ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡದ ಹೆರಿಟೇಜ್‌ ‘ಅ’ರಮನೆ

Last Updated 22 ಜುಲೈ 2014, 19:30 IST
ಅಕ್ಷರ ಗಾತ್ರ

ಕಡಿಮೆ ಖರ್ಚಿನಲ್ಲಿ ತಮಗೆ ಇಷ್ಟವಾದ ಮನೆ ಕಟ್ಟುವುದು ಅವರ ಉದ್ದೇಶವಾಗಿತ್ತು. ಅದನ್ನು ಸಾಕಾರಗೊಳಿಸುವ ಸಿವಿಲ್‌ ಎಂಜಿನಿಯರ್‌ ಒಬ್ಬರು ಬೇಕಾಗಿತ್ತು. ಪರಿಚಯದವರೊಬ್ಬರು ‘ವಾಸ್ತುಶಿಲ್ಪಿ ಮತ್ತು ಸಿವಿಲ್‌ ಎಂಜಿನಿಯರ್‌’ ಒಬ್ಬರನ್ನು ಪರಿಚಯ ಮಾಡಿಕೊಟ್ಟರು. ಮಾಲೀಕರ ಅಗತ್ಯಗಳು ಏನಿವೆ ಎಂಬುದನ್ನು ಸೂಕ್ಷ್ಮವಾಗಿ ಅರಿತುಕೊಂಡ ಸಿವಿಲ್‌ ಎಂಜಿನಿಯರ್‌ ಪ್ರಕಾಶ್‌ ಕುಸುಗಲ್‌, ಹಲವು ಇಷ್ಟ–ಕಷ್ಟಗಳ ನಡುವೆ 1300 ಚದರ ಅಡಿ ಜಾಗದಲ್ಲಿ ಕೇವಲ ₨11.50 ಲಕ್ಷದಲ್ಲಿ(ನಾಲ್ಕು ವರ್ಷಗಳ ಹಿಂದಿನ ಲೆಕ್ಕ) ಎರಡು  ಅಂತಸ್ತಿನ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ಪಾರಂಪರಿಕ ಕಟ್ಟಡದ ರೀತಿ ಭಾಸವಾಗುವ ಈ ಸರಳ, ಸುಂದರ ಮನೆ ಇರುವುದು ಧಾರವಾಡದಲ್ಲಿ.

ಅರವಿಂದ ಪುಣೇಕರ್‌ ಮತ್ತು ಡಾ. ಸವಿತಾ ಪುಣೇಕರ್‌ ದಂಪತಿಗೆ ಸೇರಿದ ಈ ಮನೆಯನ್ನು ಬಹಳ ಯೋಜಿತ ರೀತಿಯಲ್ಲಿಯೇ ನಿರ್ಮಿಸಲಾಗಿದೆ. ಮನೆ ಕಟ್ಟುವುದಕ್ಕೆ ಮುಂಚೆಯೇ ‘ವಾಸ್ತುಶಿಲ್ಪದ ಗಾಂಧಿ’ ಎಂದೇ ಖ್ಯಾತರಾಗಿದ್ದ ಲಾರಿ ಬೆಕರ್‌ ಅವರನ್ನು ಚೆನ್ನಾಗಿ ಓದಿ ತಿಳಿದುಕೊಂಡಿದ್ದ ಸವಿತಾ ಅವರು, ಅತ್ಯಂತ ಮುತುವರ್ಜಿ ವಹಿಸಿ ತಮ್ಮ ಕನಸಿನ ಮನೆಯನ್ನು ಕಟ್ಟಿಸಿಕೊಂಡಿದ್ದಾರೆ.

ಮೂರು ಬೆಡ್‌ ರೂಮ್‌ಗಳು, ವಿಶಾಲವಾದ ಹಜಾರ, ಅಡುಗೆ ಮನೆ ಇರುವ ಈ ಮನೆಯನ್ನು ನಿರ್ಮಿಸಲು, ವೈರ್‌ಕಟ್‌ ಬ್ರಿಕ್ಸ್‌ಗಳನ್ನೇ (ತಂತಿಯಿಂದ ಕತ್ತರಿಸಿದ  ಇಟ್ಟಿಗೆ) ಬಳಸಲಾಗಿದೆ. ವೈರ್‌ಕಟ್‌ ಇಟ್ಟಿಗೆ ಸ್ವಲ್ಪ ಬೆಲೆ ಜಾಸ್ತಿ. ಹಾಗಿದ್ದೂ ಹೆಚ್ಚಿನ ವೆಚ್ಚವಾದರೂ ಚಿಂತೆ ಇಲ್ಲ ಮನೆ ಭದ್ರವಾಗಿರಬೇಕು ಎಂಬ ಉದ್ದೇಶದಿಂದಲೇ ಈ ಇಟ್ಟಿಗೆ ಬಳಸಲಾಗಿದೆ.

ಪ್ರತಿ ಆರು ಅಡಿಗೆ ಗುಂಡಿ ನಿರ್ಮಿಸಿ, ಎರಡು ಗುಂಡಿಗಳ ನಡುವೆ ಕಮಾನಿನಾಕಾರದಲ್ಲಿ ಗೋಡೆ ಕಟ್ಟುವ ಮೂಲಕ ಅಡಿಪಾಯ ನಿರ್ಮಿಸಲಾಗಿದೆ. ಖಾಲಿ ಜಾಗಕ್ಕೆ ಮಣ್ಣು ತುಂಬಲಾಗಿದೆ. ಆ ಮೂಲಕ, ಅಡಿಪಾಯ ತೆಗೆಯಲು ಬೇಕಾದ ಕಾರ್ಮಿಕರು, ಕಲ್ಲು ಕಟ್ಟಡ ಕಟ್ಟಲು ಬೇಕಾದ ಸಾಮಗ್ರಿಗಳನ್ನು ಉಳಿಸಲಾಗಿದೆ.ಈ ರೀತಿ ಮಾಡುವುದರಿಂದ ಅಂದಾಜಿನ ಪ್ರಕಾರ ಶೇ 45ರಷ್ಟು ಅಡಿಪಾಯದ ಕೆಲಸ ಮತ್ತು ಶೇ 55ರಷ್ಟು ಹಣವೂ ಉಳಿತಾಯ ಆಗಿದೆ ಎನ್ನುತ್ತಾರೆ ಪ್ರಕಾಶ್‌ ಕುಸುಗಲ್‌.

ಅಂದಹಾಗೆ ಕಿಟಕಿಗಳಿಗಾಗಿ 27 ಕಮಾನುಗಳು ಸೇರಿದಂತೆ ಒಟ್ಟು 50 ಕಮಾನುಗಳನ್ನು ನಿರ್ಮಿಸಲಾಗಿದೆ.  ಈ ಹೆಚ್ಚಿನ ಸಂಖ್ಯೆಯ ಕಮಾನುಗಳೇ ಮನೆಯ ಅಂದವನ್ನು ಹೆಚ್ಚಿಸಿವೆ. ವಿಶೇಷ ನೋಟವನ್ನೂ ದೊರಕಿಸಿಕೊಟ್ಟಿವೆ. ತಾರಸಿಯ ಮೌಲ್ಡ್‌ಗೆ ಬದಲಾಗಿ ಟೆರಾಕ್ರೀಟ್ ಇಟ್ಟಿಗೆಗಳನ್ನು ಬಳಸಲಾಗಿದೆ. ಅದರ ಮೇಲೆ 1.5 ಇಂಚಿನಷ್ಟು ದಪ್ಪನಾಗಿ ಕಾಂಕ್ರಿಟ್‌ ಹಾಕಲಾಗಿದೆ. ಟೆರಾಕ್ರೀಟ್‌ ಇಟ್ಟಿಗೆಗಳು ತಾಪ ನಿರೋಧಕ ಎಂದು ಅವುಗಳನ್ನು ಬಳಸಲಾಗಿದೆ. ಇದರಿಂದ ಸೆಂಟರಿಂಗ್‌, ಉಕ್ಕು ಬಳಕೆಯಲ್ಲೂ ಉಳಿತಾಯವಾಗಿದೆ.

ಮನೆಯ ನೆಲಹಾಸಿಗೆ ರೆಡ್‌ ಆಕ್ಸೈಡ್‌ ಹಾಕಲಾಗಿದೆ. ಹಳೆಯ ಕಾಲದ ಈ ಪದ್ಧತಿ ಅನುಸರಿಸಿದ್ದರಿಂದ ಸಾಕಷ್ಟು ಹಣವೂ ಉಳಿತಾಯವಾಗಿದೆ. ಮನೆಯ ನೆಲವೂ ಅಚ್ಚುಕಟ್ಟಾಗಿ ಕಾಣುತ್ತಿದೆ ಎನ್ನುತ್ತಾರೆ ಸವಿತಾ. ಮನೆಯ ಸುತ್ತಲೂ ಸಾಕಷ್ಟು ಖಾಲಿ ಜಾಗವಿದ್ದು ಕೈತೋಟ ನಿರ್ಮಿಸಿ ವಿವಿಧ ಹಣ್ಣು ತರಕಾರಿ ಗಿಡಗಳನ್ನು ಬೆಳೆಯಲಾಗಿದೆ. ವೈವಿಧ್ಯಮಯ ಹೂವಿನ ಗಿಡಗಳನ್ನು ಬೆಳೆಸಿರುವುದರಿಂದ ಮನೆಯ ಹೊರನೋಟಕ್ಕೊಂದು ಹೊಸ ಚಹರೆ ಬಂದಂತಾಗಿದೆ. ಜತೆಗೆ ಮನೆಯ ಒಳ ಹೊರಗೆ ತಂಪು ವಾತಾವರಣ ಇರುವುದಕ್ಕೂ ಅವಕಾಶ ಮಾಡಿಕೊಟ್ಟಂತಾಗಿದೆ.

ಕೊಠಡಿ ಮತ್ತು ಹಜಾರದಲ್ಲಿ ದೊಡ್ಡ ಕಿಟಕಿಗಳನ್ನೇ ಇಟ್ಟಿರುವುದರಿಂದ ಶುದ್ಧ ಗಾಳಿಯ ಸಂಚಾರಕ್ಕೂ ಅವಕಾಶವಾಗಿದೆ. ನಮ್ಮ ಮನೆಯ ಕಿಟಕಿಗಳನ್ನು ನೋಡಿಯೇ ನೆರೆಹೊರೆಯವರೂ ಸಹ ’ಬೇ ವಿಂಡೊ’ ಮಾದರಿಯ ಮೊರೆ ಹೋಗಿದ್ದಾರೆ ಎನ್ನುತ್ತಾರೆ ಸವಿತಾ.
ವ್ಯರ್ಥವಾಗಿ ಮೂಲೆ ಸೇರಿದ್ದ ಟೈಲ್ಸ್‌ ಚೂರುಗಳನ್ನೇ ಬಳಸಿ ಮನೆಯ ಮುಂದಿನ ಮೆಟ್ಟಿಲುಗಳನ್ನು ಕಟ್ಟಿಕೊಳ್ಳಲಾಗಿದೆ. ಮನೆಯೊಳಗಿಂದ ಮಹಡಿ ಮೇಲೇರಲು ಪ್ರೀಕಾಸ್ಟ್‌ ಕ್ಯಾಂಟಿಲಿವರ್‌ ಮೆಟ್ಟಿಲುಗಳನ್ನು ಅಳವಡಿಸಲಾಗಿದೆ. ಅದರ ಮೇಲೆ ಸಾಗುವಾನಿ ಮರದ ಹಲಗೆಗಳನ್ನು ಹೊದಿಸಲಾಗಿದೆ. ಇದು ಮೆಟ್ಟಿಲಿಗೆ ವಿಶೇಷ ಮೆರಗು ನೀಡಿದೆ.

ಬೂದನ ಗುಡ್ಡದ ಕಲ್ಲು
ಸಾಂಪ್ರದಾಯಿಕವಾಗಿ ಗೋಡೆಯನ್ನೇ ಕೊರೆದು ಷೋಕೇಸ್‌ ನಿರ್ಮಿಸುವ  ಗೋಜಿಗೇ ಹೋಗಿಲ್ಲ. ಅದಕ್ಕೆ ಬದಲಾಗಿ ಧಾರವಾಡದ ಬೂದನಗುಡ್ಡದಿಂದ ಅಳತೆಗೆ ತಕ್ಕಂತೆ ಕಲ್ಲುಗಳನ್ನು ಕತ್ತರಿಸಿ ತಂದು ಷೋಕೇಸ್‌ ನಿರ್ಮಿಸಲಾಗಿದೆ, ಅದರ ಮೇಲೆ ಸ್ವಲ್ಪ ಕಾಂಕ್ರಿಟ್‌ ಲೇಪನವೂ ಇದೆ. ಇದರಲ್ಲಿ ಪುರಾತನ ಕಾಲದ ಚಿನ್ನಾಭರಣ ಮಳಿಗೆ, ದೀಪದ ಕಂಬ, ಸಾಣಿಗೆ (ಜರಡಿ), ತಬಲಾ, ಡಗ್ಗ, ತಂಬೂರಿ ಮುಂತಾದ ವಸ್ತುಗಳನ್ನು ಜೋಡಿಸಿರುವುದು ಒಳಾಂಗಣ ವಿನ್ಯಾಸಕ್ಕೆ ಶೋಭೆ ತಂದಿದೆ. ಜತೆಗೆ, ಹಜಾರದಲ್ಲಿ ಜೋಕಾಲಿಯೂ ಇದೆ.
ಮನೆಯಲ್ಲಿ ಫ್ರಿಡ್ಜ್‌, ಟೇಬಲ್, ಬೀಸುವ ಕಲ್ಲು ಮತ್ತಿತರ ವಸ್ತುಗಳು ಇದೇ ಸ್ಥಳದಲ್ಲಿ ಇರಬೇಕು ಅದಕ್ಕೆ ಇಷ್ಟೇ ಜಾಗಬೇಕು ಎಂಬುದನ್ನು  ಅಳತೆ ಮಾಡಿ ಮಾಡಿಸಿಕೊಂಡಿದ್ದಾರೆ ಸವಿತಾ.

‘ನಮ್ಮ ಇಚ್ಛೆಗೆ ತಕ್ಕಂತೆ, ನಮ್ಮನ್ನು ಒಪ್ಪಿಸಿ ನಾವು ಯೋಜಿಸಿದ್ದ ಹಣದಲ್ಲೇ, ಅತ್ಯಂತ ನಾಜೂಕಾಗಿ ಮನೆ ನಿರ್ಮಿಸಲು ಪ್ರಕಾಶ್‌ ಕುಸುಗಲ್‌ ಸಾಕಷ್ಟು ಶ್ರಮಪಟ್ಟಿದ್ದಾರೆ’ ಎನ್ನುತ್ತಾರೆ ಸವಿತಾ.

(ಅರವಿಂದ ಪುಣೇಕರ್‌ ಮೊ: 9844804332)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT