ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾವಂತದ ಬದುಕಿನಲ್ಲಿಯೇ ರಂಗಭೂಮಿ ಜೀವಂತ...

Last Updated 18 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಮಂಜುನಾಥ ಬಡಿಗೇರ್‌ ಪ್ರಸ್ತುತ  ಕನ್ನಡ ರಂಗಭೂಮಿಯಲ್ಲಿ ಗಂಭೀರವಾಗಿ ತೊಡಗಿಕೊಂಡಿರುವ ಯುವ ತಲೆಮಾರಿನ ಪ್ರಮುಖರಲ್ಲೊಬ್ಬರು.  ಅವರ ನಿರ್ದೇಶನದ ‘ಚಿತ್ರಪಟ’ ನಾಟಕ  ದೆಹಲಿಯಲ್ಲಿ ಇತ್ತೀಚೆಗೆ ನಡೆದ ‘ಮಹೀಂದ್ರಾ ಎಕ್ಸಲೆನ್ಸಿ ಇನ್‌ ಥಿಯೇಟರ್‌ ಅವಾರ್ಡ್‌’ (ಮೆಟಾ)ನಲ್ಲಿ ಮೂರು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪಡೆದಿದೆ. ತುಂಬಾ ವಿನಯಪೂರ್ವಕವಾಗಿ, ಆದರೆ ಅಷ್ಟೇ ಗಟ್ಟಿಯಾಗಿ ಮಾತನಾಡುವ ಮಂಜುನಾಥ ಅವರೊಂದಿಗಿನ ಈ ಸಂದರ್ಶನ, ಹೊಸ ತಲೆಮಾರು ರಂಗಭೂಮಿಯನ್ನು ಪರಿಭಾವಿಸುತ್ತಿರುವ ಕ್ರಮವನ್ನೂ ಸೂಚಿಸುವಂತಿದೆ.

ರಂಗಭೂಮಿ ಅಥವಾ ನಾಟಕ ಎಂದರೆ ನಿಮ್ಮ ಪಾಲಿಗೆ ಏನು?
ನನ್ನ ಬದುಕಿಗಾಗಿ ನಾನು ಆಯ್ದುಕೊಂಡದ್ದು ರಂಗಭೂಮಿಯನ್ನು. ಆದ್ದರಿಂದ ರಂಗಭೂಮಿ ಎಂದರೆ ನನಗೆ ಬದುಕು.

ಎಚ್‌.ಎಸ್‌. ವೆಂಕಟೇಶ ಮೂರ್ತಿ ಅವರ ‘ಚಿತ್ರಪಟ’ ನಾಟಕವನ್ನೇ ನಿರ್ದೇಶನಕ್ಕೆ ಆಯ್ದುಕೊಳ್ಳಲು ಕಾರಣವೇನು?
ನಾಲ್ಕು ವರ್ಷದ ಹಿಂದೆ ‘ಚಿತ್ರಪಟ’ವನ್ನು ನಾನೊಂದು ಕಾಲೇಜಿನ ಹುಡುಗರಿಗಾಗಿ ನಿರ್ದೇಶಿಸಿದ್ದೆ. ಅದನ್ನು ನಮ್ಮ ‘ಸಮಷ್ಟಿ’ ತಂಡದ ಸ್ನೇಹಿತ ರವೀಂದ್ರ ಪೂಜಾರ ಅವರು  ನೋಡಿದ್ದರು. ಇಷ್ಟು ವರ್ಷ ಆದಮೇಲೆ ಆ ನಾಟಕವನ್ನೇ ಇನ್ನೊಮ್ಮೆ ನಮ್ಮ ತಂಡಕ್ಕೆ ಮಾಡಿಸು ಅಂತ ಕೇಳಿದರು. ಅಲ್ಲದೇ ನಾನು ಸಿಸಿಆರ್‌ಟಿ ಫೆಲೋಷಿಪ್‌ನಲ್ಲಿ ಒಂದು ಪ್ರಾಜೆಕ್ಟ್‌ ಮಾಡುತ್ತಿದ್ದೆ. ಕಾವ್ಯಾತ್ಮಾಕ ಅಭಿನಯ ಶೈಲಿಯನ್ನು ಭಾರತೀಯ ನೃತ್ಯ ಕಲೆಗಳನ್ನಿಟ್ಟುಕೊಂಡು ರಂಗಭೂಮಿಯಲ್ಲಿ ಹೇಗೆ ಆವಿಷ್ಕರಿಸಬಹುದು ಎಂಬ ಕುರಿತು ಸಂಶೋಧನೆ ಮಾಡುವ ಪ್ರಾಜೆಕ್ಟ್‌ ಅದು (The exploration of poetic acting through Indian classical art forms). ಈ ಕಾರಣಕ್ಕಾಗಿ ನಾನು ಹಲವಾರು ನಾಟಕಗಳನ್ನು ಓದಿದ್ದೆ. ಆದರೆ  ನನ್ನ ಉದ್ದೇಶಕ್ಕೆ ಹೊಂದಾಣಿಕೆ ಆಗುವಂತಹ ನಾಟಕ ಸಿಕ್ಕಿರಲಿಲ್ಲ. ಎಚ್‌ಎಸ್‌ವಿ ಅವರ ‘ಚಿತ್ರಪಟ’ ನಾಟಕದಲ್ಲಿ ಈ ಸಂಶೋಧನೆಗೆ ಹೆಚ್ಚು ಅವಕಾಶವಿತ್ತು. ಪ್ರಯೋಗ ಮಾಡಲು ಸಾಕಷ್ಟು ಅವಕಾಶ ಈ ನಾಟಕದಲ್ಲಿತ್ತು. ಅದಕ್ಕಾಗಿ ಚತ್ರಪಟವನ್ನು ಆಯ್ದುಕೊಂಡೆ.

‘ಕಾವ್ಯಾತ್ಮಕ ಅಭಿನಯ’  ಪರಿಕಲ್ಪನೆಯನ್ನು ಈ ನಾಟಕದಲ್ಲಿ ಯಾವ ರೀತಿ ಅಳವಡಿಸಿದ್ದೀರಿ?
ಈ ನಾಟಕದಲ್ಲಿ ಲೇಖಕರು ಸುಮ್ಮನೇ ಕತೆಯನ್ನು ನಿರೂಪಿಸುತ್ತಾ ಹೋಗಿದ್ದಾರೆ. ಇಂಥ ನಾಟಕದಲ್ಲಿ ನಿರ್ದೇಶಕರಿಗೆ ಸವಾಲುಗಳೂ ಸಾಧ್ಯತೆಗಳೂ ಜಾಸ್ತಿ.
ಈ ನಾಟಕದಲ್ಲಿ ಭೂತೆಯರು ಎಂಬ ಪಾತ್ರ ಬರುತ್ತದೆ. ಯಲ್ಲಮ್ಮನ ಕಥೆಯನ್ನು ಹೇಳುತ್ತಾ ಊರೂರು ತಿರುಗುವ ಭಕ್ತೆಯರು ಅವರು. ನಾನು ಆ ಭೂತೆಯರನ್ನು ತೆಗೆದು ಜೋಗಿಗಳನ್ನು ಅಳವಡಿಸಿದೆ. ಅವರು ಹೆಚ್ಚು ಹೊಂದಾಣಿಕೆಯಾಗುತ್ತಾರೆ. ಅವರ ಪೂಜಾ ವಿಧಾನಗಳಲ್ಲಿ ನಮ್ಮ ಯಕ್ಷಗಾನದ ಕುಣಿತವನ್ನು ಅಳವಡಿಸಿದೆ. ಪೂಜಾವಿಧಾನದಲ್ಲಿಯಷ್ಟೇ ಯಕ್ಷಗಾನ ಬಳಸಿ ಉಳಿದಿದ್ದನ್ನು ಜಾನಪದ ಶೈಲಿಯಲ್ಲಿ ಬೆಳೆಸಿದೆ.

ರಾವಣ ರಾಕ್ಷಸ. ಆದರೆ ನಾನು ಅವನನ್ನು ರಾಕ್ಷಸನನ್ನಾಗಿ ತೋರಿಸದೇ ರಾಜನ ವೇಷ ತೊಡಿಸಿದೆ. ಸೀತೆಯ ನಯ ನಾಜೂಕು ಎಲ್ಲದಕ್ಕೂ ಹೊಂದುವ ಹಾಗೆ ಒಡಿಸ್ಸಿ ನೃತ್ಯ ಚಲನೆಯನ್ನು ಅಳವಡಿಸಿದೆ. ಹೀಗೆ ಬೇರೆ ಬೇರೆ ನೃತ್ಯಪ್ರಕಾರಗಳನ್ನು ಒಂದೆಡೆ ಸೇರಿಸಿದರೆ ಏನಾಗುತ್ತೋ ಅದು ‘ಚಿತ್ರಪಟ’ ನಾಟಕದಲ್ಲಿ ಆಗಿದೆ.

ಸಂಭಾಷಣೆಗಿಂತ ದೃಶ್ಯರೂಪದಲ್ಲಿ ಪ್ರೇಕ್ಷಕರನ್ನು ಮುಟ್ಟುವುದರಲ್ಲಿಯೇ ನೀವು ಹೆಚ್ಚು ಆಸ್ಥೆ ತೋರುತ್ತೀರಿ. ಇದರ ಕುರಿತು ಹೇಳಿ.
ರಂಗಭೂಮಿಯಲ್ಲಿ ಮಾತು ಎಷ್ಟು ಪರಿಣಾಮಕಾರಿಯೂ ದೇಹಭಾಷೆಯೂ ಅಷ್ಟೇ ಪರಿಣಾಮಕಾರಿ. ಮಾತಿನಲ್ಲಿ ಹೇಳಲಿಕ್ಕಾಗದಿರುವ ಎಷ್ಟೋ ಸಂಗತಿಗಳನ್ನು ಆಂಗಿಕ ಅಭಿನಯದ ಮೂಲಕ ಕಟ್ಟಿಕೊಡುವ ಸಾಧ್ಯತೆ ರಂಗಭೂಮಿಗಿದೆ. ನನ್ನ ನಾಟಕಗಳಲ್ಲಿ ನಾನು ಮಾತನ್ನು ಸಾಧ್ಯವಿದ್ದಷ್ಟೂ ಕಡಿತಗೊಳಿಸಿ ದೃಶ್ಯರೂಪದಲ್ಲಿಯೇ ತೋರಿಸಲು ಯತ್ನಿಸುತ್ತೇನೆ. ಯಾಕೆಂದರೆ ಭಾಷೆ ಎಲ್ಲರಿಗೂ ತಲುಪುವುದಿಲ್ಲ. ಭಾವ ಎಲ್ಲರಿಗೂ ತಲುಪುತ್ತದೆ. ಆ ಭಾವವನ್ನು ನಾನು ಆಂಗಿಕ ಮತ್ತು ಬೇರೆ ಬೇರೆ ಪರಿಕರಗಳ ಮೂಲಕ ಅಭಿವ್ಯಕ್ತಿಸಲು ಯತ್ನಿಸುತ್ತೇನೆ.

ಒಂದು ನಾಟಕ ಕೃತಿಯನ್ನು ರಂಗ ಪ್ರಯೋಗಕ್ಕೆ ಆರಿಸಿಕೊಳ್ಳುವಾಗ ನಿರ್ದೇಶಕರಾಗಿ ನಿಮಗೆ ಯಾವ ಯಾವ ಸಂಗತಿಗಳು ಮುಖ್ಯ ಅನಿಸುತ್ತವೆ?
ನಾಟಕವಷ್ಟೇ ಅಲ್ಲ,  ಯಾವುದೇ ಒಂದು ಒಳ್ಳೆಯ ಕಲಾಪ್ರಕಾರ ಇದು ಒಳ್ಳೆಯದು ಇದು ಕೆಟ್ಟದ್ದು ಎಂದೆಲ್ಲಾ ನಿರ್ಣಯಿಸಿ ತೋರಿಸುವ ಗೋಜಿಗೆ ಹೋಗುವುದಿಲ್ಲ. ಆತ್ಯಂತಿಕವಾಗಿ ಜನ ನನ್ನ ನಾಟಕವನ್ನು ನೋಡಿ ಇಂಗ್ಲಿಷ್‌ನಲ್ಲಿ ‘ಕೆಥಾರ್ಸಿಸ್‌’ ಅಂತಾರಲ್ಲ, ಅಂತಹ ಒಂದು ಸಣ್ಣ ಚಲನೆಯನ್ನು ಪಡೆದುಕೊಂಡರೆ ಸಾಕು. ಅವರ ಮನಸ್ಸಿಗೆ ಅದು ಮುಟ್ಟಿದರೆ ಸಾಕು. ಅದೇ ನನ್ನ ಸಾರ್ಥಕತೆ ಎಂದು ನಾನು ಭಾವಿಸಿಕೊಳ್ಳುತ್ತೇನೆ.

ಅಲ್ಲದೇ ಪ್ರೇಕ್ಷಕರನ್ನು ಒಂದು ಆಧ್ಯಾತ್ಮಿಕ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವ ಪ್ರಯತ್ನ ನನ್ನ ಎಲ್ಲಾ ನಾಟಕಗಳಲ್ಲಿ ಇರುತ್ತದೆ. ಒಂದು ಹಂತದಿಂದ ಇನ್ನೊಂದು ಹಂತಕ್ಕೆ ನೋಡುಗ ದಾಟಬೇಕು. ಅದು ನನ್ನೆಲ್ಲ ನಾಟಕಗಳ ಉದ್ದೇಶ.

ನಿಮ್ಮೊಳಗಿನ ನಿರ್ದೇಶಕನನ್ನು ರೂಪಿಸಿದ ವ್ಯಕ್ತಿಗಳು ಯಾರು?
ರಘುನಂದನ ನನ್ನನ್ನು ತುಂಬಾ ಪ್ರಭಾವಿಸಿದ ಗುರುಗಳು. ಇಡೀ ಭಾರತ ರಂಗಭೂಮಿಯಲ್ಲಿ ನಟನೆಯ ಬೇರೆಯೇ ಥರದ ಅನ್ವೇಷಣೆಯನ್ನು ಅವರು ನಡೆಸುತ್ತಿದ್ದಾರೆ. ಚಿದಂಬರರಾವ್‌ ಜಂಬೆ ಅವರೂ ನನ್ನ ನೆಚ್ಚಿನ ಗುರುಗಳು. ಅವರು ಕಲಿಸಿಕೊಟ್ಟ ಅಭಿನಯ ಶೈಲಿಯನ್ನು  ನಾನು ಬಳಸುತ್ತಿಲ್ಲ. ಆದರೆ ಅವರ ಎಲ್ಲ ತತ್ವಗಳೂ ನನಗೆ ಬಹಳ ಇಷ್ಟ. ಮತ್ತೊಬ್ಬರು ವೆಂಕಟರಮಣ ಐತಾಳ. ಈ ಮೂವರೂ ನನ್ನನ್ನು ರೂಪಿಸಿದ ಗುರುಗಳು.

ಇಂದಿನ ಧಾವಂತದ ಬದುಕಿನಲ್ಲಿ ರಂಗಭೂಮಿಯ ಮಹತ್ವವೇನು?
ರಂಗಭೂಮಿ ಮಹತ್ವ ಪಡೆಯುವುದೇ ಇಂತಹ ಕಾಲದಲ್ಲಿ. ಯಾಕೆಂದರೆ ರಂಗಭೂಮಿಗೆ ಧಾವಂತ ಬೇಕಾಗಿಲ್ಲ. ಧಾವಂತ ಮಾಡಿದರೆ ನಾಟಕ ಆಗುವುದೂ ಇಲ್ಲ. ತಾಳ್ಮೆ, ಸಮಯಪ್ರಜ್ಞೆ, ಒಂದೆಡೆ ಕೂಡಿಸಿಕೊಳ್ಳುವ ಸೆಳೆತ, ಇದೆಲ್ಲವೂ ರಂಗಭೂಮಿಗೆ ಇದೆ ಮತ್ತು ಇವೆಲ್ಲ ಗುಣಗಳನ್ನೂ ಅದು ಬೇಡುತ್ತದೆ. ಅದನ್ನು ಕೊಡುವ ತಾಕತ್ತು ಇರುವವರು ಮಾತ್ರ ಇಲ್ಲಿ ಉಳಿದುಕೊಳ್ಳುತ್ತಾರೆ.

ಇಂದಿನ ಕಾಲದಲ್ಲಿ ಎಲ್ಲರೂ ಇನ್‌ಸ್ಟಂಟ್‌ ಬಯಸುತ್ತಾರೆ. ಆದರೆ ರಂಗಭೂಮಿಯಲ್ಲಿ ಇನ್‌ಸ್ಟಂಟ್‌ ಸಾಧ್ಯವೇ ಇಲ್ಲ. ಇದು ತುಂಬಾ ಸಾವಧಾನವನ್ನು ಬೇಡುತ್ತದೆ. ಅಷ್ಟೇ ತಾಳ್ಮೆ ಮತ್ತು ಪರಿಶ್ರಮವನ್ನೂ ಬೇಡುತ್ತದೆ.

‘ವಿಶಾಖೆ’ಯಂತಹ ಪ್ರಯೋಗಾತ್ಮಕ ನಾಟಕಗಳನ್ನೂ ನಿರ್ದೇಶಿಸಿದ್ದೀರಿ. ಆ ಥರದ ಪ್ರಯೋಗಗಳಿಗೆ ಒಡ್ಡಿಕೊಂಡಾಗ ಎದುರಾಗುವ ಸವಾಲುಗಳೇನು?
ನನ್ನ ಕ್ಷೇತ್ರ ರಂಗಭೂಮಿ. ಈ ಮಾಧ್ಯಮದಿಂದ ನಾನು ಬದುಕುತ್ತಿರುವ ಸಮಾಜಕ್ಕೆ ಹೇಗೆ ಸ್ಪಂದಿಸಬಹುದು? ಹೇಳಬೇಕಾದದ್ದನ್ನು ಎಷ್ಟು ಗಟ್ಟಿಯಾಗಿ ಹೇಳಬಹುದು ಎಂಬುದರತ್ತಲೇ ನನ್ನ ಗಮನ ಇರುತ್ತದೆ. ಅದೇ ನನ್ನೆದುರಿನ ಸವಾಲು. ಪ್ರಯೋಗಾತ್ಮಕ ನಾಟಕಗಳು ಮರುಪ್ರದರ್ಶಿತವಾಗುವುದು ಕಡಿಮೆ. ಮಿಸ್‌ ಸದಾರಮೆ, ಚಿರಕುಮಾರ ಸಭಾ ನಾಟಕಗಳಂತೆಯೇ ವಿಶಾಖೆ ನಾಟಕ ಮರುಪ್ರಯೋಗ ಕಾಣಲಿಲ್ಲ. ಈ ವಿಷಯದಲ್ಲಿ ಜನರ ಮನಸ್ಥಿತಿಯೇ ಬೇರೆ ಥರದ್ದು. ನಾವು ನಗುವಂಥದ್ದಷ್ಟೇ ತೋರಿಸಬೇಕು ಎಂದು ಜನ ಬಯಸುತ್ತಾರೆ. ಅದಕ್ಕೇ ನಗುವಂಥದ್ದರಲ್ಲಿಯೇ ನನಗೆ ಹೇಳಬೇಕಾಗಿರುವುದನ್ನು ಹೇಳಲು ಪ್ರಯತ್ನಿಸುತ್ತೇನೆ. ಆದರೆ ನಿಜಕ್ಕೂ ‘ವಿಶಾಖೆ’ ನಾಟಕ ಇನ್ನೊಂದಿಷ್ಟು ಪ್ರದರ್ಶನ ಕಾಣಬೇಕಾಗಿತ್ತು. ಅದು ಆಗಲಿಲ್ಲ.

ನಾನು ಇಷ್ಟಪಟ್ಟು ಮಾಡಿದ ನಾಟಕಗಳು ಹೆಚ್ಚು ಪ್ರದರ್ಶನವೇ ಆಗುವುದಿಲ್ಲ. ಆದರೆ ಏನೋ ಮಾಡೋಣ ಅಂದುಕೊಂಡು ಮಾಡಿದ ನಾಟಕಗಳೆಲ್ಲ ಇನ್ನೂ ಪ್ರದರ್ಶನವಾಗುತ್ತಲೇ ಇದ್ದಾವೆ.

ರಂಗಭೂಮಿಗೆ ಅಪಾರ ಸಂಖ್ಯೆಯಲ್ಲಿ ಹೊಸಬರ ಪ್ರವೇಶವಾಗುತ್ತಿದೆ. ಆದರೆ ಆದರೆ ಅದಕ್ಕೆ ತಕ್ಕ ಫಲ ಕಾಣುತ್ತಿದೆಯೇ?
ಹೊಸದಾಗಿ ಬೇಕಾದಷ್ಟು  ಜನ ಬರುತ್ತಿದ್ದಾರೆ. ಆದರೆ ಇವತ್ತು ಬರುತ್ತಿರುವ ಬಹುತೇಕ ಹುಡುಗರಿಗೆ ರಂಗಭೂಮಿ ಒಂದು ಚಿಕ್ಕ ಬದಲಾವಣೆ ಅಷ್ಟೆ. ಅವರು ಇಲ್ಲಿಯೇ ಉಳಿಯುವವರಲ್ಲ. ಒಂದು  ಏನೋ ಒಂದೆರಡು ನಾಟಕಗಳಲ್ಲಿ ನಟಿಸಬೇಕು. ನಂತರ ಧಾರಾವಾಹಿಯೋ ಸಿನಿಮಾಕ್ಕೋ ಹೋಗಬೇಕು. ಅಷ್ಟೇ ಅವರ ಉದ್ದೇಶವಾಗಿರುತ್ತದೆ.

ನೀವು ರಂಗಭೂಮಿಯಲ್ಲಿ ಕಳೆದ ಹದಿನೈದು ವರ್ಷದಿಂದ ಸಕ್ರಿಯರಾಗಿದ್ದವರು. ಹೀಗೆ ರಂಗಭೂಮಿಯಲ್ಲಿಯೇ ಬದುಕು ಕಂಡುಕೊಂಡವರ ವೈಯಕ್ತಿಕ ಜೀವನದ ಅವಶ್ಯಕತೆಗಳನ್ನು ಪೂರೈಸುವಷ್ಟು ಗಳಿಕೆ ಇರುತ್ತದೆಯೇ?
ನನ್ನ ವೈಯಕ್ತಿಕ ಜೀವನಕ್ಕೆ ರಂಗಭೂಮಿಯಿಂದ ಯಾವ ಕೊರತೆಯೂ ಆಗಿಲ್ಲ. ಯಾಕೆ ಕೊರತೆ ಆಗಿಲ್ಲ ಎಂದರೆ ನಾನು ಈ ಕೆಲಸವನ್ನು ಪ್ರೀತಿಯಿಂದ ಮಾಡುತ್ತಿದ್ದೇನೆ. ಮತ್ತು ನನ್ನ ಅಗತ್ಯಗಳು ಬಹಳ ಕಡಿಮೆ. ನಾವು ಇದನ್ನು ಆಯ್ದುಕೊಂಡಿದ್ದೇವೆ ಅಂದಮೇಲೆ ನಮ್ಮ ಜೀವನಶೈಲಿಯಲ್ಲಿಯೂ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.
ಇದೊಂದು ರೀತಿ ಸನ್ಯಾಸಿ ಜೀವನವೂ ಹೌದು, ಸಂಸಾರಿ ಜೀವನವೂ ಹೌದು. ಸಮಾಜದ ಜೊತೆಗೆ ಬದುಕುತ್ತಾ ಇರುತ್ತೇವೆ. ಅದರ ಜತೆಗೇ ತುಂಬಾ ಅಂತರ್ಮುಖಿಯೂ ಆಗಿರುತ್ತೇವೆ.
ನನ್ನಂತೆಯೇ ನನ್ನ ಹೆಂಡತಿಯ ಅಗತ್ಯಗಳೂ ಕಡಿಮೆ. ಮನೆಯಲ್ಲಿ ಟೀವಿ ಇಲ್ಲ. ಸಿನಿಮಾಗೆ ಹೋಗಲ್ಲ. ಹೋಟೆಲ್‌ಗಳಲ್ಲಿ ಊಟ ಮಾಡಲ್ಲ. ಈ ಸರಳತೆಗೆ ರಂಗಭೂಮಿ ಯಾವತ್ತೂ ಕೊರತೆ ಮಾಡಿಲ್ಲ.

ಮೆಟಾ ಪ್ರಶಸ್ತಿ ಬಗ್ಗೆ ಹೇಳಿ.
ಮೆಟಾದಲ್ಲಿ ‘ಚಿತ್ರಪಟ’ ನಾಟಕ ಒಂಬತ್ತು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತ್ತು. ಹೀಗೆ ಒಂಬತ್ತು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡ ನಾಟಕ ಇದೊಂದೇ. ಇದೇ ನಮಗೆ ಮಹತ್ವದ ವಿಷಯವಾಗಿತ್ತು. ನಮ್ಮ ನಿರೀಕ್ಷೆಯನ್ನು ಮೀರಿ ಅತ್ಯುತ್ತಮ ನಟಿ (ಶ್ವೇತಾ), ಅತ್ಯುತ್ತಮ ವಸ್ತ್ರ ವಿನ್ಯಾಸ (ಶ್ವೇತಾ) ಮತ್ತು ಅತ್ಯುತ್ತಮ ಪೋಷಕ ನಟನೆಗೆ (ಸೌಮ್ಯಶ್ರೀ ಜೈನ್‌) ಪ್ರಶಸ್ತಿ ಬಂತು. ನನ್ನ ಜತೆ ಕೆಲಸ ಮಾಡಿದವರಿಗೆ ಪ್ರಶಸ್ತಿ ಬಂತಲ್ಲಾ ಅನ್ನುವುದೇ ಸಂತೋಷ ನನಗೆ.

ನಮ್ಮ ಗುರುಗಳಾದ ರಘುನಂದನ ಹೇಳುತ್ತಿದ್ದರು. ‘ನೀನು ಒಳ್ಳೆ ನಿರ್ದೇಶಕ ಆಗಿದ್ದರಿಂದ ‘ಮೆಟಾ’ದವರು ನಿನ್ನ ನಾಟಕಕ್ಕೆ ಪ್ರಶಸ್ತಿ ಕೊಟ್ರು. ವಿನಾ ಅವರು ಪ್ರಶಸ್ತಿ ಕೊಟ್ಟಿದ್ದಕ್ಕೆ ನೀನು ಒಳ್ಳೆಯ ನಿರ್ದೇಶಕ ಅಂತ ಅಲ್ಲ. ಯಾವುದು ಮುಖ್ಯ ಎನ್ನುವುದನ್ನು ನೀನು ಅರ್ಥ ಮಾಡ್ಕೋ’ ಎಂದು. ಅವರ ಮಾತು ನನ್ನ ನಂಬಿಕೆಯೂ ಹೌದು.

ಮುಂದೆ ಯಾವ ನಾಟಕದ ಬಗ್ಗೆ ತಯಾರಿ ನಡೆಸುತ್ತಿದ್ದೀರಾ?
ಅಭಿನಯ ತರಂಗ ರಂಗತಂಡಕ್ಕೆ ನಾಟಕ ಆಡಿಸುತ್ತಿದ್ದೀನಿ. ರಾಮಾಯಣ ದರ್ಶನಂ ಕೃತಿಯ ‘ದಶಾನನ ಸ್ವಪ್ನ ಸಿದ್ದಿ’ ಎಂಬ ಭಾಗವನ್ನು ನಾಟಕವಾಗಿ ಆಡಿಸುತ್ತಿದ್ದೀನಿ. ಅದು ಸರಿಯಲಿಸ್ಟಿಕ್‌ ಇಮೇಜ್‌ ಇರುವ ಸಣ್ಣ ಕಾವ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT