ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೌರ್ಜನ್ಯಕ್ಕೆ ಕೆರಳಿದ ಸದನ

ಗುಜರಾತ್‌ನಲ್ಲಿ ದಲಿತರ ಮೇಲೆ ಹಲ್ಲೆ: ಸರ್ಕಾರ–ವಿರೋಧ ಪಕ್ಷಗಳ ನಡುವೆ ವಾಗ್ವಾದ
Last Updated 21 ಜುಲೈ 2016, 0:00 IST
ಅಕ್ಷರ ಗಾತ್ರ

ನವದೆಹಲಿ: ಗುಜರಾತ್‌ನಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯಕ್ಕೆ ಸಂಬಂಧಿಸಿ ಸಂಸತ್ತಿನಲ್ಲಿ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಬುಧವಾರ ಬಿರುಸಿನ ವಾಗ್ವಾದ ನಡೆಯಿತು.

ಗಿರ್‌–ಸೋಮನಾಥ ಜಿಲ್ಲೆಯ ಊನಾ ಎಂಬಲ್ಲಿ ಕೆಲವು ದಲಿತರ ಮೇಲೆ ಇತ್ತೀಚೆಗೆ ನಡೆದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್‌, ಬಿಎಸ್‌ಪಿ ಮತ್ತು ಬಹುತೇಕ ಎಲ್ಲ ವಿರೋಧ ಪಕ್ಷಗಳು ಒಟ್ಟಾಗಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿದವು.

ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರ ಇದೆ. ಪ್ರಧಾನಿಯಾಗುವ ಮೊದಲು ನರೇಂದ್ರ ಮೋದಿ ಅವರು 12 ವರ್ಷ  ಗುಜರಾತ್‌ ಮುಖ್ಯಮಂತ್ರಿಯಾಗಿದ್ದರು. ವಿರೋಧ ಪಕ್ಷಗಳ ಸದಸ್ಯರು ಪದೇ ಪದೇ ಸಭಾಧ್ಯಕ್ಷರ ಪೀಠದ ಮುಂದೆ ಪ್ರತಿಭಟನೆ ನಡೆಸಿದ್ದರಿಂದಾಗಿ ರಾಜ್ಯಸಭೆ ಕಲಾಪವನ್ನು ಆರು ಬಾರಿ ಮುಂದೂಡಬೇಕಾಯಿತು. ಲೋಕಸಭೆಯಲ್ಲಿಯೂ ಇಂತಹುದೇ ಚಿತ್ರಣ ಇತ್ತು.

ಬಿಜೆಪಿ ಮತ್ತು ಆರ್‌ಎಸ್‌ಎಸ್ ಭಾರತವನ್ನು ದಲಿತ ಮುಕ್ತ ದೇಶವಾಗಿಸಲು ಹೊರಟಿದೆ ಎಂದು ಕಾಂಗ್ರೆಸ್ ಆರೋಪಿಸಿತು.  ಈ ಹೇಳಿಕೆಗೆ ತಿರುಗೇಟು ನೀಡಿದ ಸರ್ಕಾರ, ಕಾಂಗ್ರೆಸ್‌ ಆಳ್ವಿಕೆ ಅವಧಿಯಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯಗಳ ಅಂಕಿ ಅಂಶವನ್ನು ತೆರೆದಿಟ್ಟಿತು.

ದೌರ್ಜನ್ಯವನ್ನು ಪ್ರಸ್ತಾಪಿಸಿ ವಿರೋಧ ಪಕ್ಷ ಗದ್ದಲ ಸೃಷ್ಟಿಸಿದ ನಂತರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಘಟನೆ ‘ಅತ್ಯಂತ ದುರದೃಷ್ಟಕರ’ ಎಂದು ಹೇಳಿದರು. ಗುಜರಾತ್‌ನ ಊನಾದಲ್ಲಿ ಸತ್ತ ದನದ ಚರ್ಮ ಸುಲಿದು ತೆಗೆದ ಕೆಲವು ದಲಿತರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿದರು.

ಗುಜರಾತ್‌ನ ಆನಂದಿಬೆನ್‌ ಪಟೇಲ್‌ ಸರ್ಕಾರ ‘ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ’ ಕ್ರಮ ಕೈಗೊಂಡು ಒಂಬತ್ತು ಆರೋಪಿಗಳನ್ನು ಬಂಧಿಸಿದೆ. ಈ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ ಪ್ರಕ್ರಿಯೆ ನಡೆಯುತ್ತಿದೆ. ಸಂತ್ರಸ್ತರಿಗೆ ವೈದ್ಯಕೀಯ ನೆರವು ಮತ್ತು ಪರಿಹಾರ ನೀಡಲಾಗಿದೆ ಎಂದು ಅವರು ತಿಳಿಸಿದರು.

ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ನ ಕೆ. ಸುರೇಶ್‌ ವಿಷಯ ಪ್ರಸ್ತಾಪಿಸಿ, ಘಟನೆಯ ತನಿಖೆಗೆ ಜಂಟಿ ಸಂಸದೀಯ ಸಮಿತಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್‌ ಸದಸ್ಯರು ಸ್ಪೀಕರ್‌ ಪೀಠದ ಮುಂದೆ ಪ್ರತಿಭಟನೆ ನಡೆಸಿದರೆ ಎಲ್ಲ ವಿರೋಧ ಪಕ್ಷಗಳ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.

‘ಹಿಂಸೆ ಆರ್‌ಎಸ್‌ಎಸ್‌ನ ಕಾರ್ಯಸೂಚಿ ಮತ್ತು ಈ ಸಂಘಟನೆ ದಲಿತ ಮುಕ್ತ ಭಾರತ ನಿರ್ಮಾಣಕ್ಕೆ ಯತ್ನಿಸುತ್ತಿದೆ. ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಇದು ಬಿಜೆಪಿ ಪ್ರಾಯೋಜಿತ ದಾಳಿ. ಇಲ್ಲಿ ಏನು ನಡೆಯುತ್ತಿದೆ? ಇದು ಗುಜರಾತ್‌ ಮಾದರಿಯೇ’ ಎಂದು ಸುರೇಶ್‌ ಪ್ರಶ್ನಿಸಿದರು.

ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು ಸಮುದಾಯಗಳನ್ನು ಧ್ರುವೀಕರಿಸುವುದು ಬಿಜೆಪಿಯ ಕಾರ್ಯಸೂಚಿ. ಬಿಜೆಪಿ ಅಧಿಕಾರದಲ್ಲಿರುವ ಎಲ್ಲ ರಾಜ್ಯಗಳಲ್ಲಿಯೂ ಹೀಗೆಯೇ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು. ಕಾಂಗ್ರೆಸ್‌ ಆರೋಪವನ್ನು ಆ ಪಕ್ಷದ ವಿರುದ್ಧವೇ ತಿರುಗಿಸಲು ಯತ್ನಿಸಿದ ರಾಜನಾಥ್‌ ಸಿಂಗ್‌ ಅವರು, ಕಾಂಗ್ರೆಸ್‌ ಆಳ್ವಿಕೆ ನಡೆಸುತ್ತಿದ್ದ 1991ರಿಂದ 2001ರಲ್ಲಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವವರೆಗಿನ ಅವಧಿಗೆ ಹೋಲಿಸಿದರೆ ಈಗ ಅಲ್ಲಿ ದಲಿತರ ವಿರುದ್ಧದ ದೌರ್ಜನ್ಯ ಕಡಿಮೆಯಾಗಿದೆ ಎಂದು ಹೇಳಿದರು.  ಆದರೆ 1995ರಿಂದ ಹೆಚ್ಚಿನ ಕಾಲ ಅಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಇತ್ತು.

ದಲಿತರ ವಿರುದ್ಧದ ದೌರ್ಜನ್ಯ ‘ಸಾಮಾಜಿಕ ಕೆಡುಕು’. ಅದನ್ನು ನಿರ್ಮೂಲನ ಮಾಡಲು ಎಲ್ಲ ಪಕ್ಷಗಳೂ ಕೈಜೋಡಿಸಬೇಕು ಎಂದು ಸಿಂಗ್‌ ಕರೆ ನೀಡಿದರು.
ಗೃಹ ಸಚಿವರ ಹೇಳಿಕೆಯಿಂದ ತೃಪ್ತರಾಗದ ಕಾಂಗ್ರೆಸ್ ಮತ್ತು ಟಿಎಂಸಿ ಸದಸ್ಯರು ಸಭಾತ್ಯಾಗ ನಡೆಸಿದರು.

ಊನಾದಲ್ಲಿ ನಡೆದಿದ್ದೇನು?
ಗಿರ್‌– ಸೋಮನಾಥ ಜಿಲ್ಲೆಯ ಊನಾ ತಾಲ್ಲೂಕಿನ ಮೋಟಾ ಸಮಾದಿಯಾಲ ಎಂಬ ಗ್ರಾಮದಲ್ಲಿ ಜುಲೈ 11ರಂದು ಸತ್ತ ಹಸುವಿನ ಚರ್ಮ ಸುಲಿಯುತ್ತಿದ್ದ ನಾಲ್ಕು ಮಂದಿ ದಲಿತರ ಮೇಲೆ ಅಮಾನುಷ ಹಲ್ಲೆ ನಡೆದಿತ್ತು.

ಹಸುವನ್ನು ಕೊಂದು ಚರ್ಮ ಸುಲಿಯುತ್ತಿದ್ದರು ಎಂದು ಹಲ್ಲೆ ನಡೆಸಿದವರು ಆರೋಪಿಸಿದ್ದರು. ಆದರೆ, ಸತ್ತು ಬಿದ್ದಿದ್ದ ಹಸುವಿನ ಚರ್ಮವನ್ನು ಸುಲಿಯುತ್ತಿದ್ದೆವು ಎಂದು ಸಂತ್ರಸ್ತರು ಹೇಳಿದ್ದರು.

ದಲಿತರನ್ನು ವಾಹನಕ್ಕೆ ಕಟ್ಟಿ ಕಬ್ಬಿಣದ ರಾಡ್‌ ಮತ್ತು ದೊಣ್ಣೆಯಿಂದ ಥಳಿಸಲಾಗಿತ್ತು. ಆ ಬಳಿಕ ಅರೆಬೆತ್ತಲಾಗಿಸಿ ಊನಾ ಪಟ್ಟಣಕ್ಕೆ ಕರೆದೊಯ್ದು ಮತ್ತೆ ಥಳಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಇದುವರೆಗೆ 9 ಮಂದಿಯನ್ನು ಬಂಧಿಸಲಾಗಿದೆ.


ಇಂದು ದೌರ್ಜನ್ಯದ ಬಗ್ಗೆ ಚರ್ಚೆ
ದೇಶದ ವಿವಿಧ ಭಾಗಗಳಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಗುರುವಾರ ರಾಜ್ಯಸಭೆಯಲ್ಲಿ ಚರ್ಚೆ ನಡೆಸಲು ಕಲಾಪ ಸಲಹಾ ಸಮಿತಿ ನಿರ್ಧರಿಸಿದೆ. ಗುಜರಾತ್‌ ದೌರ್ಜನ್ಯಕ್ಕೆ ವಿರೋಧ ಪಕ್ಷಗಳು ತೋರಿದ ಆಕ್ರೋಶದಿಂದಾಗಿ ಬುಧವಾರ ಯಾವುದೇ ಕಲಾಪ ನಡೆಯಲಿಲ್ಲ. ಹಾಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT