ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ಅಪರಾಧ ನಿಯಂತ್ರಿಸಿ

Last Updated 9 ಜೂನ್ 2014, 19:30 IST
ಅಕ್ಷರ ಗಾತ್ರ

ಪುಣೆಯಲ್ಲಿ ಐಟಿ ಉದ್ಯೋಗಿ ಮೊಹಸಿನ್ ಷೇಕ್ (28) ಹತ್ಯೆಯು  ಹೀನ­ವಾದಂತಹ ಕೋಮು ಅಪರಾಧ. ಯಾವುದೇ ಪ್ರಚೋದನೆ ಇಲ್ಲದಿದ್ದರೂ ಈ ಐಟಿ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿರು­ವುದು ಆತಂಕಕಾರಿ.

ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಲ್ಲಿ ಛತ್ರಪತಿ ಶಿವಾಜಿ ಹಾಗೂ ಬಾಳ ಠಾಕ್ರೆಯವರ ಅವಹೇಳನಕಾರಿ ಚಿತ್ರಗಳ ಪ್ರಸಾರಕ್ಕೆ  ಸಂಬಂಧಿಸಿದಂತೆ ಪುಣೆಯಲ್ಲಾದ ದೊಂಬಿಯ ಸಂದರ್ಭದಲ್ಲಿ ಈ ಹತ್ಯೆ ನಡೆ­ದಿದೆ ಎಂಬುದು ದುರದೃಷ್ಟಕರ. ಈ ವಿಚಾರದಲ್ಲಿ ಈ ಯುವ ಐಟಿ ಉದ್ಯೋ­ಗಿಯ ಪಾತ್ರ ಏನೇನೂ ಇರಲಿಲ್ಲ.

ಹೀಗಿದ್ದೂ  ಧರಿಸಿದ್ದ ಟೋಪಿ ಹಾಗೂ ದಾಡಿ­ಯಿಂದ ಮುಸ್ಲಿಮನಂತೆ ಕಾಣಿಸಿದ್ದೇ ಆತನ ಮೇಲೆರಗಲು ಗುಂಪಿಗೆ ಪ್ರಚೋದನೆ ಆಯಿತೆಂಬುದು ಆಘಾತಕಾರಿ. ವಯಸ್ಸಾದ ತಂದೆತಾಯಿ ಇರುವ ಕುಟುಂಬದ ಆಧಾರಸ್ತಂಭವಾಗಿದ್ದ ಯುವಜೀವವೊಂದು ದ್ವೇಷ ಅಪರಾಧಗಳಿಗೆ ಹೀಗೆ ಬಲಿಯಾದದ್ದು ವಿಷಾದದ ಸಂಗತಿ.

ಮೊಹಸಿನ್ ಷೇಕ್ ಮೇಲೆ ಹಲ್ಲೆ ನಡೆಸಿದ ಗುಂಪು ತೀವ್ರವಾದಿ ಹಿಂದೂ ಸಂಘಟನೆ­ಯಾದ  ಹಿಂದೂ ರಾಷ್ಟ್ರ ಸೇನಾಗೆ  ಸೇರಿದೆ. ತುಂಡು ಸಂಘಟನೆಯಾದ ಈ ಹಿಂದೂ ರಾಷ್ಟ್ರ ಸೇನೆಯಲ್ಲಿ ನೂರಿನ್ನೂರು ಸದಸ್ಯರಿರಬಹುದು ಅಷ್ಟೆ. ಹೀಗಾಗಿ ಈ ಸಂಘಟನೆಯ ಚಟುವಟಿಕೆಗಳ ಮೇಲೆ ಕಣ್ಣಿಡುವುದು ಸರ್ಕಾರಕ್ಕೆ ಅಸಾಧ್ಯ­ವೇನಲ್ಲ.

ಆದರೆ ಇಂತಹ ಸಂಘಟನೆಗಳು ನಡೆಸಿದ ಕುಕೃತ್ಯಗಳಿಗೆ ತರ್ಕ ಹುಡು­ಕುತ್ತಾ ಸಮರ್ಥಿಸಿಕೊಳ್ಳುವ ಹಾದಿಯನ್ನು ರಾಜಕಾರಣಿಗಳು ತುಳಿಯು­ವುದು ಮಾತ್ರ ಸರಿಯಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚುರಪಡಿಸಿದ ವಿಚಾರಗಳು ಇಂತಹ ಕೆಟ್ಟ ಪರಿಣಾಮಗಳಿಗೆ ಕಾರಣವಾಗುವುದು ‘ಸಹಜ’ ಎಂದು ಪುಣೆಯ ಬಿಜೆಪಿ ಸಂಸತ್ ಸದಸ್ಯ ಅನಿಲ್ ಶಿರೋಲ್ ಈ ಘಟನೆಗೆ ಸಂಬಂಧಿಸಿದಂತೆ ಹೇಳಿರುವುದು ಖಂಡನೀಯ.

ಚುನಾವಣೆಯಲ್ಲಿ ಬಿಜೆಪಿಯ ಇತ್ತೀಚಿನ ದಿಗ್ವಿಜಯ, ಹಿಂದೂ ರಾಷ್ಟ್ರ ಸೇನಾದಂತಹ ತುಂಡು ಸಂಘಟನೆಗಳು ಹೆಚ್ಚಿನ ಬಲ ಪಡೆದುಕೊಳ್ಳಲು ಕಾರಣ­ವಾಗಬಾರದು. ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ಇದಕ್ಕೆ ಅವ­ಕಾಶ ನೀಡದಂತೆ ಮೊದಲು ತಮ್ಮ ನಡೆ ನುಡಿಗಳಲ್ಲಿ ಬಿಜೆಪಿ ಸಂಸತ್ ಸದ­ಸ್ಯರು ಎಚ್ಚರ ವಹಿಸಬೇಕು.

ಮಹಾರಾಷ್ಟ್ರದಲ್ಲಿ ಇನ್ನು ಕೆಲವೇ ತಿಂಗಳಲ್ಲಿ ವಿಧಾನ­ಸಭೆ ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ಲಾಭ ಗಳಿಸುವ  ಏಕೈಕ ದೃಷ್ಟಿಯಿಂದ ಜನರನ್ನು ಧ್ರುವೀಕರಿಸುವ ಯಾವ ಪ್ರಯತ್ನಕ್ಕೂ ಮಹಾ­ರಾಷ್ಟ್ರ ಸರ್ಕಾರ ಅವಕಾಶ ನೀಡಬಾರದು. ಇಂತಹ ಯಾವುದೇ ಪ್ರಯತ್ನ­ವನ್ನು ದೊಡ್ಡದಾಗಿ ಬೆಳೆಯಲು ಬಿಡದೆ ಆರಂಭದಲ್ಲೇ ಹೊಸಕಿ ಹಾಕಬೇಕು.

ವಿವಿಧ ಧರ್ಮ, ಪಂಥ ಹಾಗೂ ಸಾಂಸ್ಕೃತಿಕ  ಸಮುದಾಯಗಳ ಶಾಂತಿಯುತ ಸಹಬಾಳ್ವೆಯನ್ನು ಕಂಡಿರುವ ಮಹಾರಾಷ್ಟ್ರದಲ್ಲಿ ದ್ವೇಷದ ರಾಜಕಾರಣ ಬೆಳೆಯಲು ಬಿಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT