ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಗಳ ಬೇಲಿ ದಾಟಿ; ಪ್ರೇಮದ ಪುಷ್ಪ ಅರಳಿಸಿ...

ದಿನೇಶ್‌ ಗುಂಡೂರಾವ್‌ – ಟಬು ದಂಪತಿಯೊಂದಿಗೆ ಪಟ್ಟಾಂಗ
Last Updated 14 ಜುಲೈ 2017, 12:59 IST
ಅಕ್ಷರ ಗಾತ್ರ

ಬೆಂಗಳೂರಿನ ರಾಜಮಹಲ್‌ ವಿಲಾಸ ಬಡಾವಣೆಯಲ್ಲಿ ಬೆಳ್ಳಂಬೆಳಿಗ್ಗೆ 114ನೇ ನಂಬರಿನ ಆ ಮನೆ ಹುಡುಕಿಕೊಂಡು ಹೋದಾಗ ಅದೇತಾನೆ ರಾತ್ರಿ ಪಾಳಿ ಮುಗಿಸಿದ್ದ ಕಾನ್‌ಸ್ಟೆಬಲ್‌, ತಮ್ಮ ರಿಲೀವರ್‌ಗಾಗಿ ಗೇಟ್‌ ಮುಂದೆ ಕಾದು ಕುಳಿತಿದ್ದರು. ‘ಸಾಹೇಬರು ಇನ್ನೇನು ಆಚೆಗೆ ಬರುತ್ತಾರೆ ಕುಳಿತುಕೊಳ್ಳಿ’ ಎಂದು ಕುರ್ಚಿಯತ್ತ ಕೈತೋರಿದರು. ಅದು ಸಚಿವ ದಿನೇಶ್‌ ಗುಂಡೂರಾವ್‌ ಅವರ ಮನೆ ‘ಜೈ’. ಹೌದು, ಈ ಜನಪ್ರತಿನಿಧಿಗೆ ‘ಜೈ’ಕಾರದ ಮೇಲೆ– ಮನೆಗೆ ಅದೇ ಹೆಸರು ಇಡುವಷ್ಟು– ಮಮಕಾರ!

ಮೀಟಿಂಗ್‌ಗೆ ಕರೆಯಲು ಬಂದ ‘ಟೇಬಲ್‌ ಟೆನಿಸ್‌ ಅಸೋಶಿಯೇಷನ್‌’ನ ಪ್ರತಿನಿಧಿಗಳು, ವಿದೇಶ ಯಾತ್ರೆಗೆ ಶಿಕ್ಷಣ ಇಲಾಖೆಯಿಂದ ನೆರವು ಕೊಡಿಸುವಂತೆ ಕೋರಲು ಬಂದ ವಿದ್ಯಾರ್ಥಿಗಳು, ಅತಿಥಿಯಾಗಿ ಬರುವಂತೆ ಆಮಂತ್ರಣ ನೀಡಲು ಬಂದ ಸಂಘ–ಸಂಸ್ಥೆಗಳ ಪದಾಧಿಕಾರಿಗಳು... ಅವರೆಲ್ಲರ ಮಧ್ಯೆ ಕಾರ್ಯಕರ್ತರ ಹುಯಿಲು. ಭೇಟಿಯಾಗಲು ಬಂದವರ ಸರದಿ ದೊಡ್ಡದಿತ್ತು. ‘ಆರಾಮವಾಗಿ ಕುಳಿತು ಹರಟೆ ಹೊಡೆಯೋಣ ಎಂದರೆ ಟೈಮೇ ಸಿಗುತ್ತಿಲ್ಲ’ ಎನ್ನುತ್ತಲೇ ಮಾತಿಗೆ ಶುರುವಿಟ್ಟರು ದಿನೇಶ್‌. ‘ಅದಕ್ಕೇ ಆರು ತಿಂಗಳಿಗೊಮ್ಮೆ ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡು ಪ್ರವಾಸಕ್ಕೆ ಹೊರಟುಬಿಡುತ್ತೇನೆ’ ಎಂಬ ಮಾತನ್ನೂ ಅವರು ಪೋಣಿಸಿದರು.

‘ಹೌದುss, 24 ವರ್ಷಗಳ ಹಿಂದೆ ನಿಮ್ಮ ರೊಮಾನ್ಸ್‌ ಶುರುವಾಗಿದ್ದು ಹೇಗೆ?’ ಎಂಬ ಪ್ರಶ್ನೆ ಹಾಕಿದಾಗ ದಿನೇಶ್‌ ಅವರ ಮೊಗದಲ್ಲಿ ತುಂಟತನದ ನಗುವೊಂದು ಮಿಂಚಿ ಮರೆಯಾಯಿತು. ಉಕ್ಕಿಬಂದ ಭಾವಗಳಿಗೆ ಯಾವುದೋ ಗುಟ್ಟನ್ನು ಬಿಟ್ಟುಕೊಡುವ ತವಕ. ಕೊಡಗಿನ ಈ ಬ್ರಾಹ್ಮಣ ಯುವಕ ಬೆಂಗಳೂರಿನ ಮುಸ್ಲಿಂ ಹುಡುಗಿ ಕೈಹಿಡಿದ ಕಥೆ ಕೇಳುತ್ತಾ ಹೋದಂತೆ ಮಣಿರತ್ನಂ ಅವರ ‘ಬಾಂಬೆ’ ಸಿನಿಮಾದ ಬಿಡಿ, ಬಿಡಿ ದೃಶ್ಯಗಳು ಕಣ್ಮುಂದೆ ಹಾದುಹೋದವು. ದಿನೇಶ್‌–ತಬಸ್ಸಮ್‌ (ಟಬು) 1994ರಲ್ಲಿ ಬಾಳಸಂಗಾತಿಗಳಾದರೆ, ಅದರ ಮರುವರ್ಷವೇ ‘ಬಾಂಬೆ’ ಚಿತ್ರ ತೆರೆಕಂಡಿತ್ತು.

ಪ್ರೇಮಕ್ಕೆ ಬಿತ್ತು ನಾಂದಿ
‘ನಾನು ಬಿಎಂಎಸ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಯಾಗಿದ್ದೆ. ಟಬು ಆಗ ಜ್ಯೋತಿವಿಲಾಸ ಕಾಲೇಜಿನಲ್ಲಿ ಬಿಎ ಓದುತ್ತಿದ್ದಳು. ಕಾಲೇಜಿನ ಕಾರ್ಯಕ್ರಮ ಒಂದರಲ್ಲಿ ಅವಳ ಪರಿಚಯವಾಯ್ತು. ಪಾದರಸದಂತಹ ಅವಳ ವ್ಯಕ್ತಿತ್ವ ನನಗೆ ಬಹುವಾಗಿ ಹಿಡಿಸಿತು. ಸ್ನೇಹ ಗಟ್ಟಿಯಾದ ಪ್ರತೀಕವಾಗಿ ಇಬ್ಬರ ಮಧ್ಯೆ ಭೇಟಿಗಳು ನಡೆಯುತ್ತಲೇ ಇದ್ದವು’ ಎಂದು ಪ್ರೇಮಪ್ರಸಂಗದ ನಾಂದಿ ಅಧ್ಯಾಯವನ್ನು ಅವರು ತೆರೆದಿಟ್ಟರು.

‘ಈ ಸ್ನೇಹ, ಪ್ರೀತಿಯಾಗಿ ಮಾಗಿದ ಕ್ಷಣ ಯಾವುದು’ ಎಂದು ಕೆಣಕಿದಾಗ, ‘ಓಹ್‌, ಅದನ್ನೆಲ್ಲ ಗುರುತಿಸೋಕೆ ಆಗಲ್ಲ. ದಿನಗಳು ಉರುಳಿದಂತೆ ಸದ್ದಿಲ್ಲದೆ ಆಗಿರುವ ರೂಪಾಂತರ ಅದು’ ಎಂದು ನಸುನಕ್ಕರು ದಿನೇಶ್‌. ‘ಮೊಬೈಲ್‌ ಇಲ್ಲದ ಕಾಲದಲ್ಲಿನ ಪ್ರೇಮಸಲ್ಲಾಪ ಕಷ್ಟವಾಗಿತ್ತು, ಅಲ್ಲವೇ’ ಎಂದು ಕನಿಕರಿಸಿದಾಗ, ‘ಅಯ್ಯೋ, ಅದನ್ನು ಯಾಕೆ ಕೇಳ್ತೀರಿ, ಲ್ಯಾಂಡ್‌ಫೋನ್‌ ಕರೆಗಳು ಏನೋ ವಿನಿಮಯ ಆಗುತ್ತಿದ್ದವು. ಆದರೆ, ಅಕ್ಕಪಕ್ಕದಲ್ಲೇ ಅಪ್ಪ–ಅಮ್ಮ ಓಡಾಡುವಾಗ ಮಾತನಾಡೋಕೆ ಹೆದರಿಕೆ ಆಗ್ತಿತ್ತು’ ಎಂದು ಹೇಳಿದರು.

‘ಮೈಸೂರ ಮಲ್ಲಿಗೆ’ಯಂತೆ ಪ್ರೇಮದ ಪರಿಮಳ ಹರಡುವ ಸಾಹಿತ್ಯ ಇಲ್ಲದಿದ್ದರೂ ಪ್ರೇಮ ಪತ್ರಗಳು ಇಬ್ಬರ ಮಧ್ಯೆ ಹರಿದಾಡಿವೆ’ ಎಂಬ ಗುಟ್ಟನ್ನೂ ಅವರು ಬಿಟ್ಟುಕೊಟ್ಟರು. ಸಿನಿಮಾ ನೋಡಿದ್ದೇವೆ, ಒಂದೂ ನೆನಪಿಗೆ ಬರ್ತಾ ಇಲ್ಲ ಎಂದು ತಲೆ ಕೆರೆದುಕೊಂಡರು.

ಶಾಸಕರ ಭವನದ ನೆನಪು
ರಾಜ್ಯ ಕಂಡ ವರ್ಣರಂಜಿತ ರಾಜಕಾರಣಿಗಳಲ್ಲಿ ಆರ್‌. ಗುಂಡೂರಾವ್‌ ಅವರೂ ಒಬ್ಬರು. 1970ರ ದಶಕದಲ್ಲಿ ಮೊದಲ ಸಲ ಶಾಸಕರಾದಾಗ ಗುಂಡೂರಾವ್‌ ಅವರ ಕುಟುಂಬ ಕುಶಾಲನಗರದಿಂದ ಬೆಂಗಳೂರಿನ ಶಾಸಕರ ಭವನಕ್ಕೆ ಸ್ಥಳಾಂತರಗೊಂಡಿತು. ದಿನೇಶ್‌ ಹಾಗೂ ಅವರ ಸಹೋದರರ ಪಾಲಿಗೆ ವಿಧಾನಸೌಧದ ಉದ್ಯಾನ ಆಟದ ಅಂಗಳವಾಗಿತ್ತು. ಗುಂಡೂರಾವ್‌ ಅವರು ಮುಖ್ಯಮಂತ್ರಿ ಆದಾಗ ದಿನೇಶ್‌ ಅವರು ಐದನೇ ತರಗತಿಯ ವಿದ್ಯಾರ್ಥಿ. ಮಕ್ಕಳು ಬೆಳೆದು ದೊಡ್ಡವರಾಗುವ ಹೊತ್ತಿಗೆ ಗುಂಡೂರಾವ್‌ ಅವರು ರಾಜಕೀಯ ಉಚ್ಛ್ರಾಯ ಸ್ಥಿತಿಯಿಂದ ವಿರಮಿಸಿದ್ದರು. ಅಂದಹಾಗೆ, ಖಡಕ್‌ ನಡೆಗೂ ಹೆಸರಾಗಿದ್ದ ಅವರು ಮಗನ ಪ್ರೇಮ ಪ್ರಕರಣಕ್ಕೆ ಹೇಗೆ ಪ್ರತಿಕ್ರಿಯಿಸಿದ್ದರು?

‘ಅಯ್ಯೋ, ನಾನು ಪ್ರೀತಿಸುವ ವಿಷಯವನ್ನು ಅವರಿಗೆ ಹೇಳುವ ಧೈರ್ಯವನ್ನೇ ಮಾಡಲಿಲ್ಲ. ಆದರೆ, ನನಗೊಬ್ಬಳು ಮುಸ್ಲಿಂ ಗೆಳತಿ ಇರುವ ವಿಷಯ ಅವರ ಕಿವಿಗೆ ಬಿದ್ದಿತ್ತಂತೆ. ಅವರು ನೇರವಾಗಿ ನನ್ನನ್ನು ಏನೂ ಕೇಳಿಲಿಲ್ಲ; ನಾನೂ ಹೇಳಲಿಲ್ಲ’ ಎಂದರು ದಿನೇಶ್‌.
‘ಅಪ್ಪ ಕಾಯಿಲೆಗೆ ಬಿದ್ದಿದ್ದರಿಂದ ಅವರ ಆರೋಗ್ಯ ಸುಧಾರಿಸಿದ ಮೇಲೆ ಯೋಚನೆ ಮಾಡೋಣ ಎಂದು ಸುಮ್ಮನಿದ್ದೆ. ಆದರೆ, ಆರೋಗ್ಯ ಚೇತರಿಕೆಯಾಗದೆ 1993ರಲ್ಲಿ ಅವರು ತೀರಿಕೊಂಡರು. ಆಗ ನನಗೆ ಏನೂ ತೋಚದಾಯ್ತು. ಮದುವೆ ಕುರಿತ ನಿರ್ಧಾರವನ್ನು ಮುಂದಕ್ಕೆ ಹಾಕಿದೆ’ ಎಂದು ನೆನಪಿಸಿಕೊಂಡರು.

‘ಧರ್ಮದ ಬೇಲಿಯನ್ನು ದಾಟಿ ಮದುವೆ ಆಗುವಾಗ ಯಾವ ಆತಂಕವೂ ಕಾಡಲಿಲ್ಲವೆ? ನಿಮಗೆ, ಇಲ್ಲದಿದ್ದರೆ ಟಬು ಅವರಿಗೆ...’ ಎಂದು ಕೇಳಿದಾಗ ದಿನೇಶ್‌, ತುಸು ಗಂಭೀರವಾದಂತೆ ಕಂಡುಬಂದರು. ‘ನಮ್ಮ ತಂದೆ ನಮ್ಮನ್ನು ತುಂಬಾ ಮುಕ್ತವಾಗಿ ಬೆಳೆಸಿದ್ದಾರೆ. ಅವರಿಗೆ ಎಲ್ಲ ಜಾತಿ–ಸಮುದಾಯಗಳ ಸ್ನೇಹಿತರಿದ್ದರು. ಎಫ್‌.ಎಂ. ಖಾನ್‌ ಮತ್ತು ಕೆ.ಎಂ. ಇಬ್ರಾಹಿಂ ಅವರಂತೂ ಕುಟುಂಬದ ಸದಸ್ಯರೇ ಆಗಿದ್ದರು. ಹೀಗಾಗಿ ಧರ್ಮಾತೀತ ಮನೋಭಾವ ಬಾಲ್ಯದಿಂದಲೇ ಮೈಗೂಡಿದೆ. ಸಮಾಜ ಹೇಗೆ ಸ್ವೀಕರಿಸುವುದು ಎಂಬ ಸಣ್ಣ ಆತಂಕ ಇತ್ತು. ಆದರೆ, ಒಲುಮೆಯ ಬೆಚ್ಚನೆ ಕಾವಿನ ಮುಂದೆ ಆ ಆತಂಕವೆಲ್ಲ ಕರಗಿ ನೀರಾಯಿತು’ ಎಂದು ವಿವರಿಸಿದರು.

ಗೆದ್ದ ಮಗಳ ಹಟ
ಟಬು ಅವರ ತವರು ಮನೆ ಬೆಂಗಳೂರಿನ ಕೋರಮಂಗಲದಲ್ಲಿ ಇದೆ. ತಂದೆ ಇಲಿಯಾಸ್‌ ತರೀಮ್‌. ಎಂಜಿನಿಯರ್‌ ಆಗಿದ್ದ ಅವರು ಸ್ವಂತ ಉದ್ದಿಮೆಯನ್ನೂ ನಡೆಸುತ್ತಿದ್ದರು. ತಾಯಿ ನಸೀಮ್‌. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಟಬು ಅಮ್ಮನ ಆಸರೆಯಲ್ಲಿ ಬೆಳೆದವರು. ಪ್ರೀತಿಯ ಮಗಳು ಅಂತರ್ಧಮೀಯ ಮದುವೆ ಪ್ರಸ್ತಾಪ ಇಟ್ಟಾಗ ನಸೀಮ್‌ ಅವರು ಕಕ್ಕಾಬಿಕ್ಕಿಯಾದರಂತೆ. ಮಗಳ ಆಸೆಗೆ ಅಡ್ಡ ಬರಲು ಮನಸ್ಸಿಲ್ಲ, ಭವಿಷ್ಯದ ಪ್ರಶ್ನೆಗೆ ಉತ್ತರವಿಲ್ಲ. ಮನದ ತುಂಬಾ ಅಲ್ಲೋಲ–ಕಲ್ಲೋಲ. ಆದರೆ, ಅಮ್ಮನ ಎದುರು ಮಗಳ ಹಟ ಗೆದ್ದಿತ್ತು.

ದಿನೇಶ್‌ ಅವರೂ ಮದುವೆಯ ಪ್ರಸ್ತಾಪವನ್ನು ಅಮ್ಮ ವರಲಕ್ಷ್ಮಿ ಅವರ ಮುಂದಿಟ್ಟರು. ಆದರೆ, ಅವರು ಜಪ್ಪೆಂದರೂ ಒಪ್ಪಲಿಲ್ಲ. ‘ನನ್ನ ಅಮ್ಮನದೇನೂ ತಪ್ಪಿಲ್ಲ. ಅವರು ಬೆಳೆದುಬಂದ ಕಾಲಘಟ್ಟ ಹಾಗೂ ಪರಿಸರ ಹಾಗಿತ್ತು. ಎಷ್ಟೇ ಪ್ರಯತ್ನಿಸಿದರೂ ಅಮ್ಮನನ್ನು ಒಪ್ಪಿಸಲು ಆಗಲಿಲ್ಲ. ಪ್ರೇಮದ ದಾರಿ ರಿಜಿಸ್ಟರ್ಡ್‌ ಮದುವೆ ಆಗುವತ್ತ ಹೊರಳಿತು’ ಎಂದು ವಿವರಿಸಿದರು.

ಅಜ್ಜ–ಅಜ್ಜಿ ಬಂದರು
ವರಲಕ್ಷ್ಮಿ ಅವರು ಮದುವೆಗೆ ಹೋಗಲಿಲ್ಲ. ಆದರೆ, ಅವರ ತಂದೆ–ತಾಯಿಗಳಾದ ನಂಜುಂಡಸ್ವಾಮಿ ಮತ್ತು ಚೂಡಾಮಣಿ ಅವರು ಮೊಮ್ಮಗನ ರಿಜಿಸ್ಟರ್ಡ್‌ ಮದುವೆಗೆ ಸಾಕ್ಷಿಯಾಗಿ ಬಾಯಿ ಸಿಹಿ ಮಾಡಿಕೊಂಡು ಬಂದರು. ಟಬು ಅವರ ಅಮ್ಮ ನಸೀಮ್‌ ಸಹ ಪಾಲ್ಗೊಂಡಿದ್ದರು. 

ದಿನೇಶ್‌–ಟಬು ಮದುವೆಯೇನೋ ಆದರು. ವರಲಕ್ಷ್ಮಿ ಅವರ ಒಪ್ಪಿಗೆ ಮುದ್ರೆ ಬೀಳುವುದು ಕಷ್ಟವಾಗಿತ್ತು. ಟಬು ಅವರು ಬೇಜಾರು ಮಾಡಿಕೊಂಡು ಕೂರಲಿಲ್ಲ. ಮನೆಯ ಸಂಪ್ರದಾಯ ಅರಿತು ಅದರಂತೆ ನಡೆಯತೊಡಗಿದರು. ಎಲ್ಲರೊಂದಿಗೆ ಬೆರೆತರು. ಗೊತ್ತಿಲ್ಲದ್ದನ್ನು ಕೇಳಿ ತಿಳಿದುಕೊಂಡರು. ಬರುಬರುತ್ತಾ ವಾತಾವರಣ ತಿಳಿಯಾಗತೊಡಗಿತು. ಮೊದಲ ಮೊಮ್ಮಗಳು ಬಂದಮೇಲೆ ವರಲಕ್ಷ್ಮಿ ಅವರ ಸಿಟ್ಟು ಕಡಿಮೆಯಾಗಿ ಪ್ರೀತಿ ಹೆಚ್ಚಿತು. ಸೊಸೆ–ಮೊಮ್ಮಗಳನ್ನು ನೋಡಲು ಅವರು ಬಂದರೆ, ಅತ್ತೆಯನ್ನು ಕಾಣಲು ಟಬು ಹೋಗತೊಡಗಿದರು.
ಮಾನವೀಯ ಸಂಬಂಧಗಳೇನೋ ಬೆಸೆದವು.

ಆದರೆ, ದೇವರ ಜಗುಲಿಯಲ್ಲಿ ಎರಡೂ ಧರ್ಮಗಳ ನಂಬಿಕೆಗಳಿಗೆ ಹೇಗೆ ಸ್ಥಾನ ಸಿಕ್ಕಿತು ಎನ್ನುವ ಕುತೂಹಲ. ‘ಭಗವದ್ಗೀತೆ, ಕುರಾನ್‌ ಮಾತ್ರವಲ್ಲದೆ ಬೈಬಲ್‌ ಕೂಡ ಅಲ್ಲಿದೆ. ಮಕ್ಕಳು ಧರ್ಮಗಳ ಚೌಕಟ್ಟು ಮೀರಿ ಬೆಳೆಯಬೇಕು ಎನ್ನುವ ಅಪೇಕ್ಷೆ ನಮ್ಮಿಬ್ಬರದಾಗಿದೆ. ಎಲ್ಲಕ್ಕಿಂತ ದೊಡ್ಡದಾದ ಮನುಷ್ಯ ಧರ್ಮದ ಪರಿಕಲ್ಪನೆಯನ್ನು ಅವರಲ್ಲಿ ಬಿತ್ತಿದ್ದೇವೆ’ ಎಂದರು ದಿನೇಶ್‌.

ಆಹಾರ ಸಂಸ್ಕೃತಿ ಪ್ರಶ್ನೆಯೂ ಬೆನ್ನಹಿಂದೆಯೇ ಎದ್ದಿತು. ‘ತಂದೆಯವರ ಕಾಲದಿಂದಲೂ ನಾವು ಈ ವಿಷಯದಲ್ಲಿ ಲಿಬರಲ್‌. ಸಸ್ಯಾಹಾರ ಕಡ್ಡಾಯವಲ್ಲ. ಡೈನಿಂಗ್‌ ಟೇಬಲ್‌ ಮೇಲೆ ನಾನ್‌ವೆಜ್‌ಗೂ ಜಾಗವಿದೆ’ ಎಂದು ಸ್ಪಷ್ಟಪಡಿಸಿದರು. ದಿನೇಶ್‌ ಅವರ ಮನೆಯಲ್ಲಿ ಎರಡು ಧರ್ಮಗಳು ‘ತಾವು’ ಪಡೆದಿವೆ. ಹೀಗಾಗಿ ಹಬ್ಬಗಳು ಅಧಿಕ. ಹಿಂದೂ–ಮುಸ್ಲಿಂ ಹಬ್ಬಗಳಿಗೆ ಅಲ್ಲಿ ಸಮಾನ ಅವಕಾಶ. ಕ್ರಿಸ್ಮಸ್‌ ಯಾಕೆ ಬಿಡಬೇಕು ಎಂಬ ಪ್ರಶ್ನೆ ಉದ್ಭವವಾದಾಗ ‘ಹಬ್ಬಗಳ ಆಚರಣೆ ಮೆನು’ವಿನಲ್ಲಿ ಅದಕ್ಕೂ ಸ್ಥಾನ ಕಲ್ಪಿಸಲಾಗಿದೆ.

ಹಬ್ಬಗಳ ಮಾಹಿತಿಗಾಗಿ ಟಬು ತಪ್ಪದೇ ಹಿಂದೂ ಕ್ಯಾಲೆಂಡರ್‌ ನೋಡುತ್ತಾರೆ. ಗಣೇಶ ಚತುರ್ಥಿ ಬಂತೆಂದರೆ ಅವರೇ ಗಣೇಶನ ಮೂರ್ತಿಯನ್ನು ತಂದು ಪೂಜೆ ಮಾಡುತ್ತಾರೆ. ದೀಪಾವಳಿಯಲ್ಲಿ ಮನೆಗೆ ಬಂದವರಿಗೆ ಬಿಸಿ ಬಿಸಿ ಒಬ್ಬಟ್ಟುಗಳ ಆತಿಥ್ಯ ಕಾದಿರುತ್ತದೆ. ಹಬ್ಬಗಳಲ್ಲಿ ಅನುಸರಿಸಬೇಕಾದ ಸಂಪ್ರದಾಯಗಳ ಕುರಿತು ಅತ್ತೆ ಹಾಗೂ ಕುಟುಂಬದ ಇತರ ಸದಸ್ಯರ ಜತೆಗೆ ಚರ್ಚಿಸಿ ಅದನ್ನು ಪಾಲಿಸುತ್ತಾರೆ.

ಈದ್‌ ಹಾಗೂ ರಂಜಾನ್‌ ಬಂತೆಂದರೆ ದಿನೇಶ್‌ ಅವರ ಕಾರು ಕೋರಮಂಗಲದ ಕಡೆಗೆ ತಿರುಗುತ್ತದೆ. ಆಗ ನಸೀಮ್‌ ಅವರ ಮನೆಯಲ್ಲಿ ಹಬ್ಬದ ಸಂಭ್ರಮ. ಈ ದಂಪತಿಗೆ ಇಬ್ಬರು ಪುತ್ರಿಯರು. ದೊಡ್ಡವಳು ಅನನ್ಯ. ಸಿಂಗಪುರದಲ್ಲಿ ಫ್ಯಾಷನ್‌ ಟೆಕ್ನಾಲಜಿಯಲ್ಲಿ ಅಧ್ಯಯನ ಮಾಡುತ್ತಿದ್ದರೆ, ಚಿಕ್ಕವಳು ಅಮೀರ. ಬೆಂಗಳೂರಿನಲ್ಲೇ ಪಿಯುಸಿ ಓದುತ್ತಿದ್ದಾಳೆ. ದಿನೇಶ್‌ ಅವರ ಸಹೋದರರ ಮಕ್ಕಳೊಂದಿಗೆ ಇವರಿಬ್ಬರೂ ಚೆನ್ನಾಗಿ ಬೆರೆತಿದ್ದಾರೆ. ಆಗಾಗ ಒಟ್ಟೊಟ್ಟಿಗೆ ಪ್ರವಾಸಗಳೂ ಆಯೋಜನೆ ಆಗುತ್ತವೆ.

ಟಬು ಅವರು ಬಿಡುವಿನ ವೇಳೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗಲು ಪ್ರತಿಷ್ಠಾನವೊಂದನ್ನು ಸ್ಥಾಪಿಸಿದ್ದಾರೆ. ಅದಕ್ಕೆ ದಿನೇಶ್‌ ನೆರವು ನೀಡುತ್ತಾರೆ. ಪತಿಯ ಕ್ಷೇತ್ರವಾದ ಗಾಂಧಿನಗರದಲ್ಲಿ ಕಾರ್ಯಕರ್ತರ ಸಂಪರ್ಕ ಸಭೆಗಳನ್ನು ಟಬು ನಡೆಸುತ್ತಾರೆ. ಅವರ ಕಷ್ಟ–ಸುಖಗಳನ್ನು ವಿಚಾರಿಸುತ್ತಾರೆ. ಹೀಗಾಗಿ ಸತತ ನಾಲ್ಕು ಬಾರಿ ಗೆಲುವಿನ ನಗೆ ಬೀರುವುದು ಸಾಧ್ಯವಾಗಿದೆ. ‘ನನ್ನ ಪತ್ನಿ ನನಗೆ ರಾಜಕೀಯ ಶಕ್ತಿ’ ಎಂದು ಹೆಮ್ಮೆಯಿಂದಲೇ ಹೇಳಿದರು ದಿನೇಶ್‌.

‘ಟಬು ಅವರು ಮಾಡಿದ ಯಾವ ಅಡುಗೆ ಇಷ್ಟ’ ಎಂಬ ಪ್ರಶ್ನೆಗೆ ಉತ್ತರಿಸದೆ ದಿನೇಶ್‌ ಬಲು ಜಾಣತನದಿಂದ ನುಸುಳಿಕೊಂಡರು. ‘ಅವಳು ಅಡುಗೆ ಮಾಡುವುದನ್ನು ಬಿಟ್ಟು 2–3 ವರ್ಷಗಳೇ ಆದವು. ಇರಿ, ಅಪರೂಪಕ್ಕೆ ಒಮ್ಮೆಯಾದರೂ ಮಾಡು ಅಂತ ಹೇಳ್ತೀನಿ’ ಎಂದು ನಗೆ ಬೀರಿದರು. ಅಂದಹಾಗೆ, ತಮ್ಮ ಪ್ರೀತಿಯ ‘ಬಾಬಾ’ಗೆ (ದಿನೇಶ್‌ ಅವರಿಗೆ ಟಬು ಅವರು ಸಂಬೋಧಿಸುವ ಹೆಸರು) ಬಟ್ಟೆ ಆಯ್ಕೆ ಮಾಡುವುದು ಟಬು ಅವರದೇ ಕೆಲಸವಂತೆ.

‘ಅಮ್ಮ ಹಾಗೂ ಅತ್ತೆ ಆಗಾಗ ಬರ್ತಾ ಇರ್ತಾರೆ. ನನ್ನ ಮಕ್ಕಳು ಅಜ್ಜಿಯರನ್ನು ಭೇಟಿಯಾಗಲು ವಾರಾಂತ್ಯದಲ್ಲಿ ಹೋಗುತ್ತಿರುತ್ತಾರೆ. ಮೊಮ್ಮಕ್ಕಳ ಮೇಲೆ ಅವರಿಗೆ ತುಂಬಾ ಪ್ರೀತಿ’ ಎಂದು ನೆನೆದರು. ಮಾತು ಓದಿನ ಕಡೆಗೆ ತಿರುಗಿತು. ‘ನಾನೇನು ಸಾಹಿತ್ಯದ ವಿದ್ಯಾರ್ಥಿ ಅಲ್ಲ. ಕಥೆ–ಕಾದಂಬರಿಗಳನ್ನು ಅಷ್ಟಾಗಿ ಓದುವುದಿಲ್ಲ. ವಿಜ್ಞಾನ–ತಂತ್ರಜ್ಞಾನ ಪುಸ್ತಕಗಳೆಂದರೆ ಇಷ್ಟ. ಆದರೆ, ಈಗೀಗ ಓದುವುದು ಕಡಿಮೆ ಆಗಿದೆ. ಆ ಕೊರತೆ ನೀಗಿಸುವ ಸಲುವಾಗಿ ಮೊನ್ನೆ ಆರ್ಚಿ ಬ್ರೌನ್‌ ಅವರ ‘ಮಿತ್‌ ಆಫ್‌ ಸ್ಟ್ರಾಂಗ್‌ ಲೀಡರ್‌’ ಕೃತಿಯನ್ನು ಕೈಗೆತ್ತಿಕೊಂಡಿದ್ದೇನೆ. ಅಟಲ್‌ ಬಿಹಾರಿ ವಾಜಪೇಯಿ ಅವರ ಜೀವನಗಾಥೆಯೂ ನನ್ನ ಬಳಿಯಿದೆ’ ಎಂದು ಖುಷಿಯಿಂದ ಹೇಳಿದರು.

ನಿಮ್ಮ ಪ್ರೇಮಪ್ರಸಂಗವನ್ನು ಮಲ್ಲಿಗೆ ಕವಿ ಕೆ.ಎಸ್‌. ನರಸಿಂಹಸ್ವಾಮಿ ಅವರಿಗೆ ಹೇಳಿದ್ದರೆ ‘ಭಾವಗಳ ಮೀಟುವೆವು, ಧರ್ಮಗಳ ದಾಟುವೆವು, ಒಲುಮೆಯೊಳಗೊಂದು ನಾವು’ ಎನ್ನುವ ಕಾವ್ಯ ಬರೆಯುತ್ತಿದ್ದರೇನೋ ಎಂದು ಹೇಳಿದಾಗ, ದಿನೇಶ್‌ ನಕ್ಕುಬಿಟ್ಟರು. ಕುಳಿತ ಕೋಣೆಯ ಗಾಜಿನ ಗೋಡೆಯಿಂದ ಆಚೆ ನೋಟ ಬೀರಿದಾಗ ‘ಬೇಗ ಎದ್ದು ಬನ್ನಿ’ ಎನ್ನುವಂತೆ ಸರದಿಯಲ್ಲಿ ನಿಂತವರೆಲ್ಲ ಮುಖದಲ್ಲಿ ಸಿಡಿಮಿಡಿ ಪ್ರದರ್ಶಿಸುತ್ತಿದ್ದರು. ಪ್ರೇಮ ಕಥನದ ಕಣಿವೆಯಿಂದ ಹೊರಗೆ ಹೆಜ್ಜೆ ಹಾಕಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT