ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ಜನತೆಗೆ ಶುದ್ಧ ಕುಡಿಯುವ ನೀರು

Last Updated 24 ಅಕ್ಟೋಬರ್ 2014, 7:26 IST
ಅಕ್ಷರ ಗಾತ್ರ

ತುಮಕೂರು: ನಗರದಲ್ಲಿ ಶುದ್ಧ ಕುಡಿಯುವ ನೀರಿಗೆ ಇನ್ನು ಪರಿತಪಿಸಬೇಕಿಲ್ಲ. ಮಹಾನಗರ ಪಾಲಿಕೆ ಸಹಯೋಗದಲ್ಲಿ ನಗರದ ಮೂರು ಕಡೆ ಅತ್ಯಾಧುನಿಕ ತಂತ್ರಜ್ಞಾನದ ಶುದ್ಧ ಕುಡಿಯುವ ನೀರಿನ ಘಟಕಗಳು ತಲೆ ಎತ್ತುತ್ತಿವೆ.

ವಾಟರ್‌ ಹೆಲ್ತ್‌ ಇಂಡಿಯಾ ಎಂಬ ಸರ್ಕಾ­ರೇತರ ಸಂಸ್ಥೆಯು ಮಹಾನಗರ ಪಾಲಿಕೆ  ಸಹ­ಯೋಗದೊಂದಿಗೆ ₨ 75 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸುತ್ತಿದೆ. ಪಾಲಿಕೆ ಯಾವುದೇ ಬಂಡವಾಳ ಹಾಕಿಲ್ಲ. ಬದಲಿಗೆ ಘಟಕ ಸ್ಥಾಪನೆಗೆ ಅಗತ್ಯವಾದ ಭೂಮಿ ಹಾಗೂ ನೀರು ಒದಗಿಸಿದೆ.

ಆರು ವಿವಿಧ ಸ್ತರಗಳಲ್ಲಿ ನೀರು ಸಂಸ್ಕರಿಸುವ ಅತ್ಯಾಧುನಿಕ ಯಂತ್ರಗಳನ್ನು ಘಟಕದಲ್ಲಿ ಅಳವ­ಡಿಸಲಾಗಿದೆ. ದೀಪಾವಳಿ ಹಬ್ಬದಂದು ನಗರದ ಮೊದಲ ಶುದ್ಧ ಕುಡಿಯುವ ನೀರಿನ ಘಟಕ 7ನೇ ವಾರ್ಡ್‌ನ ಚಿಕ್ಕಪೇಟೆ ಅಗ್ರಹಾರದಲ್ಲಿರುವ ಶಿಶು ವಿಹಾರದ ಬಳಿ ಕಾರ್ಯಾರಂಭಿಸಲಿದೆ. ಇದರಿಂದ 4, 5 ಹಾಗೂ 6ನೇ ವಾರ್ಡ್ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ.

ಅದೇ ರೀತಿ ಮತ್ತೆರಡು ಘಟಕಗಳು 25ನೇ ವಾರ್ಡ್‌ ಎಸ್‌.ಎಸ್‌.ಪುರಂ ಹಾಗೂ 32ನೇ ವಾರ್ಡ್‌ ಗೋಕುಲ ಬಡಾವಣೆಯಲ್ಲಿ ಅಸ್ತಿತ್ವಕ್ಕೆ ಬರ­ಲಿದ್ದು, ಸುತ್ತಮುತ್ತಲಿನ ವಾರ್ಡ್‌ಗಳ ನಿವಾಸಿಗಳಿಗೆ ಅನುಕೂಲವಾಗಲಿದೆ.

ಅಗ್ಗದ ದರದಲ್ಲಿ ನೀರು: ಶುದ್ಧ ನೀರಿನ ಘಟಕದಲ್ಲಿ ಲೀಟರ್‌ ನೀರಿಗೆ 40 ಪೈಸೆ ಶುಲ್ಕ ಪಡೆಯಲಾಗುತ್ತದೆ. 20 ಲೀಟರ್‌ ನೀರಿನ ಡಬ್ಬಿಗೆ ₨ 8 ಶುಲ್ಕವಿದೆ. ಖಾಸಗಿ ನೀರು ಮಾರಾಟ ಸಂಸ್ಥೆಗಳು ಒಂದು ಲೀಟರ್‌ ವಾಟರ್‌ ಕ್ಯಾನ್‌ಗೆ ₨ 25ರಿಂದ 30 ರೂಪಾಯಿ ಪಡೆಯುತ್ತಿವೆ. ಆದರೆ ಇದೇ ಗುಣ­ಮಟ್ಟದ ನೀರಿಗೆ ಇಲ್ಲಿ 40 ಪೈಸೆ ಪಡೆಯ­ಲಾಗುತ್ತದೆ. ಘಟಕವನ್ನು ಸುಸಜ್ಜಿತವಾಗಿ ನಿರ್ಮಿ­ಸಿದ್ದು, ಪ್ರತಿ ಮೂರು ದಿನಗಳಿಗೊಮ್ಮೆ ಬೆಂಗಳೂ­ರಿನಿಂದ ಸರ್ಕಾರೇತರ ಸಂಸ್ಥೆಯ ಪರಿಣಿತರ ತಂಡ ತಪಾಸಣೆ ನಡೆಸುತ್ತದೆ. ಹಾಗೆಯೇ ಹೈದರಾಬಾದ್‌ನಿಂದ ಪ್ರತಿ 15 ದಿನಗಳಿಗೊಮ್ಮೆ ಮತ್ತೊಂದು ತಂಡ ನೀರಿನ ಪರೀಕ್ಷೆ ನಡೆಸುತ್ತದೆ. ಫ್ಲೋರೈಡ್‌ ಸಮಸ್ಯೆಯಿಂದ ಜನ ನಿರಾಳರಾಗ­ಬಹುದು.

‘ನಗರದ ಜನತೆಗೆ ಶುದ್ಧ ಕುಡಿಯುವ ನೀರು ಸಿಗಲಿದೆ. ಇನ್ನಷ್ಟು ಘಟಕಗಳನ್ನು ಸರ್ಕಾರೇತರ ಸಂಸ್ಥೆಯ ನೆರವಿನಿಂದ ಸ್ಥಾಪಿಸಲಾಗುವುದು‘ ಎಂದು ಪಾಲಿಕೆ ಸದಸ್ಯ ಟಿ.ಆರ್‌.ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನೀರಿಗೆ ಪಡೆಯುವ ಶುಲ್ಕದಲ್ಲಿ ವಿದ್ಯುತ್‌ ವೆಚ್ಚ, ಘಟಕದ ಭದ್ರತೆ ನಿಯೋಜಿಸಿರುವ ಸಿಬ್ಬಂದಿಯ ವೇತನ ಹಾಗೂ ನಿರ್ವಹಣೆ ಮಾಡಲಾಗುತ್ತದೆ. ದೇಶದಲ್ಲಿ ವಾಟರ್‌ ಹೆಲ್ತ್‌ ಇಂಡಿಯಾ ಸಂಸ್ಥೆಯ 360 ಘಟಕಗಳಿದ್ದು, ಬೆಂಗಳೂರಿನಲ್ಲಿ 36, ನೆಲಮಂಗಲ, ಮಧುಗಿರಿಯಲ್ಲಿ ತಲಾ ಒಂದು ಘಟಕವಿದೆ. ನಗರದಲ್ಲಿ ಮೊದಲ ಹಂತವಾಗಿ ಮೂರು  ಘಟಕಗಳನ್ನು ಸ್ಥಾಪಿಸುತ್ತಿದೆ.

ಘಟಕದಲ್ಲಿ ಏನೇನಿದೆ
ಐಎಸ್‌ಐ ಪ್ರಮಾಣೀಕೃತ ಪಂಪ್‌, ರಿವರ್ಸ್‌ ಒಸ್ಮೋಸಿಸ್‌, ನೇರಳಾತೀತ ಕಿರಣ (ಯುವಿ) ಸಾಮಗ್ರಿ, 1 ಮೈಕ್ರಾನ್‌ ಫಿಲ್ಟರ್‌, ತ್ಯಾಜ್ಯ ಸಂಸ್ಕ­ರಣೆಯ ಬಹುಪಯೋಗಿ ಫಿಲ್ಟರ್‌, ಕ್ರಿಯಾಶೀಲ ಇಂಗಾಲದ ಫಿಲ್ಟರ್‌, 5 ಮೈಕ್ರಾನ್‌ ಕಾರ್ಟೆಡ್ಜ್‌ ಒಳಗೊಂಡಿರುವ ಘಟಕ ನೀರಿನಲ್ಲಿ­ರುವ ಎಲ್ಲ ರೀತಿ ರಸಾಯನಿಕಗಳನ್ನು ಸಮ ಪ್ರಮಾಣದಲ್ಲಿ ಕಾಯ್ದು­ಕೊಳ್ಳುತ್ತದೆ. ತ್ಯಾಜ್ಯ­ಯುಕ್ತ ನೀರನ್ನು ಘಟಕದ ಸುತ್ತ ನಿರ್ಮಿಸಿರುವ ಹುಲ್ಲು ಹಾಸಿಗೆ ಬಳಸುವ ವ್ಯವಸ್ಥೆ ಮಾಡಲಾಗಿದೆ. ಯಂತ್ರಕ್ಕೆ ಅಳವಡಿಸಿರುವ ವಿದ್ಯುನ್ಮಾನ ಮೀಟರ್‌ನಲ್ಲಿ ಶುಲ್ಕ, ಶುದ್ಧೀಕರಿಸಿದ ನೀರಿನ ವಿತರಣೆಯ ಮಾಹಿತಿ ಲಭ್ಯವಿರುತ್ತದೆ. ಘಟಕದಲ್ಲಿ ನಿಯೋಜಿಸಿರುವ ಸಿಬ್ಬಂದಿ ಬಳಿ ಹಣ ಪಾವತಿಸಿ ನೀರು ಪಡೆಯಬಹುದಾಗಿದೆ. ಅಗತ್ಯ ಇದ್ದವರಿಗೆ 20 ಲೀಟರ್‌ ನೀರಿನ ಕ್ಯಾನ್‌ಗಳನ್ನು ಘಟಕದ ವತಿಯಿಂದ ಮಾರಾಟ ಮಾಡ­ಲಾಗುತ್ತದೆ.

ಪಾಲಿಕೆಯಿಂದ ನೀರು
ಈ ಮೂರು ಘಟಕಗಳಿಗೆ ಕೊಳವೆಬಾವಿ ನೀರನ್ನು ಪಾಲಿಕೆ ಉಚಿತವಾಗಿ ನೀಡುತ್ತದೆ. ಈ ನೀರು ಶುದ್ಧೀಕರಿಸಿ ಜನರಿಗೆ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT