ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ಪುನರಾಗಮನಕ್ಕೆ ಪ್ರೇಮದ ರೆಕ್ಕೆಗಳು

Last Updated 26 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬಾನುಲಿಗಳಲ್ಲಿ, ಕಿರುತೆರೆ ವಾಹಿನಿಗಳಲ್ಲಿ ಆಗಾಗ ಮೂಡಿಬರುವ ಮೋಹಕ ಹಾಡು ‘ಕಣ್ ಕಣ್ಣ ಸಲಿಗೆ...’. ‘ನವಗ್ರಹ’ ಸಿನಿಮಾದ ಈ ಗೀತೆಯಲ್ಲಿ ಶರ್ಮಿಳಾ ಮಾಂಡ್ರೆ ಅವರೊಂದಿಗೆ ರೊಮಾನ್ಸ್‌ ಮಾಡಿದ ತರುಣ ಧರ್ಮ ಕೀರ್ತಿರಾಜ್. ಆನಂತರ ‘ಒಲವೇ ವಿಸ್ಮಯ’ ಚಿತ್ರದಲ್ಲಿ ನಟಿಸಿದ ಧರ್ಮ, ತರುವಾಯ ಮೂರು ವರ್ಷಗಳ ಕಾಲ ಅಜ್ಞಾತವಾಸದಲ್ಲಿದ್ದರು. ಈಗ ‘ಮುಮ್ತಾಜ್’ ಮೂಲಕ ಅವರು ಬೆಳ್ಳಿತೆರೆಗೆ ಮರಳುತ್ತಿದ್ದಾರೆ.

‘ಮುಮ್ತಾಜ್‌’ ಸಿನಿಮಾ ಸಹೃದಯರಲ್ಲಿ ಕುತೂಹಲ ಮೂಡಿಸಿದೆ. ಅದಕ್ಕೆ ಕಾರಣಗಳೂ ಇವೆ. ಧರ್ಮ ಕೀರ್ತಿರಾಜ್‌ ಪುನರಾಗಮನದ ಈ ಚಿತ್ರದಲ್ಲಿ ನಟ ದರ್ಶನ್ ಡಾನ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಅವರಿಗೆ ಒಂದು ಫೈಟ್ ಸಹ ಇದೆ. ‘ಅಗ್ರಜ’ ಚಿತ್ರದ ನಂತರ ದರ್ಶನ್ ಅತಿಥಿ ನಟನಾಗಿ ಕಾಣಿಸಿಕೊಂಡಿರುವುದು ಈ ಚಿತ್ರದಲ್ಲೇ. ‘ಅಗ್ರಜ’ ಚಿತ್ರದ ಸಂದರ್ಭದಲ್ಲಿ ದರ್ಶನ್‌ ಪ್ರಚಾರದಿಂದ ದೂರ ಉಳಿದಿದ್ದರು. ಆದರೆ, ‘ಮುಮ್ತಾಜ್‌’ ಚಿತ್ರಕ್ಕೆ ಸಂಬಂಧಿಸಿದಂತೆ ದರ್ಶನ್ ಪಾತ್ರದ ಸ್ಟಿಲ್‌ಗಳು ಬಿಡುಗಡೆಯಾಗಿವೆ. ‘ಧರ್ಮನಿಗೆ ನನ್ನ ಬೆಂಬಲ ಸದಾ ಇರುತ್ತದೆ’ ಎಂದವರು ಹೇಳಿದ್ದಾರೆ.

2015 ತನ್ನ ಪಾಲಿಗೆ ಹೊಸ ಹುರುಪು ನೀಡುವ ವರ್ಷ ಎನ್ನುವ ನಿರೀಕ್ಷೆ ಧರ್ಮ ಅವರದು. ‘‘ವರ್ಷಕ್ಕೆ ಎರಡು ಮೂರು ಸಿನಿಮಾ ಮಾಡಬೇಕು ಎನ್ನುವ ಆಸೆ–ಆಲೋಚನೆ ಇದೆ. ಈ ಮೂರು ವರ್ಷಗಳ ಗ್ಯಾಪ್ ಮತ್ತೆ ಜೀವನದಲ್ಲಿ ಎಂದಿಗೂ ಬರಬಾರದು ಎಂದುಕೊಂಡಿದ್ದೇನೆ.

ಕಿರುತೆರೆಯಲ್ಲಿ ಅವಕಾಶಗಳು ಬಂದಿದ್ದವು. ಆದರೆ ಸಿನಿಮಾ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದೆ. ಬಿಡುವಿನ ಅವಧಿಯಲ್ಲಿ ಚೆನ್ನೈಗೆ ಹೋಗಿ ಸಿನಿಮಾ ಬಗ್ಗೆ ಸಾಕಷ್ಟು ವಿಷಯ ತಿಳಿದುಕೊಂಡಿರುವೆ. ‘ಮುಮ್ತಾಜ್‌’ ಚಿತ್ರದ ಹಾಡುಗಳು ಚೆನ್ನಾಗಿ ಮೂಡಿಬಂದಿವೆ. ‘ನವಗ್ರಹ’ದಲ್ಲಿ ಧರ್ಮ ಎಲ್ಲರೊಳಗೊಬ್ಬರು ಎನ್ನುವಂತಿದ್ದರು. ಆ ನಂತರ ‘ಒಲವೇ ವಿಸ್ಮಯ’ವೂ ಕೈ ಹಿಡಿಯಲಿಲ್ಲ. ‘ಮುಮ್ತಾಜ್‌’ನಲ್ಲಿ ಫೈಟ್‌, ಡ್ಯಾನ್ಸ್‌ಗೂ ಆದ್ಯತೆ ಇದೆ.

ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ‘ಒಂದು ಕೆಲಸ ಬಂದಾಗ ಸಿನ್ಸಿಯರ್ ಆಗಿ ದುಡಿದು ಬಿಡು. ಫಲದ ಬಗ್ಗೆ ಚಿಂತೆ ಬೇಡ’ ಎಂದು ಅಪ್ಪ ಹೇಳುತ್ತಿದ್ದರು. ಅದರಂತೆಯೇ ಕೆಲಸ ಮಾಡುತ್ತಿದ್ದೇನೆ’ ಎಂದು ಧರ್ಮ ಹೇಳುತ್ತಾರೆ.

ಮುಮ್ತಾಜ್ ಎಂದ ಕೂಡಲೇ ನೆನಪಾಗುವುದು ಐತಿಹಾಸಿಕ ತಾಜಮಹಲ್. ಆ ಐತಿಹಾಸಿಕ ಪ್ರೇಮಮಹಲಿನಲ್ಲಿ ಚಿತ್ರೀಕರಣ ಮಾಡಿರುವುದು ‘ಮುಮ್ತಾಜ್‌’ ವಿಶೇಷಗಳಲ್ಲೊಂದು. ನಾಯಕ–ನಾಯಕಿಯ ಪ್ರೇಮ ನಿವೇದನೆ ದೃಶ್ಯಕ್ಕೆ ತಾಜಮಹಲ್‌ ಸಾಕ್ಷಿಯಾಗಿದೆಯಂತೆ. 
ನಟ ಕೀರ್ತಿರಾಜ್ ಅವರ ಪುತ್ರ ಎನ್ನುವ ಹಿನ್ನೆಲೆ ಇದ್ದರೂ ಧರ್ಮ ಸಿನಿಮಾರಂಗದಲ್ಲಿ ಗಟ್ಟಿಯಾಗಿ ತಳವೂರಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಅವರು ನೀಡುವ ಉತ್ತರ– ‘ಕೀರ್ತಿರಾಜ್ ಮಗ ಎಂದ ತಕ್ಷಣ ನಿನಗೆ ಯಾರೂ ಅವಕಾಶಗಳನ್ನು ಕೊಡುವುದಿಲ್ಲ. ಕಲಿಯಬೇಕು, ಕಷ್ಟಪಡಬೇಕು. ಒಂದು ಹಂತಕ್ಕೆ ನಿನ್ನ ಪ್ರತಿಭೆಯನ್ನು ನಿರ್ದೇಶಕರು–ನಿರ್ಮಾಪಕರು ಗುರ್ತಿಸಿದ ನಂತರ ನಾನು ನಿನಗೆ ಬೆಂಬಲವಾಗಿ ನಿಲ್ಲುವೆ ಎಂದು ಅಪ್ಪ ಹೇಳಿದ್ದಾರೆ’.

ಸ್ನೇಹಕ್ಕೆ ಸ್ನೇಹ
‘ಧರ್ಮ ಮೇಲಿನ ಸ್ನೇಹಕ್ಕೆ ನಾನು ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ’ ಎಂದಿದ್ದರು ದರ್ಶನ್. ಧರ್ಮ ಸಹ ದರ್ಶನ್‌ ಹಾಗೂ ತಮ್ಮದು ಅಣ್ಣ–ತಮ್ಮನ ಅನುಬಂಧ ಎನ್ನುತ್ತಾರೆ. ‘ನಮ್ಮ ಮನೆಯ ಎಲ್ಲ ಕಾರ್ಯಕ್ರಮಗಳಿಗೂ ದರ್ಶನ್ ಬರುತ್ತಾರೆ. ನನ್ನ ಸಿನಿಮಾ ಬದುಕಿಗೂ ಸಫೋರ್ಟ್ ಆಗಿದ್ದಾರೆ. ‘ನವಗ್ರಹ’ ಚಿತ್ರದ ಸಂದರ್ಭದಲ್ಲಿ ಅವರೇ ಮನೆಗೆ ಬಂದು ಚಿತ್ರದ ಬಗ್ಗೆ ಹೇಳಿ ನಟಿಸಲು ಅವಕಾಶ ಕೊಟ್ಟಿದ್ದರು. ಆ ಚಿತ್ರದಲ್ಲಿ ಅವರು ಕರೆಯುವ ಕ್ಯಾಟ್‌ಬರಿ ಹೆಸರಿಂದಲೇ ನನ್ನನ್ನು ಜನರು ಈಗಲೂ ಗುರ್ತಿಸುತ್ತಾರೆ. ‘ಮುಮ್ತಾಜ್’ ಚಿತ್ರದಲ್ಲಿ ನೀವು ನಟಿಸಬೇಕು ಎಂದು ಕೇಳಿಕೊಂಡೆವು. ಕಥೆ ಕೇಳಿದ ತಕ್ಷಣವೇ ಒಪ್ಪಿಕೊಂಡರು’ ಎಂದು ದರ್ಶನ್ ಮತ್ತು ತಮ್ಮ ಸ್ನೇಹದ ಬಗ್ಗೆ ಧರ್ಮ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT