ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೌರ್ಜನ್ಯ ಖಂಡಿಸಿ ಪ್ರತಿಭಟನೆ, ಹಿಂಸಾಚಾರ

Last Updated 20 ಜುಲೈ 2016, 23:30 IST
ಅಕ್ಷರ ಗಾತ್ರ

ಅಹಮದಾಬಾದ್‌/ ರಾಜ್‌ಕೋಟ್‌ (ಪಿಟಿಐ): ಗುಜರಾತ್‌ನ ಊನಾ ಎಂಬಲ್ಲಿ ದಲಿತ ಯುವಕರನ್ನು ಥಳಿಸಿದ ಘಟನೆ ಖಂಡಿಸಿ ವಿವಿಧ ದಲಿತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಬುಧವಾರ ಏಳು ಯುವಕರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಲ್ಲಲ್ಲಿ ಹಿಂಸಾಚಾರ ಘಟನೆ ವರದಿಯಾಗಿದೆ.

ಪ್ರತಿಭಟನೆ ಆರಂಭವಾದಾಗಿನಿಂದ ಆತ್ಮಹತ್ಯೆಗೆ ಯತ್ನಿಸಿದ ದಲಿತರ ಸಂಖ್ಯೆ 17ಕ್ಕೇರಿದೆ. ರಾಜ್‌ಕೋಟ್‌ ಜಿಲ್ಲೆಯ ಧೊರಾಜಿ ಎಂಬಲ್ಲಿ ಮೂವರು ಯುವಕರು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಅವರನ್ನು ಜುನಾಗಡದ ಸಿವಿಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೊಂಡಾಲ್‌, ಪೋರಬಂದರು ಮತ್ತು ಊನಾದಲ್ಲಿ ತಲಾ ಒಬ್ಬರು ವಿಷ ಸೇವಿಸಿ ಅಸ್ವಸ್ಥರಾದ ಘಟನೆ ನಡೆದಿದೆ. ಬತೋಡ ಪಟ್ಟಣದಲ್ಲಿ ಒಬ್ಬಾತ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ನಡೆಸುವ ಪ್ರಯತ್ನವನ್ನು ಪೊಲೀಸರು ತಡೆದಿದ್ದಾರೆ.

ದಲಿತ ಸಮುದಾಯದ ಸದಸ್ಯರು ವಿವಿಧ ನಗರ ಹಾಗೂ ಪಟ್ಟಣಗಳಲ್ಲಿ ಪ್ರತಿಭಟನಾ ಮೆರವಣಿಗೆ, ರಸ್ತೆ ತಡೆ ಮತ್ತು ಕಲ್ಲುತೂರಾಟ ನಡೆಸಿದ್ದಾರೆ. ಹಲವು ಬಸ್ಸುಗಳು ಜಖಂಗೊಂಡಿವೆ. 

ಮಿಶ್ರ ಪ್ರತಿಕ್ರಿಯೆ: ದಲಿತ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಗುಜರಾತ್‌ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೌರಾಷ್ಟ್ರ ಮತ್ತು ಉತ್ತರ ಗುಜರಾತ್‌ನ ಕೆಲವು ಭಾಗಗಳಲ್ಲಿ  ಬಂದ್‌ ಯಶಸ್ವಿಯಾಗಿದ್ದು, ಅಲ್ಲಲ್ಲಿ ಕಲ್ಲುತೂರಾಟ ಮತ್ತು ರಸ್ತೆ ತಡೆ ಘಟನೆಗಳು ವರದಿಯಾಗಿವೆ.
ಆದರೆ ರಾಜ್ಯದ ಇತರ ಭಾಗಗಳಿಗೆ ಬಂದ್‌ನ ಬಿಸಿ ತಟ್ಟಿಲ್ಲ. ಬಂದ್‌ ಕರೆ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಸಾರಿಗೆ ಸಂಸ್ಥೆಯ ಹಲವು ಬಸ್ಸುಗಳ ಓಡಾಟ ನಿಲ್ಲಿಸಲಾಗಿತ್ತು. ಅಹಮದಾಬಾದ್‌ನ ಕೆಲವು ಕಡೆಗಳಲ್ಲಿ ಪ್ರತಿಭಟನಾಕಾರರು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದ್ದಾರೆ.

ಸೌರಾಷ್ಟ್ರ ವಲಯದ ಅಮ್ರೇಲಿ ಮತ್ತು ಜುನಾಗಡ ನಗರಗಳಲ್ಲಿ ಬಂದ್‌ ಪೂರ್ಣ ಯಶಸ್ವಿಯಾಗಿದೆ. ಇಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಜುನಾಗಡದಲ್ಲಿ ಕಲ್ಲು ತೂರಾಟದಲ್ಲಿ ಕೆಲವು ಬಸ್‌ಗಳು ಜಖಂಗೊಂಡಿವೆ.

₹ 4 ಲಕ್ಷ ಪರಿಹಾರ: ಗುಜರಾತ್‌ ಮುಖ್ಯಮಂತ್ರಿ ಆನಂದಿಬೆನ್‌ ಪಟೇಲ್‌ ಅವರು ಬುಧವಾರ ಸಂತ್ರಸ್ತರ ಕುಟುಂಬ ಸದಸ್ಯರನ್ನು ಭೇಟಿಯಾಗಿ, ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಅವರು  ಹಲ್ಲೆಗೆ ಒಳಗಾದವರಿಗೆ ತಲಾ ₹ 4 ಲಕ್ಷ ಪರಿಹಾರ ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT