ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರಾವಿಡ ಪಕ್ಷಗಳಿಗೆ ಸವಾಲು

ತಮಿಳುನಾಡು ಸೇರಿ 11 ರಾಜ್ಯಗಳ 117 ಕ್ಷೇತ್ರಗಳಲ್ಲಿ ಇಂದು ಚುನಾವಣೆ
Last Updated 23 ಏಪ್ರಿಲ್ 2014, 19:37 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿಯ ಜೊತೆಗೆ ಪ್ರಾದೇಶಿಕ ಪಕ್ಷಗಳಾದ ಎನ್‌ಸಿಪಿ, ಶಿವಸೇನೆ­, ದ್ರಾವಿಡ ಪಕ್ಷ­ಗಳಾದ ಎಐಎ­ಡಿಎಂಕೆ, ಡಿಎಂಕೆಗಳಿಗೂ ಮಹತ್ವದ್ದಾಗಿರುವ ಆರನೇ ಹಂತದ ಮತದಾನ ಗುರುವಾರ ನಡೆಯಲಿದೆ.

ತಮಿಳುನಾಡಿನ ಎಲ್ಲ 39 ಲೋಕ­ಸಭಾ ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ಪೂರ್ಣಗೊಳ್ಳಲಿದೆ. ಈ ಬಾರಿಯ ಚುನಾವಣೆ ತಮಿಳುನಾಡಿನ ದ್ರಾವಿಡ ಪಕ್ಷಗಳಿಗೆ ಸವಾಲಾಗುವ ಸಾಧ್ಯತೆಯೂ ಇದೆ.

ತಮಿಳು­ನಾಡಿನಲ್ಲಿ ಬಿಜೆಪಿ ಆರು ಪಕ್ಷಗಳ ಮೈತ್ರಿಕೂಟವನ್ನು ರೂಪಿಸಿ­ಕೊಂಡಿದೆ. ಈ ಕೂಟ ಅಲ್ಲಿನ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿ­ಎಂಕೆಯ ಪ್ರಾಬ­ಲ್ಯ­ವನ್ನು ಮುರಿಯ­ಬಹುದೇ ಎಂಬುದು ಈ ಹಂತದ ಪ್ರಮುಖ ಕುತೂ­ಹಲಗಳಲ್ಲಿ ಒಂದು.

ಈ ಹಂತದಲ್ಲಿ 11 ರಾಜ್ಯಗಳ 117 ಲೋಕ­ಸಭಾ ಕ್ಷೇತ್ರಗಳನ್ನು  ಒಳ­ಗೊಂಡಿದ್ದು, 2,076 ಅಭ್ಯರ್ಥಿಗಳ ಹಣೆಬರಹವನ್ನು 18 ಕೋಟಿ ಮತ­ದಾರರು ನಿರ್ಧರಿಸಲಿದ್ದಾರೆ.

16ನೇ ಲೋಕಸಭೆ ಚುನಾವಣೆಯ ಒಂಬತ್ತು ಹಂತಗಳ ಪೈಕಿ ಇದು ಎರ­ಡನೇ ಅತ್ಯಂತ ದೊಡ್ಡ ಹಂತದ ಚುನಾವಣೆ. 

ತಮಿಳುನಾಡಿನ ಪ್ರಮುಖರು: ಕಳೆದ ಚುನಾ­ವಣೆಯಲ್ಲಿ ಡಿಎಂಕೆ ಮೈತ್ರಿ­ಯಿಂದಾಗಿ 8 ಸ್ಥಾನ ಗೆದ್ದಿದ್ದ   ಕಾಂಗ್ರೆಸ್‌ ಈ ಬಾರಿ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ.

ದಯಾನಿಧಿ ಮಾರನ್‌ (ಚೆನ್ನೈ ಕೇಂದ್ರ), 2ಜಿ ಹಗರಣದ ಆರೋಪಿ ಎ. ರಾಜಾ (ನೀಲಗಿರಿ), ಡಿಎಂಕೆ ನಾಯಕ ಟಿ.ಆರ್‌. ಬಾಲು, ಕೇಂದ್ರ ಹಣಕಾಸು ಸಚಿವ ಚಿದಂಬರಂ ಅವರ ಪುತ್ರ ಕಾರ್ತಿ (ಶಿವಗಂಗಾ), ಕೇಂದ್ರ ಸಚಿವ ವಿ. ನಾರಾಯಣಸ್ವಾಮಿ (ಪುದುಚೇರಿ) ಮುಂತಾದವರು ಕಣದಲ್ಲಿದ್ದಾರೆ.

ಮುಂಬೈನ ಆರು ಕ್ಷೇತ್ರಗಳು: ಗುರು­ವಾರ ಮತದಾನ ನಡೆಯಲಿರುವ ಪ್ರತಿ­ಷ್ಠಿತರ ಜಿದ್ದಾಜಿದ್ದಿಯ ಇನ್ನೊಂದು ರಾಜ್ಯ ಮಹಾರಾಷ್ಟ್ರ.

ರಾಜ್ಯದ 19 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಅದರಲ್ಲಿ ಮುಂಬೈ ನಗರದ ಆರು ಕ್ಷೇತ್ರಗಳೂ ಸೇರಿವೆ. ಈ ಆರೂ ಕ್ಷೇತ್ರಗಳು ಸದ್ಯ ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿಕೂಟದ ಕೈಯಲ್ಲಿವೆ.

ಕೇಂದ್ರ ಸಚಿವ ಮಿಲಿಂದ್‌ ದೇವ್ರಾ, ಕಾಂಗ್ರೆಸ್‌ ಪ್ರಿಯಾ ದತ್‌, ಗುರುದಾಸ್‌ ಕಾಮತ್‌, ಎಎಪಿ ಅಭ್ಯರ್ಥಿಗಳಾದ ಸಾಮಾ­­ಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್‌ ಮತ್ತು ಮೀರಾ ಸನ್ಯಾಲ್‌ ಮುಂಬೈಯಿಂದ ಸ್ಪರ್ಧಿಸುತ್ತಿರುವ ಪ್ರಮುಖರು.

ಮುಲಾಯಂ ಮತ್ತು ಸೊಸೆ ಡಿಂಪಲ್‌ ಕಣದಲ್ಲಿ: ಉತ್ತರ ಪ್ರದೇಶದ 12 ಮತ್ತು ಬಿಹಾರದ ಏಳು ಕ್ಷೇತ್ರಗಳಿಗೂ ಮತದಾನ ನಡೆಯಲಿದೆ. ಉತ್ತರ ಪ್ರದೇ­ಶದಲ್ಲಿ ಇದು ನಾಲ್ಕನೇ ಹಂತದ ಮತ­ದಾನ. ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ (ಮೈನ್‌ಪುರಿ), ಅವರ ಸೊಸೆ ಡಿಂಪಲ್‌ ಯಾದವ್‌ (ಕನೌಜ್‌) ಮತ್ತು ವಿದೇಶಾಂಗ ಸಚಿವ ಸಲ್ಮಾನ್‌ ಖುರ್ಷಿದ್‌ (ಫರೂಖಾ­ಬಾದ್‌) ಕಣದಲ್ಲಿರುವ  ಪ್ರಮುಖರು.
ಆರ್‌ಎಲ್‌ಡಿ ಮುಖ್ಯಸ್ಥ ಅಜಿತ್‌ ಸಿಂಗ್‌ ಅವರ ಪುತ್ರ ಜಯಂತ್‌ ಅವರು ಮಥುರಾದಲ್ಲಿ ಬಾಲಿವುಡ್‌ ‘ಕನಸಿನ ಕನ್ಯೆ’ ಬಿಜೆಪಿಯ ಹೇಮಾಮಾಲಿನಿ ಅವ­ರಿಂದ ಕಠಿಣ ಸ್ಪರ್ಧೆ ಎದುರಿಸುತ್ತಿದ್ದಾರೆ.

ಮಧ್ಯಪ್ರದೇಶದಲ್ಲಿ ಸುಷ್ಮಾ, ಸುಮಿತ್ರಾ: ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್‌ ಅವರು ಸ್ಪರ್ಧಿಸುತ್ತಿರುವ ಮಧ್ಯ­ಪ್ರದೇಶದ ವಿಧಿಶಾ ಕ್ಷೇತ್ರದಲ್ಲಿಯೂ ಗುರುವಾರವೇ ಮತದಾನ ನಡೆಯ­ಲಿದೆ. ಇಂಧೋರ್‌ನಿಂದ ಸ್ಪರ್ಧಿಸು­ತ್ತಿರುವ ಬಿಜೆಪಿಯ ಹಿರಿಯ ನಾಯಕಿ ಸುಮಿತ್ರಾ ಮಹಾಜನ್‌ ಸತತ ಎಂಟನೇ ಜಯವನ್ನು ಎದುರು ನೋಡುತ್ತಿದ್ದಾರೆ. 

ಹಾಲಿ ಲೋಕಸಭೆಯಲ್ಲಿ ಬಿಜೆಪಿಯ ಏಕೈಕ ಸಂಸದರಾಗಿರುವ ಶಹನವಾಜ್‌ ಹುಸೇನ್‌ ಬಿಹಾರದ ಬಾಗಲ್ಪುರದಲ್ಲಿ ಕಣದಲ್ಲಿದ್ದಾರೆ. ಎನ್‌ಸಿಪಿ ಪ್ರಧಾನ ಕಾರ್ಯ­ದರ್ಶಿ ತಾರೀಕ್‌ ಅನ್ವರ್‌, ಆರ್‌ಜೆಡಿ ನಾಯಕ ಮೊಹಮ್ಮದ್‌ ತಸ್ಲೀಮುದ್ದೀನ್‌ ಮುಂತಾದವರ ಅದೃಷ್ಟ ನಿರ್ಧಾರವಾಗಲಿದೆ.

ಪ್ರಣವ್‌ ಪುತ್ರ: ಪಶ್ಚಿಮ ಬಂಗಾಳದ ಆರು ಕ್ಷೇತ್ರಗಳಿಗೆ ಮತದಾನ ನಡೆಯ­ಲಿದ್ದು, ಕಣದಲ್ಲಿರುವ ಹುರಿಯಾಳು­ಗಳಲ್ಲಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಪುತ್ರ ಕಾಂಗ್ರೆಸ್‌ನ ಅಭಿಜಿತ್‌  ಮುಖರ್ಜಿ ಸೇರಿದ್ದಾರೆ. ರಾಷ್ಟ್ರಪತಿ­ಯಾಗಿ ಆಯ್ಕೆಯಾದ ಪ್ರಣವ್‌ ಮುಖರ್ಜಿ ರಾಜೀನಾಮೆಯಿಂದ ತೆರ-ವಾಗಿದ್ದ ಜಂಗೀಪುರದಲ್ಲಿ 2012ರಲ್ಲಿ ಅಭಿಜಿತ್‌ ಕೇವಲ 2,536 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಗುರುವಾರ ಮತದಾನ ನಡೆಯ­ಲಿರುವ ಪಶ್ಚಿಮ ಬಂಗಾಳದ ಆರು ಕ್ಷೇತ್ರಗಳ ಪೈಕಿ ಐದರಲ್ಲಿ 2009ರ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯ­ಗಳಿಸಿತ್ತು. ಆದರೆ ಆಗ ಕಾಂಗ್ರೆಸ್‌ ಮತ್ತು ಟಿಎಂಸಿ ನಡುವೆ ಮೈತ್ರಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT