ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ಯುತಿ ಚಾಂದ್‌: ಮುಂದಿನ ಹಾದಿ ಏನು?

Last Updated 20 ಜುಲೈ 2014, 19:30 IST
ಅಕ್ಷರ ಗಾತ್ರ

‘ಅಂತರರಾಷ್ಟ್ರೀಯ ಕೂಟಗಳಲ್ಲಿ ಮಿಂಚಿನ ಪ್ರದರ್ಶನ ನೀಡಿ ಭಾರತಕ್ಕೆ ಪದಕ ತಂದುಕೊಡಬೇಕೆಂಬ ಗುರಿ ನನ್ನದು. ಅದನ್ನು ಈಡೇರಿಸಲು ಸತತ ಪ್ರಯತ್ನ ನಡೆಸುತ್ತೇನೆ. ಈ ಹಾದಿಯಲ್ಲಿ ಬಡತನ ಅಡ್ಡಿಯಾಗದು’
2010 ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ 26ನೇ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್‌ ಚಾಂಪಿಯನ್‌ ಷಿಪ್‌ನಲ್ಲಿ ವೈಯಕ್ತಿಕ ಪ್ರಶಸ್ತಿ ಗೆದ್ದುಕೊಂಡ ಸಂತಸದಲ್ಲಿ ಒಡಿಶಾದ ಯುವ ಅಥ್ಲೀಟ್‌ ದ್ಯುತಿ ಚಾಂದ್‌ ಹೇಳಿದ್ದ ಮಾತುಗಳಿವು. ಅಂದು ಅವರು ಬಾಲಕಿಯರ 16 ವರ್ಷ ವಯಸ್ಸಿನೊಳಗಿನವರ ವಿಭಾಗದಲ್ಲಿ ವೈಯಕ್ತಿಕ ಪ್ರಶಸ್ತಿ ಗೆದ್ದುಕೊಂಡಿದ್ದರು.

ಕಠಿಣ ಪ್ರಯತ್ನ ಮುಂದುವರಿಸಿದ್ದ ದ್ಯುತಿ ಅಲ್ಪ ಸಮಯದಲ್ಲೇ ದೇಶದ ಪ್ರತಿಭಾನ್ವಿತ ಅಥ್ಲೀಟ್‌ ಆಗಿ ಬೆಳೆದು ನಿಂತರು. ಮಹಿಳೆಯರ 100 ಮೀ. ಓಟದಲ್ಲಿ ರಾಷ್ಟ್ರೀಯ ಚಾಂಪಿಯನ್‌ ಕೂಡಾ ಎನಿಸಿಕೊಂಡರು. ತೈಪೆಯಲ್ಲಿ ಇತ್ತೀಚೆಗೆ ನಡೆದಿದ್ದ ಏಷ್ಯನ್‌ ಜೂನಿಯರ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ 200 ಮೀ. ಮತ್ತು 4X400 ಮೀ. ರಿಲೇ ಸ್ಪರ್ಧೆಯಲ್ಲಿ ದ್ಯುತಿ ಚಿನ್ನ ಜಯಿಸಿದ್ದರು. 18ರ ಹರೆಯದ ಈ ಅಥ್ಲೀಟ್‌ ಭಾರತದ ಭವಿಷ್ಯದ ತಾರೆ ಎಂದೇ ಬಿಂಬಿತವಾಗಿದ್ದರು.

ಗ್ಲಾಸ್ಗೊದಲ್ಲಿ ಇದೇ ವಾರ ಆರಂಭವಾಗಲಿರುವ ಕಾಮನ್‌ವೆಲ್ತ್‌ ಕೂಟದಲ್ಲಿ ಪಾಲ್ಗೊಳ್ಳಲು ಭಾರತ ಅಥ್ಲೆಟಿಕ್‌ ತಂಡದಲ್ಲಿ ದ್ಯುತಿ ಸ್ಥಾನ ಪಡೆದಿದ್ದರು. ಚೊಚ್ಚಲ ಕಾಮನ್‌ ವೆಲ್ತ್‌ ಕೂಟದಲ್ಲಿ ಉತ್ತಮ ಪ್ರದರ್ಶನ ನೀಡುವ ಕನಸು ಕಂಡಿದ್ದರು. ಮಾತ್ರವಲ್ಲ, ಅದಕ್ಕಾಗಿ ಸಿದ್ಧತೆಯನ್ನೂ ನಡೆಸಿದ್ದರು. ಆದರೆ ಕಾಮನ್‌ವೆಲ್ತ್‌ ಕೂಟದಲ್ಲಿ ಪಾಲ್ಗೊಳ್ಳುವ ಅವಕಾಶ ಅನಿರೀಕ್ಷಿತವಾಗಿ ತಪ್ಪಿಹೋಗಿದೆ. ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಮಹಿಳೆಯರ ವಿಭಾಗದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಂತೆಯೇ ಇಲ್ಲ!

ಒಡಿಶಾದ ಜಾಜ್‌ಪುರ ಜಿಲ್ಲೆಯ ಗೋಪಾಲಪುರದಲ್ಲಿ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದು ಸತತ ಪರಿಶ್ರಮದಿಂದ ಈ ಹಂತ ಏರಿದ್ದ ದ್ಯುತಿಗೆ ಈಗ ದಿಕ್ಕೇ ತೋಚದಂತಾಗಿದೆ.ಯುವ ಅಥ್ಲೀಟ್‌ ತನ್ನದಲ್ಲದ ತಪ್ಪಿಗೆ ಅವಮಾನ ಎದುರಿಸುವಂತಾಗಿದೆ. ಪುರುಷರ ದೇಹದಲ್ಲಿರುವ ಹಾರ್ಮೋನ್‌ಗಳು ಅಧಿಕ ಸಂಖ್ಯೆಯಲ್ಲಿರುವುದು ದ್ಯುತಿಗೆ ಮುಳುವಾಗಿ ಪರಿಣಮಿಸಿದೆ.

ಭಾರತ ಅಥ್ಲೆಟಿಕ್‌ ಫೆಡರೇಷನ್‌ (ಎಎಫ್‌ಐ) ಸೂಚನೆಯಂತೆ ಭಾರತ ಕ್ರೀಡಾ ಪ್ರಾಧಿಕಾರ ದ್ಯುತಿ ಅವರನ್ನು ಇತ್ತೀಚೆಗೆ ಪರೀಕ್ಷೆಗೆ ಒಳಪಡಿಸಿತ್ತು. ದೇಹದಲ್ಲಿ ಟೆಸ್ಟೊಟೊರೇನ್‌ನ ಅಂಶ ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿರುವುದು ಈ ವೇಳೆ ಕಂಡುಬಂದಿದೆ.
ಇದನ್ನು ವೈದ್ಯಕೀಯ ಭಾಷೆಯಲ್ಲಿ ‘ಫಿಮೇಲ್‌ ಹೈಪರ್‌ ಆಂಡ್ರೋಜೆನಿಸಮ್‌’ (ಪುರುಷರ ದೇಹದಲ್ಲಿರುವ ಹಾರ್ಮೋನ್‌ಗಳು ನಿಗದಿತ ಮಟ್ಟಕ್ಕಿಂತ ಅಧಿಕವಾಗಿರುವುದು) ಎನ್ನುವರು.

ಆದರೆ ದ್ಯುತಿ ವೃತ್ತಿಜೀವನಕ್ಕೆ ಪೂರ್ಣ ವಿರಾಮ ಬಿದ್ದಿಲ್ಲ. ಭವಿಷ್ಯದಲ್ಲಿ ಅವರಿಗೆ ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಲು ಸಾಧ್ಯ. ಅದಕ್ಕಾಗಿ ಚಿಕಿತ್ಸೆ ಪಡೆದು ದೇಹದಲ್ಲಿರುವ ಆಂಡ್ರೋಜನ್‌ ಪ್ರಮಾಣವನ್ನು ಕಡಿಮೆಮಾಡುವುದು ಅಗತ್ಯ. ನೈಸರ್ಗಿಕವಾಗಿ ಅಥವಾ ಆನುವಂಶಿಕ ಕಾರಣಗಳಿಂದ ದ್ಯುತಿ ದೇಹದಲ್ಲಿ ಆಂಡ್ರೋಜನ್‌ ಪ್ರಮಾಣ ಹೆಚ್ಚಾಗಿರುವ ಸಾಧ್ಯತೆಯಿದೆ. ದ್ಯುತಿ ಚಿಕಿತ್ಸೆ ಪಡೆದು ಮತ್ತೆ ಟ್ರ್ಯಾಕ್‌ಗೆ ಇಳಿದರೂ ಅವರನ್ನು ಅನುಮಾನದಿಂದಲೇ ನೋಡಬಹುದು. ಒಮ್ಮೆ ಆರೋಪಕ್ಕೆ ಒಳಗಾದರೆ ಅದರಿಂದ ಹೊರಬರುವುದು ಕಷ್ಟ. ಆದ್ದರಿಂದ ಭಾರತ ಅಥ್ಲೆಟಿಕ್‌ ಫೆಡರೇಷನ್‌ ಇಲ್ಲಿ ಅಲ್ಪ ಎಚ್ಚರ ವಹಿಸಬೇಕಿತ್ತು.

ದ್ಯುತಿ ಅವರನ್ನು ಪರೀಕ್ಷೆಗೆ ಒಳಪಡಿಸಿದ ವಿವರವನ್ನು ರಹಸ್ಯವಾಗಿ ಇಡಬಹುದಿತ್ತು. ವರದಿ ಬಹಿರಂಗವಾಗಿರುವ ಕಾರಣ ಯುವ ಅಥ್ಲೀಟ್‌ ಮುಜುಗರ ಅನುಭವಿಸುವಂತಾಗಿದೆ. ಇದರಿಂದ ಮಾನಸಿಕವಾಗಿ ಸಾಕಷ್ಟು ಕುಗ್ಗಿರುವುದು ನಿಜ. ಪರೀಕ್ಷೆಗೆ ಒಳಪಡಿಸುವಾಗ ಅದರ ಹಿಂದಿನ ಉದ್ದೇಶ ಏನು ಎಂಬುದನ್ನು ಕೂಡಾ ಆಕೆಗೆ ತಿಳಿಸುವ ಸೌಜನ್ಯ ತೋರಲಿಲ್ಲ. ಪತ್ರಿಕೆಗಳಲ್ಲಿ ವರದಿ ಬಂದ ಬಳಿಕವೇ ದ್ಯುತಿಗೆ ನಡೆದಿರುವ ಬೆಳವಣಿಗೆ ತಿಳಿದಿದೆ.

ಸಂಬಂಧಪಟ್ಟ ಅಧಿಕಾರಿಗಳು ಕೂಡಾ ನೆರವಿಗೆ ಬಾರದೇ ಇರುವುದು ದ್ಯುತಿ ಅವರ ಸಂಕಷ್ಟವನ್ನು ಇಮ್ಮಡಿಗೊಳಿಸಿದೆ. ಒಡಿಶಾ ಸರ್ಕಾರ ಮಾತ್ರ ಈ ಯುವ ಅಥ್ಲೀಟ್‌ಗೆ ನೆರವು ನೀಡಲು ಮುಂದಾಗಿರುವುದು ಮೆಚ್ಚುವಂತಹ ಅಂಶ. ಆದರೆ ದ್ಯುತಿ ಭರವಸೆಯನ್ನು ಕೈಬಿಟ್ಟಿಲ್ಲ. ‘ನನಗೆ ದುಃಖವಾಗಿದೆ. ವೈದ್ಯಕೀಯ ಪರೀಕ್ಷೆಯನ್ನು ಮುಂಚೆಯೇ ಮಾಡಿದ್ದರೆ, ಸೂಕ್ತ ಚಿಕಿತ್ಸೆ ಪಡೆದು ಕಾಮನ್‌ವೆಲ್ತ್‌ ಕೂಟದಲ್ಲಿ ಪಾಲ್ಗೊಳ್ಳಬಹುದಿತ್ತು’ ಎಂಬುದು ಅವರ ಹೇಳಿಕೆ. ಎಳೆಹರೆಯದಲ್ಲೇ ಟ್ರ್ಯಾಕ್‌ನಲ್ಲಿ ಮಿಂಚು ಹರಿಸಿರುವ ಅಥ್ಲೀಟ್‌ಗೆ ಇದೀಗ ಅಡ್ಡಿ ಎದುರಾಗಿದೆ. ಎದುರಾಳಿಗಳನ್ನು ಹಿಮ್ಮೆಟ್ಟಿಸುವ ರೀತಿಯಲ್ಲೇ ಈ ತಡೆಯನ್ನು ದಾಟಿ ಮುನ್ನುಗ್ಗುವ ಛಲವನ್ನು ದ್ಯುತಿ ತೋರಿಸಬೇಕಿದೆ.

ಶಾಂತಿ, ಪಿಂಕಿ ಪ್ರಕರಣ
ದ್ಯುತಿಗೆ ಈಗ ಎದುರಾಗಿರುವ ಸಮಸ್ಯೆ ಈ ಹಿಂದೆ ಕೆಲವು ಅಥ್ಲೀಟ್‌ಗಳು ಎದುರಿಸಿದ್ದಾರೆ. ಭಾರತದ ಶಾಂತಿ ಸೌಂದರಾಜನ್‌, ಪಿಂಕಿ ಪ್ರಾಮಾಣಿಕ್‌ ಮತ್ತು ದಕ್ಷಿಣ ಆಫ್ರಿಕಾದ ಕಾಸ್ಟರ್‌ ಸೆಮನ್ಯಾ ಅವರಲ್ಲಿ ಪ್ರಮುಖರು. ಆದರೆ ದ್ಯುತಿ ಪ್ರಕರಣ ಇವರಿಗಿಂತ ಭಿನ್ನವಾ ದುದು. ಏಕೆಂದರೆ ಶಾಂತಿ , ಪಿಂಕಿ ಮತ್ತು ಸೆಮೆನ್ಯಾ ಅವರನ್ನು ‘ಲಿಂಗ ಪರೀಕ್ಷೆ’ಗೆ ಒಳಪಡಿಸಲಾಗಿತ್ತು.

2006ರ ದೋಹಾ ಏಷ್ಯನ್‌ ಕ್ರೀಡಾಕೂಟದ 800 ಮೀ. ಓಟದಲ್ಲಿ ಬೆಳ್ಳಿ ಜಯಿಸಿದ್ದ ಶಾಂತಿ ‘ಮಹಿಳೆ ಅಲ್ಲ’ ಎಂಬ ಆರೋಪಕ್ಕೆ ಗುರಿ ಯಾಗಿದ್ದರು. ಲಿಂಗ ಪರೀಕ್ಷೆಯಲ್ಲಿ ಇದು ಸಾಬೀತಾ ಗಿದ್ದ ಕಾರಣ ಪದಕವನ್ನು ವಾಪಸ್‌ ಪಡೆಯ ಲಾಗಿತ್ತು. ಅನಂತರ ಅವರು ಕಣಕ್ಕಿಳಿಯಲೇ ಇಲ್ಲ. ಆ ಬಳಿಕ ಸಾಕಷ್ಟು ಸಂಕಷ್ಟ ಎದುರಿಸಿದ್ದ ಈ ಆಥ್ಲೀಟ್‌ಗೆ ಕೇಂದ್ರ ಸರ್ಕಾರ ನೆರವು ನೀಡಿತ್ತು. ಸರ್ಕಾರದ ಸಹಾಯದಿಂದಾಗಿ ಕೋಚ್‌ ಆಗಿ ಕಾರ್ಯನಿರ್ವಹಿಸುವ ಅರ್ಹತೆ ಪಡೆದುಕೊಂಡಿದ್ದಾರೆ.

ಶಾಂತಿ ಅವರು ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಲ್ಲಿ (ಎನ್‌ಐಎಸ್) ಅಥ್ಲೆಟಿಕ್ಸ್ ವಿಭಾಗದಲ್ಲಿ  ಡಿಪ್ಲೊಮಾ ಕೋರ್ಸ್ ಯಶಸ್ವಿಯಾಗಿ ಪೂರೈಸಿದ್ದರು. ಏಷ್ಯನ್‌ ಮತ್ತು ಕಾಮನ್‌ವೆಲ್ತ್‌ ಕೂಟದಲ್ಲಿ ಪದಕ ಗೆದ್ದಿದ್ದ ಪಿಂಕಿ ಕೂಡಾ ಇದೇ ವಿವಾದಕ್ಕೆ ಸಿಲುಕಿದ್ದರು. ‘ಪಿಂಕಿ ಮಹಿಳೆಯಲ್ಲ. ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾನೆ’ ಎಂದು ಪಿಂಕಿ ಜೊತೆ ವಾಸಿಸುತ್ತಿದ್ದ ಮಹಿಳಾ ಅಥ್ಲೀಟ್‌ವೊಬ್ಬಳು ದೂರು ನೀಡಿದ್ದರು. ಲಿಂಗ ಪರೀಕ್ಷೆಯಲ್ಲಿ ಪಿಂಕಿ ಪುರುಷ ಎಂಬುದು ಸಾಬೀತಾಗಿತ್ತು.

ಸೆಮೆನ್ಯಾ 2009 ರಲ್ಲಿ ಬರ್ಲಿನ್‌ನಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ 800 ಮೀ. ಓಟದಲ್ಲಿ ಸ್ವರ್ಣ ಜಯಿಸಿದ್ದರು. ಆದರೆ ಈ ಅಥ್ಲೀಟ್‌ನ ಲಿಂಗದ ಬಗ್ಗೆ ಅನುಮಾನ ಎದ್ದಿತ್ತು. ಇದರಿಂದ ವಿಶ್ವ ಅಥ್ಲೆಟಿಕ್‌ ಫೆಡರೇಷನ್‌ ‘ಲಿಂಗ ಪರೀಕ್ಷೆ’ಗೆ ಗುರಿಪಡಿಸಿತ್ತು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಆ ಬಳಿಕ ಮಹಿಳಾ ವಿಭಾಗದಲ್ಲಿ ಸ್ಪರ್ಧಿಸಲು ಸೆಮೆನ್ಯಾಗೆ ಅನುಮತಿ ನೀಡಿತ್ತು. ಆದರೆ ಪರೀಕ್ಷೆಯ ವರದಿಯನ್ನು ಮಾತ್ರ ಬಹಿರಂಗಪಡಿಸಿಲ್ಲ. ಸೆಮೆನ್ಯಾ ಟ್ರ್ಯಾಕ್‌ನಲ್ಲಿ ಮತ್ತೆ ಮಿಂಚು ಹರಿಸಿದ್ದರಲ್ಲದೆ, ಲಂಡನ್‌ ಒಲಿಂಪಿಕ್ಸ್‌ನ 800 ಮೀ. ಓಟದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT