ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ಮೇಯರ್‌ ಹುದ್ದೆ ಮೇಲೇಕೆ ಮೋಹ?

Last Updated 4 ಸೆಪ್ಟೆಂಬರ್ 2015, 19:42 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮೇಯರ್ ಹುದ್ದೆಗೆ ಮೂರೂ ಪಕ್ಷಗಳ ಕಾರ್ಪೊರೇಟರ್‌ಗಳಲ್ಲಿ ಅಷ್ಟೊಂದು ಪೈಪೋಟಿ ಏಕೆ?
ರಾಜಧಾನಿಯಲ್ಲಿ ಪ್ರಥಮ ಪ್ರಜೆ ಎನ್ನುವ ಪಟ್ಟದ ಜತೆಗೆ ಭಾರಿ ಪ್ರಮಾಣದ ಅನುದಾನ ಬಳಕೆ ಮೇಲೆ ಅಧಿಕಾರವನ್ನೂ ಆ ಹುದ್ದೆ ಒದಗಿಸುತ್ತದೆ. ಹೀಗಾಗಿ ಮೇಯರ್‌ ಗೌನು ತೊಡಲು ಪ್ರತಿಯೊಬ್ಬ ಪಾಲಿಕೆ ಸದಸ್ಯರಿಗೂ ಹಿರಿದಾದ ಆಸೆ.

ಮೇಯರ್‌, ಉಪಮೇಯರ್‌ ಹಾಗೂ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಗಳನ್ನು ತಮ್ಮತ್ತ ಸೆಳೆಯಲು ರಾಜಕೀಯ ಪಕ್ಷಗಳು ಪೈಪೋಟಿ ನಡೆಸಿದ್ದರೆ, ತಮ್ಮ ಪಕ್ಷ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದರೆ, ತಮಗೇನು ಅಧಿಕಾರ ಸಿಕ್ಕೀತು ಎನ್ನುವ ಹುಡುಕಾಟದಲ್ಲಿದ್ದಾರೆ ಪಾಲಿಕೆ ಸದಸ್ಯರು.

ನಗರದ ಎಲ್ಲ ಅಧಿಕೃತ ಕಾರ್ಯಕ್ರಮಗಳಲ್ಲಿ ಮೇಯರ್‌ಗೆ  ಅಗ್ರ ಮಣೆ. ವಿಶೇಷ ಗೌನು ತೊಟ್ಟು ಪಾಲ್ಗೊಳ್ಳುವ ಅವಕಾಶವನ್ನು ಆ ಹುದ್ದೆ ನೀಡುತ್ತದೆ. ಅಲ್ಲದೆ, ‘ಪೂಜ್ಯ’ ಎಂಬ ವಿಶೇಷಣವೂ ಹೆಸರಿನ ಹಿಂದಿರುತ್ತದೆ. ಹೀಗಾಗಿ ಮೇಯರ್‌ ಪೀಠ ಎಂದರೆ ಸಾಕು ಸದಸ್ಯರ ಕಣ್ಣುಗಳು ಅರಳುತ್ತವೆ. ಇದು ಸಮಾಜದಲ್ಲಿ ಸಿಗುವ ಮಾನ್ಯತೆಗೆ ಸಂಬಂಧಿಸಿದ ವಿಷಯವಾದರೆ, ಅನುದಾನ ಬಳಕೆಗೆ ಇರುವ ಅವಕಾಶ ಇದಕ್ಕಿಂತ ದೊಡ್ಡದಾಗಿದೆ.

ವಾರ್ಷಿಕ ₨ 150 ಕೋಟಿಯಷ್ಟು ದೊಡ್ಡ ಮೊತ್ತವನ್ನು ಬಳಕೆ ಮಾಡುವುದು ಮೇಯರ್‌ ವಿವೇಚನೆಗೆ ಸೇರಿದೆ. ಮಳೆಗಾಲದ ವೇಳೆಯಲ್ಲಿ ಮಹಾಪೂರ ನಿರ್ವಹಣೆ, ಕಟ್ಟಡಗಳ ದುರಸ್ತಿ, ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ಕೈಗೊಳ್ಳಬೇಕಾದ ತುರ್ತು ಕಾಮಗಾರಿಗಳನ್ನು ಆ ಮೊತ್ತ ಒಳಗೊಂಡಿದೆ. ಇದಲ್ಲದೆ  ಮೇಯರ್‌ ವೈದ್ಯಕೀಯ ನಿಧಿಯಿಂದ ₨ 8 ಕೋಟಿಯಷ್ಟು ಮೊತ್ತವನ್ನು ಬಿಡುಗಡೆ ಮಾಡುವ ಅಧಿಕಾರವೂ ಅವರಿಗಿದೆ. ಕೌನ್ಸಿಲ್‌ ಒಪ್ಪಿಗೆ ಸಿಕ್ಕರೆ ಹೆಚ್ಚುವರಿಯಾಗಿ ₨ 5 ಕೋಟಿ ಖರ್ಚು ಮಾಡುವ ಅವಕಾಶ ಕೂಡ ಮೇಯರ್‌ಗೆ ಉಂಟು.

ಬಿಬಿಎಂಪಿ ಮೂಲಗಳ ಪ್ರಕಾರ, ಕಳೆದ ೫ ವರ್ಷ ಮೇಯರ್‌ ಆದವರಲ್ಲಿ ವೈದ್ಯಕೀಯ ಅನುದಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿದ್ದು ಎಸ್‌.ಕೆ. ನಟರಾಜ್‌. ಅತ್ಯಂತ ಕಡಿಮೆ ಅನುದಾನ ಬಳಕೆ ಮಾಡಿದ್ದು ಬಿ.ಎಸ್‌. ಸತ್ಯನಾರಾಯಣ.

ಮೇಯರ್‌ಗಳಿಗೆ ಈ ಹಿಂದೆ ₨ 250 ಕೋಟಿಯಷ್ಟು ಅನುದಾನ ಬಳಕೆ ಮಾಡುವ ಅಧಿಕಾರ ಇತ್ತು. ಆದರೆ, ಶಾರದಮ್ಮ ಮೇಯರ್‌ ಹಾಗೂ ಆರ್‌. ಅಶೋಕ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವಧಿಯಲ್ಲಿ ಈ ಮೊತ್ತವನ್ನು ₨150 ಕೋಟಿಗೆ ಇಳಿಸಲಾಯಿತು ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಉಪಮೇಯರ್‌ ಹುದ್ದೆ ಏರಿದವರಿಗೆ ₨25 ಕೋಟಿ ಅನುದಾನ ಬಳಕೆ ಮಾಡುವ ಅಧಿಕಾರ ಇದೆ. ಮೇಯರ್‌ ಅನುಪಸ್ಥಿತಿಯಲ್ಲಿ ಆ ಸ್ಥಾನ ಅಲಂಕರಿಸುವ ಅವಕಾಶವೂ ಉಪಮೇಯರ್‌ ಅವರಿಗಿದೆ. ಆರ್‌. ಇಂದಿರಾ ಅವರು ಉಪಮೇಯರ್‌ ಆಗಿದ್ದಾಗ ತಮ್ಮ ವಿವೇಚನೆ ಬಳಸಿ ₨ 25 ಕೋಟಿ ಅನುದಾನವನ್ನು ತಮ್ಮ ವಾರ್ಡ್‌ಗೆ ಬಳಕೆ ಮಾಡಿದ್ದರು.

ಈ ಎರಡು ಹುದ್ದೆಗಳಲ್ಲದೆ ಬಿಬಿಎಂಪಿಯಲ್ಲಿ 12 ಸ್ಥಾಯಿ ಸಮಿತಿಗಳಿವೆ. ಪ್ರತಿಯೊಂದು ಸ್ಥಾಯಿ ಸಮಿತಿ ಅಧ್ಯಕ್ಷರಿಗೂ ₨ 1 ಕೋಟಿಗಿಂತ ಅಧಿಕ ಹಾಗೂ ₨ 3 ಕೋಟಿಗಿಂತ ಕಡಿಮೆ ಮೊತ್ತದ ಯೋಜನೆಗಳಿಗೆ ಅನುಮತಿ ನೀಡುವ ಅಧಿಕಾರ ಇದೆ.
ನಗರ ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಭಾರಿ ಬೇಡಿಕೆಯಿದೆ. ನಗರದಲ್ಲಿ ವಾರ್ಷಿಕ ಹತ್ತು ಸಾವಿರಕ್ಕೂ ಅಧಿಕ ನಕ್ಷೆಗಳನ್ನು ಮಂಜೂರು ಮಾಡಲಾಗುತ್ತದೆ. ನಿರ್ಮಾಣದಲ್ಲಿ ನಕ್ಷೆ ಉಲ್ಲಂಘನೆ ಮಾಡಿದ್ದನ್ನು ಈ ಸಮಿತಿ ಪರಿಶೀಲಿಸಲು ತೆರಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT