ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಆಧಾರ್‌ ಕಾರ್ಡ್‌, ಅಂಕಪಟ್ಟಿ ಮಾರಾಟ: ಬಂಧನ

Last Updated 4 ಮೇ 2016, 19:41 IST
ಅಕ್ಷರ ಗಾತ್ರ

ಬೆಂಗಳೂರು: ನಕಲಿ ಆಧಾರ್‌ ಕಾರ್ಡ್‌, ಚುನಾವಣಾ ಗುರುತಿನ ಚೀಟಿ, ಅಂಕಪಟ್ಟಿ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದ ಮಂಗಮ್ಮನಪಾಳ್ಯದ ಖಾಲಿದ್‌ಖಾನ್‌ (45) ಎಂಬಾತನನ್ನು  ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಒರಿಸ್ಸಾದ ಬದ್ರಕ್‌ನ ಖಾಲಿದ್‌ಖಾನ್‌ ಮಾಲೀಕತ್ವದ ಲಿಬರಾ ನೆಟ್‌ಜೋನ್‌ ಕಂಪ್ಯೂಟರ್‌ ಸೆಂಟರ್‌ ಮೇಲೆ ದಾಳಿ ನಡೆಸಿ ಹಲವು ಬಗೆಯ ನಕಲಿ ಕಾರ್ಡ್‌, ಅಂಕಪಟ್ಟಿ, ಕಂಪ್ಯೂಟರ್‌, ಸ್ಕ್ಯಾನರ್‌, ಪ್ರಿಂಟರ್‌ ಹಾಗೂ ಲ್ಯಾಮಿನೇಷನ್‌ ಯಂತ್ರವನ್ನು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಎಂಟು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಖಾಲಿದ್‌ಖಾನ್‌ ಜೆರಾಕ್ಸ್‌ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಅಲ್ಲಿ ಪರಿಣಿತನಾದ ನಂತರ ಕೆಲಸಕ್ಕೆ ರಾಜೀನಾಮೆ ನೀಡಿ ಮಂಗಮ್ಮನಪಾಳ್ಯದ ರಮಣ ಕಾಂಪ್ಲೆಕ್ಸ್‌ನಲ್ಲಿ ಸ್ವಂತ ಜೆರಾಕ್ಸ್‌ ಮತ್ತು ಕಂಪ್ಯೂಟರ್‌ ಸೆಂಟರ್‌ ತೆರೆದಿದ್ದ. ಅಂಗಡಿಯಲ್ಲಿ ಜೆರಾಕ್ಸ್‌ ಯಂತ್ರ, ಕಂಪ್ಯೂಟರ್‌, ಸ್ಕ್ಯಾನರ್‌, ಪ್ರಿಂಟರ್‌ ಹಾಗೂ ಲ್ಯಾಮಿನೇಷನ್‌್ ಯಂತ್ರ ಇಟ್ಟುಕೊಂಡಿದ್ದ. ಪ್ರತಿದಿನವೂ ಅಂಗಡಿಗೆ ಬರುತ್ತಿದ್ದ ಗ್ರಾಹಕರು ಆಧಾರ್‌ ಕಾರ್ಡ್‌, ಅಂಕಪಟ್ಟಿ ಹಾಗೂ ಚುನಾವಣಾ ಗುರುತಿನ ಚೀಟಿಗಳನ್ನು ಜೆರಾಕ್ಸ್‌ ಮಾಡಿಸುತ್ತಿದ್ದರು.

ಅದನ್ನೇ ಬಂಡವಾಳ ಮಾಡಿಕೊಂಡ ಖಾಲಿದ್‌ಖಾನ್‌ ದಾಖಲೆಗಳನ್ನು ಜೆರಾಕ್ಸ್ ಮಾಡುವ ಬದಲು ಅವುಗಳನ್ನು ಸ್ಕ್ಯಾನ್‌ ಮಾಡಿಟ್ಟುಕೊಳ್ಳುತ್ತಿದ್ದ.
ಜತೆಗೆ ತನ್ನ ಬಳಿ ಬರುವ ಗ್ರಾಹಕರಿಗೆ ತಾನು ಆಧಾರ್‌ ಕಾರ್ಡ್‌, ಅಂಕಪಟ್ಟಿ ಹಾಗೂ ಚುನಾವಣಾ ಗುರುತಿನ ಚೀಟಿ ಮಾಡಿಕೊಡುವುದಾಗಿ ಹೇಳುತ್ತಿದ್ದ. ಅದನ್ನು ಕೇಳಿ ಗ್ರಾಹಕರು ಆತನ ಬಳಿ ಬಂದು ಕಾರ್ಡ್‌ ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ವೈಯಕ್ತಿಕ ಮಾಹಿತಿ ಬದಲಾವಣೆ: ಬಣ್ಣದ ಸ್ಕ್ಯಾನ್‌ ಮಾಡಿಟ್ಟುಕೊಳ್ಳುತ್ತಿದ್ದ  ಆಧಾರ್‌ ಕಾರ್ಡ್‌, ಅಂಕಪಟ್ಟಿ ಹಾಗೂ ಚುನಾವಣಾ ಗುರುತಿನ ಚೀಟಿಯಲ್ಲಿದ್ದ ನೈಜ ವ್ಯಕ್ತಿಯ ಭಾವಚಿತ್ರ, ಹೆಸರು, ವಿಳಾಸ ಸೇರಿ ವೈಯಕ್ತಿಕ ಮಾಹಿತಿಯನ್ನು ಅಳಿಸಿ ಹಾಕುತ್ತಿದ್ದ ಆರೋಪಿ ಖಾಲಿದ್‌ಖಾನ್‌ ಅದೇ ಜಾಗದಲ್ಲಿ ಬೇರೊಬ್ಬರ ಹೆಸರು ಸೇರಿಸಿ ನಕಲಿ ದಾಖಲೆ ಸಿದ್ಧಪಡಿಸುತ್ತಿದ್ದ.

ಬಳಿಕ ಅದನ್ನು ಬಣ್ಣದ ಪ್ರಿಂಟ್‌ ತೆಗೆದು ಲ್ಯಾಮಿನೇಷನ್‌ ಮಾಡಿ ಕೊಡುತ್ತಿದ್ದ. ಆದರೆ ಆಧಾರ್‌ ಕಾರ್ಡ್‌, ಚುನಾವಣಾ ಗುರುತಿನ ಚೀಟಿ ಸಂಖ್ಯೆ ಹಾಗೂ ಅಂಕಪಟ್ಟಿಯ ಅಂಕಗಳು ಹಾಗೆಯೇ ಇರುತ್ತಿದ್ದವು ಎಂದು ಸಿಸಿಬಿ ಪೊಲೀಸರು ತಿಳಿಸಿದರು.

ಸಿಸಿಬಿ ಸಿಬ್ಬಂದಿಗೂ ಅಂಕಪಟ್ಟಿ: ನಕಲಿ ದಾಖಲೆ ಸಿದ್ಧಪಡಿಸುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಸಿಸಿಬಿ ಪೊಲೀಸರ ತಂಡ ಆತನನ್ನು ಸಾಕ್ಷ್ಯ ಸಮೇತ ಬಂಧಿಸಲು ಯೋಜನೆ ರೂಪಿಸಿತ್ತು. ಅದರಂತೆ ಸಿಸಿಬಿ ಸಿಬ್ಬಂದಿಯೊಬ್ಬರು ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಬೇಕಾಗಿದೆ ಎಂದು ಖಾಲಿದ್‌ಖಾನ್‌ ಅಂಗಡಿಗೆ ಹೋಗಿದ್ದರು. ಅವರ ಪೂರ್ಣ ಮಾಹಿತಿ ಪಡೆದ ಖಾಲಿದ್‌ಖಾನ್‌ 10 ನಿಮಿಷದಲ್ಲಿ ಅಂಕಪಟ್ಟಿ ಸಿದ್ಧಪಡಿಸಿ ಕೊಟ್ಟಿದ್ದ ಎಂದು ಅವರು ವಿವರಿಸಿದರು.

3 ಸಾವಿರ ಜನರಿಗೆ ಮಾರಾಟ
ನಕಲಿ ದಾಖಲೆ ಮಾರಾಟದಿಂದಲೇ ಖಾಲಿದ್‌ಖಾನ್‌ ಲಕ್ಷಾಂತರ ರೂಪಾಯಿ ಸಂಪಾದಿಸಿದ್ದು, ನಗರದಲ್ಲಿ ನಿವೇಶನ ಸಹ ಖರೀದಿಸಿದ್ದಾನೆ ಎಂದು ಪೊಲೀಸರು ತಿಳಿಸಿದರು.

‘ಒಂದು ನಕಲಿ ಆಧಾರ್‌ ಕಾರ್ಡ್‌ಗೆ ₹2 ಸಾವಿರ, ಚುನಾವಣಾ ಗುರುತಿನ ಚೀಟಿಗೆ ₹1500 ಹಾಗೂ ಅಂಕಪಟ್ಟಿಯನ್ನು ₹ 1 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ. ಆತನಿಂದ ಇದುವರೆಗೂ 3 ಸಾವಿರಕ್ಕೂ ಹೆಚ್ಚು ಜನ ನಕಲಿ ಕಾರ್ಡ್‌್ ಖರೀದಿಸಿದ್ದಾರೆ. ಜತೆಗೆ ಎಸ್ಸೆಸ್ಸೆಲ್ಸಿ ಅಂಕಪಟ್ಟಿಗಳನ್ನೇ ಅತೀ ಹೆಚ್ಚು ಮಾರಾಟ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾರೆ.

ನಕಲಿ ದಾಖಲೆ ಖರೀದಿಸಿದ್ದ ಕೆಲವರು ಸರ್ಕಾರದ ಯೋಜನೆಗಳ ಲಾಭ ಪಡೆಯುತ್ತಿದ್ದು, ವಿದೇಶ ಪ್ರಯಾಣಕ್ಕೆ ಪಾಸ್‌ಪೂರ್ಟ್‌ ಸಹ ಮಾಡಿಸಿದ್ದಾರೆ. ಇನ್ನು ಕೆಲವರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಗಿಟ್ಟಿಸಿದ್ದಾರೆ ಎಂಬ ಮಾಹಿತಿ  ಇದೆ ಎಂದು ಸಿಸಿಬಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT