ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋನಿ ಶ್ರೇಷ್ಠ ನಾಯಕ: ಗಿಲ್‌ಕ್ರಿಸ್ಟ್‌

Last Updated 31 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತಕ್ಕೆ ಏಕದಿನ ಹಾಗೂ ಟಿ–20 ವಿಶ್ವಕಪ್‌ ತಂದು ಕೊಟ್ಟಿದ್ದಲ್ಲದೆ ಟೆಸ್ಟ್‌ ಕ್ರಿಕೆಟ್‌ನಲ್ಲೂ ತಂಡವನ್ನು ಮೊದಲ ಸ್ಥಾನದವರೆಗೆ ಕೊಂಡೊಯ್ದಿದ್ದ ಮಹೇಂದ್ರ ಸಿಂಗ್‌ ದೋನಿ ಒಬ್ಬ ಶ್ರೇಷ್ಠ ಹಾಗೂ ದಿಟ್ಟ ನಾಯಕ’ –ಆಸ್ಟ್ರೇಲಿಯಾದ ಮಾಜಿ ಟೆಸ್ಟ್‌ ಆಟಗಾರ ಆ್ಯಡಂ ಗಿಲ್‌ಕ್ರಿಸ್ಟ್‌ ಭಾರತ ಕ್ರಿಕೆಟ್‌ ತಂಡದ ನಾಯಕ ದೋನಿ ಅವರನ್ನು ಬಣ್ಣಿಸಿದ ಪರಿ ಇದು.

ಆಸ್ಟ್ರೇಲಿಯಾದ ವುಲನ್‌ಗಾಂಗ್‌ ವಿಶ್ವವಿದ್ಯಾಲಯ ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ದೋನಿ ಅವರ ನಾಯಕತ್ವದ ವಿರುದ್ಧ ಎದ್ದಿರುವ ವಿವಾದಗಳ ಕುರಿತು ನಾನು ಏನನ್ನೂ ಹೇಳಲಾರೆ. ಆದರೆ, ತಂಡವನ್ನು ದಿಟ್ಟತನದಿಂದ ಮುನ್ನಡೆಸುವ ಸಾಮರ್ಥ್ಯ ಅವರಲ್ಲಿದೆ. ಅಲ್ಲದೆ, ಅವರು ಭಾರತ ಕಂಡ ಅತ್ಯಂತ ಯಶಸ್ವಿ ನಾಯಕ ಎನ್ನುವುದನ್ನು ಮರೆಯುವಂತಿಲ್ಲ’ ಎಂದು ತಿಳಿಸಿದರು.

‌‘ದೋನಿ ಟೆಸ್ಟ್‌ ನಾಯಕತ್ವವನ್ನು  ವಿರಾಟ್‌ ಕೊಹ್ಲಿ ಅವರಿಗೆ ಬಿಟ್ಟುಕೊಡಬೇಕು’ ಎಂದು ಇಯಾನ್‌ ಚಾಪೆಲ್‌ ಇತ್ತೀಚೆಗಷ್ಟೇ ಹೇಳಿದ್ದರು.
‘ಹೊಸಬರೇ ಹೆಚ್ಚಾಗಿರುವ ಆಸ್ಟ್ರೇಲಿಯಾ ತಂಡಕ್ಕೆ ಮುಂದಿನ ವರ್ಷದ ವಿಶ್ವಕಪ್‌ ಗೆಲ್ಲುವ ಅವಕಾಶ ಇದೆಯೇ’ ಎಂಬ ಪ್ರಶ್ನೆ ಎದುರಾದಾಗ ಗಿಲ್‌ಕ್ರಿಸ್ಟ್‌ ರಕ್ಷಣಾತ್ಮಕವಾಗಿ ‘ಬ್ಯಾಟ್‌’ ಮಾಡಿದರು.

‘ಹೌದು, ತಂಡದಲ್ಲೀಗ ರಿಕಿ ಪಾಂಟಿಂಗ್‌ ಇಲ್ಲ. ಶೇನ್‌ ವಾರ್ನ್‌ ಸಹ ಕ್ರಿಕೆಟ್‌ಗೆ ವಿದಾಯ ಹೇಳಿ ವರ್ಷಗಳೇ ಉರುಳಿದವು. ಸಚಿನ್‌ ತೆಂಡೂಲ್ಕರ್‌ ಸಹ ನಿವೃತ್ತರಾಗಿಲ್ಲವೆ? ವೈಯಕ್ತಿಕವಾಗಿ ಆಟಗಾರರಿಗೆ ನಿವೃತ್ತಿ ಎಂಬುದಿದೆ. ತಂಡ ನಿರಂತರ. ಹಳಬರು ಹೋದರೂ ಹೊಸ ಪ್ರತಿಭೆಗಳ ಉದಯ ಆಗುತ್ತಲೇ ಇರುತ್ತದೆ. ನನ್ನ ಪ್ರಕಾರ ಪ್ರಶಸ್ತಿ ಗೆಲ್ಲುವ ನೆಚ್ಚಿನ ಐದು ತಂಡಗಳಲ್ಲಿ ಆಸ್ಟ್ರೇಲಿಯಾ ಕೂಡ ಒಂದು’ ಎಂದು ವಿವರಿಸಿದರು.

‘ಭಾರತ ತಂಡದ ಬ್ಯಾಟಿಂಗ್‌ ಲೈನ್‌ ಅಪ್‌ನಲ್ಲಿ ನನಗೆ ಯಾವುದೇ ಸಮಸ್ಯೆ ಕಾಣುತ್ತಿಲ್ಲ’ ಎಂದು ಅವರು ತಿಳಿಸಿದರು. ವುಲನ್‌ಗಾಂಗ್‌ ವಿಶ್ವವಿದ್ಯಾಲಯ ಆರಂಭಿಸಿರುವ ಬ್ರಾಡ್ಮನ್‌ ಶಿಷ್ಯ ವೇತನಕ್ಕೆ ರಾಜಸ್ತಾನದ ಕ್ರಿಕೆಟ್‌ ಆಟಗಾರ ಅಲಂಕೃತ್‌ ಜಾಂಗಿದ್‌ ಅವರ ಆಯ್ಕೆಯನ್ನು ಗಿಲ್‌ಕ್ರಿಸ್ಟ್‌ ಘೋಷಿಸಿದರು. ‘ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಸರ್‌ ಡಾನ್‌ ಬ್ರಾಡ್ಮನ್‌ ಅವರ ನೆನಪಿನಲ್ಲಿ ಸ್ಥಾಪಿಸಲಾದ ಈ ಶಿಷ್ಯ ವೇತನ ಭಾರತೀಯ ಯುವ ಪ್ರತಿಭೆಗಳಿಗೆ ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್‌ ಆಡುವ ಜತೆಗೆ ಪದವಿ ಅಧ್ಯಯನ
ನಡೆಸಲೂ ಅವಕಾಶ ಒದಗಿಸುತ್ತದೆ’ ಎಂದು ಹೇಳಿದರು.

ಶಿಷ್ಯ ವೇತನ ಪಡೆದ ಅಲಂಕೃತ್‌, ‘ಗಿಲ್‌ಕ್ರಿಸ್ಟ್‌ ಅವರೊಂದಿಗೆ ಹೀಗೆ ವೇದಿಕೆ ಹಂಚಿಕೊಳ್ಳುತ್ತೇನೆ ಎನ್ನುವುದನ್ನು ಕನಸು ಮನಸ್ಸಿನಲ್ಲೂ ಊಹಿಸಿರಲಿಲ್ಲ. ನನಗೆ ಭರಿಸಲಾಗದಷ್ಟು ಆನಂದವಾಗಿದೆ. ಬ್ಯುಸಿನೆಸ್‌ ಪದವಿಯನ್ನು ಅಧ್ಯಯನ ಮಾಡುವ ಅಭಿಲಾಷೆ ಇದೆ’ ಎಂದು ಹೇಳಿದರು. ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪೌಲ್‌ ವೆಲ್ಲಿಂಗ್ಸ್‌ ಮತ್ತು ನ್ಯೂ ಸೌತ್‌ ವೇಲ್ಸ್‌ ಸಚಿವ ಜಾನ್‌ ಅಜಾಕಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT