ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ‘ಗೂಗಲ್‌ ಬಾಯ್‌’

Last Updated 3 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೇಳಿದ ಪ್ರಶ್ನೆಗಳಿಗೆ ಪಟ­ಪಟನೆ ಉತ್ತರ ನೀಡಿ ಅಚ್ಚರಿ ಮೂಡಿ­ಸುವ ಈ ಪೋರನಿಗೆ ಶಾಲೆಯಲ್ಲಿ ಇಟ್ಟಿರುವ ಹೆಸರು ‘ಗೂಗಲ್‌ ಬಾಯ್‌’. ಈ ಹುಡುಗನ ವಯಸ್ಸು ಏಳು ವರ್ಷ. ಅಸಾಮಾನ್ಯ ಜ್ಞಾನ ಹಾಗೂ ನೆನಪಿನ ಶಕ್ತಿಯ ಮೂಲಕ ಭೇಷ್‌ ಎನಿಸಿಕೊಂಡಿರುವ ಈ ಬಾಲಕನ ಹೆಸರು ಕೌಟಿಲ್ಯ ಪಂಡಿತ್‌.

ಹರಿಯಾಣದ ಕರ್ನಾಲ್‌ ಜಿಲ್ಲೆಯ ಕೌಟಿಲ್ಯ ತನ್ನ ಹೆಸರಿನಂತೆಯೇ ಕೌಟಿಲ್ಯ ಜ್ಞಾನವನ್ನು ಪಡೆದಿದ್ದಾನೆ. ಈತನ ಪ್ರತಿಭೆ ಮೆಚ್ಚಿ ಹರಿಯಾಣ ಸರ್ಕಾರವು ₹10 ಲಕ್ಷ ಬಹುಮಾನ ಪ್ರಶಸ್ತಿ ನೀಡಿ ಸನ್ಮಾನಿ­ಸಿದೆ. ದೇಶದ 19 ರಾಜ್ಯಗಳಲ್ಲಿ ಸುಮಾರು 100 ಬಾರಿ ಅಭಿನಂದನೆ ಪಡೆದಿದ್ದಾನೆ.

ಈ ಬಾಲಕ ಮಂಗಳವಾರ ಸರ್ಜಾಪುರ ರಸ್ತೆಯ ಗ್ರೀನ್‌ವುಡ್‌ ಹೈ ಇಂಟರ್‌ನ್ಯಾಷನಲ್‌  ಶಾಲೆಗೆ ಭೇಟಿ ನೀಡಿ, ಶಾಲೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಜಾಣ್ಮೆ ಮೆರೆದ. ಖಗೋಳಶಾಸ್ತ್ರ, ವಿಶ್ವ, ಭಾರತ ದೇಶದ ಆರ್ಥಿಕ, ರಾಜಕೀಯ ಮುಂತಾದ ವಿಷಯಗಳ ಬಗೆಗೆ ಕೇಳಿದ ಪ್ರಶ್ನೆಗಳಿಗೆ ಪಟಪಟನೆ ಉತ್ತರಿಸಿದನು. ಅಲ್ಲದೇ, ಅವನ ಜೊತೆಗೆ ಚೆಸ್‌ ಆಟ ಆಡಿದ ಅಲ್ಲಿನ ವಿದ್ಯಾರ್ಥಿಗಳು ಸಂಭ್ರಮಿಸಿದರು.

ಕೌನ್‌ ಬನೇಗಾ ಕರೋಡ್‌ಪತಿ­ಯಲ್ಲಿ ಭಾಗವಹಿಸಿದ್ದ ಈ ಬಾಲಕ ತನ್ನ ಉತ್ತರಗಳಿಂದ ಅಮಿತಾಬ್‌ ಬಚ್ಚನ್‌ ಅವರನ್ನೂ ಅಚ್ಚರಿಗೊ­ಳಪಡಿಸಿದ್ದ. ನಟ ಬಚ್ಚನ್‌ ಅವರೇ ಈ ಬಾಲಕನ ಅಗಾಧ ನೆನಪಿನ ಶಕ್ತಿಗೆ ತಲೆದೂಗಿದ್ದರು. ಗ್ರೀನ್‌ ವುಡ್‌ ಹೈ ಇಂಟರ್‌­ನ್ಯಾಷನಲ್‌ ಸ್ಕೂಲ್‌ ಟ್ರಸ್ಟಿ ನೀರು ಅಗರವಾಲ್‌ ಈ ಕುರಿತು ಮಾತನಾಡಿ, ‘ಮಕ್ಕಳಲ್ಲಿ ಅಸಾಧಾರ­ಣವಾದ ಪ್ರತಿಭೆ ಇರುತ್ತದೆ ಎಂಬುದಕ್ಕೆ ಈ ಬಾಲಕನೇ ಸಾಕ್ಷಿ. ಕೌಟಿಲ್ಯನ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ನಮ್ಮ ವಿದ್ಯಾರ್ಥಿಗಳೂ  ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ­ದರು. ಆದರೆ, ಅವನು ಮಾತ್ರ ಬೇಸರಿ­ಸದೆ, ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದನು’ ಎಂದರು.

‘ನಮ್ಮ ಶಾಲೆಯಲ್ಲಿ ಮಕ್ಕಳ ಆಸಕ್ತಿ ಗಮನಿಸಿ ಅವರನ್ನು ಪ್ರೋತ್ಸಾಹಿಸ­ಲಾಗುತ್ತದೆ. ಅವರ ಆಸಕ್ತಿ ವಿಷಯ­ಗಳಲ್ಲಿ ಉತ್ತೇಜನ ನೀಡಿದರೆ ಅವರಿಂದ ಅಪರೂಪದ ಸಾಧನೆ ಸಾಧ್ಯವಾಗು­ತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT