ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗದು ಬಹುಮಾನದ ಅನಿವಾರ್ಯತೆ, ಕ್ರೀಡಾ ರೋಮಾಂಚನ ಇತ್ಯಾದಿ...

Last Updated 19 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಇಂಚೆನ್‌ ಏಷ್ಯನ್‌ ಕ್ರೀಡಾಕೂಟದಲ್ಲಿ ಪದಕ ಗೆದ್ದ ಕನ್ನಡಿಗರಲ್ಲಿ ಹಲವರು ತಮಗೆ ದೊಡ್ಡ ಮೊತ್ತದ ನಗದು ಬಹುಮಾನ ಬೇಕೆಂದು

ಆಗ್ರಹಿಸಿದ್ದಾರೆ. ಸರ್ಕಾರವೂ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಚಿನ್ನ ಗೆದ್ದವರಿಗೆ 25 ಲಕ್ಷ ರೂಪಾಯಿ ನೀಡುವುದಾಗಿಯೂ ಹೇಳಿದೆ. ಸೈಟು ನೀಡುವ ಸಾಧ್ಯತೆ ಬಗ್ಗೆಯೂ ಕ್ರೀಡಾ ಸಚಿವರು ಒಲವು ತೋರಿದ್ದಾರೆ. ಈ ತೆರನಾದ ಬೆಳವಣಿಗೆಗಳನ್ನು ಮೂರು ದಶಕಗಳ ಹಿಂದೆ ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ.

ಇದನ್ನೆಲ್ಲಾ ನೋಡಿದಾಗ ನಾನು ಮೂರು ದಶಕದಷ್ಟು ತಡವಾಗಿ ಹುಟ್ಟಬೇಕಿತ್ತು ಎನಿಸುತ್ತದೆ. ಏಕೆಂದರೆ 1975ರಿಂದ 85 ರವರೆಗೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಡೆದಿದ್ದ ಅಸಂಖ್ಯ ಸೈಕ್ಲಿಂಗ್‌ ಕೂಟಗಳಲ್ಲಿ ನಾನು ಭಾಗವಹಿಸಿ ಗಳಿಸಿದ ಹಲವಾರು ಪದಕಗಳು ಮತ್ತು ಸರ್ಟಿಫಿಕೇಟ್‌ಗಳು ಇವತ್ತು ನನ್ನ ಬಳಿ ಇವೆ. ಆದರೆ ಅಂದು ನಾವು ಈ ಪರಿ ನಗದು ಬಹುಮಾನಗಳನ್ನು ಕಲ್ಪಿಸಿಕೊಳ್ಳುವಂತೆಯೇ ಇರಲಿಲ್ಲ.

ಆ ದಿನಗಳಲ್ಲಿ ನಾವು ಅದೆಷ್ಟೇ ಸೈಕಲ್‌ ತುಳಿದರೂ ಬಿಡಿಗಾಸೂ ಸಿಗುತ್ತಿರಲಿಲ್ಲ. ಆಕರ್ಷಕ ಕಪ್‌ ಮತ್ತು ಷೀಲ್ಡ್‌ಗಳಿಗೆ ನಾವು ಮುತ್ತಿಕ್ಕುತ್ತಿದ್ದೆವಷ್ಟೆ. ಆದರೆ ಇದೀಗ ಕಾಲ ಬದಲಾಗಿದೆ. ಕಪ್‌ಗಳು ಮತ್ತು ಷೀಲ್ಡ್‌ಗಳಿಗಿಂತ ಅದರ ಜತೆಯಲ್ಲಿ ಬರುವ ನಗದು ಬಹುಮಾನಗಳ ಬಗ್ಗೆಯೇ ಕ್ರೀಡಾಪಟುಗಳಿಗೆ ಆಸಕ್ತಿ.

ಕ್ರೀಡಾಪಟುಗಳ ಮಟ್ಟಿಗೆ ಇದು ಆರೋಗ್ಯಕರ ಬೆಳವಣಿಗೆಯೇ ಆಗಿದೆ. ನಾನು ಹಿಂದೆ ದಿನಕ್ಕೆ ನೂರು ಕಿ.ಮೀ. ಸೈಕಲ್‌ ತುಳಿಯುತ್ತಾ ತಿಂಗಳಾನುಗಟ್ಟಲೆ ಅಭ್ಯಾಸ ನಡೆಸುತ್ತಿದ್ದೆ. ರಾಷ್ಟ್ರೀಯ ಕೂಟಗಳಲ್ಲಿ ಪಾಲ್ಗೊಂಡು ಹತ್ತು ಹಲವು ಪದಕಗಳನ್ನು ಗೆದ್ದು ತಂದಿದ್ದೆ. ನನ್ನಂತೆ ನೂರಾರು ಮಂದಿ ಇಂತಹ ಸಾಧನೆಗಳನ್ನು ಮಾಡಿದ್ದಾರೆ. ಆದರೆ ವರ್ಷಗಳು ಉರುಳಿದ ಮೇಲೆ ನಮ್ಮ ಕೈಚೀಲಗಳಲ್ಲಿ ಉಳಿದದ್ದು ಕೇವಲ ಸರ್ಟಿಫಿಕೇಟುಗಳಷ್ಟೇ. ಇವುಗಳ ಮೌಲ್ಯ ಏನು ಎಂಬುದು ನನ್ನಂತಹ ನೂರಾರು ಮಂದಿಗೆ ಗೊತ್ತಾಗಿದೆ.

ಅತ್ತ ಸರಿಯಾದ ಉದ್ಯೋಗವೂ ಸಿಗುವುದಿಲ್ಲ, ಇತ್ತ ಕೈಯಲ್ಲಿ ಬಿಡಿಗಾಸೂ ಉಳಿದಿರುವುದಿಲ್ಲ. ಹೀಗಾಗಿ ಪ್ರಸಕ್ತ ಕ್ರೀಡಾಪಟುಗಳು ಹಣದ ಬಗ್ಗೆ ಒತ್ತಡ ಹೇರುತ್ತಿರುವುದು ಸರಿಯಾಗಿದೆ. ಆ ದಿನಗಳ ಸ್ಪರ್ಧೆಗಳೆಂದರೆ ಈಗಿನಷ್ಟು ಸಲೀಸಾಗಿರಲಿಲ್ಲ. 1979ರ ದಸರಾ ಕೂಟದ ಪ್ರಯುಕ್ತ ಮಡಿಕೇರಿಯಿಂದ ಮೈಸೂರಿನವರೆಗೆ ನಡೆದ ಸೈಕಲ್‌ ಸ್ಪರ್ಧೆಯ ನೆನಪು ರೋಚಕ, ಆಗ ಆ ರಸ್ತೆ ಕಡಿದಾದ ತಿರುವುಗಳು, ಉಬ್ಬುತಗ್ಗುಗಳಿಂದ ಕೂಡಿತ್ತು. ಅಲ್ಲಿ ಮೊದಲ ಸ್ಥಾನ ಗಳಿಸಿದ್ದೆ. ಅದೇ ವರ್ಷ ತಿರುವನಂತಪುರದಲ್ಲಿ ನಡೆದ 162ಕಿ.ಮೀ. ದೂರದ ಸ್ಪರ್ಧೆ, ಜಮ್‌ಷೆಡ್‌ ಪುರದಿಂದ ರಾಂಚಿ ಮತ್ತು ರಾಂಚಿಯಿಂದ ಜಮ್‌ಷೆಡ್‌ಪುರಕ್ಕೆ ಮರಳುವ ದೀರ್ಘ ರೋಡ್‌ ಸೈಕ್ಲಿಂಗ್‌ ಪೈಪೋಟಿಗಳನ್ನು ಮರೆಯುವುದೆಂತು ?

ಅಂದು ನಮಗೆ ಮೊದಲಿಗರಾಗಿ ಗುರಿ ಮುಟ್ಟುವುದೇ ಹೆಗ್ಗುರಿಯಾಗಿತ್ತು. ಆರ್ಥಿಕ ಲಾಭಗಳ ಬಗ್ಗೆ ಯೋಚಿಸಿದ್ದೇ ಕಡಿಮೆ. ರಟ್ಟೆಯಲ್ಲಿ ಕಸುವು ಇದ್ದಷ್ಟೂ ಕಾಲ ರಾಜ್ಯಕ್ಕೆ ಪದಕ ಗೆಲ್ಲುವುದರ ಬಗ್ಗೆಯಷ್ಟೇ ಯೋಚಿಸಿದ್ದೆ. ನಂತರದ ದಿನಗಳಲ್ಲಿ ಜನ ಸಮುದಾಯ, ಸರ್ಕಾರ ಎಲ್ಲವೂ ನನ್ನಂತಹವರನ್ನು ಮರೆಯುವುದು ಸಹಜ ತಾನೆ. ಈಗ ನನ್ನಲ್ಲಿ ಉಳಿದಿರುವುದು ಆ ದಿನಗಳ ಮೈನವಿ­ರೇಳಿಸುವ ಸಾಹಸದ ಕ್ಷಣಗಳ ನೆನಪುಗಳಷ್ಟೇ.

ಈಚೆಗೆ ಇಂಚೆನ್‌ನಲ್ಲಿ ಪದಕ ಸಂಭ್ರಮ ತಂದವರನ್ನು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದಿಸಿದ್ದನ್ನು ಟೆಲಿವಿಷನ್‌ನಲ್ಲಿ ನೋಡಿದಾಗ ಹಳೆಯ ಘಟನೆಯೊಂದು ನೆನಪಾಯಿತು. ಎಪ್ಪತ್ತರ ದಶಕದ ಕೊನೆಯ ದಿನಗಳವು. ಪಂಜಾಬ್‌ನಲ್ಲಿ ನಡೆದ ರಾಷ್ಟ್ರೀಯ ಸೈಕ್ಲಿಂಗ್‌ನಲ್ಲಿ ಕರ್ನಾಟಕ ತಂಡ ಪಾಲ್ಗೊಂಡು ಪದಕ ಗೆದ್ದಿತ್ತು. ಆ ತಂಡದಲ್ಲಿ ನಾನೂ ಇದ್ದೆ. ನಾವೆಲ್ಲಾ ಖುಷಿಯಲ್ಲಿ ಬೆಂಗಳೂರಿಗೆ ಬರುವ ಮೊದಲು ದೆಹಲಿಗೆ ಹೋಗಿದ್ದೆವು.

ಅಲ್ಲಿ ನಮ್ಮ ರಾಷ್ಟ್ರೀಯ ಸೈಕ್ಲಿಂಗ್‌ ಫೆಡರೇಷನ್‌ನ ಪದಾಧಿಕಾರಿಗಳು ನಮ್ಮನ್ನು ಆಗಿನ ಪ್ರಧಾನಿ ಇಂದಿರಾಗಾಂಧಿಯವರ ಮನೆಗೆ ಕರೆದೊಯ್ದರು. ಇಂದಿರಾಗಾಂಧಿ­ಯವರು ನಮ್ಮೆಲ್ಲರ ಬಳಿ ಬಂದು ಕೈಕುಲುಕಿದರು. ಆತ್ಮೀಯವಾಗಿ ಕಂಡರು. ‘ಇವರು ನಮ್ಮೂರಿನವರು... ’ ಎಂಬುದಾಗಿ ತಮ್ಮ ಜತೆಗಿದ್ದ ಮಹಿಳೆಯೊಬ್ಬರಿಗೆ ಹೇಳಿದ್ದರು. ಏಕೆಂದರೆ ಅವರನ್ನು ಚಿಕ್ಕಮಗಳೂರಿನ ಮಂದಿ ಲೋಕಸಭೆಗೆ ಆಯ್ಕೆಮಾಡಿ ಕಳಿಸಿದ್ದರಲ್ಲಾ.

ಚಿಕ್ಕಮಗಳೂರಿಗೂ ವಿಜಾಪುರಕ್ಕೂ ಬಲು ದೂರದ ಹಾದಿ ಎಂಬುದು ಅವರಿಗೆ ಗೊತ್ತಿದ್ದರೂ, ಕರ್ನಾಟಕದ ಮಂದಿಯನ್ನು ಅವರು ‘ನಮ್ಮವರು’ ಎಂದೇ ಪರಿಗಣಿಸಿದ್ದರು. ನನ್ನ ಜೀವಿತಾವಧಿಯ ಸುಂದರ ಕ್ಷಣಗಳಲ್ಲಿ ಅದೂ ಒಂದು. ಅಂದು ನಾವು ಇಂದಿರಾಗಾಂಧಿಯವರ ಜತೆಗೆ ನಿಂತು ಫೋಟೊ ತೆಗೆಸಿಕೊಂಡಿದ್ದವು. ಆ ಫೋಟೊ ಇವತ್ತಿಗೂ ನನ್ನ ಮನೆಯ ಗೋಡೆಯ ಮೇಲೆ ರಾರಾಜಿಸುತ್ತಿದೆ. ಮೊನ್ನೆ  ಇಂಚೆನ್‌ ಸಾಧಕರೂ ನರೇಂದ್ರ ಮೋದಿಯವರ ಜತೆ ನಿಂತು ಫೋಟೊ ತೆಗೆಸಿಕೊಂಡಿದ್ದರು. ಅದನ್ನು ಟೆಲಿವಿಷನ್‌ನಲ್ಲಿ ನೋಡುತ್ತಿದ್ದಾಗ ಹಳೆಯ ನೆನಪುಗಳೆಲ್ಲಾ ಒತ್ತರಿಸಿ ಬಂದವು.
   
(- ಲೇಖಕರು 1975ರಿಂದ 85ರವರೆಗೆ ರಾಜ್ಯ ಮತ್ತು ರಾಷ್ಟ್ರೀಯ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಂಡು ಹಲವು ಪದಕಗಳನ್ನು ಗೆದ್ದಿದ್ದಾರೆ. 34 ವರ್ಷಗಳ ಹಿಂದೆ ರಾಷ್ಟ್ರೀಯ ತಂಡದ ಸಂಭವನೀಯರ ತರಬೇತಿ ಶಿಬಿರದಲ್ಲಿ ಸ್ಥಾನ ಪಡೆದಿದ್ದರು. ಪ್ರಸಕ್ತ ಇವರು ಬಾಗಲಕೋಟೆ ಜಿಲ್ಲಾ ಸೈಕ್ಲಿಂಗ್‌ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT