ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಬಿ ಕೆಟ್ಟವರಿಲ್ಲವೋ ನಾಲಿಗೆಯ...

Last Updated 20 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಒಳ್ಳೆಯ ಸಂಬಳದ ಕೆಲಸ ಬಿಟ್ಟ ಶಿವಕುಮಾರ್‌ ‘ರುಚಿ’ಯ ಹುಡುಕಾಟದಲ್ಲಿ ನಡೆಸಿದ ಪ್ರಯೋಗಗಳು ಕುತೂಹಲಕರವಾಗಿವೆ. ಅವರು ನಡೆಸುತ್ತಿರುವ ಕೆಫೆ ರೆಸ್ಟೋರೆಂಟ್‌ಗಳು ರುಚಿಯಲ್ಲಿ ಭಿನ್ನವಾಗಿರುವುದರ ಜೊತೆಗೆ ಜನಸಾಮಾನ್ಯರ ಕೈಗೆ ಎಟುಕುವಂತೆಯೂ ಇರುವುದು ವಿಶೇಷ. ಗಳಿಕೆಯಲ್ಲೊಂದು ಪಾಲನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಖರ್ಚು ಮಾಡುವ ಶಿವಕುಮಾರ್‌ ಅವರದು ‘ಧರ್ಮ–ಕರ್ಮ’ ಸಿದ್ಧಾಂತದ ವ್ಯಾಪಾರ.

‘ನಂಗೆ ಜಾಬ್ ಅಂದ್ರೆ ಥ್ರಿಲ್‌. ಯಾರಿಗೂ ಮಾಡಕ್ಕಾಗ್ದೇ ಇರೋ ಕೆಲಸವನ್ನೇ ನಾನು ಆಯ್ದುಕೊಳ್ತೀನಿ. ಯಾಕೆಂದರೆ ಅಂತಹ ಕೆಲಸಗಳಲ್ಲಿ ಲಾಭ ಜಾಸ್ತಿ. ಅಲ್ಲದೇ ರಿಸ್ಕ್‌ ಇದ್ದರೆ ಮಜಾ ಹೆಚ್ಚು’– ಹೀಗೆನ್ನುವಾಗ 26 ವರ್ಷದ ಶಿವಕುಮಾರ್‌ ಕಣ್ಣಲ್ಲಿ ಮಿಂಚುವ ಉತ್ಸಾಹದ ಜತೆಗೇ ವ್ಯಾಪಾರಿ ಲೆಕ್ಕಾಚಾರವೂ ಸ್ಪಷ್ಟವಾಗಿ ತೋರುತ್ತಿತ್ತು.

ಮಹತ್ವಾಕಾಂಕ್ಷೆಯ ಚಿಲುಮೆಯಂತೆ ತೋರುವ ಈ ಹುಡುಗ ಬೆಂಗಳೂರಿನಲ್ಲಿ ಈಗಷ್ಟೇ ಕಣ್ಣುಬಿಡುತ್ತಿರುವ ‘ಸದರನ್ ಸ್ಪೈಸೆಸ್‌ ಆಂಡ್‌ ಬೆವರೇಜ್‌ ಪ್ರೈವೇಟ್‌ ಲಿಮಿಟೆಡ್‌’(ಎಸ್‌ಎಸ್‌ಬಿ) ಎಂಬ ಕಂಪೆನಿಯ ಮಾಲೀಕ.

ಹಾಸನದ ಹಾಲೇಜಹಳ್ಳಿ ಎಂಬ ಪುಟ್ಟ ಊರಿನಲ್ಲಿ ಜನಿಸಿದ ಶಿವಕುಮಾರ್‌ ಎಂ.ಬಿ.ಎ ಮುಗಿಸಿ ಕೈತುಂಬ ಸಂಬಳ ಕೊಡುವ ನೌಕರಿ ಸಿಕ್ಕರೂ ಅದನ್ನೆಲ್ಲ ತ್ಯಜಿಸಿ ಇಂದು ವಿಜಯನಗರದ ‘ಟೇಸ್ಟ್‌ ಆಫ್‌ ಟಂಗ್‌’ ಎಂಬ ಪುಟ್ಟ ಕೆಫೆ ರೆಸ್ಟೋರೆಂಟ್‌ನಲ್ಲಿ ಪಾತ್ರೆ ತೊಳೆಯುತ್ತ, ಟೇಬಲ್‌ ಸ್ವಚ್ಛಗೊಳಿಸುತ್ತಿರುವುದರ ಹಿಂದೆ ಬಹುದೊಡ್ಡ ಗುರಿಯನ್ನು ಎದೆಯಲ್ಲಿ ಜತನವಾಗಿ ಕಾಪಿಟ್ಟುಕೊಂಡ ಕನಸುಗಾರಿಕೆಯಿದೆ. ತನ್ನ ಮುಂದಿನ ಯೋಜನೆಗಳನ್ನು ಚಕಚಕನೇ ನಿಖರವಾಗಿ ಅಂಕಿ ಅಂಶಗಳ ಸಮೇತ ಹೇಳುವ ಮಾತಿನಲ್ಲಿ ಕನಸನ್ನು ನನಸು ಮಾಡಿಕೊಳ್ಳುವ ಅಸಲು ಕಸುಬುದಾರಿಕೆಯ ಸ್ಪಷ್ಟ ಚಹರೆಗಳಿವೆ. ‘ಮೊದಲು ಇದರ ಟೇಸ್ಟ್‌ ನೋಡಿ ಸರ್‌, ಆಮೇಲೆ ಕೆಪುಚಿನೋ ಕೊಡ್ತೀನಿ’ ಎಂದು ಬಾಂಬೆ ವೆಜ್‌ ಗ್ರಿಲ್‌ ಸ್ಯಾಂಡ್‌ವಿಚ್‌ ಕೈಗಿತ್ತು ಮಾತಿಗಿಳಿದಾಗ ಶಿವಕುಮಾರ್‌ ವ್ಯವಹಾರದಷ್ಟೇ ಉತ್ತಮ ವಾಕ್‌ಚತುರನೂ ಹೌದು ಅನ್ನಿಸಿತು.

ವ್ಯವಸಾಯ ಕುಟುಂಬದ ಹಿನ್ನೆಲೆಯಿಂದ ಬಂದ ಶಿವಕುಮಾರ್‌ 5ನೇ ತರಗತಿಯಿಂದ ಮುಂದೆ ಬಿಸಿಎಂ (ಬ್ಯಾಕ್‌ವರ್ಡ್‌ ಕ್ಲಾಸ್‌ ಆಂಡ್‌ ಮೈನಾರಿಟೀಸ್‌) ಹಾಸ್ಟೆಲ್‌ಗಳಲ್ಲಿದ್ದುಕೊಂಡೇ ವಿದ್ಯಾಭ್ಯಾಸ ಮಾಡಿದವರು. ಚಿಕ್ಕಂದಿನಲ್ಲಿಯೇ ಅಡುಗೆಯಲ್ಲಿ ಆಸಕ್ತಿ ಹೊಂದಿದ್ದ ಶಿವಕುಮಾರ್‌ ಹಾಸ್ಟೆಲ್‌ಗಳಲ್ಲಿ ಊಟದ ರುಚಿ ಸರಿಯಿಲ್ಲದಿದ್ದರೆ ಮರುದಿನ ತಾವೇ ಪಾಕಶಾಲೆಗೆ ಹೋಗಿ ಅಡುಗೆಗೆ ನಿಲ್ಲುತ್ತಿದ್ದರಂತೆ.

ಮನೆ ಮನೆಗೆ ಪೇಪರ್‌ ಹಾಕಿ, ಮೆಡಿಕಲ್‌ ಶಾಪ್‌, ಬಾರ್‌ಗಳಲ್ಲಿ ಅರೆಕಾಲಿಕ ಕೆಲಸ ಮಾಡಿಯೇ ವಿದ್ಯಾಭ್ಯಾಸ ಮುಂದುವರಿಸಿದ ಶಿವಕುಮಾರ್‌ ಡಿಪ್ಲೊಮಾ ಮುಗಿಸಿ ಬೆಂಗಳೂರಿಗೆ ಬಂದು ಕಂಪೆನಿಯೊಂದರಲ್ಲಿ ನೌಕರಿ ಸೇರಿದರು. ನಂತರ ವಾರಾಂತ್ಯದ ಕಾಲೇಜಿಗೆ ಸೇರಿಕೊಂಡು ಎಂಬಿಎ ಮತ್ತು ಪಿಎಚ್‌.ಡಿ ಮುಗಿಸಿದರು. ನಂತರದ ದಿನಗಳಲ್ಲಿ ವಿಡಿಯೊಕಾನ್‌, ವಿಪ್ರೋ, ರಿಲಾಯನ್ಸ್‌ ಇಂಡಸ್ಟ್ರಿ ಕಂಪೆನಿಗಳಲ್ಲಿ ಕೆಲಸ ಮಾಡಿದರು. ರಿಲಾಯನ್ಸ್‌ ಇಂಡಸ್ಟ್ರಿಯಲ್ಲಿ ಮುಂಬೈಯಲ್ಲಿ ಪರ್ಚೇಸ್‌ ವಿಭಾಗದ ಮುಖ್ಯಸ್ಥರಾಗಿದ್ದಾಗ ಪ್ರಾಜೆಕ್ಟ್‌ ಒಂದರ ಕುರಿತು ಶಿವಕುಮಾರ್‌ ಅವರ ಪ್ರೆಸೆಂಟೇಷನ್‌ ನೋಡಿದ ರಿಲೈನ್‌ ಆನ್‌ ಸೋಲಾರ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯ ಮಾಲೀಕರು ತಮ್ಮ ಜತೆ ಬರುವಂತೆ ಶಿವಕುಮಾರ್‌ ಅವರನ್ನು ಕರೆದರು.

ಸುತ್ತಾಟದ ಅನುಭವ
ಗ್ರಾಮೀಣ ಪ್ರದೇಶಗಳಲ್ಲಿ ಸೋಲಾರ್‌ ವ್ಯವಸ್ಥೆಯನ್ನು ಕಲ್ಪಿಸುವ ಈ ಸಂಸ್ಥೆಯ ಬಹುಮುಖ್ಯ ಹುದ್ದೆಗೆ ನೇಮಕಗೊಂಡ ಶಿವಕುಮಾರ್‌ ಒಡಿಶಾ, ತಮಿಳುನಾಡು, ಛತ್ತೀಸ್‌ಗಡ ಸೇರಿದಂತೆ ಹಲವು ರಾಜ್ಯಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಗುಡ್ಡಗಾಡು ಜನರೊಂದಿಗೆ ಒಡನಾಡಿ ಬದುಕಿನ ಹಲವು ಮುಖಗಳನ್ನು ನೋಡಿದರು. ‘ಒಡಿಶಾದ ಹಳ್ಳಿಗಳಲ್ಲಿ ಅಡ್ಡಾಡುವಾಗ ನಾನು ನೋಡಿದ ಬದುಕಿನ ಮುಖಗಳು ಜೀವನದ ಬಗ್ಗೆ ನನ್ನ ಅಭಿಪ್ರಾಯವನ್ನೇ ಬದಲಾಯಿಸಿಬಿಟ್ಟವು. ಅಲ್ಲಿ ಜನರು ಇಂದಿಗೂ ಮೈ ತುಂಬ ಬಟ್ಟೆ ಹಾಕಿಕೊಳ್ಳುವುದಿಲ್ಲ. ಆದರೆ ಊರಿಗೆ ಊರೇ ನಕ್ಸಲೈಟ್ಸ್‌ ಆಗಿರುತ್ತವೆ’ ಎಂದು ನೆನಪಿಸಿಕೊಳ್ಳುವಾಗ ಶಿವಕುಮಾರ್‌ ಧ್ವನಿ ಕೊಂಚ ಕಂಪಿಸುತ್ತದೆ.

ಉತ್ತಮ ಹುದ್ದೆಯಲ್ಲಿದ್ದ ಶಿವಕುಮಾರ್‌ ಕೆಫೆ ರೆಸ್ಟೋರೆಂಟ್‌ ಆರಂಭಿಸಲು ಪ್ರೇರಣೆಯಾದ ಘಟನೆಯನ್ನು ಅವರ ಮಾತಿನಲ್ಲಿಯೇ ಕೇಳಬೇಕು: ‘‘ನಾನು ಪುಣೆಯಲ್ಲಿ ಕೆಲಸ ಮಾಡುತ್ತಿದ್ದಾಗ ಒಂದು ದಿನ ಕಾಫೀ ಡೇ ಒಂದರಲ್ಲಿ ಕುಳಿತಿದ್ದೆ. ಆಗ ಅಲ್ಲಿಗೆ ನನ್ನ ತಂದೆಯ ವಯಸ್ಸಿನ ಹಿರಿಯರಿಬ್ಬರು ಕಾಫಿ ಕುಡಿಯಲು ಬಂದರು. ಅಲ್ಲಿನ ಕಾಫಿ ಬೆಲೆಯನ್ನು ನೋಡಿ– ‘ಇದು ನಮ್ಮಂಥವರಿಗಲ್ಲ. ಒಂದು ಕಾಫಿಯನ್ನೂ ಕುಡಿಯಲಾರದ ಪರಿಸ್ಥಿತಿ ಬಂತಲ್ಲ’ ಎಂದು ಬೇಸರ ಮಾಡಿಕೊಂಡು ಹೋದರು. ನಾನು ಅಲ್ಲಿದ್ದಾಗಲೇ ಮತ್ತೊಮ್ಮೆ ಇಂಥದ್ದೇ ಘಟನೆ ಪುನರಾವರ್ತನೆ ಆಯ್ತು. ಇದಕ್ಕೆ ಪರಿಹಾರ ಕಂಡುಹಿಡಿಯಬೇಕು; ಎಲ್ಲ ವರ್ಗದ ಜನರೂ ಬರಲು ಸಾಧ್ಯವಾಗುವಂತಹ ಕೆಫೆ ರೆಸ್ಟೋರೆಂಟ್‌ಗಳನ್ನು ಆರಂಭಿಸಬೇಕು ಎಂದು ನಿರ್ಧರಿಸಿದೆ. ಅವತ್ತೇ ನನ್ನ ಆ ಕೆಲಸಕ್ಕೆ ರಾಜೀನಾಮೆ ನೀಡಿದೆ. ಆದರೆ ನಮ್ಮ ಬಾಸ್‌ ರಾಜೀನಾಮೆಯನ್ನು ಒಪ್ಪಿಕೊಳ್ಳಲಿಲ್ಲ. ಆಗಷ್ಟೇ ಸೋಲಾರ್‌ನ ಹೊಸ ಪ್ರಾಜೆಕ್ಟ್‌ ಆರಂಭವಾಗುವುದಿತ್ತು. ಅದನ್ನು ಮುಗಿಸಿಯೇ ಹೋಗಬೇಕು ಎಂದು ಹಟ ಹಿಡಿದರು. ಅದಕ್ಕೆ ಒಪ್ಪಿ ಆರು ತಿಂಗಳ ಕಾಲ ಒಡಿಶಾದಲ್ಲಿ ಇದ್ದು ಪ್ರಾಜೆಕ್ಟ್‌ ಮುಗಿಸಿ ವಾಪಸ್ಸಾದೆ’’.

ಬಂಡವಾಳ ಕೂಡಿಸುವ ಕಸರತ್ತು
ನೌಕರಿಯನ್ನು ಬಿಟ್ಟು ಬೆಂಗಳೂರಿಗೆ ಬಂದುಬಿಟ್ಟಾಗಿತ್ತು. ಆದರೆ ಕೆಫೆ ರೆಸ್ಟೋರೆಂಟ್‌ ಆರಂಭಿಸುವುದು ಅಂದುಕೊಂಡಷ್ಟು ಸುಲಭವಲ್ಲ ಎಂಬುದು ಅರಿವಿಗೆ ಬರಲು ಹೆಚ್ಚು ಸಮಯ ಬೇಕಾಗಲಿಲ್ಲ. ಎಲ್ಲಕ್ಕಿಂತ ಮೊದಲು ಎದುರಾದದ್ದು ಬಂಡವಾಳದ ಸಮಸ್ಯೆ. ಹಾಗೆಂದು ಎದೆಯೊಳಗೆ ದೀಪದಂತೇ ಉಜ್ವಲ ಬೆಳಗುತ್ತಿದ್ದ ಕನಸನ್ನು ನಂದಿಸಿ ಸುಮ್ಮನಾಗುವುದು ಅವರ ಜಾಯಮಾನ ಆಗಿರಲಿಲ್ಲ. ಬೇರೆ ಬೇರೆ ಕಂಪೆನಿಗಳಲ್ಲಿ ಒಳ್ಳೆಯ ಸಂಬಳದ ನೌಕರಿಯಲ್ಲಿದ್ದ ಸ್ನೇಹಿತರನ್ನು ಸಂಪರ್ಕಿಸಿದರು. ₨ 20 ಲಕ್ಷ ಬಂಡವಾಳ ಕೂಡಿಸಿದರು. ಈ ಬಂಡವಾಳದ ಸಹಾಯದಿಂದ ವೈಟ್‌ ಫೀಲ್ಡ್‌ನಲ್ಲಿ ಪುಟ್ಟ ಆಫೀಸ್‌ ತೆರೆದು ‘ಸದರನ್ ಸ್ಪೈಸೆಸ್‌ ಆಂಡ್‌ ಬೆವರೇಜ್‌ ಪ್ರೈವೇಟ್‌ ಲಿಮಿಟೆಡ್‌’ ಹೆಸರಿನ ಕಂಪೆನಿ ಆರಂಭಿಸಿಯೇ ಬಿಟ್ಟರು. ಇದರ ಅಂಗವಾಗಿ ಮತ್ತೀಕೆರೆಯಲ್ಲಿ ‘ಟೇಸ್ಟ್‌ ಆಫ್‌ ಟಂಗ್‌’ ಎಂಬ ಕೆಫೆ ರೆಸ್ಟೋರೆಂಟ್‌ ಅನ್ನೂ ಆರಂಭಿಸಿದರು.

ಹಲವು ಕಂಪೆನಿಗಳಲ್ಲಿ ವ್ಯವಹಾರ ವಿಭಾಗದಲ್ಲಿ ಕೆಲಸ ಮಾಡಿದ್ದ ಶಿವಕುಮಾರ್‌ಗೆ ವಿಭಿನ್ನವಾಗಿರದಿದ್ದರೆ ಗ್ರಾಹಕರನ್ನು ಸೆಳೆಯುವುದು ಅಸಾಧ್ಯ ಎಂಬ ಸರಳ ತತ್ವ ಚೆನ್ನಾಗಿಯೇ ತಿಳಿದಿತ್ತು.

ಗುಣಮಟ್ಟದ ಸವಾಲುಗಳು
ಲಾಭವೊಂದೇ ಶಿವಕುಮಾರ್‌ ಉದ್ದೇಶವಾಗಿರಲಿಲ್ಲ. ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಆಹಾರ ಒದಗಿಸುವುದು ಅವರ ಗುರಿಯಾಗಿತ್ತು. ನಮ್ಮ ಕಂಪೆನಿಯ ಎಲ್ಲ ಉತ್ಪನ್ನಗಳೂ ₨ 50 ಒಳಗೇ ಇರಬೇಕು ಎಂದು ನಿರ್ಧರಿಸಿ, ಆ ಬೆಲೆಯಲ್ಲಿಯೇ ಉತ್ತಮ ಗುಣಮಟ್ಟದ ಉತ್ಪನ್ನವನ್ನು ರೂಪಿಸುವುದು ಅವರೆದುರಿನ ಸವಾಲಾಗಿತ್ತು.

ಈ ಸವಾಲನ್ನು ಎದುರಿಸುವ ಮೊದಲ ಹೆಜ್ಜೆಯಾಗಿ ಶಿವಕುಮಾರ್‌ ವಿಜಯನಗರದ ಬಳಿಯಲ್ಲಿಯೇ ಇರುವ ಇನ್ನೊಂದು ಕಾಫೀ ಡೇಗೆ ಭೇಟಿ ನೀಡಿ ಅಲ್ಲಿನ ಕೆಲಸದ ಹುಡುಗನಿಗೆ ಕೋಲ್ಡ್‌ ಕಾಫೀ ಮಾಡುವ ಬಗ್ಗೆ ಮಾಹಿತಿ ಕೇಳಿದರು. ಆದರೆ ಅವನು ‘ಇಲ್ಲೆಲ್ಲ ಕ್ಯಾಮೆರಾಗಳು ಇರ್ತವೆ ಸರ್‌. ಹಂಗೆಲ್ಲಾ ಹೇಳಕ್ಕಾಗಲ್ಲ’ ಎಂದು ಗುಟ್ಟು ಬಿಟ್ಟುಕೊಡಲು ನಿರಾಕರಿಸಿಬಿಟ್ಟ. ಶಿವು ಕೊಂಚವೂ ಬೇಸರಗೊಳ್ಳದೇ ಅವನಿಗೆ ತಮ್ಮ ಕೆಫೆ ರೆಸ್ಟೋರೆಂಟ್‌ ವಿಳಾಸವನ್ನು ಕೊಟ್ಟು ಸಮಯವಿದ್ದಾಗ ಭೇಟಿ ನೀಡುವಂತೆ ಆಹ್ವಾನ ನೀಡಿ ಬಂದರು. ನಿರೀಕ್ಷೆ ಹುಸಿಯಾಗಲಿಲ್ಲ. ಮತ್ತೊಂದೆರಡು ದಿನದಲ್ಲಿಯೇ ಶಿವು ಅವರನ್ನು ಭೇಟಿಯಾದ ಆ ಹುಡುಗ ಕೋಲ್ಡ್‌ ಕಾಫೀ ಮಾಡುವ ವಿಶೇಷ ಪಟ್ಟುಗಳನ್ನು ಹೇಳಿಕೊಟ್ಟು ಹೋದ.

ಈಗ ಸಾಮಾನ್ಯವಾಗಿ ಕಾಫೀ ಡೇಗಳಲ್ಲಿ ₨ 100ರ ಮೇಲೆಯೇ ಇರುವ ಕೋಲ್ಡ್ ಕಾಫಿ ‘ಟೇಸ್ಟ್‌ ಆಫ್ ಟಂಗ್‌’ನಲ್ಲಿ ₨40ಕ್ಕೆ ಲಭ್ಯ. ಮುಂಬೈನಲ್ಲಿ ರಿಲಾಯನ್ಸ್‌ ಇಂಡಸ್ಟ್ರಿಯಲ್ಲಿದ್ದಾಗ ಅಲ್ಲಿನ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದ ಹುಬ್ಬಳ್ಳಿಯ ಸಲ್ಮಾನ್‌ ಎಂಬ ಹುಡುಗನೊಬ್ಬ ತುಂಬ ಚೆನ್ನಾಗಿ ಸ್ಯಾಂಡ್‌ವಿಚ್‌ ಮಾಡುತ್ತಿದ್ದ. ಹಲವು ವರ್ಷಗಳ ಹಿಂದೆ ತಿಂದಿದ್ದ ಅದರ ರುಚಿಯನ್ನು ಇನ್ನೂ ಮರೆತಿರದ ಶಿವಕುಮಾರ್‌ ನೇರವಾಗಿ ಮುಂಬೈಗೆ ಹೋದರು. ಹಳೆಯ ಪರಿಚಯದ ನೆಪದಲ್ಲಿ ಸಲ್ಮಾನ್‌ನನ್ನು ಭೇಟಿಯಾಗಿ ತಮ್ಮ ‘ಟೇಸ್ಟ್‌ ಆಫ್‌ ಟಂಗ್‌’ ಬಗ್ಗೆ ವಿವರಿಸಿ, ‘ನನ್ನ ಜತೆ ಬರ್ತೀಯಾ?’ ಎಂದು ಆಹ್ವಾನಿಸಿದರು. ಆದರೆ ಕಳೆದ ಎಂಟು ವರ್ಷಗಳಿಂದ ಮುಂಬೈಯಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದ ಸಲ್ಮಾನ್‌ ಮುಂಬೈ ಬಿಟ್ಟು ಬರಲು ಒಪ್ಪದಿದ್ದರೂ ತನ್ನ ಸ್ಯಾಂಡ್‌ವಿಚ್‌ ರುಚಿಯ ರಹಸ್ಯವನ್ನು ಶಿವಕುಮಾರ್‌ಗೆ ಬೋಧಿಸಿ ಹಾರೈಸಿದ.

‘ಅವನು ಸ್ಯಾಂಡ್‌ವಿಚ್‌ಗೆ ಬಳಸುವ ಮಸಾಲಾ ಪೌಡರ್‌ನಲ್ಲಿಯೇ ಅದರ ರುಚಿಯ ಗುಟ್ಟೂ ಇತ್ತು. ಪುದಿನಾ, ಕೊತ್ತಂಬರಿ, ಮೆಣಸಿನಕಾಯಿ, ಜೀರಿಗೆಗಳನ್ನು ವಿಶೇಷ ಪ್ರಮಾಣದಲ್ಲಿ ಬೆರೆಸಿ ಚಟ್ನಿ ಮಾಡಿಕೊಳ್ಳಬೇಕು. ಆಮೇಲೆ ಸ್ಪೆಷಲ್‌ ಮಸಾಲಾ ಪೌಡರ್‌ ಹಾಕಬೇಕು. ಆ ಮಸಾಲಾ ಪೌಡರ್‌ ಹೇಗಿರುತ್ತೆ ಅಂದರೆ ನೀವು ಸ್ಯಾಂಡ್‌ವಿಚ್‌ ಅನ್ನು ಹಲ್ಲಿನಲ್ಲಿ ಕಚ್ಚಿದ ತಕ್ಷಣಕ್ಕೇ ಅದರ ಟೇಸ್ಟ್‌ ನಿಮಗೆ ಫೀಲ್‌ ಆಗಬೇಕು...’ ಎಂದು ಕೇಳುವಾಗಲೇ ಬಾಯಲ್ಲಿ ನೀರೂರುವಂತೆ ಬಾಂಬೆ ವೆಜ್‌ ಗ್ರಿಲ್‌ ಸ್ಯಾಂಡ್‌ವಿಚ್‌ ಮಾಡುವ ಬಗೆಯನ್ನು ವರ್ಣಿಸುತ್ತಾರೆ ಶಿವಕುಮಾರ್‌.

ಇನ್ನೊಮ್ಮೆ ರೆಸ್ಟೋರೆಂಟ್‌ಗೆ ಬಂದ ಗ್ರಾಹಕರೊಬ್ಬರು ನಿಮ್ಮ ಉತ್ಪನ್ನಗಳಲ್ಲಿ ಫ್ರೆಶ್‌ನೆಸ್‌ ಚೆನ್ನಾಗಿದೆ. ನೀವು ಫ್ರೂಟ್‌ ಸಲಾಡ್‌ ಮಾಡಬಹುದು ಎಂದು ಸಲಹೆ ನೀಡಿದರು. ಬೇರೆಯವರಾಗಿದ್ದರೆ ನಕ್ಕು ಸುಮ್ಮನಾಗುತ್ತಿದ್ದರೇನೋ, ಶಿವಕುಮಾರ್‌ ನಗಲಿಲ್ಲ. ಬದಲಿಗೆ ಅವತ್ತೇ ಎಲ್ಲೆಲ್ಲಿಂದಲೋ ಮಾಹಿತಿ ಸಂಗ್ರಹಿಸಿ ಕಲಿತುಕೊಂಡು ರಷ್ಯನ್‌ ಸಲಾಡ್‌, ವೆಜ್‌ ಸಲಾಡ್‌, ಫ್ರೂಟ್‌ ಸಲಾಡ್‌ಗಳನ್ನು ತಯಾರಿಸಿದರು. ರಷ್ಯನ್‌ ಸಲಾಡ್‌ನ ತಯಾರಿಕಾ ವೆಚ್ಚ ಕೊಂಚ ಜಾಸ್ತಿ. ಅದರಿಂದ ಬರುವ ಲಾಭವೂ ಕಡಿಮೆಯೇ. ಆದರೂ ಅವರು ತಮ್ಮ ಕಂಪೆನಿಯ ಬೆಲೆಮಿತಿ ₨ 50 ಅನ್ನು ದಾಟಲಿಲ್ಲ. ಹೆಚ್ಚಿನ ಲಾಭದ ಆಸೆಯಿಂದ ಶಿವು ಬೆಲೆ ಹೆಚ್ಚಿಸಲಿಲ್ಲ.

ಇವು ಶಿವಕುಮಾರ್‌ ತಮ್ಮ ರೆಸ್ಟೋರೆಂಟ್‌ ಮೆನುವನ್ನು ವಿಸ್ತರಿಸಿಕೊಳ್ಳುವ ಬಗೆಯ ಕೆಲವು ನಿದರ್ಶನಗಳಷ್ಟೇ. ‘ಕೇವಲ ಸಂಖ್ಯೆ ದೃಷ್ಟಿಯಿಂದ ಮೆನುವನ್ನು ದೀರ್ಘವಾಗಿಸುವ ಸಲುವಾಗಿ ನಾವು ನಮ್ಮ ಉತ್ಪನ್ನಗಳನ್ನು ಬಳಸಿಕೊಳ್ಳುವುದಿಲ್ಲ. ಯಾವ ಉತ್ಪನ್ನಗಳನ್ನು ಜನರು ಹೆಚ್ಚು ಇಷ್ಟಪಡುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಿ ಅವರ ಅಭಿಪ್ರಾಯದ ಆಧಾರದ ಮೇಲೆ ನಮ್ಮ ಮೆನು ಪಟ್ಟಿಯಲ್ಲಿ ಸೇರಿಸುತ್ತೇವೆ’ ಎನ್ನುವ ಇವರ ರೆಸ್ಟೋರೆಂಟ್‌ ಮೆನುವಿನಲ್ಲಿ 150ಕ್ಕೂ ಹೆಚ್ಚು ಬಗೆಯ ಉತ್ಪನ್ನಗಳು ಇವೆ. ಇಲ್ಲಿ ಯಾವ ಉತ್ಪನ್ನವನ್ನೂ ಮೊದಲೇ ತಯಾರಿಸುವುದಿಲ್ಲ. ಗ್ರಾಹಕರು ಆರ್ಡರ್‌ ನೀಡಿದ ಮೇಲೆ ತಯಾರಿಸಿ ಕೊಡುವುದು ವಿಶೇಷ. ಫ್ರೆಶ್‌ನೆಸ್‌ ಮತ್ತು ಸ್ವಚ್ಛತೆ ನಮ್ಮ ಹೆಗ್ಗಳಿಕೆ ಎನ್ನುತ್ತಾರೆ ಶಿವು.

ಮುಂದಿನ ಯೋಜನೆಗಳು
ಕಳೆದ ಜೂನ್‌ ತಿಂಗಳಲ್ಲಿ ಮತ್ತೀಕೆರೆಯಲ್ಲಿ ಕೆಫೆ ರೆಸ್ಟೋರೆಂಟ್‌ ಆರಂಭಿಸಿ ಅಲ್ಲಿ ಮತ್ತಿಬ್ಬರು ಹುಡುಗರಿಗೆ ತರಬೇತಿ ನೀಡಿದ ಶಿವಕುಮಾರ್‌ ಈಗ ವಿಜಯನಗರದ ಬಿಎಸ್‌ವಿಪಿ ಕಾಲೇಜ್‌ ಎದುರಿನಲ್ಲಿ ಟೇಸ್ಟ್‌ ಆಫ್‌ ಟಂಗ್‌ನ ಮತ್ತೊಂದು ಶಾಖೆ ಆರಂಭಿಸಿ ತಾವೇ ಅದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ. ಇಲ್ಲಿಯೂ ಇನ್ನಿಬ್ಬರು ಹುಡುಗರಿಗೆ ತರಬೇತಿ ನೀಡುತ್ತಿರುವ ಅವರು ಮುಂದಿನ ಶಾಖೆಯನ್ನು ಕನಕಪುರ ರಸ್ತೆಯಲ್ಲಿ ತೆರೆಯುವ ಸಿದ್ಧತೆಯಲ್ಲಿದ್ದಾರೆ. ಈ ವರ್ಷಾಂತ್ಯಕ್ಕೆ ತುಮಕೂರು, ಮೈಸೂರು, ದಾವಣಗೆರೆಯಷ್ಟೇ ಅಲ್ಲದೇ ಮಹಾರಾಷ್ಟ್ರದ ಲಾತೂರ್‌ ಸೇರಿದಂತೆ ಕನಿಷ್ಠ ಹತ್ತು ಸ್ಥಳಗಳಲ್ಲಿ ಟೇಸ್ಟ್‌ ಆಫ್‌ ಟಂಗ್‌ ಶಾಖೆಗಳನ್ನು ತೆರೆಯುವ ಗುರಿ ಹೊಂದಿದ್ದಾರೆ.

   ತಂತ್ರಜ್ಞಾನದಲ್ಲಿಯೂ ವಿಶೇಷ ಆಸಕ್ತಿ ತಳೆದಿರುವ ಶಿವಕುಮಾರ್‌ ತಾವು ಸ್ಥಳದಲ್ಲಿ ಇಲ್ಲದೆಯೂ ಎಲ್ಲ ಕೆಫೆ ರೆಸ್ಟೋರೆಂಟ್‌ಗಳನ್ನು ಮುಖ್ಯ ಕಚೇರಿಯಿಂದಲೇ ನಿಯಂತ್ರಿಸಲು ಸಾಧ್ಯವಾಗುವಂತಹ ಸಂಪರ್ಕ ಜಾಲವನ್ನು ರೂಪಿಸುವ ಉದ್ದೇಶವನ್ನೂ ಹೊಂದಿದ್ದಾರೆ. ಇದರಿಂದ ರೆಸ್ಟೋರೆಂಟ್‌ಗಳಲ್ಲಿನ ಸಿಬ್ಬಂದಿಗಳ ನಡವಳಿಕೆಗಳ ಮೇಲೆ ನಿಗಾ ಇಡಲು ಸಾಧ್ಯವಾಗುವುದಷ್ಟೇ ಅಲ್ಲದೇ ಅವರಿಗೆ ಎದುರಾಗುವ ತಕ್ಷಣದ ಸಮಸ್ಯೆಗಳನ್ನು ನೇರವಾಗಿ ನಿವಾರಿಸಲೂ ಸಾಧ್ಯವಾಗಬೇಕು ಎಂಬ ಉದ್ದೇಶ ಅವರಿಗಿದೆ.

ವ್ಯವಹಾರದ ಲೆಕ್ಕಾಚಾರ
‘ಒಂದು ಕೆಫೆ ರೆಸ್ಟೋರೆಂಟ್‌ನಲ್ಲಿ ದಿನವೊಂದಕ್ಕೆ ಎಂಟು ಸಾವಿರ ರೂಪಾಯಿಗಳ ವ್ಯವಹಾರ ನಡೆಯಬೇಕು ಎಂಬುದು ನನ್ನ ಗುರಿ. ಎಂಟು ಸಾವಿರ ವ್ಯವಹಾರ ನಡೆದರೆ ಅದರಲ್ಲಿ ಮೂರುವರೆಯಿಂದ ನಾಲ್ಕು ಸಾವಿರ ಲಾಭ ಸಿಗುತ್ತದೆ. ಮೊದಲ ಹತ್ತು ಶಾಖೆಗಳಿಗೆ ಬಂಡವಾಳ ಹೂಡಿಕೆ ಕಷ್ಟವಾಗಬಹುದು. ಆದರೆ 10 ಶಾಖೆಗಳು ಕಾರ್ಯ ಆರಂಭಿಸಿದ ಮೇಲೆ ಪ್ರತಿ ಶಾಖೆಯಲ್ಲಿ ಸರಾಸರಿ 8 ಸಾವಿರ ವ್ಯವಹಾರ ನಡೆದರೆ ಒಟ್ಟು 80 ಸಾವಿರ ವ್ಯವಹಾರ ನಡೆಯುತ್ತದೆ. ಅದರಿಂದ ಬರುವ ಲಾಭವೇ ಹನ್ನೊಂದನೇ ರೆಸ್ಟೋರೆಂಟ್‌ಗೆ ಬೇಕಾಗುವ ಬಂಡವಾಳ’ ಎಂದು ವ್ಯವಹಾರದ ಲೆಕ್ಕಾಚಾರವನ್ನು ಚಕಚಕನೇ ಬಿಚ್ಚಿಡುತ್ತಾರೆ.

ಆರಂಭದ ಅವಲೋಕನ
ಶಿವಕುಮಾರ್ ಎಲ್ಲೆಂದರಲ್ಲಿ ರೆಸ್ಟೋರೆಂಟ್‌ಗಳನ್ನು ಆರಂಭಿಸಿಬಿಡುವುದಿಲ್ಲ. ರೆಸ್ಟೋರೆಂಟ್‌ ಆರಂಭಿಸುವುದಕ್ಕೂ ಮುನ್ನ ಏಳು ದಿನಗಳ ಕಾಲ ಆ ಸ್ಥಳವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾರೆ. ಅಲ್ಲಿನ ಜನರ ಅಭಿರುಚಿ, ಬೇಡಿಕೆಗಳನ್ನು ಗ್ರಹಿಸುತ್ತಾರೆ. ಅವುಗಳ ಆಧಾರದ ಮೇಲೆ ಸೂಕ್ತ ಸ್ಥಳ ನಿರ್ಧರಿಸುತ್ತಾರೆ. ಒಳಾಂಗಣ ವಿನ್ಯಾಸವನ್ನೂ ತಾವೇ ಮಾಡುತ್ತಾರೆ. ರೆಸ್ಟೋರೆಂಟ್‌ ಆರಂಭಿಸಿದ ಮೇಲೂ ಒಂದು ತಿಂಗಳು ತಾವೇ ಅದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ. ನಂತರ ಇನ್ನಿಬ್ಬರು ಹುಡುಗರಿಗೆ ತರಬೇತಿ ನೀಡಿ ಆ ಶಾಖೆ ಜವಾಬ್ದಾರಿ ವಹಿಸಿಕೊಡುತ್ತಾರೆ.

ಸಾಮಾಜಿಕ ಕಾಳಜಿ
‘ನಾನು ವ್ಯವಹಾರ ಮಾಡುವುದು ಲಾಭಕ್ಕಾಗಿ. ಆದರೆ ಲಾಭವನ್ನು ಖಂಡಿತ ಕೇವಲ ನನ್ನ ಸ್ವಾರ್ಥಕ್ಕಾಗಿಯಷ್ಟೇ ಬಳಸಿಕೊಳ್ಳುವುದಿಲ್ಲ. ಈಗಲೂ ನಾನು ಸಾಮಾನ್ಯವಾಗಿ ವಿದ್ಯಾರ್ಥಿಗಳನ್ನೇ ನನ್ನ ಕಂಪೆನಿಯ ಕೆಲಸಗಾರರನ್ನಾಗಿ ನೇಮಿಸಿಕೊಳ್ಳಲು ಆದ್ಯತೆ ನೀಡುತ್ತೇನೆ.

   ಇಲ್ಲಿ ಕೆಲಸ ಮಾಡುತ್ತಿರುವವರು ಅದೆಷ್ಟೇ ಕಲಿತರೂ ಅವರ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಾನು ವಹಿಸಿಕೊಳ್ಳುತ್ತೇನೆ. ಅದನ್ನು ಅವರ ಸಂಬಳದಲ್ಲಿ ಕಡಿತ ಮಾಡಿಕೊಳ್ಳುವುದಿಲ್ಲ. ಯಾಕೆಂದರೆ ಬಡವರಿಗೆ ವಿದ್ಯೆ ಎಷ್ಟು ದುಬಾರಿ ಬೆಲೆ ಕೇಳುತ್ತದೆ ಎನ್ನುವುದನ್ನು ನಾನು ಸ್ವತಃ ಅನುಭವಿಸಿದ್ದೇನೆ’ ಎನ್ನುವ ಶಿವು ಈಗಲೂ ತಮ್ಮ ಗಳಿಕೆಯ ಒಂದು ಭಾಗವನ್ನು ಅಂಧ ಮಕ್ಕಳ ಶಾಲೆಯೊಂದಕ್ಕೆ ನೀಡುತ್ತಾರೆ.

‘ಶಿಕ್ಷಣ, ಅದಕ್ಕೆ ತಕ್ಕ ವೃತ್ತಿ ಎಲ್ಲವೂ ಬೇಕು. ಆದರೆ ಅದೊಂದೇ ಬದುಕಲ್ಲ. ಅದರಾಚೆಗೂ ಬದುಕನ್ನು ಅರ್ಥಪೂರ್ಣವಾಗಿ ಕಟ್ಟಿಕೊಳ್ಳಬಹುದು ಎಂಬ ಅರಿವು ಬಹಳ ಜನರಿಗೆ ಇರುವುದಿಲ್ಲ. ಎಂಜಿನಿಯರ್‌ ಎಂದರೆ ಹೀಗಿರಬೇಕು, ಡಾಕ್ಟರ್‌ ಎಂದರೆ ಹೀಗೇ ಇರಬೇಕು ಎಂದು ನಿರ್ಧರಿಸಿಬಿಟ್ಟಿರುತ್ತಾರೆ. ಅಂಥವರಿಗೆಲ್ಲ ನನ್ನ ಜೀವನದ ಮೂಲಕವೇ ಒಂದು ಪಾಠ ಹೇಳಬೇಕು ಎಂದು ಹೊರಟಿದ್ದೇನೆ’ ಎಂದು ವಿಶ್ವಾಸದಿಂದ ಹೇಳುವ ಶಿವಕುಮಾರ್‌ ಅವರ ಕಣ್ಣುಗಳಲ್ಲಿನ ಕನಸಿನ ಬಣ್ಣ ಆಗಷ್ಟೇ ಖಾಲಿ ಮಾಡಿದ ಕೆಪುಚಿನೋಗಿಂತ ಬೆರಗು ಮೂಡಿಸುವಂತಿತ್ತು.
ಮಾಹಿತಿಗೆ: www.ssbgroup.co.in
ದೂರವಾಣಿ: 9740550344/ 7259595968

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT