ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಜ್ಯೋತಿಷಿಗಳಿಬ್ಬರಿಗೆ ಮಹಿಳೆಯರಿಂದ ಗೂಸಾ

ದೋಷ ನಿವಾರಣೆ ಹೆಸರಿನಲ್ಲಿ ಅಸಭ್ಯ ವರ್ತನೆ
Last Updated 25 ಜೂನ್ 2016, 19:40 IST
ಅಕ್ಷರ ಗಾತ್ರ

ಬೆಂಗಳೂರು: ಬಸವೇಶ್ವರನಗರ ಸಮೀಪದ ಕಮಲಾನಗರದಲ್ಲಿ  ಮೂಢನಂಬಿಕೆ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ಇಬ್ಬರು ನಕಲಿ ಜ್ಯೋತಿಷಿಗಳನ್ನು ಮಹಿಳೆಯರೇ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಶುಕ್ರವಾರ ನಡೆದಿದೆ.

‘ಚೌಡೇಶ್ವರಿ ಜ್ಯೋತಿಷ್ಯಾಲಯ’ ಹೆಸರಿನಲ್ಲಿ ಅಂಗಡಿ ಇಟ್ಟುಕೊಂಡಿದ್ದ ಪೃಥ್ವಿ (28) ಹಾಗೂ ಮೋಹನ್‌ (29) ಎಂಬುವವರನ್ನು ಮಹಿಳೆಯರು ಥಳಿಸಿದ್ದಾರೆ. ಸದ್ಯ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.

ಮೂಲತಃ ತಮಿಳುನಾಡಿನ ಪೃಥ್ವಿ  ಹಾಗೂ ಮೋಹನ್‌, ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದು ಜ್ಯೋತಿಷ್ಯ ಅಂಗಡಿ ತೆರೆದಿದ್ದರು. ತಮ್ಮ ಬಳಿ ಬರುತ್ತಿದ್ದ ಮಹಿಳೆಯರ ಸಮಸ್ಯೆ ಕೇಳುತ್ತಿದ್ದ ಅವರು ದೋಷ ನಿವಾರಿಸುವುದಾಗಿ ನಂಬಿಸುತ್ತಿದ್ದರು ಎಂದು ಮಾಹಿತಿ ನೀಡಿದರು.

ಜ್ಯೋತಿಷ್ಯಾಲಯಕ್ಕೆ ಒಬ್ಬರೇ ಬರುವಂತೆ ಮಹಿಳೆಯರಿಗೆ ಹೇಳುತ್ತಿದ್ದ ಆರೋಪಿಗಳು, ಮೈಗೆ ಅಂಜನಾ ಹಚ್ಚಿದರೆ ದೋಷ ನಿವಾರಣೆಯಾಗುತ್ತದೆ ಎಂದು ಹೇಳುತ್ತಿದ್ದರು. ಬಳಿಕ ಬಟ್ಟೆ ಬಿಚ್ಚಿ ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸುತ್ತಿದ್ದರು. ಜತೆಗೆ ಲೈಂಗಿಕ ಕ್ರಿಯೆಗೆ  ಪುಸಲಾಯಿಸುತ್ತಿದ್ದರು. ಜ್ಯೋತಿಷಿಗಳ ವರ್ತನೆಯಿಂದ ಬೇಸತ್ತ ಕೆಲ ಮಹಿಳೆಯರು ಸಂಬಂಧಿಕರಿಗೆ ವಿಷಯ ತಿಳಿಸಿದ್ದರು.

ಅಂಗಡಿಗೆ ಹೋಗಿದ್ದ ಸಂಬಂಧಿಕರು, ಎಚ್ಚರಿಕೆ ನೀಡಿದ್ದರು. ಆದರೆ, ಜ್ಯೋತಿಷಿಗಳು ತಮ್ಮ ಹಳೇ ಚಾಳಿ ಮುಂದುವರಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.ಮಹಿಳೆಯರಷ್ಟೇ ಅಲ್ಲದೆ, ಜ್ಯೋತಿಷ್ಯಾಲಯಕ್ಕೆ ಬರುತ್ತಿದ್ದ ಪುರುಷರಿಂದಲೂ ಆರೋಪಿಗಳು ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದರು. ಸಮಸ್ಯೆ ಪರಿಹಾರವಾಗದಿದ್ದಾಗ ದೊಡ್ಡ ಪ್ರಮಾಣದ ಪೂಜೆ ಮಾಡಬೇಕೆಂದು ಮತ್ತಷ್ಟು ಹಣ ಕೀಳುತ್ತಿದ್ದರು ಎಂದು ಅವರು ತಿಳಿಸಿದರು.

ಈ ಜ್ಯೋತಿಷಿಗಳ ವರ್ತನೆ ಮಿತಿಮೀರಿದ್ದರಿಂದ ಆಕ್ರೋಶಗೊಂಡ 10ಕ್ಕೂ ಹೆಚ್ಚು ಮಹಿಳೆಯರು, ಕನ್ನಡಪರ ಸಂಘಟನೆಯೊಂದರ ಕಾರ್ಯಕರ್ತೆಯರೊಂದಿಗೆಜ್ಯೋತಿಷ್ಯಾಲಯಕ್ಕೆ ಹೋಗಿ  ಥಳಿಸಿದ್ದಾರೆ.  ಸ್ಥಳಕ್ಕೆ ಹೋಗಿ ಪರಿಸ್ಥಿತಿ ತಿಳಿಗೊಳಿಸಲಾಯಿತು ಎಂದು ಪೊಲೀಸರು ತಿಳಿಸಿದರು.

ಜ್ಯೋತಿಷ್ಯಾಲಯ ಧ್ವಂಸ: ಮಹಿಳೆಯರ ಗುಂಪು, ‘ಚೌಡೇಶ್ವರಿ ಜ್ಯೋತಿಷ್ಯಾಲಯ’ ವನ್ನು ಸಂಪೂರ್ಣವಾಗಿ ಧ್ವಂಸ ಮಾಡಿದೆ.
ಬೋರ್ಡ್‌ ಕಿತ್ತೆಸೆದ ಮಹಿಳೆಯರು, ವಿವಿಧ ಬಗೆಯ ಪೂಜಾ ಸಾಮಗ್ರಿಗಳನ್ನು ರಸ್ತೆಗೆ ತಂದು ಎಸೆದಿದ್ದಾರೆ. ಜತೆಗೆ ಪೀಠೋಪಕರಣಗಳನ್ನು ಒಡೆದು ಹಾಕಿದ್ದಾರೆ.

ಹೇಳಿಕೆ ಸಂಗ್ರಹ
‘ಪ್ರತಿದಿನವೂ ಕೌಟುಂಬಿಕ ಹಾಗೂ ಇತರೆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮಹಿಳೆಯರು ಜ್ಯೋತಿಷ್ಯಾಲಯಕ್ಕೆ ಬರುತ್ತಿದ್ದರು. ಅವರಲ್ಲಿ ಹಲವು ಮಹಿಳೆಯರು ಜ್ಯೋತಿಷಿಗಳ ಬಳಿ ಅಂಜನಾ ಹಚ್ಚಿಸಿಕೊಂಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ತಮ್ಮ ಮಾತು ಕೇಳುತ್ತಾರೆ ಎಂದುಕೊಂಡಿದ್ದ ಆರೋಪಿಗಳು, ಪ್ರತಿಯೊಬ್ಬ ಮಹಿಳೆಯರಿಗೂ ಅಂಜನಾ ಹಚ್ಚಿಕೊಳ್ಳಲು ಒತ್ತಾಯಿಸುತ್ತಿದ್ದರು. ಜತೆಗೆ ಗಂಡನ ಜತೆ ಸಹಕರಿಸುವಂತೆ ತಮ್ಮ ಜೊತೆಗೂ ಸಹಕರಿಸಿದರೆ ದೋಷ ಬೇಗನೇ ಪರಿಹಾರವಾಗುತ್ತದೆ ಎಂದು ನಂಬಿಸುತ್ತಿದ್ದರು. ಈ ಬಗ್ಗೆ ನೊಂದ ಮಹಿಳೆಯರಿಂದ ಹೇಳಿಕೆ ಪಡೆಯಲಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT