ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರ್ಮಿಕ ಸಾಹಿತ್ಯದ ನಿಲ್ದಾಣ

ಪುಸ್ತಕ ಪ್ರೀತಿ
Last Updated 2 ಜುಲೈ 2015, 19:30 IST
ಅಕ್ಷರ ಗಾತ್ರ

ಕತೆ, ಕಾದಂಬರಿ, ಕವಿತೆ, ವಿಮರ್ಶೆಗಳಂತಹ ಸಾಹಿತ್ಯದ ಪುಸ್ತಕಗಳನ್ನು ಮಾರಾಟ ಮಾಡುವ ಸಾಕಷ್ಟು ಪುಸ್ತಕ ಮಳಿಗೆಗಳು ನಗರದಲ್ಲಿವೆ. ಅವಕ್ಕೇನೂ ಕೊರತೆಯಿಲ್ಲ. ಆದರೆ ಧಾರ್ಮಿಕ ಸಾಹಿತ್ಯದ ವಿಷಯದಲ್ಲಿ ಈ ಮಾತು ಹೇಳುವಂತಿಲ್ಲ. ಧಾರ್ಮಿಕ ಸಾಹಿತ್ಯವೂ ಒಂದು ಜ್ಞಾನಶಾಖೆ ಎಂದು ಪರಿಗಣಿಸುವವುದಾದರೆ, ಅದರ ಪ್ರಸಾರ ಉಳಿದ ಸಾಹಿತ್ಯದ ಪ್ರಸಾರದಷ್ಟು ಪ್ರಖರವಾಗಿಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳಲೇಬೇಕು.

ಹಾಗಿದ್ದೂ ಕೇವಲ ಧಾರ್ಮಿಕ ಪುಸ್ತಕಗಳಿಗೇ ಮೀಸಲಾಗಿರುವ ಪಸ್ತಕ ಮಳಿಗೆಗಳು ನಗರದಲ್ಲಿ ಇಲ್ಲವೇ ಇಲ್ಲವೆಂದಲ್ಲ. ಆದರೆ ಅವುಗಳ ಸಂಖ್ಯೆ ಮಾತ್ರ ಕಡಿಮೆ. ಇಂತಹ ಅಪರೂಪದ ಪುಸ್ತಕ ಮಳಿಗೆಗಳ ಸಾಲಿಗೆ ವಂದನಾ ಬುಕ್‌ ಹೌಸ್‌ ಸೇರುತ್ತದೆ. ಕಳೆದ 18 ವರ್ಷಗಳಿಂದ ಈ ಪುಸ್ತಕ ಮಳಿಗೆ ಸದ್ದಿಲ್ಲದೇ ‘ನಿಮ್ಮ ಓದಿನ ಅಭಿರುಚಿಗೆ ನಾವು ಜತೆಗಿದ್ದೇವೆ’ಎಂದು ಧಾರ್ಮಿಕ ಮತ್ತು ಸಂಸ್ಕೃತ ಆಸಕ್ತರ ಜ್ಞಾನದಾಹ ತಣಿಸುತ್ತಿದೆ.

ವ್ಯವಹಾರಿಕ ದೃಷ್ಟಿಯಿಂದ ಎಲ್ಲಾ ಪುಸ್ತಕ ಮಳಿಗೆಗಳು ನಗರದ ಕೇಂದ್ರಭಾಗ ಅಥವಾ ಹೆಚ್ಚು ಜನನಿಬಿಡ ಪ್ರದೇಶದಲ್ಲಿ ನೆಲೆಗೊಂಡಿರುತ್ತವೆ. ಆದರೆ ಈ ಮಳಿಗೆ ಬಡವಣೆಯ ಒಂದು ಇಡೀ ನಗರದ ಜನರನ್ನು ಆಕರ್ಷಿಸುತ್ತಿದೆ.

ಸುಮಾರು 27 ವರ್ಷಗಳಿಂದ ಪುಸ್ತಕದ ಒಡನಾಟವನ್ನೇ ವೃತ್ತಿ, ಪ್ರವೃತ್ತಿಯನ್ನಾಗಿಸಿಕೊಂಡಿರುವ  ವೆಂಕಟೇಶ್‌, ಅತ್ಯಂತ ವಿರಳವಾಗಿರುವ ಧಾರ್ಮಿಕ ಮತ್ತು ಸಂಸ್ಕೃತ ಕೃತಿಗಳಿಗಾಗಿಯೇ ಒಂದು ಪುಸ್ತಕದ ಅಂಗಡಿ ತೆರೆಯುವ ಆಸೆ ಇಟ್ಟುಕೊಂಡಿದ್ದರು. ಅವರ ಈ ಆಸೆಯ ಫಲವೇ ವಂದನಾ ಬುಕ್‌ ಹೌಸ್‌.

ವೈವಿಧ್ಯಮಯ ಧಾರ್ಮಿಕ ಸಾಹಿತ್ಯ
ಇಲ್ಲಿ ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ವೇದ, ವೇದಾಂತ, ಪುರಾಣಗಳು, ಯೋಗ, ಉಪನಿಷತ್ತುಗಳು, ಆಯುರ್ವೇದ, ಶಬ್ದಕೋಶಗಳು, ವ್ರತಗಳ ಪುಸ್ತಕ, ಸ್ತೋತ್ರಗಳ ಪುಸ್ತಕಗಳು, ತಂತ್ರಶಾಸ್ತ್ರ, ಮಂತ್ರಶಾಸ್ತ್ರ, ಪೌರೋಹಿತ್ಯ, ಜೋತಿಷ್ಯ, ಮಕ್ಕಳ ಸಾಹಿತ್ಯ, ಸಹಸ್ರ ನಾಮಗಳು, ಪಂಚಾಂಗಗಳು, ಸಂಗೀತ ಪುಸ್ತಕಗಳು, ಡೈಜೆಸ್ಟ್ ಹೀಗೆ ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದ ಸಾಹಿತ್ಯದ ಸಂಪೂರ್ಣ ಭಂಡಾರವೇ ಇಲ್ಲಿದೆ.

ಕನ್ನಡ ಭಾಷೆಯಲ್ಲಿ ಮುದ್ರಿತವಾಗಿರುವ ಪುಸ್ತಕಗಳಷ್ಟೇ ಅಲ್ಲದೆ ಸಂಸ್ಕೃತ, ತೆಲುಗು, ತಮಿಳು ಹಾಗೂ ಇಂಗ್ಲಿಷ್‌ನಲ್ಲಿ ರಚಿತವಾಗಿರುವ ಧಾರ್ಮಿಕ ಪುಸ್ತಕಗಳೂ ಇಲ್ಲಿ ಲಭ್ಯ.

ಆಧುನಿಕ ಸಾಹಿತ್ಯವೂ ಲಭ್ಯ
ಇಷ್ಟೆಲ್ಲ ಸಿಗುವ ಇಲ್ಲಿ ಆಧುನಿಕ ಸೃಜನಶೀಲ ಸಾಹಿತ್ಯದ ಪುಸ್ತಕಗಳು ಸಿಕ್ಕಿದ್ದರೆ ಒಳ್ಳೆಯದಿತ್ತು ಎನ್ನುವವರೂ ಇದ್ದಾರೆ. ಅಂಥವರಿಗೆ ಬೇಕಾದ ಸಾಹಿತ್ಯ ಪುಸ್ತಕವನ್ನು ತರಿಸಿ ಕೊಡುವ ವ್ಯವಸ್ಥೆಯೂ ಇಲ್ಲಿದೆ. ‘ತುಂಬಾ ಬೇಡಿಕೆ ಇರುವ ಸಾಹಿತ್ಯದ ಪುಸ್ತಕಗಳನ್ನು ಸಹ ನಾವು ಇಟ್ಟಿದ್ದೇವೆ. ನಮ್ಮಲ್ಲಿ ಇರದ ಪುಸ್ತಕಗಳನ್ನು ಗ್ರಾಹಕರು ಕೇಳಿದರೆ ತರಿಸಿ ಕೊಡುತ್ತೇವೆ’ ಎನ್ನುತ್ತಾರೆ ವೆಂಕಟೇಶ್‌.

ಆನ್‌ಲೈನ್‌ಗೆ ಒಗ್ಗಲು ಕಾಲಾವಕಾಶ ಬೇಕು
‘ಆನ್‌ಲೈನ್‌ ಪುಸ್ತಕ ಮಾರಾಟದಿಂದ ಕೊಂಚ ಮಟ್ಟಿಗೆ ಪುಸ್ತಕ ಮಳಿಗೆಗಳಿಗೆ ತೊಂದರೆಯಾಗಿದ್ದರೂ, ಅಲ್ಲಿ ಸಿಗಲಿಲ್ಲ ಎಂದರೆ ನಮ್ಮಲ್ಲಿಗೆ ಬರುತ್ತಾರೆ. ಆನ್‌ಲೈನ್‌ಗೆ ಒಗ್ಗಲು ನಮಗೆ ಕಾಲಾವಕಾಶ ಬೇಕಿದೆ. ಹಾಗಾಗಿ ನಾವು ಅಂತರ್ಜಾಲದಲ್ಲಿ ಕಾಣಸಿಗಲು ಇನ್ನೂ ಸಮಯವಿದೆ’ ಎನ್ನುತ್ತಾರೆ ವೆಂಕಟೇಶ್‌.‘ಬೆಂಗಳೂರಿನಲ್ಲಿ ಧಾರ್ಮಿಕ ವಿಷಯಕ್ಕೆ ಸಂಬಂಧಪಟ್ಟ ಪುಸ್ತಕ ಮಳಿಗೆಗಳು ಕಡಿಮೆ. ನಮ್ಮದೂ ಅವುಗಳಲ್ಲಿ ಒಂದು ಎಂಬುದೇ ಹೆಮ್ಮೆ’ ಎನ್ನುತ್ತಾರೆ.

ಅಷ್ಟೇನೂ ಜನನಿಬಿಡವಲ್ಲದ ಜಾಗದಲ್ಲಿ ಪುಸ್ತಕ ಮಳಿಗೆ ಆರಂಭಿಸಿದಾಗ ಆರಂಭದ ದಿನಗಳಲ್ಲಿ ವ್ಯಾಪಾರದ ಕೊರತೆ ಅವರನ್ನು ಕಾಡಿತ್ತು.
‘ಪ್ರಾರಂಭದಲ್ಲಿ ಸ್ವಲ್ಪ ಕಷ್ಟ ಎನಿಸಿತ್ತು. ಆದರೆ ಈಗ ನಮ್ಮ ಮಳಿಗೆ ಅನೇಕರಿಗೆ ತಿಳಿದಿದೆ. ಬೆಂಗಳೂರಷ್ಟೇ ಅಲ್ಲದೆ ಇತರೆ ಊರುಗಳಿಂದಲೂ ಜನರು ಬಂದು ಪುಸ್ತಕ ಕೊಳ್ಳುತ್ತಾರೆ’ ಎಂದು ತಮ್ಮ ಮಳಿಗೆ ಬೆಳೆದ ರೀತಿಯನ್ನು ಅವರು ವಿವರಿಸಿದರು.

ಹೀಗೊಂದು ಘಟನೆ
ಅಂಗಡಿ ಮುಚ್ಚಿರುವ ಮಧ್ಯಾಹ್ನದ ಸಮಯದಲ್ಲೇ ಬಹಳಷ್ಟು ಬಾರಿ ಬಂದಿದ್ದ ಗ್ರಾಹಕರೊಬ್ಬರು ತಮಗೆ ಬೇಕಾದ ಪುಸ್ತಕಕ್ಕಾಗಿ ಮತ್ತೊಮ್ಮೆ

ಅಂಗಡಿಗೆ ಹುಡುಕಿಕೊಂಡು ಬಂದು ‘ನಿಮ್ಮ ಅಂಗಡಿ ಏನು ಯಾವಾಗ್ಲೂ ಮುಚ್ಚಿರುತ್ತೆ?’ ಎಂದು ಎತ್ತರದ ಧ್ವನಿಯಲ್ಲಿ ಕೇಳಲು ಶುರುಮಾಡಿದರು. ನಾನು ಅವರಿಗೆ ಬೇಕಾದ ಪುಸ್ತಕವನ್ನು ಕೊಟ್ಟು, ‘ಅಂಗಡಿಗೆ ತೆರೆದ ಸಮಯಕ್ಕೆ ಯಾವಾಗಲಾದರೂ ಬನ್ನಿ ಮೇಡಂ, ನಿಮಗೆ ಬೇಕಾದ ಪುಸ್ತಕ ಸಿಕ್ಕೇ ಸಿಗುತ್ತದೆ’ ಎಂದು ಸಮಾಧಾನದ ನುಡಿಯನ್ನು  ಹೇಳಿ ಕಳುಹಿಸಿದೆ.  ವೆಂಕಟೇಶ್‌, ವಂದನಾ ಬುಕ್‌ ಹೌಸ್‌ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT