ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲ್‌ ಪ್ಯಾಕೇಜ್‌: ಆಶಯ ಈಡೇರಲಿ

Last Updated 24 ಜೂನ್ 2016, 19:30 IST
ಅಕ್ಷರ ಗಾತ್ರ

ನಕ್ಸಲ್‌ ಸಮಸ್ಯೆಯನ್ನು ಬಗೆಹರಿಸುವುದು ಹೇಗೆ ಎಂಬ ತಲೆನೋವು ಸರ್ಕಾರಗಳಿಗೆ ಇದ್ದದ್ದೆ.  ಬರೀ ರಾಜಕೀಯ ವ್ಯವಹಾರದ ಚತುರತೆಯಿಂದ ಇಂತಹ ಸೂಕ್ಷ್ಮ ಸಮಸ್ಯೆಯನ್ನು ನಿರ್ವಹಿಸುವುದು ಸಾಧ್ಯವಾಗುವುದಿಲ್ಲ. ಇಡೀ ಸಮಸ್ಯೆಯ ಬಗ್ಗೆ  ಆಪ್ತವಾದ ದೃಷ್ಟಿಕೋನ ಇದ್ದಾಗಷ್ಟೆ ನಕ್ಸಲ್‌ ಸಮಸ್ಯೆಯನ್ನು ನಿಯಂತ್ರಿಸುವುದು ಸಾಧ್ಯವಾಗುತ್ತದೆ. ಜನಪ್ರತಿನಿಧಿಗಳು ಮತ್ತು ಪೊಲೀಸ್‌ ವ್ಯವಸ್ಥೆಯು ಜೊತೆಗೂಡಿ ಮಾನವೀಯತೆಯಿಂದ ಮಾಡಬೇಕಾದ ಕೆಲಸ ಇದು. ಎರಡು ಕಡೆಯಿಂದಲೂ ಸಂವೇದನಾಪೂರ್ವಕ ನಡೆ ಅತ್ಯಗತ್ಯ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಸರ್ಕಾರದ ಕ್ರಮಗಳು ನಕ್ಸಲ್‌ ಚಳವಳಿಯನ್ನು
ಪರೋಕ್ಷವಾಗಿ ಪ್ರೋತ್ಸಾಹಿಸುತ್ತವೆಯೇ ಎಂಬ ಅನುಮಾನ ಮೂಡುತ್ತದೆ. ನಕ್ಸಲ್‌ ಪೀಡಿತ ಪ್ರದೇಶದಲ್ಲಿರುವ ಶಾಲೆಗಳಿಗೆ ಶಿಕ್ಷಕರ ನೇಮಕಾತಿಗೇ ಸರ್ಕಾರ ಮುಂದಾಗುತ್ತಿಲ್ಲ.

ಪಶ್ಚಿಮಘಟ್ಟದ ತಪ್ಪಲು ಪ್ರದೇಶದಲ್ಲಿ ಯುವಜನರು ನಕ್ಸಲ್‌ ಚಳವಳಿಯತ್ತ ಆಕರ್ಷಿತರಾಗುವುದನ್ನು ತಪ್ಪಿಸಲು 2012ರಲ್ಲಿ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸಿತ್ತು. ರಾಜ್ಯದ ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದ ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲು ಮತ್ತು ಅಲ್ಲಿನ ಯುವಜನ ನಕ್ಸಲ್‌ ಚಳವಳಿಯತ್ತ ಆಕರ್ಷಿತರಾಗದಂತೆ ತಡೆಯುವ ನಿಟ್ಟಿನಲ್ಲಿ ಈ ಪ್ಯಾಕೇಜ್‌ ಹಣವನ್ನು ಖರ್ಚು ಮಾಡುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಜಿಲ್ಲಾಡಳಿತ ಕೈಗೆತ್ತಿಕೊಂಡಿತು. ರಸ್ತೆ ರಿಪೇರಿ, ಹಳ್ಳಗಳಿಗೆ ಮೋರಿಗಳ ನಿರ್ಮಾಣ ಮುಂತಾಗಿ ಕಾಮಗಾರಿಗಳು ನಡೆದವು. ಅವುಗಳ ಜೊತೆಯಲ್ಲಿಯೇ ಅತ್ಯಂತ ಹಿಂದುಳಿದ ಗ್ರಾಮಗಳಲ್ಲಿರುವ ಶಾಲೆಗಳಿಗೆ ಶಿಕ್ಷಕರ ನೇಮಕವನ್ನೂ ಗುತ್ತಿಗೆ ಆಧಾರದಲ್ಲಿ ಮಾಡಲಾಯಿತು.  ಬೆಳ್ತಂಗಡಿ ತಾಲ್ಲೂಕಿನ ಹಳ್ಳಿಗಳಲ್ಲಿರುವ ಮಲೆಕುಡಿಯ ಸಮುದಾಯದ ಯುವಕರನ್ನು ಹೋಮ್‌ಗಾರ್ಡ್‌ಗಳನ್ನಾಗಿಯೂ ನೇಮಿಸಿಕೊಳ್ಳಲಾಯಿತು. 24 ಶಿಕ್ಷಕರು ಮತ್ತು 18  ಹೋಮ್‌ಗಾರ್ಡ್‌ಗಳ ನೇಮಕಾತಿ ಮಾಡಿಕೊಳ್ಳಲಾಯಿತು. ಈ ನೇಮಕಾತಿಗಳನ್ನು ನಕ್ಸಲ್‌ ಪ್ಯಾಕೇಜ್‌ ಆಧಾರಿತವಾಗಿ ನಡೆಸಿದ್ದರಿಂದ ಪ್ಯಾಕೇಜ್‌ ಮುಗಿದ ಕೂಡಲೇ ಶಿಕ್ಷಕರಿಗೆ ಸಂಬಳ ಬರುವುದು ನಿಂತು ಹೋಯಿತು.

ನಾರಾವಿ, ಕಜಕೆ, ನಾವೂರು, ಮಿತ್ತಬಾಗಿಲು, ಪಡ್ಲಾಡಿ ಲಾಯಿಲ, ಕನ್ಯಾಡಿ ಫಸ್ಟ್‌, ಕರಿಯಾಲು, ನಡ ಸೇರಿದಂತೆ ಎಲ್ಲ ಶಾಲೆಗಳ ಶಿಕ್ಷಕರು ಸಂಬಳವಿಲ್ಲದೆ ಕೆಲಸ ಮುಂದುವರೆಸಿದರು. ಹಿಂದುಳಿದ ಹಳ್ಳಿಗಳಲ್ಲಿ ನಡೆಯುವ ಶಾಲೆಗಳ ಮಕ್ಕಳ ಮೇಲೆ ಶಿಕ್ಷಕಿಯರಿಗೂ ವಾತ್ಸಲ್ಯ ಇರುವುದರಿಂದ ಹಾಗೂ ಸರ್ಕಾರ ಈ ಕುರಿತು ಏನಾದರೂ ಕ್ರಮ ಕೈಗೊಳ್ಳಬಹುದು ಎಂಬ ನಿರೀಕ್ಷೆಯಿಂದ ಶಿಕ್ಷಕಿಯರು ಪಾಠ ಮುಂದುವರೆಸಿದ್ದಾರೆ. ಬೆಳ್ತಂಗಡಿಯ ಶಾಸಕ ವಸಂತ
ಬಂಗೇರ ಅವರು ಈ ಶಿಕ್ಷಕಿಯರಿಗೆ ತಿಂಗಳಿಗೆ ಐದು ಸಾವಿರ ರೂಪಾಯಿಯನ್ನು ಗೌರವಧನವನ್ನಾಗಿ ಕೊಡುತ್ತಿದ್ದಾರೆ.

‘ನಕ್ಸಲ್‌ ಪೀಡಿತ ಪ್ರದೇಶದಲ್ಲಿ ಶಾಲೆಗಳಿಗೆ ಶಿಕ್ಷಕರಿಲ್ಲ ಎಂಬುದು ಒಂದು ಸಮಸ್ಯೆಯಾದರೆ, ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಸಂಬಳವಿಲ್ಲ ಎನ್ನುವುದು ಮತ್ತೊಂದು ಸಮಸ್ಯೆ. ಹೋಮ್‌ಗಾರ್ಡ್‌ಗಳನ್ನು ತಣ್ಣಗೆ ಮನೆಗೆ ಕಳುಹಿಸಲಾಗಿದೆ. ಹಾಗಾದರೆ ನಕ್ಸಲ್‌ ಪೀಡಿತ ಪ್ರದೇಶದ ಸಮಗ್ರ ಅಭಿವೃದ್ಧಿಗೋಸ್ಕರ ಪ್ಯಾಕೇಜ್‌ ಪ್ರಕಟಿಸುವುದರ ಹಿಂದಿರುವ ಆಶಯವಾದರೂ ಏನು’ ಎಂದು ಪ್ರಶ್ನಿಸುತ್ತಾರೆ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮುಖಂಡ ಶೇಖರ ಲಾಯಿಲ.

ಶಿಕ್ಷಕರಿಲ್ಲದೆ, ಪಾಠವಿಲ್ಲದೆ ಮಕ್ಕಳ ಶಿಕ್ಷಣ ಒಂದೆಡೆ ಹಾಳಾಗುತ್ತಿದೆ. ಅವರೇ ಮುಂದಿನ ದಿನಗಳಲ್ಲಿ ಯುವಜನರಾಗಿ ರೂಪುಗೊಳ್ಳುವವರು. ನಗರ ಕೇಂದ್ರಿತ ಅಭಿವೃದ್ಧಿ, ಗ್ರಾಮೀಣ ಹಾಗೂ ಬುಡಕಟ್ಟು ಜನಾಂಗದ ಅಭಿವೃದ್ಧಿಯ ಬಗ್ಗೆ ಸರ್ಕಾರ ತಳೆಯುತ್ತಿರುವ ಈ ತಾರತಮ್ಯ ನಾಳೆ ಇದೇ ಮಕ್ಕಳ ಮನಸ್ಸಿಗೆ ಹೊಳೆಯದೆ ಇರುತ್ತದೆಯೇ, ಇಂತಹ ತಾರತಮ್ಯ ನೀತಿಗಳೇ ನಕ್ಸಲ್‌ ಸಮಸ್ಯೆಯ ಮೂಲ ಅಲ್ಲವೇ ಎಂದು ಅವರು ಕೇಳುವ ಪ್ರಶ್ನೆ ನೈಜವಾದುದು.
ಇತ್ತ ಹೋಮ್‌ಗಾರ್ಡ್‌ ಆಗಿ ಆಯ್ಕೆ ಆಗಿ ಕೆಲಸ ಮಾಡಿದವರೆಲ್ಲ ಮನೆಗೆ ವಾಪಸ್‌ ಬಂದಿದ್ದಾರೆ. ಮತ್ತೆ ನಿರುದ್ಯೋಗಿಗಳಾಗಿರುವ ಅವರು ಕಾಡಿನ ಅಂಚಿನಲ್ಲಿ ಯಾವ ಕೆಲಸ ಮಾಡಬೇಕು ಎಂದು ಗೊತ್ತಾಗದೆ ಸುಮ್ಮನೆ ಅಲೆದಾಡಬೇಕಾಗಿದೆ. 

‘ಪ್ಯಾಕೇಜ್‌ ಆಧಾರಿತ ನೇಮಕಾತಿಯೇ ಬೇಡ ಎಂಬುದಾಗಿ ನಮ್ಮ ಸಂಘಟನೆ ಆರಂಭದಲ್ಲಿಯೇ ಹೇಳಿತ್ತು. ಪ್ಯಾಕೇಜ್‌ ಮುಗಿದ ಕೂಡಲೇ ನಿರುದ್ಯೋಗಿಗಳಾಗುವ ಯುವಜನರ ಮನಸ್ಸು ಮತ್ತಷ್ಟು ವ್ಯಗ್ರವಾಗಬಹುದು. ಈ ಪ್ಯಾಕೇಜ್‌ ಸಾಮಾಜಿಕ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆಯೇ ಹೊರತು ಬೇರೆ ಯಾವುದೇ ಸಕಾರಾತ್ಮಕ ಬದಲಾವಣೆ ತರುವುದು ಸಾಧ್ಯವಿಲ್ಲ ಎಂದು ಸಂಘಟನೆ ವಾದಿಸಿತ್ತು. ಇಂದು ಅದೇ ಪರಿಸ್ಥಿತಿ ಸೃಷ್ಟಿಯಾಗಿದೆ. ಶಿಕ್ಷಕರು ಸಂಬಳವಿಲ್ಲದೆ ದುಡಿಯುತ್ತಿದ್ದಾರೆ. ಹೋಮ್‌ಗಾರ್ಡ್‌ಗಳು ದಿಕ್ಕುತೋಚದೆ ಕುಳಿತಿದ್ದಾರೆ’ ಎಂದು ಶೇಖರ್‌ ಹೇಳುತ್ತಾರೆ.

‘ನಕ್ಸಲ್‌ ಪ್ಯಾಕೇಜನ್ನು ಸರ್ಕಾರ ಮುಂದುವರೆಸದೇ ಇದ್ದರೂ ಪರವಾಗಿಲ್ಲ, ನೇಮಕಾತಿಯನ್ನು ಕಾಯಂಗೊಳಿಸಬಹುದು ಅಥವಾ ನೇಮಕಾತಿ ಪ್ರಕ್ರಿಯೆ ನಡೆಯುವಾಗ ಈ ಅಭ್ಯರ್ಥಿಗಳಿಗೆ ಆದ್ಯತೆಯನ್ನಾದರೂ ನೀಡಬೇಕು’ ಎಂಬ ಆಗ್ರಹ ಅವರದ್ದು.

ಶಿಕ್ಷಕರ ನೇಮಕಾತಿ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದಿದ್ದಾರೆ. ಜಿಲ್ಲಾಡಳಿತದ ಕಡೆಯಿಂದಲೂ ನಕ್ಸಲ್‌ ಪ್ಯಾಕೇಜನ್ನು ಮುಂದುವರೆಸುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆದರೆ ಪ್ರತಿಕ್ರಿಯೆ ಮಾತ್ರ ಶೂನ್ಯ.

ಪಶ್ಚಿಮಘಟ್ಟದ ತಪ್ಪಲಿನ ಹಳ್ಳಿಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಸಮುದಾಯದ ಮಲೆಕುಡಿಯರು ಪ್ರಕೃತಿಯ ಮಡಿಲಿನಲ್ಲಿಯೇ ವಾಸಿಸುತ್ತಿರುವವರು. ಆ ಪ್ರದೇಶದಲ್ಲಿ ಅಲ್ಪಸ್ವಲ್ಪ ಕಾಡು ಉಳಿಯುವುದಕ್ಕೂ ಮಲೆಕುಡಿಯ ಜನವಸತಿಗಳೇ ಕಾರಣ ಎಂದರೆ ತಪ್ಪಾಗಲಾರದು. ಅತ್ತ ನಕ್ಸಲರ ಬೆದರಿಕೆ ಒಂದೆಡೆಯಾದರೆ, ಇತ್ತ ಸರ್ಕಾರದ ನಿರ್ಲಕ್ಷ್ಯ ಮತ್ತೊಂದೆಡೆ. ಈ ಎರಡು ಅಲಗಿನ ಕತ್ತಿಯಿಂದ ಅವರು ಪಾರಾಗಬೇಕಾದರೆ ಸರ್ಕಾರದ ಮಾನವೀಯ ದೃಷ್ಟಿಕೋನ ಅಗತ್ಯ. ಮಲೆಕುಡಿಯ ಸಮುದಾಯ ಸೇರಿದಂತೆ ಪಶ್ಚಿಮಘಟ್ಟದ ತಪ್ಪಲು ಪ್ರದೇಶದ ಹಳ್ಳಿಗಳಲ್ಲಿ ವಾಸಿಸುವವರ ಹಿತದೃಷ್ಟಿಯಿಂದ ಕೆಲಸ ಮಾಡುವ ಅಧಿಕಾರಿಗಳ ನೇಮಕ, ಪ್ಯಾಕೇಜ್‌ ಮೂಲಕ ದೊರೆಯುವ ಹಣ ಸಕಾರಾತ್ಮಕವಾಗಿ ವಿನಿಯೋಗವಾಗುವಂತೆ ನೋಡಿಕೊಳ್ಳುವ ಬಗ್ಗೆಯೂ ಸರ್ಕಾರ ವಿಶೇಷ ಆಸ್ಥೆ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT