ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ರಾಜಕಾರಣ ಬೇಡ

Last Updated 23 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಒಂಬತ್ತು ಹಂತಗಳಲ್ಲಿ ನಡೆಯುತ್ತಿರುವ 2014ರ ಲೋಕಸಭೆ ಚುನಾ­ವಣೆಯ ಉತ್ತರಾರ್ಧದ ಪ್ರಚಾರ ಕಾರ್ಯದಲ್ಲಿ  ಹಿಂದು­ತ್ವದ ಮಾತು­ಗಳ ಅಬ್ಬರ ಹೆಚ್ಚಾಗಿದೆ. ಇಂತಹ ಮಾತುಗಳು ರಾಜಕಾರಣದ  ಪರಿ­­ಭಾಷೆ ಹಾಗೂ ಸಾಮಾಜಿಕ ಸ್ವಾಸ್ಥ್ಯಕ್ಕೆ ಉಂಟು ಮಾಡುವ ಹಾನಿ ಗಂಭೀರ­ವಾ­ದುದು. ಹಿಂದೂ ಬಡಾವಣೆಗಳಲ್ಲಿ ಆಸ್ತಿ ಖರೀದಿಸಲು ಮುಸ್ಲಿ­ಮರಿಗೆ ಅವಕಾಶ ನೀಡಬಾರದು ಎಂಬಂತಹ ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ ಅವರ ಮಾತುಗಳು ರಾಷ್ಟ್ರದ ಸಾಂವಿ­ಧಾ­ನಿಕ ಮೌಲ್ಯ­ಗಳನ್ನೇ ಗಾಳಿಗೆ ತೂರುವಂತಿವೆ.

ಹಾಗೆಯೇ, ನರೇಂದ್ರ ಮೋದಿ ಅವ­ರಿಗೆ ವಿರೋಧವಾಗಿರುವವರು ಚುನಾವಣೆಗಳ ನಂತರ ಪಾಕಿಸ್ತಾನಕ್ಕೆ ಹೋಗಲಿ ಎಂಬಂತಹ ಎಚ್ಚರಿಕೆಯನ್ನು ಈ ಮೊದಲು ಬಿಹಾರದ ಬಿಜೆಪಿ ಮುಖಂಡ ಗಿರಿ­ರಾಜ್ ಸಿಂಗ್ ನೀಡಿದ್ದರು. ತಮ್ಮ  ಈ ಮಾತಿಗೆ  ಈವರೆಗೆ  ಅವರು ವಿಷಾದ ವ್ಯಕ್ತಪಡಿಸಿಲ್ಲ. ‘ಶೇ 100ರಷ್ಟು ಮತದಾನ ಮಾಡಿ ಇಲ್ಲದಿದ್ದರೆ ಇತಿಹಾಸ­ವಾಗಿ­ಬಿಡುತ್ತೀರಿ’ ಎಂಬಂತಹ ಕರೆಯನ್ನು ಹಿಂದೂಗಳಿಗೆ ಆರ್ಎಸ್ಎಸ್ ನೀಡಿದೆ. ‘ಮೋದಿ ಅಧಿಕಾರಕ್ಕೆ ಬಂದರೆ ಆರು ತಿಂಗಳಲ್ಲಿ ಪಾಕಿಸ್ತಾನವನ್ನು ನಾಶ ಮಾಡಿಬಿಡುತ್ತಾರೆ’ ಎಂದು ಶಿವಸೇನೆ ಹೇಳಿದೆ.

ಇಂತಹ ಮಾತುಗಳಿಗೆ ಬಿಜೆಪಿ ಪ್ರತಿಕ್ರಿಯೆ ಹೆಚ್ಚೇನೂ ತೀವ್ರವಾಗಿ ಹೊರಹೊಮ್ಮಿಲ್ಲ ಎಂಬುದು ವಿಷಾ­ದದ ಸಂಗತಿ. ಬಿಜೆಪಿ ಹಿತಚಿಂತಕರೆಂದು ಪ್ರತಿಪಾದಿ­ಸಿ­ಕೊಳ್ಳು­ವವರ ಬೇಜವಾ ಬ್ದಾರಿ ಹೇಳಿಕೆಗಳನ್ನು ತಾವು ಒಪ್ಪುವುದಿಲ್ಲ ಎಂದಷ್ಟೇ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಹಾಗೆಯೇ ಈ ಮಾತು­ಗ­ಳಿಗೆ ತನ್ನ ಅಂತರವನ್ನು ಔಪಚಾರಿಕ ನೆಲೆಯಲ್ಲಿ ಬಿಜೆಪಿ ಕಾಯ್ದುಕೊಂಡಿದೆ ಅಷ್ಟೆ. ಇಂತಹ ಮಾತುಗಳು ಬಹುಸಂಖ್ಯಾತರ ಪರವಾದ ಕಾರ್ಯಸೂಚಿ-­ಯನ್ನು ಮುನ್ನೆಲೆಗೆ ತರುವಂತಹದ್ದಲ್ಲದೆ  ಅಲ್ಪಸಂಖ್ಯಾತರಲ್ಲಿ ಅಸುರಕ್ಷತೆಯ ಭಾವನೆ ಬಿತ್ತುವಂತಹದ್ದು. ಧರ್ಮದ ಆಧಾರದ ಮೇಲೆ ಮತಗಳ  ಕ್ರೋಡೀ­ಕ­ರ­ಣಕ್ಕೆ  ನಡೆಸುವ ಈ ಪ್ರಯತ್ನ ಚುನಾವಣೆ ಮುಗಿಯುವ ಮುಂಚೆಯೇ   ಸಮಾಜ ಹಾಗೂ ರಾಜಕಾರಣ­ವನ್ನು ವಿಭಜಿಸುವಂತಹದ್ದು.

  ಒಳ್ಳೆಯ ಆಡಳಿತ, ಅಭಿವೃದ್ಧಿ, ಭ್ರಷ್ಟಾಚಾರದ ಅಂತ್ಯ,  ಆರ್ಥಿಕ ಬೆಳವಣಿಗೆ,  ಉದ್ಯೋಗ ಸೃಷ್ಟಿ  ಇತ್ಯಾದಿ  ವಿಚಾರಗಳೇ ತಮ್ಮ ಚುನಾವಣಾ ಪ್ರಚಾರದ ಮೂಲದ್ರವ್ಯ ಎಂದು ಬಿಜೆಪಿ ಪ್ರತಿಪಾದಿಸಿಕೊಂಡಿದೆ. ಈ ಗುರಿಗಳ ಸಾಧನೆಗೆ ಸಮರ್ಥ ನಾಯಕರೆಂದು ನರೇಂದ್ರ ಮೋದಿಯವರನ್ನು   ಬಿಂಬಿಸ­ಲಾಗಿದೆ. ಆದರೆ  ಕೋಮುವಾದಿ ಹಾಗೂ ವಿಭಜಕ ಭಾವೋದ್ರೇಕಗಳಿಗೆ  ಪುಷ್ಟಿ ನೀಡುವಂತಹ ಮಾತುಗಳು, ಈ ಘೋಷಿತ ಕಾರ್ಯಸೂಚಿಯ ಬಗ್ಗೆ ಪಕ್ಷಕ್ಕಿ­ರುವ ಬದ್ಧತೆಯನ್ನು ಸಂಶಯಿಸುವಂತೆ ಮಾಡುತ್ತದೆ. ಇಂತಹ ಹೇಳಿಕೆ­ಗಳನ್ನು ನೀಡಿದ ವ್ಯಕ್ತಿಗಳ ವಿರುದ್ಧ ಅದು ಯಾವುದೇ ಕ್ರಮ ಕೈಗೊಂಡಿಲ್ಲ.  ತಾವು ಇಂತಹ ಮಾತುಗಳನ್ನಾಡಿಲ್ಲ ಎಂದು ತೊಗಾಡಿಯಾ   ನಿರಾಕರಣೆಯ ಹೇಳಿಕೆ  ನೀಡಿದರಷ್ಟೆ. ಆದರೆ ತೊಗಾಡಿಯಾ ಮಾತುಗಳು ಚಿತ್ರೀಕರಣ­ವಾಗಿ­ರುವ ದೃಶ್ಯಗಳ ಸಾಕ್ಷ್ಯಗಳಿವೆ. ಸಂಘ ಪರಿವಾರದ ತುಂಡು ಸಂಘಟನೆಗಳು ಸಾಧಿ­ಸ­ಲೆತ್ನಿಸುತ್ತಿರುವ ಅತಿರೇಕದ ಪ್ರಭಾವದ ಬಗ್ಗೆ ಬಿಜೆಪಿಗೆ ಸ್ಪಷ್ಟತೆ ಇರುವುದು ಅಗತ್ಯ. ಸೂಕ್ಷ್ಮ ವಿಚಾರಗಳ ಬಗ್ಗೆ ಬೇರೆಬೇರೆ ರೀತಿ ಮಾತ­ನಾಡುತ್ತಾ ವಿಭಿನ್ನ ನಿಲುವುಗಳಿಗೆ ಅಂಟಿಕೊಂಡಲ್ಲಿ ಅದು ಪಕ್ಷದ ನಿಲುವುಗಳು ಹಾಗೂ ಕಾರ್ಯತಂತ್ರಗಳಿಗೆ ವಿಶ್ವಾಸಾರ್ಹತೆ ತರುವುದಿಲ್ಲ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT