ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಎಲ್ಲಾ ವಿಧದ ಜಾಹೀರಾತು ನಿಷೇಧ

Last Updated 28 ಜನವರಿ 2015, 19:45 IST
ಅಕ್ಷರ ಗಾತ್ರ

ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ತಕ್ಷಣ­ದಿಂ­ದಲೇ ಜಾರಿಗೆ ಬರುವಂತೆ ಎಲ್ಲ ವಿಧದ ಜಾಹೀರಾತು ಫಲಕಗಳ ಮೇಲೆ ನಿಷೇಧ ವಿಧಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೌನ್ಸಿಲ್‌ ಸಭೆಯಲ್ಲಿ ಬುಧವಾರ ನಿರ್ಣಯ ಕೈಗೊಳ್ಳಲಾಗಿದೆ. ಆಡಳಿತ ಪಕ್ಷದ ನಾಯಕ ಎನ್‌.ಆರ್‌. ರಮೇಶ್‌ ನಿರ್ಣಯವನ್ನು ಮಂಡಿಸಿದರು. ಅದಕ್ಕೆ ಸಭೆ ಸರ್ವಾನುಮತದ ಒಪ್ಪಿಗೆ ಸೂಚಿಸಿತು.

‘ನಗರದ ಸೌಂದರ್ಯ, ವಾಹನ ಚಾಲಕರ ಸುರಕ್ಷತೆ, ಆಡಳಿತಾತ್ಮಕ ಶಿಸ್ತು ಹಾಗೂ ಪರಿಸರಮಾಲಿನ್ಯ ನಿಯಂತ್ರಣದ ದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದ್ದು, ನಗರವನ್ನು ಜಾಹೀರಾತು ಮುಕ್ತ ಮಾಡಲಾಗುವುದು’ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

‘ಖಾಸಗಿ ವಲಯವೂ ಸೇರಿದಂತೆ ಎಲ್ಲ ಪ್ರದೇಶ­ಗಳಲ್ಲೂ ಜಾಹೀರಾತು ಫಲಕಗಳ ಪ್ರದರ್ಶನದ ಮೇಲೆ ನಿಷೇಧ ವಿಧಿಸಲಾಗಿದ್ದು, ಅವುಗಳನ್ನು ತೆಗೆದು ಹಾಕಲಾಗುವುದು. ಹೈಕೋರ್ಟ್‌ ಮತ್ತು ಲೋಕಾಯುಕ್ತದಿಂದ ಮೇಲಿಂದ ಮೇಲೆ ಬಿಬಿ­ಎಂಪಿ ಆಯುಕ್ತರು, ಸದಸ್ಯರು ಹಾಗೂ ಶಾಸಕರು ಛೀಮಾರಿ ಹಾಕಿಸಿಕೊಳ್ಳುವುದು ಇದರಿಂದ ತಪ್ಪಲಿದೆ’ ಎನ್ನಲಾಗಿದೆ.

‘ಜಾಹೀರಾತು ಮೂಲದಿಂದ ಬಿಬಿಎಂಪಿಗೆ ಕಡಿಮೆ ಆದಾಯ ಬರುತ್ತಿದ್ದು, ನ್ಯಾಯಾಲಯ ವೆಚ್ಚ, ಸಿಬ್ಬಂದಿ ವೇತನ ಮೊದಲಾದ ಉದ್ದೇಶಗಳಿಗೆ ಬಹುಪಾಲು ವ್ಯಯವಾಗುತ್ತಿದೆ. ಈ ವಿಭಾಗದ ಸಿಬ್ಬಂದಿಯನ್ನು ಕಂದಾಯ ವಿಭಾಗಕ್ಕೆ ಬಳಸಿಕೊಂಡರೆ ಹೆಚ್ಚಿನ ಆಸ್ತಿ ತೆರಿಗೆಯನ್ನು ಸಂಗ್ರಹಿಸಲು ಅನುಕೂಲವಾಗಲಿದೆ. ಅಲ್ಲದೆ, ಫಲಕಗಳ ಪ್ರದರ್ಶನಕ್ಕಾಗಿ ಮರ ಕಡಿಯುವುದೂ ನಿಲ್ಲಲಿದೆ’ ಎಂದು ವಿವರಿಸಲಾಗಿದೆ.

‘ವಾಣಿಜ್ಯ ವ್ಯವಹಾರಗಳಿಗೆ ಅವುಗಳ ಹೆಸರು, ವಿಳಾಸ ನಮೂದಿಸಲು ಪ್ರತಿ ಸಂಸ್ಥೆಗೆ ನಿಗದಿತ ಉದ್ದ ಹಾಗೂ ಅಗಲದ ಒಂದು ಫಲಕವನ್ನು ಹಾಕಿಕೊಳ್ಳಲು ಮಾತ್ರ ಉಚಿತವಾಗಿ ಅನುಮತಿ ನೀಡಲಾಗುತ್ತದೆ. ಉಳಿದಂತೆ ಸ್ವಂತ ಫಲಕದ ಹೆಸರಿನಲ್ಲಿ ಯಾವುದೇ ಜಾಹೀರಾತು ಫಲಕ ಅಳವಡಿಸಲು ಅವಕಾಶ ಇಲ್ಲ. ಇದುವರೆಗೆ ಜಾರಿ­ಯಲ್ಲಿದ್ದ ಡೀಮ್ಡ್‌ ಅನುಮತಿಯನ್ನು  ಸಹ ರದ್ದು­ಗೊಳಿಸಲಾಗಿದೆ’ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ಜಾಹೀರಾತು ಪ್ರದರ್ಶನ ಮಾಡಿದಲ್ಲಿ ಅಂತಹ ಸಂಸ್ಥೆ ಇಲ್ಲವೆ ಏಜೆನ್ಸಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲು ಮಾಡಲಾಗುವುದು. ಖಾಸಗಿ ಸ್ವತ್ತುಗಳು, ಮನೆಯ ಮೇಲ್ಛಾವಣಿ, ವಾಣಿಜ್ಯ ಕೇಂದ್ರ ಹಾಗೂ ಮಾಲ್‌ಗಳಲ್ಲೂ ಜಾಹೀರಾತು ಹಾಕುವಂತಿಲ್ಲ. ತಕ್ಷಣದಿಂದಲೇ ಜಾರಿಗೆ ಬರುವಂತೆ ಅವುಗಳನ್ನು ತೆಗೆದು ಹಾಕಲಾಗುವುದು’ ಎಂದು ವಿವರಿಸಲಾಗಿದೆ.

‘ಆಯಾ ವಲಯಗಳಲ್ಲಿ ಜಂಟಿ ಆಯುಕ್ತರ ನೇತೃತ್ವದಲ್ಲಿ ಜಾಹೀರಾತು ಫಲಕಗಳ ತೆರವು ಕಾರ್ಯಾಚರಣೆ ನಡೆಯಲಿದ್ದು, ಫಲಕಗಳನ್ನು ಉಳಿಸಲು ಅವಕಾಶ ಮಾಡಿಕೊಟ್ಟಲ್ಲಿ ಜಂಟಿ ಆಯುಕ್ತರನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ’ ಎಂದು ತಿಳಿಸಲಾಗಿದೆ.

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಜನವರಿ 19ರಂದೇ ಈ ಕುರಿತಂತೆ ನಿರ್ಣಯ ಕೈಗೊಂಡಿತ್ತು. ಈಗ ಅದಕ್ಕೆ ಕೌನ್ಸಿಲ್‌ ಸಭೆಯ ಒಪ್ಪಿಗೆ ಮುದ್ರೆಯೂ ಬಿದ್ದಿದೆ. ರಾಜ್ಯ ನಗರಾಭಿವೃದ್ಧಿ ಇಲಾಖೆಯಿಂದ ಸಹ ಈ ನಿರ್ಣಯಕ್ಕೆ ಒಪ್ಪಿಗೆ ಸಿಗಲಿದೆ ಎಂದು ಸ್ಥಾಯಿ ಸಮಿತಿ ಸದಸ್ಯರು ಭರವಸೆ ವ್ಯಕ್ತಪಡಿಸಿದರು.
 

ಮುಖ್ಯಾಂಶಗಳು
*ತಕ್ಷಣದಿಂದಲೇ ನಿರ್ಣಯ ಜಾರಿ
* ಖಾಸಗಿ ವಲಯಕ್ಕೂ ಅನ್ವಯ
* ಸ್ವಂತ ಫಲಕಗಳಿಗೂ ಅವಕಾಶ ಇಲ್ಲ

ಸದ್ಯದ ಸ್ಥಿತಿ (ಬಿಬಿಎಂಪಿ ಆಡಳಿತ ಪಕ್ಷ ನೀಡಿರುವ ದಾಖಲೆ ಪ್ರಕಾರ)
* ಅಧಿಕೃತ ಜಾಹೀರಾತು ಫಲಕಗಳು 2,261
* ಅನಧಿಕೃತ ಜಾಹೀರಾತು ಫಲಕಗಳು 21,000
* ಬಜೆಟ್‌ನಲ್ಲಿ ನಿರೀಕ್ಷಿಸುವ ಆದಾಯ ₨ 300 ಕೋಟಿ
* ವಾಸ್ತವಿಕವಾಗಿ ಸಿಗುವ ವರಮಾನ  ₨ 20 ಕೋಟಿ

ಹೈಕೋರ್ಟ್‌ನಿಂದ ಛೀಮಾರಿ: ಅನಧಿಕೃತ ಜಾಹೀರಾತು ಫಲಕಗಳ ವಿರುದ್ಧ ಸಾರ್ವಜನಿಕ­ರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹೈಕೋರ್ಟ್‌ ಹಾಗೂ ಲೋಕಾಯುಕ್ತದ ಮುಂದೆ ಈ ವಿಷಯ ಚರ್ಚೆಗೆ ಬಂದಾಗಲೆಲ್ಲ ನ್ಯಾಯಮೂರ್ತಿಗಳು ಹಾಗೂ ಉಪ ಲೋಕಾ­ಯುಕ್ತರು ಜಾಹೀರಾತು ಹಾವಳಿ ತಡೆಗಟ್ಟದ ಬಿಬಿಎಂಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ­ದ್ದರು. ಜಾಹೀರಾತು ವಿಭಾಗದಲ್ಲಿ ನಡೆದ ಅಕ್ರಮಗಳ ಕುರಿತು ಪ್ರತಿ ಕೌನ್ಸಿಲ್‌ ಸಭೆಯಲ್ಲೂ ಚರ್ಚೆ ನಡೆಯುತ್ತಿತ್ತು.

ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನೂ ಕಡೆಗಣಿಸಿ ರಾಜಕಾಲುವೆ, ಉದ್ಯಾನ ಹಾಗೂ ಸ್ಮಶಾನಗಳಲ್ಲಿ ಜಾಹೀರಾತು ಫಲಕಗಳ ಅಳವಡಿಕೆಗೆ ಅವಕಾಶ ಮಾಡಿಕೊಟ್ಟಿದ್ದು ಆಕ್ಷೇಪಕ್ಕೆ ಗುರಿಯಾಗಿತ್ತು.

ಬಸ್‌ ಶೆಲ್ಟರ್‌ಗಳಲ್ಲಿ ಅಶ್ಲೀಲ ಜಾಹೀರಾತು
‘ಖಾಸಗಿ ಸಂಸ್ಥೆಗಳ ಮೂಲಕ ನಗರದಲ್ಲಿ 736 ಬಸ್‌ ಶೆಲ್ಟರ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಆ ಶೆಲ್ಟರ್‌ಗಳಲ್ಲಿ ಬಸ್‌ ವೇಳಾಪಟ್ಟಿ ಹಾಕಬೇಕೆನ್ನುವ ನಿಯಮವಿದೆ. ಆದರೆ, ವೇಳಾಪಟ್ಟಿಗೆ ಜಾಗ ಬಿಡದೆ ಶೆಲ್ಟರ್‌ಗಳ ತುಂಬಾ ಜಾಹೀರಾತು ಅಳವಡಿಸಲಾಗಿದೆ’ ಎಂದು ಆಡಳಿತ ಪಕ್ಷದ ನಾಯಕ ಎನ್‌.ಆರ್‌. ರಮೇಶ್‌ ದೂರಿದರು.

‘ನಿಗದಿತ ಸ್ಥಳಗಳಿಗೆ ಬದಲಾಗಿ ಟ್ರಾಫಿಕ್‌ ಸಿಗ್ನಲ್‌ಗಳ ಹತ್ತಿರವೇ ಬಸ್‌ ಶೆಲ್ಟರ್‌ ನಿರ್ಮಾಣ ಮಾಡಲಾಗುತ್ತಿದೆ. ಅಶ್ಲೀಲ ಜಾಹೀರಾತು ಪ್ರದರ್ಶಿಸಲಾಗುತ್ತಿದೆ. ನಿಯಮ ಉಲ್ಲಂಘಿಸಿದ ಸಂಸ್ಥೆಗಳಿಗೆ ಶೆಲ್ಟರ್‌ ನಿರ್ಮಾಣಕ್ಕೆ ಕೊಟ್ಟ ಅನುಮತಿಯನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

ಉತ್ತರ ನೀಡಿದ ಆಯುಕ್ತ ಎಂ.ಲಕ್ಷ್ಮೀನಾರಾಯಣ, ‘ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವ್ಯವಸ್ಥಾಪಕ ನಿರ್ದೇಶಕರು ಈಗಾಗಲೇ ಸಭೆ ನಡೆಸಿದ್ದಾರೆ. ಭೌಗೋಳಿಕ ಮಾಹಿತಿ ವ್ಯವಸ್ಥೆ ಆಧರಿಸಿ ಯಾವ ಪ್ರದೇಶದಲ್ಲಿ ಶೆಲ್ಟರ್‌ ನಿರ್ಮಿಸಬೇಕು ಹಾಗೂ ಅದರ ಸ್ವರೂಪ ಹೇಗಿರಬೇಕು ಎಂಬುದನ್ನು ನಿರ್ಧರಿಸಲಾಗುತ್ತಿದ್ದು, ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT