ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಬಿಕೆಯೇ ಬದುಕು

Last Updated 20 ನವೆಂಬರ್ 2015, 19:48 IST
ಅಕ್ಷರ ಗಾತ್ರ

ಶೀತ ಆವರಿಸಿ ಬೆಂಗಳೂರು ನಡುಗುತ್ತಿದೆ. ಹೂಳು ತುಂಬಿ ಉಳಿದ ಜಾಗದಲ್ಲಿ ಬಹಳ ವರ್ಷಗಳ ಬಳಿಕ ಕೆರೆಕಟ್ಟೆಗಳು ತುಂಬಿವೆ. ಒತ್ತುವರಿಯಾದ ಜಾಗದಿಂದ ಮುಕ್ಕಳಿಸಿ ನೀರು ನಿಲ್ಲದೆ ಸಮುದ್ರ ಸೇರುತ್ತಿದೆ. ಸಮುದ್ರ ತಿರುಗಣೆಯಾಗಿ ತಿರುಗಿ ಉಕ್ಕಿ ಕಡಲು ತೀರ ವರುಣನ ಆರ್ಭಟಕ್ಕೆ ಗುರಿಯಾಗಿದೆ. ಇದು ಅಕಾಲ ಮಳೆ. ಬಂದ ಬೆಳೆ ಕೈಬಿಟ್ಟು ಹೋಗಿದೆ. ಅತ್ತ ಮಲೆನಾಡು, ಇತ್ತ ಬಯಲುನಾಡು ಸೀಮೆಯಲ್ಲೂ ಇದೇ ಕತೆ. ಇದು ಮನುಷ್ಯ, ಭೂಮಿ ಬಗೆದು ಆಕಾಶ ತೂತುಮಾಡಿದ ಅಕಾಲ ಕಥನದ ಪ್ರತಾಪ.

ಎಕ್ಸನ್‌ ಮೊಬಿಲ್‌ ಎಂಬ ಅಮೆರಿಕನ್‌ ತೈಲ ಕಂಪೆನಿಯು ಹರಣ ಮಾಡುತ್ತಿರುವ ಇಂಗಾಲ ಡೈ ಆಕ್ಸೈಡ್‌ ನೆಲಮುಗಿಲನ್ನು ಹರಣ ಮಾಡುತ್ತಿರುವ ಆತಂಕವನ್ನು ನಾಗೇಶ ಹೆಗಡೆ ಮುಂದಿಡುತ್ತಾರೆ (ಪ್ರ.ವಾ., ನ.19). ಇದೊಂದು ಸಾಮೂಹಿಕ ಗಾಬರಿಯೇ ಹೊರತು ಒಬ್ಬ ವ್ಯಕ್ತಿಯ, ಒಂದು ದೇಶದ ವೈಯಕ್ತಿಕ ಗಾಬರಿಯಾಗಿ ಉಳಿದಿಲ್ಲ. ಎಲ್ಲರಿಗೂ ಆಗಿದ್ದು ನಮಗೂ ಆಗುತ್ತದೆ ಎಂಬ ಮನಸ್ಸುಗಳ ವಿಚಾರವಿದು.

ರಷ್ಯಾದ ಮೇಲ್ತುದಿಯ ಅಂಟಾರ್‍ಟಿಕಾ ಬಹುಭಾಗವನ್ನು ಅಮೆರಿಕ ಇಟ್ಟುಕೊಂಡಿದೆ. ಅದರೊಳಗೆ ಈಗ, ಮರಳು ದೇಶಗಳು ತೆಗೆಯುತ್ತಿರುವ ಸಾವಿರ ಪಟ್ಟು ಎಣ್ಣೆ ಇದೆಯಂತೆ. ಈಗ ತೆಗೆಯುತ್ತಿರುವ ಎಣ್ಣೆಯನ್ನು ಉರಿಸಿದಾಗ ಆಗುವ ತಾಪವನ್ನೇ ತಡೆದುಕೊಳ್ಳಲಾಗದ ಭೂಮಿ ಅಂಥಾದನ್ನು ತಡೆದುಕೊಳ್ಳಲು ಸಾಧ್ಯವೇ?

ಏನಾಗುವುದೋ ಯಾರಿಗೂ ಗೊತ್ತಿಲ್ಲ. ಗೊತ್ತಿದ್ದರೂ, ಭೂಮಿ ಮುಳುಗಿದರೂ ಆಕಾಶದಲ್ಲಿ ಜೀವಿಸುತ್ತೇವೆಂಬ ಭ್ರಮೆಯಲ್ಲಿಯೇ ಬಲಾಢ್ಯ ದೇಶಗಳು ಇವೆ. ಅಲ್ಲಿ ಡೇವಿಡ್‌ ಥೋರೊ, ರಸ್ಕಿನ್‌, ಇಲ್ಲಿ ಗಾಂಧಿ ಎಲ್ಲರೂ ಸರಳ ಬದುಕಿನ ಬಗ್ಗೆ ಹೇಳಿದರು ನಿಜ. ಅವು ಇಂದು ಕೇವಲ ಆದರ್ಶಗಳಾಗಿವೆ. ಆಧುನಿಕತೆ ಎನ್ನುವುದು ಭೂಮಿ ಬಗೆದು ಆಕಾಶ ತೂತು ಮಾಡಿ ಅದರೊಳಗೆ ಚಂದ್ರ, ಮಂಗಳ, ಶುಕ್ರ ಗ್ರಹಗಳನ್ನೆಲ್ಲ ಹುಡುಕುತ್ತಿದೆ. ಇದು, ಇರುವುದು ಬಿಟ್ಟು ಇಲ್ಲದ ಕಡೆ ಬದುಕು ಹುಡುಕುವ ಮಾರ್ಗ.

ಕೋಲಾರಕ್ಕೆ ನೀರು ತರಲು ಹೊರಟಿರುವುದು ಕುಡಿಯುವ ನೀರಿನ ಹುಡುಕಾಟ. ಸಕಲೇಶಪುರದ ರೈಲು ಮಾರ್ಗದ ಅಡವಿಗೆ ಸಮಾನಾಂತರವಾಗಿ ಹರಿದು ಕೆಳಗೆ ಬರುವ ನೀರು ಹಳ್ಳಗಳಿಗೆ ತಡೆ ಕಟ್ಟಿ ಒಗ್ಗೂಡಿಸಿ ಆನೆ ನುಗ್ಗುವಂತಹ ಕೊಳವೆಗಳಲ್ಲಿ ನೀರು ತಿರುವಿಕೊಂಡು ಬರುವ ಮಾರ್ಗದ ಕಾಫಿ, ಏಲಕ್ಕಿ ತೋಟದ ಮಾಲೀಕರು ಜಮೀನು ಬಿಟ್ಟುಕೊಡಲು ಅಷ್ಟಾಗಿ ವಿರೋಧಿಸುತ್ತಿಲ್ಲ. ಆದರೆ ಘಟ್ಟದ ಕೆಳಗೆ ವಿರೋಧವಿದೆ.

ಅದು ನೇತ್ರಾವತಿಗೆ ಬಂದು ಬೀಳುವ ಎತ್ತಿನಹೊಳೆ ಪರಿಸರದ ಕೆಂಪುಹೊಳೆ, ಎಣ್ಣೆಹೊಳೆ ಮೂಲದ ನೀರನ್ನು ತಡೆಯುವುದಕ್ಕೆ ಇರುವ ವಿರೋಧ. ಘಟ್ಟದ ಬುಡದಿಂದ ಸಮುದ್ರದ ಅಡಿವರೆಗೂ ಒಂದು ಬದುಕುಂಟು. ಅದನ್ನು ಬರಡಾಗಿಸುವ ಭಯ ಅವರಲ್ಲಿದೆ. ಅದು ಬೆಳೆಯದಾಗಿರಬಹುದು, ಸಮುದ್ರದ ಮೇಲಿನ ಬೆಳೆಯಾಗಿರಬಹುದು. ಅದು ಅಲ್ಲಿನ ಆತಂಕ.

ಒಟ್ಟಾರೆ ಎತ್ತಿನಹೊಳೆ ಪರಿಸರ ಆತಂಕದಲ್ಲಿದೆ. ಅಕಾಲ ಮಳೆ, ಸಕಾಲಕ್ಕಿಲ್ಲದ ಮಳೆ, ಕೊಳೆ ರೋಗದಲ್ಲಿ ಏಲಕ್ಕಿ ಬೆಳೆ ನಿಂತು ಹೋಗಿ ಬಹಳ ವರ್ಷಗಳಾಗಿವೆ. ಈಗಂತೂ ಕಾಫಿ ಕೂಡ ಅದೇ ರೀತಿ ಇನ್ನೇನು ಜೀವ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ. ಇಡೀ ಮಲೆನಾಡು, ನಗರಗಳಿಗೆ ಬಂದು ಬೀಳುತ್ತಿದೆ. ಅಷ್ಟೋ ಇಷ್ಟೋ ಅಡವಿ ಈ ಬೆಳೆಗಳೊಡನೆ ಜೀವ ಉಳಿಸಿಕೊಂಡಿತ್ತು.

ಈಗ ಅವರ ತೋಟಗಳನ್ನು ಎತ್ತಿನಹೊಳೆ ಪ್ರಾಜೆಕ್ಟಿಗೆ ಬಿಟ್ಟುಕೊಡುವಾಗ, ಸರ್ಕಾರ ಹಾಕುವ ಕೊಳವೆಗಳಲ್ಲಿ, ಅಲ್ಲಿ ಪರಿಸರ ಹರಣವಾಗುವ ಕ್ರಿಯೆಯಲ್ಲಿ ನೀರು ಬರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಅಲ್ಲಿ ಮೇವು ಇಲ್ಲದ ಆನೆಗಳಂತೂ ಕೋಲಾರಕ್ಕೆ ಬರಲು ಅವಕಾಶವಿದೆ. ಈ ವರ್ಷದ ಮಳೆಗಾಲ ಇದರ ಸೂಚನೆ ನೀಡಿದೆ. ಇಡೀ ಮಲೆನಾಡು ಮಳೆ, ಬೆಳೆ, ಅಡವಿ ಅಸಮತೋಲನದಲ್ಲಿ ತತ್ತರಿಸುತ್ತಿದೆ.

ಕೋಲಾರದ ನದಿ, ಕೆರೆಗಳೆಲ್ಲವೂ ಮರಳು ತೆಗೆದು ಬೆಂಗಳೂರು ಕಡೆ ಕೊಟ್ಟಿವೆ. ತುಮಕೂರು ಕಡೆಯೂ ಇದೇ ಕಥನ. ಕೊಳವೆಬಾವಿಗಳು ಪಾತಾಳದಲ್ಲಿ ನೀರು ಹುಡುಕಿ ಸೋತಿವೆ. ಮಲೆನಾಡ ಹಳ್ಳ ನದಿಗಳೂ ಈಗ ಇಂಥಾ ದಾರಿ ಮುಗಿಸಿವೆ. ಮುಂದೊಮ್ಮೆ ಕಾವೇರಿ, ಹೇಮಾವತಿ ಬರಡಾದರೂ ಆಶ್ಚರ್ಯವಿಲ್ಲ. ಈ ವಿಚಾರಗಳು ವೈಯಕ್ತಿಕವಾಗಿ ಯಾರನ್ನೂ ಬಾಧಿಸುತ್ತಿಲ್ಲ. ಸರ್ಕಾರಗಳಂತೂ ಕಿವುಡಾಗಿವೆ. ಈ ಕಿವುಡು, ಗೋಳೀಕರಣವು ಕೂಗಿ ಮಾಡಿರುವ ಕಿವುಡು.

ಈ ದಾರಿಗಳು ಅಮೆರಿಕ, ಯುರೋಪ್‌ವರೆಗೂ ಹಬ್ಬಿವೆ. ಒಂದೆಡೆ ಸಿರಿಯಾ ಪ್ರತಿಮಾ ರೂಪಕದ ಅವಘಡ, ಮತ್ತೊಂದೆಡೆ ಸುಖದ ಸುಪ್ಪತ್ತಿಗೆಗಾಗಿ ಬಡ ದೇಶಗಳನ್ನು ಬಡಿದು ತಿನ್ನುವ ತವಕ. ಆಕಾಶ, ಭೂಮಿ ಸರ್ವರನ್ನೂ ಸಲಹುವ ಆತ್ಮವೆಂಬುದನ್ನೆ ಮರೆತ ಜಗತ್ತು ಎತ್ತ ಚಲಿಸುತ್ತಿದೆಯೋ ಯಾರಿಗೂ ಗೊತ್ತಿಲ್ಲ. ಅದು ಯಾರಿಗೂ ಬೇಕಿಲ್ಲ.

ಎಂಡೊಸಲ್ಫಾನ್‌ ಕೀಟನಾಶಕ ಜಗತ್ತಿನ ಜೀವಜಾಲವನ್ನು ಕತ್ತರಿಸಿದ ಒಂದು ರೂಪಕ. ಇಂದು ನಿಷೇಧಗೊಂಡಿದೆ. ಕೇರಳ ಹಾಗೂ ಸುಳ್ಯ ಗಡಿ ಭಾಗದ ಬಡ ಜನರು, ಕೈ ಕಾಲೇಕೆ ಇಡೀ ದೇಹವನ್ನೇ ಕಳೆದುಕೊಂಡಿದ್ದಾರೆ. ಹಾಸನ, ಚಿಕ್ಕಮಗಳೂರಿನ ಸೀಮೆಯಲ್ಲಿ ಎಂಡೊಸಲ್ಫಾನ್‌ಗೆ ಕರೆಯೋದು ‘ಕೇರಳ ಔಷಧಿ’ ಎಂದು. ಈಗ ಲೇಬಲ್‌ ತೆಗೆದು ಮಾರಾಟವಾಗುತ್ತಿದೆ. ರೈತರು ಕೇರಳ ಔಷಧಿ ಹೊಡೆದರೆ ಶುಂಠಿ, ಆಲೂಗಡ್ಡೆ ಮುಂತಾದ ಬೆಳೆಗಳನ್ನು ಉಳಿಸಿಕೊಳ್ಳಬಹುದೆಂದು ತಂದು ಹೊಡೆಯುತ್ತಾರೆ. ಈಗಾಗಲೇ ಆಲೂಗಡ್ಡೆ ಹಾಸನ ಸೀಮೆಯ ಕೈಬಿಟ್ಟಿದೆ. ಶುಂಠಿ ಇನ್ನೇನು ಹೈರಾಣಾಗಿದೆ.

ಇಷ್ಟರಲ್ಲಿ ನೆಲಜಲವೆಲ್ಲ ಕೇರಳ ಔಷಧಿಯಂತಹ ವಿಷದಲ್ಲಿ ಸಿಕ್ಕು, ಅದು ಹೇಮಾವತಿ, ಕಾವೇರಿ ಮೂಲಕ ಬೆಂಗಳೂರಿಗೆ  ಬಂದು ಬೀಳುತ್ತಿದೆ. ಅತ್ತ ಏಲಕ್ಕಿ, ಕಾಫಿ, ಭತ್ತ, ಶುಂಠಿ, ಆಲೂಗಡ್ಡೆ ಇವೆಲ್ಲ ಅಂತ್ಯಕಾಲ ಎಣಿಸುತ್ತಿವೆ. ಇತ್ತ ರಾಗಿ, ತರಕಾರಿ, ಸೊಪ್ಪುಸೆದೆಗಳೆಲ್ಲ ಬಯಲುಸೀಮೆಯಲ್ಲಿ ನೀರಿಲ್ಲದೆ, ನೀರಿದ್ದು ಬೆಳೆದರೂ ವಿಷಕಾರಿಯಾಗಿ ಸಮಾಜದೊಳಗೆ ಸೇರುತ್ತಿವೆ. ಯಾವ ಹಣ್ಣು, ತರಕಾರಿ, ಧಾನ್ಯದಲ್ಲೂ ಇಂದು ತಾಜಾತನ ಉಳಿದಿಲ್ಲ. ಎದೆಹಾಲು ಕೂಡ ವಿಷಯುಕ್ತವಾಗಿದೆ. ಅಂತೂ ಬದುಕು ನಡೆಯುತ್ತಿದೆ. ಅಂದು ಎಂ.ಎಸ್‌. ಸ್ವಾಮಿನಾಥನ್‌ ಹೇಳಿದ್ದರು– ವಿಜ್ಞಾನವೇ ಹಸಿರುಕ್ರಾಂತಿಗೆ ಸಹಕರಿಸಿದೆ ಎಂದು. ಮಿತಬಳಕೆ, ಮಿತ ಅವಧಿಯ ಎಚ್ಚರಿಕೆ ಅದರೊಳಗಿತ್ತು. ಕೇಳಿಸಿಕೊಳ್ಳಲಿಲ್ಲ. ಹಸಿರು ಕ್ರಾಂತಿ ಈಗ ಹಳದಿ ಅವನತಿಗೆ ನೂಕಿದೆ. ಎಚ್ಚರಿಕೆ ಗಂಟೆ ಬಾರಿಸುತ್ತಿದೆ.

ಈ ನಡುವೆ ನಮ್ಮ ಸಮಾಜ ಏನು ಮಾಡಬೇಕು?  ಬದುಕಿರುವಷ್ಟು ದಿನ ನಮಗೆ ಒಳ್ಳೆಯ ಆಹಾರ, ಹಾಲು, ನೀರು ಸಿಗಬೇಕು. ನಾವು ಕಲಿಯುತ್ತಿರುವ ವಿದ್ಯೆ ಇಂಥಾದಕ್ಕೆ ಸಹಕಾರ ನೀಡಬೇಕು. ಸರ್ಕಾರಗಳು ಇಂಥಾದ್ದರ ಮೇಲೆ ನಿಗಾ ಇಡಬೇಕು. ಇಂದು ರೈತ ರಾಸಾಯನಿಕ ಬಳಸದೆ, ಕೀಟನಾಶಕ ಬಳಸದೆ ಬೆಳೆಯನ್ನು ತೆಗೆಯುವ ಸ್ಥಿತಿಯಲ್ಲಿಲ್ಲ. ಹಾಗೊಂದು ಪಕ್ಷ  ತೆಗೆಯಲು ಹೊರಟರೆ ಅವನ ಮೇಲೆ ಬೀಳುವ ಇಳಿಕೆ ಇಳುವರಿಯನ್ನು ಸರ್ಕಾರ ಹೊರುವ ಸ್ಥಿತಿಯಲ್ಲಿರಬೇಕು. ಎರಡನೆಯದು ವಿದ್ಯೆ. ಅದು ಸರ್ಕಾರಿ ಕೆಲಸದ, ಹೊರದೇಶಗಳ ನೌಕರಿಯ ಬೇಟೆಯಲ್ಲಿದೆ. ಅದಕ್ಕೆ ಪರ್ಯಾಯವಾಗಿ ವಿದ್ಯಾವಂತರು ನೆಲ ಮೂಲಕ್ಕೆ ತಿರುಗಿ ಬದುಕು ಕಟ್ಟಿಕೊಳ್ಳುವಂತಿರಬೇಕು.

ಅದು ಗಾಂಧಿ ಮೂಲದ ಸ್ವರಾಜ್ಯ ಕಟ್ಟುವ ಬಯಕೆಯಾಗಬೇಕು. ಸರ್ಕಾರಗಳು, ಇತ್ತ ತಿರುಗುವ ಯುವ ಶಕ್ತಿಯ ಕಡೆ ಗಮನ ಕೊಡಬೇಕು. ಆಧುನಿಕತೆಯೆಂಬ ಮಾಯಾವಿ ಕಡೆ ಚಲಿಸುತ್ತಾ ಆಕಾಶದಲ್ಲಿ ದಾರಿ ಹುಡುಕುತ್ತಿರುವ ಸರ್ಕಾರಗಳ ನೀತಿಯೂ ಬದಲಾಗಬೇಕು. ಬಡವರು ಬದುಕುವ ಸರಳತೆಯಲ್ಲಿ ದೇಶವನ್ನು ಹುಡುಕಿಕೊಳ್ಳಬೇಕು. ಗಣಿಯಲ್ಲಿ, ಗಣಿ ರಕ್ಷಣೆಯ ಲೋಕಾಯುಕ್ತರಲ್ಲಿ ಈ ಮಾರ್ಗಗಳು ದೊರೆಯುವುದಿಲ್ಲ. ಜಾತಿ ಮತ ಮೂಲಗಳಲ್ಲಿ ಇವು ಸಿಗುವುದಿಲ್ಲ.

ಜನ ನೀಡುವ ಮತ ಬೀಜಗಳು ಇಂಥಾ ದಾರಿಯಲ್ಲಿ ನಳನಳಿಸುತ್ತವೆ ಎಂಬ ಸಾಮಾನ್ಯ ಜ್ಞಾನ, ಸಮಾಜಕ್ಕೂ, ಸಮಾಜದ ವಿದ್ಯಾವಂತರಿಗೂ, ಪ್ರತಿನಿಧಿಗಳಿಗೂ ಇರಬೇಕು. ರೈತ ಬೆಳೆದ ಬೆಳೆ, ರೈತರ ಮಕ್ಕಳು ಪಡೆದ ವಿದ್ಯೆ,  ರೈತರು ನಡೆದ ಹಾದಿಯ ರಕ್ಷಣೆಯ ಕಾರ್ಯ ಸರ್ಕಾರ ನಿರ್ವಹಿಸಿದರೆ ಗಾಂಧಿ ಬಯಸಿದ ಗ್ರಾಮ ಭಾರತ ಪುನಃ ಚಿಗುರೊಡೆಯುತ್ತದೆ. ಇಡೀ ಭಾರತ ಸರಿ ದಾರಿಗೆ ಬರುತ್ತದೆ. ಇದೇ ಈಗಿನ ಅನಿವಾರ್ಯ ನಂಬಿಕೆ. ನಂಬಿಕೆಯೇ ಬದುಕು. ಅಪನಂಬಿಕೆಯೇ ಸಾವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT