ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿಚಕ್ರ ವಾಹನ ಏಜೆನ್ಸಿ ಆರಂಭಿಸುವಿರಾ?

Last Updated 24 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ದೇಶದ ಕಾರು, ದ್ವಿಚಕ್ರ ವಾಹನ ಮಾರಾಟದಲ್ಲಿ ಚೇತರಿಕೆ ಕಂಡುಬಂದಿದೆ... ದ್ವಿಚಕ್ರ ವಾಹನ ತಯಾರಿಕಾ ಕಂಪೆನಿಗಳು 2014ರ ಡಿಸೆಂಬರ್‌ನಲ್ಲಿ ಒಟ್ಟು 12.12 ಲಕ್ಷ ದ್ವಿಚಕ್ರ ವಾಹನ ಮಾರಾಟ ಮಾಡುವ ಮೂಲಕ ಶೇ 4.30ರಷ್ಟು ಪ್ರಗತಿ ಸಾಧಿಸಿವೆ!
–ಇವು ಕಾರು ಮತ್ತು ದ್ವಿಚಕ್ರ ವಾಹನ ಮಾರಾಟ ಕ್ಷೇತ್ರದಲ್ಲಿ ಆಗಾಗ ಕೇಳಿ ಬರುವ ಮಾತುಗಳು.

ಹೌದು, ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಬಹಳ ಜೋರಾಗಿ ಸಾಗಿದೆ. ದೇಶದಲ್ಲಿನ ಪ್ರಮುಖ ದ್ವಿಚಕ್ರ ವಾಹನ ಕಂಪೆನಿಗಳು ಹೊಸ ಹೊಸ ಮಾದರಿ ವಾಹನಗಳನ್ನು ಮಾರುಕಟ್ಟೆಗೆ ನಿರಂತರವಾಗಿ ಪರಿಚಯಿಸುತ್ತಲೇ ಇವೆ. ಅಷ್ಟೇ ಅಲ್ಲ, ಜಿಲ್ಲಾ ಕೇಂದ್ರದಿಂದ ಆರಂಭಿಸಿ ತಾಲ್ಲೂಕು ಕೇಂದ್ರ, ಹೋಬಳಿಗಳ ಮಟ್ಟದಲ್ಲಿಯೂ ಷೋರೂಂಗಳನ್ನು ಆರಂಭಿಸಲು ಮುಂದಾಗುತ್ತಿವೆ. ಆ ಮೂಲಕ ಪಟ್ಟಣ ಮತ್ತು ಗ್ರಾಮೀಣ ಭಾಗದ ಯುವ ಜನರಿಗೂ ಉದ್ಯಮಿಗಳಾಗುವ ಅವಕಾಶವನ್ನು ಕಲ್ಪಿಸಿಕೊಡುತ್ತಿವೆ.

ಇದರಿಂದ ಒಂದೆಡೆ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿಗಳಿಗೆ ಮಾರುಕಟ್ಟೆ ವಿಸ್ತರಣೆಗೆ ವಿಪುಲ ಅವ ಕಾಶಗಳು ಲಭ್ಯವಾಗುತ್ತಿವೆ. ಆ ಮೂಲಕ ಮೋಟಾರ್‌ ಬೈಕ್‌, ಸ್ಕೂಟರ್‌ ತಯಾರಿಕಾ ಕಂಪೆನಿಗಳು ಪ್ರಗತಿ ಕಾಣುತ್ತಿವೆ.

ಇನ್ನೊಂದೆಡೆ 2 ಮತ್ತು 3ನೇ ಹಂತದ ಪಟ್ಟಣಗಳು, ಹೋಬಳಿಗಳಲ್ಲಿ ಮೋಟಾರ್‌ಬೈಕ್‌, ಸ್ಕೂಟರ್‌ ಷೋರೂಂಗಳನ್ನು ಕಂಪೆನಿಗಳು ತೆರೆಯುವ ಮೂಲಕ ಉದ್ಯೋಗಾವಕಾಶವೂ ಸೃಷ್ಟಿಯಾಗುತ್ತಿವೆ.

‘ಉಳ್ಳವರು ಮಾತ್ರವೇ ಷೋರೂಂ ಆರಂಭಿಸ ಬಹುದು’ ಎಂಬ ಮಾತು ಈಗ ಹಳತಾಗಿದೆ. ಒಂದಿಷ್ಟು ಆಸಕ್ತಿ, ಉತ್ಸಾಹ, ರೂ8ಲಕ್ಷದಿಂದ ರೂ10 ಲಕ್ಷದಷ್ಟು ಬಂಡವಾಳ ಇದ್ದಲ್ಲಿ ಹೋಬಳಿ ಮಟ್ಟದಲ್ಲಿ ಬಹಳ ಸುಲಭದಲ್ಲಿ ದ್ವಿಚಕ್ರ ವಾಹನ ಷೋರೂಂ ಆರಂಭಿಸ ಬಹುದಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳು ಕೂಡ ಯುವ ಜನರ ಈ ಪ್ರಯತ್ನಕ್ಕೆ ಬೆಂಬಲವಾಗಿ ನಿಂತು ಅಗತ್ಯ ವಾದಷ್ಟು ಸಾಲವನ್ನು ಒದಗಿಸುವ ಮೂಲಕ ಉದ್ಯಮಿ ಗಳಾಗಲು ಉತ್ತೇಜನ ನೀಡುತ್ತಿವೆ.

ಜಾಗ, ಬಂಡವಾಳ ಎಷ್ಟು ಬೇಕು?
‘ಷೋರೂಂ ಆರಂಭಿಸಲು ಕನಿಷ್ಠ 2,500ರಿಂದ 3,000 ಚದರ ಅಡಿ ನಿವೇಶನ ಇರಲೇಬೇಕು. ಜಿಲ್ಲಾ ಮಟ್ಟದಲ್ಲಿ ಕನಿಷ್ಠ 10 ಸಾವಿರ ಚದರ ಅಡಿ ಇದ್ದರೆ ಉತ್ತಮ. 30x30 ಅಡಿಗಳ ವಿಸ್ತೀರ್ಣದ ಷೋರೂಂ, ವಾಹನ ದುರಸ್ತಿಗೆ ಪ್ರತ್ಯೇಕ ಕಾರ್ಯಾಗಾರ ಇರಬೇಕು. ಹೊಸ ವಾಹನಗಳ ನಿಲುಗಡೆಗೂ ಸಾಕಷ್ಟು ದೊಡ್ಡ ಸ್ಥಳಾವಕಾಶ ಇರಬೇಕು. ಹೀಗಾಗಿ, ಸ್ವಂತ ಜಾಗವಿದ್ದರೆ ಉತ್ತಮ’ ಎಂದು ಈ ವಲಯದಲ್ಲಿ ಎರಡು ದಶಕಗ ಳಿಂದ ದ್ವಿಚಕ್ರ ವಾಹನ ಮಾರಾಟ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಕಲಬುರ್ಗಿಯ ಉದ್ಯಮಿ ಡಿ.ಬಿ.ಕುಲಕರ್ಣಿ ಹೇಳುತ್ತಾರೆ.

ಗುತ್ತಿಗೆ ಆಧಾರದಲ್ಲಿಯೂ ನಿವೇಶನವನ್ನು ಪಡೆದು ಷೋರೂಂ ಆರಂಭಿಸಬಹುದು. ಒಮ್ಮೆ ವ್ಯಾಪಾರ ಕುದುರಿ ಷೋರೂಂಗೆ ಜನಪ್ರಿಯತೆ ಬಂದ ನಂತರ ಗುತ್ತಿಗೆ ಅವಧಿ ಕೊನೆಗೊಂಡು ಜಾಗ ಬದಲಿಸಬೇಕಾಗಿ ಬಂದರೆ ಕಷ್ಟ. ಹಾಗಾಗಿ ಸ್ವಂತ ನಿವೇಶನವಿದ್ದರೆ ಬಹಳ ಉತ್ತಮ.
‘ಷೋರೂಂನ ಒಳಾಂಗಣ ವಿನ್ಯಾಸಕ್ಕೆ ಕನಿಷ್ಠ ರೂ6 ಲಕ್ಷವಾದರೂ ಬೇಕಾಗುತ್ತದೆ. ವಾಹನಗಳ ಬಿಡಿಭಾಗ ಗಳನ್ನು ಖರೀದಿಸಿ ಇಟ್ಟುಕೊಳ್ಳಲು ರೂ4 ಲಕ್ಷ ಬೇಕು. ರೂ10ರಿಂದ 12ಲಕ್ಷದಷ್ಟು ವರ್ಕಿಂಗ್‌ ಕ್ಯಾಪಿಟಲ್‌ (ನಿರಂತರ ವಹಿವಾಟು ಬಂಡವಾಳ) ಅಗತ್ಯವಿರುತ್ತದೆ.

ಮಾರಾಟ ವಿಭಾಗದಲ್ಲಿ ಸಹನೆ ಮತ್ತು ಜಾಣ್ಮೆಯ, ಉತ್ತಮ ಮಾತುಗಾರಿಕೆಯ ಸಿಬ್ಬಂದಿ ಬೇಕು. ವಾಹನ ಮಾರಾಟ ನಂತರದ ಸೇವೆ, ಬಿಡಿಭಾಗ ಜೋಡಣೆ, ದುರಸ್ತಿ ಕೆಲಸಗಳಿಗೆ ನುರಿತ ಮೆಕ್ಯಾನಿಕ್‌ಗಳನ್ನು ನೇಮಿ ಸಿಕೊಳ್ಳಬೇಕು. ಏನಿಲ್ಲವೆಂದರೂ 10ರಿಂದ 12 ನೌಕರ ರನ್ನು ನೇಮಕ ಮಾಡಿಕೊಳ್ಳಬೇಕು. ಷೋರೂಂಗೆ ಬರುವ ಗ್ರಾಹಕರಿಗೆ ಕುಳಿತುಕೊಳ್ಳಲು ಲಾಂಜ್, ಕುಡಿ ಯಲು ಶುದ್ಧ ನೀರು, ಟಿ.ವಿ, ವೃತ್ತ ಪತ್ರಿಕೆ ಒದಗಿಸ ಬೇಕು. ಹೀಗಾಗಿ, ಸಾಕಷ್ಟು ಬಂಡವಾಳದ ಅವಶ್ಯಕತೆ ಇರುತ್ತದೆ’ ಎಂದು ದ್ವಿಚಕ್ರ ವಾಹನ ಮಾರಾಟ ಕೇಂದ್ರ ಆರಂಭಿಸಲು ಅಗತ್ಯವಾದ ಅಂಶ, ಬಂಡವಾಳ ಕುರಿತು ಕುಲಕರ್ಣಿ ಅವರು ವಿವರಿಸುತ್ತಾರೆ.

ವಾಹನ ಮಾರಾಟ ಕ್ಷೇತ್ರದಲ್ಲಿಯೂ ಸ್ಪರ್ಧೆ ಇದೆ. ಗ್ರಾಹಕರೊಂದಿಗೆ ಪ್ರೀತಿ, ವಿಶ್ವಾಸದಿಂದ ನಡೆದು ಕೊಂಡಾಗ ಮಾತ್ರವೇ ಮಾರಾಟದಲ್ಲಿ ಯಶಸ್ಸು ಕಾಣಲು ಸಾಧ್ಯ. ದ್ವಿಚಕ್ರ ವಾಹನ ಖರೀದಿಸಲು ಬರು ವವರ ಅಗತ್ಯವೇನು? ಬೇಡಿಕೆಗಳೇನು? ಅವರ ಮನ ದಿಂಗಿತ, ಖರೀದಿ ಸಾಮರ್ಥ್ಯ ಎಲ್ಲವನ್ನೂ ಆತ್ಮೀಯ ಮಾತುಕತೆ ಮೂಲಕವೇ ಅರ್ಥೈಸಿಕೊಳ್ಳಬೇಕು. ಅದೇ ವೇಳೆ, ವಾಹನದ ಸಾಮರ್ಥ್ಯ, ವೈಶಿಷ್ಟ್ಯ, ಎಕ್ಸ್‌ಷೋ ರೂಂ ಬೆಲೆ, ಆನ್‌ರೋಡ್‌ ಬೆಲೆ, ವಾರಂಟಿ, ವಿಮೆ ಮೊದಲಾದ ಸವಲತ್ತುಗಳ ಕುರಿತು ಎಲ್ಲವನ್ನೂ ಗ್ರಾಹಕರಿಗೆ ವಿವರಿಸಬೇಕು. ಗ್ರಾಹಕರ ಅಗತ್ಯವನ್ನು ಅರಿತುಕೊಂಡು ಅವರಿಗೆ ಅನುಕೂಲವಾಗುವಂತಹ ವಾಹನ ಕೊಟ್ಟಲ್ಲಿ ಗ್ರಾಹಕರೂ ಖುಷಿಯಾಗುತ್ತಾರೆ’ ಎಂದು ಅವರು ವಿವರಿಸುತ್ತಾರೆ.

ತಾಲ್ಲೂಕಿನಿಂದ ಹೋಬಳಿಗೆ
ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿಗಳಾದ ಹೀರೊ ಮೋಟೊ ಕಾರ್ಪ್, ಹೋಂಡಾ, ಟಿವಿಎಸ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಯಮಹಾ ಮೋಟಾರ್ಸ್‌ ಕಂಪೆನಿಗಳು ರಾಜ್ಯದ ಬಹುತೇಕ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಅಧಿಕೃತ ಷೋರೂಂ ಹೊಂದಿವೆ. ಅಲ್ಲದೇ, ಈ ಅಧಿಕೃತ ವಿತರಕರ ಮೂಲಕವೇ ಪ್ರತಿ ತಾಲ್ಲೂಕು ಮತ್ತು ಪ್ರಮುಖ ಹೋಬಳಿ ಕೇಂದ್ರಗಳಲ್ಲಿ ಅಧಿಕೃತ ವಿತರಕರನ್ನು ನೇಮಕ ಮಾಡಿಕೊಂಡು, ವಹಿವಾಟು  ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿವೆ.

ಕಳೆದೊಂದು ದಶಕದಲ್ಲಿ ದೇಶದಲ್ಲಿ ದ್ವಿಚಕ್ರ ವಾಹನ ಮಾರಾಟದಲ್ಲಿ ಉತ್ತಮ ಚೇತರಿಕೆ ಕಂಡುಬಂದಿದೆ. ಭಾರತ ಅಥವಾ ಕರ್ನಾಟಕದ ಮಾರುಕಟ್ಟೆಯಲ್ಲಿ ಕಾರು ಇಂದಿಗೂ ಐಷಾರಾಮಿ ಎಂದೇ ಬಿಂಬಿತವಾಗಿದೆ. ಆದರೆ, ದ್ವಿಚಕ್ರ ವಾಹನ ಎಲ್ಲ ವರ್ಗದ ಜನರ ಅನಿವಾರ್ಯ ಮತ್ತು ಅಗತ್ಯಗಳಲ್ಲಿ ಒಂದಾಗಿದೆ.

ಬ್ಯಾಂಕ್‌ ಸಾಲ ಸೌಲಭ್ಯ
ರಾಷ್ಟ್ರೀಕೃತ ಬ್ಯಾಂಕುಗಳು, ಖಾಸಗಿ ಹಣಕಾಸು ಸಂಸ್ಥೆಗಳು ಶೇ 75ರಷ್ಟು ಸಾಲ ನೀಡುವುದರಿಂದ ದ್ವಿಚಕ್ರ ವಾಹನ ಖರೀದಿ ಭರಾಟೆ ಜೋರಾಗಿಯೇ ನಡೆದಿದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನ ಮಾರಾಟ ಎನ್ನುವುದು ಅಷ್ಟೇನೂ ಸವಾಲಿನ ವಿಚಾರ ವಾಗಿಲ್ಲ. 1,500ರಿಂದ 2,000 ಚದರ ಅಡಿ ನಿವೇಶನ, ಆರ್‌ಸಿಸಿ ಕಟ್ಟಡ, ಎರಡು ರ್‍ಯಾಂಪ್‌ಗಳೊಂದಿಗೆ (ಸರ್ವಿಸ್‌ಗೆ ಬಳಸುವ ಸಾಧನ) ರೂ8 ಲಕ್ಷದಿಂದ ರೂ10 ಲಕ್ಷ ಬಂಡವಾಳದಲ್ಲಿ ಹೋಬಳಿಗಳಲ್ಲೂ ಅಧಿಕೃತ ಷೋರೂಂ ಆರಂಭಿಸಬಹುದಾಗಿದೆ.

ಮುಂಗಡ ಪಾವತಿ ಕಡ್ಡಾಯ
ದ್ವಿಚಕ್ರ ವಾಹನ ಖರೀದಿಸಲು ಅಧಿಕೃತ ವಿತರಕರು ಆಯಾ ಕಂಪೆನಿಗಳಿಗೆ ಮುಂಗಡ ಹಣ ಪಾವತಿಸುವುದು ಕಡ್ಡಾಯ. ರೂ50 ಸಾವಿರ ಮೌಲ್ಯದ 50 ವಾಹನಗಳು ಬೇಕಾಗಿದ್ದಲ್ಲಿ ರೂ25 ಲಕ್ಷ ಪಾವತಿಸಬೇಕು. ಆದರೆ, ಹಬ್ಬದ ಸಂದರ್ಭದಲ್ಲಿ ಕಂಪೆನಿಗಳು ಮುಂಗಡ ಪಾವತಿ ಅಗತ್ಯವೇ ಇಲ್ಲದೆ 7ರಿಂದ 10 ದಿನಗಳ ಕಾಲ ವಾಹನಗಳನ್ನು (ಕ್ರೆಡಿಟ್ ಸೌಲಭ್ಯದಡಿ) ಸರಬರಾಜು ಮಾಡುತ್ತವೆ. ಮುಂಗಡ ಪಾವತಿಸಿ ವಾಹನ ಪಡೆದುಕೊಳ್ಳುವ ಜಿಲ್ಲಾ ಮಟ್ಟದ ಅಧಿಕೃತ ವಿತರಕರು, ಗ್ರಾಹಕರು ಮತ್ತು ತಾಲ್ಲೂಕುವಾರು ವಿತರಕರನ್ನು ಗಮನದಲ್ಲಿಟ್ಟುಕೊಂಡು ಮುಂಗಡ ಪಾವತಿಯಿಲ್ಲದೇ ಅವರಿಗೆ ವಾಹನ ವಿತರಿಸುತ್ತಿದ್ದಾರೆ. ಆ ಮೂಲಕ ವ್ಯಾಪಾರ, ವಹಿವಾಟು ವೃದ್ಧಿಸಿಕೊಳ್ಳುತ್ತಿದ್ದಾರೆ.

ಲಾಭಾಂಶ ಹಂಚಿಕೆ?
‘ದ್ವಿಚಕ್ರ ವಾಹನ ಮಾರಾಟದ ಮೇಲೆ ಕಂಪೆನಿಗಳು ಮೊದಲೇ ನಿಗದಿಪಡಿಸಿದ ಮೊತ್ತದ ಲಾಭವನ್ನು ನೀಡುತ್ತವೆ. ಸೇವೆ ಮತ್ತು ಬಿಡಿಭಾಗಗಳ ಮಾರಾಟ ಸೇರಿದಂತೆ ಒಟ್ಟಾರೆ ಶೇ 18ರಿಂದ 24ರವರೆಗೂ ಲಾಭ ದೊರೆಯುವ ಅವಕಾಶವಿರುತ್ತದೆ. ಗ್ರಾಹಕ ಪ್ರತಿ ಬಾರಿ ಸರ್ವಿಸ್‌ಗೆ ಷೋರೂಂಗೆ ಬರುವುದರಿಂದ ಮತ್ತು ಬಿಡಿ ಭಾಗಗಳನ್ನು ಷೋರೂಂನಲ್ಲೇ ಖರೀದಿಸುವುದರಿಂದ ಉತ್ತಮ ಲಾಭ ನಿರೀಕ್ಷಿಸಬಹುದು’ ಎಂದು ಧಾರವಾಡದ ಯುವ ಉದ್ಯಮಿ ಪ್ರಶಾಂತ ಪಾಟೀಲ್ ಹೇಳುತ್ತಾರೆ.

ಮೆಕ್ಯಾನಿಕ್‌ಗಳಿಗೆ ತರಬೇತಿ
ಎಲ್ಲ ದ್ವಿಚಕ್ರ ವಾಹನ ಕಂಪೆನಿಗಳೂ ಮೆಕ್ಯಾನಿಕ್‌ಗಳಿಗೆ ಎರಡು ದಿನ ಮತ್ತು ಒಂದು ವಾರದ ತರಬೇತಿ ನೀಡುತ್ತವೆ. ಮೆಕ್ಯಾನಿಕ್‌ಗಳು ಆರಂಭಿಕ ಹಂತದಲ್ಲಿದ್ದರೆ ಒಂದು ವಾರ, ಪರಿಣತರಾಗಿದ್ದಲ್ಲಿ ಎರಡು ದಿನ ವಿಶೇಷ ತರಬೇತಿ ನೀಡುವ ಜತೆಗೆ ಪ್ರಮಾಣಪತ್ರವನ್ನೂ ವಿತರಿಸುತ್ತಿವೆ.

ಗೂಡ್ಸ್‌ ಆಟೊ ಮಹಿಮೆ!
ಇತ್ತಿತ್ತಲಾಗಿ ಗೂಡ್ಸ್‌ ಆಟೊ ಮತ್ತು ಪುಟ್ಟ ಗಾತ್ರದ ಕ್ಯಾಬ್‌ ತಯಾರಿಕಾ ಕಂಪೆನಿಗಳೂ (ಟಾಟಾ ಏಸ್‌, ಪಿಯಾಜಿಯೊ, ಟಿವಿಎಸ್‌ ಮೊದಲಾದ ಕಂಪೆನಿಗಳ ಪುಟ್ಟ ಗೂಡ್ಸ್‌  ವಾಹನಗಳಿಗೆ ಗ್ರಾಮೀಣ ಪ್ರದೇಶದಲ್ಲಿ ಭಾರಿ ಬೇಡಿಕೆ ಬರುತ್ತಿದೆ. ಸರಕು ಸಾಗಣೆ ಮತ್ತು ಜನರನ್ನೂ ಊರಿಂದೂರಿಗೆ ಕರೆದೊಯ್ಯುವುದಕ್ಕೆ ಕ್ಯಾಬ್‌ಗಳ ಬಳಕೆ ಹೆಚ್ಚುತ್ತಿದೆ. ಹಾಗಾಗಿ ಗೂಡ್ಸ್‌ ಆಟೊ ಮತ್ತು ಕ್ಯಾಬ್‌ ಕಂಪೆನಿಗಳು ಗ್ರಾಮೀಣ ಭಾಗದತ್ತ ನೋಟ ಹರಿಸುತ್ತಿವೆ. ಹೋಬಳಿ ಮಟ್ಟದಲ್ಲಿಯೂ ಷೋರೂಂ ತೆರೆಯಲು ಆಸಕ್ತಿ ತೋರುತ್ತಿವೆ. ಇದು ಸಹ ನೂರಾರು ಯುವಜನರನ್ನು ಉದ್ಯಮಿಯಾಗಿಸುವಲ್ಲಿ ಮತ್ತು ಉದ್ಯೋಗಾವ ಕಾಶ ಸೃಷ್ಟಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.

‘ಗ್ರಾಹಕ ಸ್ನೇಹಿಯಾಗಿರಬೇಕು’
ಷೋರೂಂ ಆರಂಭಿಸಲು ಯುವ ಉದ್ಯಮಿಗಳಿಗೆ ಸಾಕಷ್ಟು ಅವಕಾಶಗಳಿವೆ. ಇತ್ತೀಚಿನ ವರ್ಷಗಳಲ್ಲಿ ದ್ವಿಚಕ್ರ ವಾಹನ ಮಾರಾಟದಲ್ಲಿ ಪ್ರಗತಿಯಾಗುತ್ತಿದ್ದು, ಸ್ಪರ್ಧೆಯೂ ಹೆಚ್ಚಾಗಿದೆ. ಸಾಕಷ್ಟು ಸ್ಥಳಾವಕಾಶ ಮತ್ತು ₨20ರಿಂದ 25 ಲಕ್ಷ ಬಂಡವಾಳ ಅಗತ್ಯ. ಗ್ರಾಹಕ ಸ್ನೇಹಿ ನಿಲುವು, ಅವರೊಂದಿಗೆ ಪ್ರೀತಿ, ವಿಶ್ವಾಸದೊಂದಿಗೆ ಬೆರೆತು, ಪರಿಶ್ರಮಪಟ್ಟರೆ ದ್ವಿಚಕ್ರ ವಾಹನ ಮಾರಾಟ ಕ್ಷೇತ್ರದಲ್ಲಿ ಯಶಸ್ವಿಯಾಗಬಹುದು.
–ದೇವರಾಜ ಬಿ.ಕುಲಕರ್ಣಿ, ಷೋರೂಂ ಮಾಲೀಕ, ಕಲಬುರ್ಗಿ


9 ತಿಂಗಳ ಮಾರಾಟ
2014ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಶೇ 11.04ರಷ್ಟು ಪ್ರಗತಿಯಾಗಿದೆ. ಸ್ಕೂಟರ್, ಮೋಟಾರ್ ಸೈಕಲ್ ಮತ್ತು ಮೊಪೆಡ್‌ಗಳ ಮಾರಾಟದಲ್ಲಿ ಒಟ್ಟಾರೆ ಶೇ 27.71ರಷ್ಟು ಹೆಚ್ಚಳವಾಗಿದೆ.

2008–09ರಲ್ಲಿ ದೇಶದಲ್ಲಿ 74,37,619 ವಾಹನ ಮಾರಾಟವಾಗಿದ್ದರೆ, 2013–14ರಲ್ಲಿ 1,37,97,185 ದ್ವಿಚಕ್ರ ವಾಹನ ಮಾರಾಟವಾಗಿವೆ ಎಂದು ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟ (ಎಸ್‌ಐಎಎಂ) ಹೇಳುತ್ತದೆ. ಹೀರೊ ಮೋಟೊ ಕಾರ್ಪ್‌ ಕಂಪೆನಿಯು 2015ರಲ್ಲಿ 5,58,982 ದ್ವಿಚಕ್ರ ವಾಹನ ಮಾರಾಟ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ತನ್ನ ಓಟ ಮುಂದುವರಿಸಿದೆ.

ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ವಾಹನ ತಯಾರಿಕಾ ಕಂಪೆನಿಗಳು ವಾಹನದಲ್ಲಿ ಹೊಸ ಹೊಸ ಸೌಲಭ್ಯ ಅಳವಡಿಸುತ್ತಿವೆ. ಪ್ರತಿ ವರ್ಷ ಮಾರುಕಟ್ಟೆಗೆ ಹೊಸ ವಾಹನಗಳನ್ನು ಪರಿಚಯಿಸುತ್ತಿವೆ. ಆರ್ಥಿಕ ಸುಧಾರಣಾ ನೀತಿ ಹಾಗೂ ಹೆಚ್ಚುತ್ತಿರುವ ಖರೀದಿದಾರರಿಂದ ದ್ವಿಚಕ್ರ ವಾಹನ ಮಾರಾಟ ಕ್ಷೇತ್ರದಲ್ಲಿ ಗಣನೀಯ ಪ್ರಗತಿಯಾಗುತ್ತಿದೆ. ಹೀಗಾಗಿ, ಯುವ ಉದ್ಯಮಿಗಳಿಗೆ ಅವಕಾಶಗಳು ಹೇರಳವಾಗಿವೆ.

ಈಗಿನದು ಸ್ಕೂಟರ್ ಜಮಾನಾ!
ಇಪ್ಪತ್ತು ವರ್ಷಗಳ ಹಿಂದೆ ಬೈಕ್‌ ಬಗ್ಗೆ ವ್ಯಾಮೋಹ ಹೊಂದಿದವರು ಇಂದು ಸ್ಕೂಟರ್‌ ಇಷ್ಟಪಡುತ್ತಿದ್ದಾರೆ. ಇವರ ಸಂಖ್ಯೆಯೇ ಶೇ 40ರಷ್ಟಿದೆ. ಹೀಗಾಗಿ, ಪ್ರಮುಖ ವಾಹನ ತಯಾರಿಕಾ ಕಂಪೆನಿಗಳು ಸ್ಕೂಟರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ನೆರೆಯ ತಮಿಳುನಾಡು ಮೂಲದ ಟಿವಿಎಸ್‌  ಮೋಟಾರ್ಸ್‌ ಜ್ಯುಪಿಟರ್‌, ವಿಗೊ, ಸ್ಕೂಟಿ ಪೆಪ್‌ ಸ್ಕೂಟರ್‌ಗಳನ್ನು ಪರಿಚಯಿಸಿದೆ. ಮಹೀಂದ್ರಾ ಆ್ಯಂಡ್ ಮಹೀಂದ್ರಾ ತಿಂಗಳ ಹಿಂದೆ ಗಸ್ಟೊ ಸ್ಕೂಟರ್ ಮಾರುಕಟ್ಟೆಗೆ ಬಿಟ್ಟಿದೆ. ಹೀರೊ ಮೋಟೊ ಕಾರ್ಪ್‌ನ ಹೀರೊ ಮ್ಯಾಸ್ಟ್ರೊ ಸೇರಿದಂತೆ ವಿವಿಧ ಕಂಪೆನಿಗಳು ಹೊಸ ಹೊಸ ಸ್ಕೂಟರ್‌ಗಳ ಮೂಲಕ ಗ್ರಾಹಕರನ್ನು ಸೆಳೆಯಲು ಯತ್ನಿಸುತ್ತಿವೆ.

ಸಂಚರಿಸಲು ಸುಲಭ ಮತ್ತು ಚಿಕ್ಕ ಜಾಗದಲ್ಲಿಯೂ ವಾಹನ ನಿಲ್ಲಿಸಬಹುದು ಎಂಬ ಕಾರಣಕ್ಕೆ ನಗರ ಪ್ರದೇಶಗಳಲ್ಲಿ ಸ್ಕೂಟರ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT