುಕು ಕ್ರಿಕೆಟ್‌’ ಹಬ್ಬದ ವಾತಾವರಣ ಕಳೆಗಟ್ಟತೊಡಗಿದೆ. ಆಸ್ಟ್ರೇಲಿಯಾದಲ್ಲಿ ಹೋದ ತಿಂಗಳು ಮೂರು ಪಂದ್ಯಗಳ ಟ್ವೆಂಟಿ–20 ಸರಣಿಯನ್ನು ಮಹೇಂದ್ರಸಿಂಗ್ ದೋನಿ ಬಳಗವು ಗೆದ್ದು ಬರುವುದರೊಂದಿಗೆ ಹೊಸ ನಿರೀಕ್ಷೆ ಮೂಡಿದೆ.

ತಂಡದ ಅಮೋಘ ಪ್ರದರ್ಶನದಿಂದ  ಮುಂಬರಲಿರುವ ಏಷ್ಯಾ ಕಪ್ ಟ್ವೆಂಟಿ–20 ಮತ್ತು ವಿಶ್ವ ಟ್ವೆಂಟಿ–20 ಟೂರ್ನಿಗಳಲ್ಲಿ ಚಾಂಪಿಯನ್ ಆಗುವ ನೆಚ್ಚಿನ ತಂಡ ಭಾರತವಾಗಿದೆ. ಅದಕ್ಕಾಗಿ ಬಿಸಿಸಿಐ ಆಯ್ಕೆ ಸಮಿತಿಯು ಯುವ ಮತ್ತು ಅನುಭವಿಗಳು ಇರುವ ತಂಡವನ್ನು ಆಯ್ಕೆ ಮಾಡಿದೆ. ಇದರಲ್ಲಿ ಕೆಲವು ಆಯ್ಕೆಗಳು ಕ್ರಿಕೆಟ್‌ ವಲಯದಲ್ಲಿ ಅಚ್ಚರಿ ಮೂಡಿಸಿವೆ.

ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲಿ ಲಭಿಸಿದ್ದ ಏಕೈಕ ಅವಕಾಶದಲ್ಲಿ ಭರ್ಜರಿ ಶತಕ ದಾಖಲಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಕರ್ನಾಟಕ ಮನೀಷ್ ಪಾಂಡೆ ಅವರನ್ನು ಆಯ್ಕೆ ಪರಿಗಣಿಸದಿರುವುದು ಒಂದು ಅಚ್ಚರಿ. ಒಂದೇ ಒಂದು ಅಂತರರಾಷ್ಟ್ರೀಯ ಪಂದ್ಯವನ್ನು ಆಡಿರದ, ಐಪಿಎಲ್‌ನಲ್ಲಿ ಮಾಡಿದ್ದ ಸಾಧನೆಯೇ ಮಾನದಂಡವನ್ನಾಗಿ ನೋಡಿ ಆಯ್ಕೆ ಆಗಿರುವ ದೆಹಲಿಯ ಆಲ್‌ರೌಂಡರ್ ಪವನ್ ನೇಗಿಯ ಆಯ್ಕೆ ಕ್ರಿಕೆಟ್ ಅಭಿಮಾನಿಗಳು ಹುಬ್ಬೇರಿಸುವಂತಾಗಿದೆ.

ಆಸ್ಟ್ರೇಲಿಯಾದ ಟ್ವೆಂಟಿ–20 ಸರಣಿಯಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿಯವರೇ ಹೆಚ್ಚು ಅಬ್ಬರಿಸಿದ್ದರು. ಇದರಿಂದಾಗಿ ಉಳಿದವರಿಗೆ ಹೆಚ್ಚು ಹೊತ್ತು ಬ್ಯಾಟಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ, ಕೊನೆಯ ಪಂದ್ಯದಲ್ಲಿ ಸಿಕ್ಕಿದ್ದ ಅವಕಾಶದಲ್ಲಿ ಸುರೇಶ್ ರೈನಾ ಮತ್ತು ಅನುಭವಿ ಆಲ್‌ರೌಂಡರ್ ಯುವರಾಜ್ ಸಿಂಗ್ ಮಿಂಚಿದ್ದರು. ತಂಡದ ಗೆಲುವಿಗೆ ಉಪಯುಕ್ತ ಕಾಣಿಕೆ ನೀಡಿದ್ದರು. ಕೊನೆಯ ಓವರ್‌ನಲ್ಲಿ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದ್ದ ಯುವರಾಜ್ ತಮ್ಮ ಆಟ ಇನ್ನೂ ಬಾಕಿ ಇದೆ ಎಂಬ ಸಂದೇಶ ರವಾನಿಸಿದ್ದರು.

ಐಪಿಎಲ್‌ ಸೇರಿದಂತೆ ಇನ್ನಿತರ ಮಾದರಿಯ ಕ್ರಿಕೆಟ್‌ಗಳಲ್ಲಿ ಉತ್ತಮ ಫಾರ್ಮ್ ಹೊಂದಿರುವ ಅಜಿಂಕ್ಯ ರಹಾನೆ ಆಯ್ಕೆಯೂ ಸಮರ್ಥನೀಯ. ತಂಡಕ್ಕೆ ಇಬ್ಬರು ಎಡಗೈ ಆಲ್‌ರೌಂಡರ್‌ಗಳನ್ನು ಆಯ್ಕೆ ಮಾಡಲಾಗಿದೆ. ಉತ್ತಮ ಫಾರ್ಮ್‌ನಲ್ಲಿರುವ ರವೀಂದ್ರ ಜಡೇಜ ಇದ್ದಾರೆ. ಇದೀಗ ಹೊಸ ಪ್ರತಿಭೆ ಪವನ್ ನೇಗಿ ಕೂಡ ಅವರಿಗೆ ಜೊತೆಗೂಡಲಿದ್ದಾರೆ. ಆರ್. ಅಶ್ವಿನ್ ಮತ್ತು ಹರಭಜನ್ ಸಿಂಗ್ ಸೇರಿದಂತೆ ಒಟ್ಟು ನಾಲ್ವರು ಸ್ಪಿನ್ನರ್‌ಗಳು ಅವಕಾಶ ಪಡೆದಿದ್ದಾರೆ. ವೇಗದ ಬೌಲಿಂಗ್‌ ವಿಭಾಗದಲ್ಲಿ ಹೊಸ ಭರವಸೆ ಜಸ್‌ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯಗೆ ಮಿಂಚಲು ಇದು ಒಳ್ಳೆಯ ಅವಕಾಶ. ತಂಡಕ್ಕೆ ಮರಳಿ ಬಂದಿರುವ ಅನುಭವಿ  ಎಡಗೈ ವೇಗಿ ಆಶಿಶ್ ನೆಹ್ರಾ ಕೂಡ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಬಲ್ಲರು. ಆದರೆ, ಪ್ರತಿಭಾನ್ವಿತ ಬೌಲರ್ ಮೊಹಮ್ಮದ್ ಶಮಿ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡು ಆಡುವರೇ ಎಂಬುದೇ ಅನುಮಾನ?

2ನೇ ವಿಕೆಟ್‌ಕೀಪರ್ ಇಲ್ಲ
ನಾಯಕ ಮಹೇಂದ್ರಸಿಂಗ್ ದೋನಿ ಯಶಸ್ವಿ ವಿಕೆಟ್‌ಕೀಪರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಟೆಸ್ಟ್ ಕ್ರಿಕೆಟ್‌ಗೆ ಒಂದು ವರ್ಷದ ಹಿಂದೆಯೇ ಅವರು ವಿದಾಯ ಹೇಳಿದ್ದಾರೆ. ನಿಗದಿಯ ಓವರ್‌ಗಳ ಮಾದರಿಯಿಂದಲೂ ಅವರು ವಿದಾಯ ಹೇಳುವ ಸಮಯ ಸನ್ನಿಹಿತವಾಗಿದೆ. ಈ ವಿಶ್ವ ಟ್ವೆಂಟಿ–20 ಅವರಿಗೆ ಬಹುತೇಕ ಕೊನೆಯ ಟೂರ್ನಿ ಎಂಬ ಮಾತುಗಳು ಕೇಳಿಬರುತ್ತಿವೆ.  ಆದ್ದರಿಂದ ಇನ್ನೊಬ್ಬ ವಿಕೆಟ್‌ಕೀಪರ್ ಸಿದ್ಧಗೊಳಿಸಲು ಮುಂಬರುವ ಟೂರ್ನಿಗಳು ಉತ್ತಮ ವೇದಿಕೆಯಾಗಿದ್ದವು. ಆದರೆ, ಆಯ್ಕೆ ಸಮಿತಿಯು ಈ ಬಗ್ಗೆ ಹೆಚ್ಚು ಗಮನ ಕೊಟ್ಟಂತೆ ಕಾಣುತ್ತಿಲ್ಲ.

ದೋನಿ ವಿದಾಯದ ನಂತರ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ವಋದ್ಧಿಮಾನ್ ಸಹಾ ಕಾಲೂರಲು ಪ್ರಯತ್ನಿಸುತ್ತಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಗುಜರಾತ್ ತಂಡವು ಪ್ರಶಸ್ತಿ ಗೆಲ್ಲಲು ಕಾರಣವಾಗಿದ್ದ ಪಾರ್ಥಿವ್ ಪಟೇಲ್, ಮಧ್ಯಪ್ರದೇಶದ ನಮನ್ ಓಜಾ, ತಮಿಳುನಾಡಿನ ಅನುಭವಿ ವಿಕೆಟ್‌ಕೀಪರ್‌–ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ನೀಡಬಹುದಿತ್ತು. ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಿಂಚಿದ ಆಟಗಾರರಿಗೆ ಹೆಚ್ಚು ಪ್ರಾಶಸ್ತ್ಯ ದೊರೆಯುವ ನಿರೀಕ್ಷೆ ಇತ್ತು. ಆದರೆ, ಹಾಗಾಗಿಲ್ಲ. ವಿಶ್ವ ಟ್ವೆಂಟಿ–20 ಟೂರ್ನಿಯ ತಂಡದ ಆಯ್ಕೆಗಾಗಿ, ವಿಜಯ್ ಹಜಾರೆ ಟ್ರೋಫಿ ಮತ್ತು ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗಳ ವೇಳಾಪಟ್ಟಿಯನ್ನು ಹಿಂದೂಡಲಾಗಿತ್ತು. ಈ ಬಾರಿಯ ರಣಜಿ ಟ್ರೋಫಿಯ ಲೀಗ್ ಮತ್ತು ನಾಕೌಟ್ ಹಂತದ ಪಂದ್ಯಗಳ ನಡುವೆ ಸುಮಾರು ಎರಡು ತಿಂಗಳ ಅಂತರ ಇಡಲಾಗಿತ್ತು. ಆದರೆ, ಅದರ ಉದ್ದೇಶ ಈಡೇರಿದಂತೆ ಕಾಣುವುದಿಲ್ಲ. ಇವೆಲ್ಲದರ ಹೊರತಾಗಿಯೂ ಆತಿಥೇಯ ತಂಡವಾಗಿರುವ ಭಾರತಕ್ಕೆ ವಿಶ್ವ ಟ್ವೆಂಟಿ–20 ಚಾಂಪಿಯನ್ ಅಗುವ ಅವಕಾಶಗಳು ಸಾಕಷ್ಟಿವೆ.

ಪಾಂಡೆಗೆ ಏಕಿಲ್ಲ ಅವಕಾಶ?
ಹೋದ ತಿಂಗಳು ಆಸ್ಟ್ರೇಲಿಯಾದಲ್ಲಿ ಐದನೇ ಏಕದಿನ ಪಂದ್ಯ. ಕರ್ನಾಟಕದ ಮನೀಷ್ ಪಾಂಡೆ ಅಬ್ಬರದ ಶತಕಕ್ಕೆ ಅತಿಥೇಯ ಆಸ್ಟ್ರೇಲಿಯಾ ತಂಡ ಬೆಚ್ಚಿಬಿದ್ದಿತ್ತು. ಆ ಸರಣಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಪಾಂಡೆ ಆಡಿರಲಿಲ್ಲ. ಕಳೆದ  ಎಂಟು ವರ್ಷಗಳಿಂದ ಕರ್ನಾಟಕ ರಣಜಿ ತಂಡವು ಸಂಕಷ್ಟದಲ್ಲಿದ್ದಾಗಲೆಲ್ಲ ಪಾಂಡೆ ಅಬ್ಬರಿಸಿದ್ದಾರೆ ಗೆಲುವಿನ ಕಾಣಿಕೆ ನೀಡಿದ್ದಾರೆ. 2009ರ ಐಪಿಎಲ್‌ನಲ್ಲಿ ರಾಯಲ್‌ ಆಡಿಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡಿದ್ದ ಅವರು ಅತ್ಯಂತ ವೇಗದ ಶತಕ (ಅಜೇಯ 114; 67 ಎಸೆತಗಳು) ಗಳಿಸಿದ್ದರು. ಅಲ್ಲದೇ ಐಪಿಎಲ್‌ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಆದರೆ, ಈ ಯಾವ ಅಂಶಗಳೂ ಆಯ್ಕೆದಾರರ ಗಮನ ಸೆಳೆಯಲಿಲ್ಲ ಎಂಬುದೇ ಅಚ್ಚರಿ. 
*
ಚುಟುಕು ಕ್ರಿಕೆಟ್‌ ಸರಮಾಲೆ
ಮುಂದಿನ ನಾಲ್ಕು ತಿಂಗಳು ಟ್ವೆಂಟಿ–20 ಕ್ರಿಕೆಟ್‌ ರಂಗು ಭಾರತವನ್ನು ಆವರಿಸಲಿದೆ.  ಫೆಬ್ರುವರಿ  9ರಿಂದ 14ರವರೆಗೆ ಶ್ರೀಲಂಕಾ ವಿರುದ್ಧದ ಟ್ವೆಂಟಿ–20 ಸರಣಿಗೆ ಭಾರತ ಅತಿಥ್ಯ ವಹಿಸಲಿದೆ. ನಂತರ ಫೆಬ್ರುವರಿ 24ರಿಂದ  ಮಾರ್ಚ್‌ 6ವರೆಗೆ ಬಾಂಗ್ಲಾದಲ್ಲಿ ಏಷ್ಯಾ ಕಪ್ ಟಿ20 ಟೂರ್ನಿ ನಡೆಯಲಿದೆ. ಮಾರ್ಚ್ 8ರಿಂದ ಏಪ್ರಿಲ್ 3ರವರೆಗೆ ವಿಶ್ವ ಟ್ವೆಂಟಿ–20 ಟೂರ್ನಿ ಭಾರತದಲ್ಲಿ ಆಯೋಜನೆಗೊಳ್ಳಲಿದೆ. ನಂತರ ಏಪ್ರಿಲ್‌ 8ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ಗರಿಗೆದರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT