ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರವಾಸಿಗಳ ಆ ಕರಾಳ ಅನುಭವಗಳು

ನೇಪಾಳದಿಂದ ಸಾವು ಗೆದ್ದು ಬಂದ ಕನ್ನಡಿಗರು; ರಕ್ಷಣಾ ಪಡೆ ಸಿಬ್ಬಂದಿಗೆ ಸೆಲ್ಯೂಟ್
Last Updated 26 ಏಪ್ರಿಲ್ 2015, 20:45 IST
ಅಕ್ಷರ ಗಾತ್ರ

ಬೆಂಗಳೂರು: ನೇಪಾಳ ಪ್ರವಾಸದಲ್ಲಿದ್ದ ಕನ್ನಡಿಗರು ತಂಡೋಪ ತಂಡವಾಗಿ ನಗರಕ್ಕೆ ಮರಳುತ್ತಿದ್ದಾರೆ.  ಅಲ್ಲಿನ ಭೀಕರತೆ, ಬದುಕಿ ಬಂದ ಬಗೆ ಹಾಗೂ ರಕ್ಷಣಾ ಪಡೆ ತೋರಿದ ಕಾಳಜಿಯನ್ನು ಅವರು ‘ಪ್ರಜಾವಾಣಿ’ ಜತೆ ಹಂಚಿಕೊಂಡಿದ್ದಾರೆ. ‘ಭೂಮಿ ಕಂಪಿಸಿದ ಏಳೆಂಟು ನಿಮಿಷಗಳಲ್ಲೇ ಅಲ್ಲಿ ಕರಾಳ ಸನ್ನಿವೇಶ ನಿರ್ಮಾಣವಾಯಿತು. ಜನ ಚೆಲ್ಲಾಪಿಲ್ಲಿಯಾಗಿ ಓಡಲಾರಂಭಿಸಿದರು.

ಹಲವು ಕುಟುಂಬಗಳು ಬೇರ್ಪಟ್ಟವು. ಮೇಲಿಂದ ಮೇಲೆ ಹತ್ತು ಬಾರಿ ಭೂಮಿ ಕಂಪಿಸಿದ ಅನುಭವವಾಯಿತು’ ಎಂದು ಜೆ.ಪಿ.ನಗರದ ಸಂತೋಷ್‌ ನಾಯಕ್ ಅನುಭವ ಹಂಚಿಕೊಂಡರು. ಸಂತೋಷ್ ಅವರು ಪತ್ನಿ ಪುಷ್ಪಾ, ಅಕ್ಕ ಶೋಭಾನಾಯಕ್, ಭಾವ ಶಿವಪ್ರಸಾದ್ ನಾಯಕ್, ಅವರ ಪುತ್ರಿ ಖುಷಿಯಾ ನಾಯಕ್ ಜತೆ ಏ.23ರಂದು ಕಠ್ಮಂಡುಗೆ ತೆರಳಿದ್ದರು. ಈ ಕುಟುಂಬ ಬೆಳಿಗ್ಗೆ 9.30ಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಎಲ್) ಬಂದಿಳಿಯಿತು.

‘ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕಿ ಆಗಿರುವ ತಂಗಿ ಶೋಭಾ, ಕಠ್ಮಂಡುವಿನಲ್ಲಿ ನಿಗದಿಯಾಗಿದ್ದ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಬೇಕಿತ್ತು. ಹೀಗಾಗಿ ಏ.23 ರಂದು ಆಕೆಯ ಜತೆ ನಾವೂ ಹೋಗಿದ್ದೆವು’ ಎಂದರು. ‘ಆಕಾಶದೆತ್ತರ ಕಟ್ಟಡಗಳು. ಯಾವ ಕಟ್ಟಡ ಮೇಲೆ ಬೀಳುತ್ತದೋ ಎಂಬ ಆತಂಕ. ವಿಚಾರ ಸಂಕಿರಣಕ್ಕೆ ತೆರಳಿದ್ದ ತಂಗಿಗೆ ಏನಾಯಿತೋ ಎಂಬ ಭಯ. ಈ ಎಲ್ಲ ತೊಳಲಾಟಗಳಿಂದ ಜೀವ ಹೋದಂತಾಗಿತ್ತು. ಸಂಜೆ ವೇಳೆಗೆ ಎಲ್ಲರೂ ಒಂದೆಡೆ ಸೇರಿದಾಗ ನಿಟ್ಟುಸಿರು ಬಿಟ್ಟೆ’ ಎಂದು ಹೇಳಿದರು.

ಸುರಕ್ಷಿತ: ಏ.21ರಂದು ಐತಿಹಾಸಿಕ ಪಶುಪತಿನಾಥ ದೇವಾಲಯಕ್ಕೆ ತೆರಳಿದ್ದ ಗಾಂಧಿಬಜಾರ್‌ನ ಸರೋಜಾ ರಾವ್, ಎನ್. ವತ್ಸಲಾ, ವಿಜಯಲಕ್ಷ್ಮಿ ಹಾಗೂ ಗೀತಾ ಸುಬ್ರಮಣಿಯನ್ ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿದ್ದಾರೆ. ‘ದೇವಾಲಯ ಪ್ರವೇಶಿಸಿದ ಸ್ವಲ್ಪ ಸಮಯದಲ್ಲೇ ಭೂಕಂಪ ಸಂಭವಿಸಿತು. ಅದೃಷ್ಟವಶಾತ್ ದೇವಾಲಯದ ಒಳಗಿದ್ದವರಿಗೆ ಯಾವುದೇ ತೊಂದರೆ ಆಗಲಿಲ್ಲ. ಆದರೆ, ಹೊರಗಿನ ಭೀಕರ ದೃಶ್ಯಗಳು ನಮ್ಮನ್ನು ಘಾಸಿಗೊಳಿಸಿತು. ಬೆಟ್ಟದ ಮೇಲಿನಿಂದ ಉರುಳಿ ಬಂದ ಕಲ್ಲು–ಬಂಡೆಗಳು, ಹಲವರನ್ನು ಶವವಾಗಿ ಮಲಗಿಸಿದವು.

ಪಶುಪತಿನಾಥನು ಭೂಕಂಪನದ ಸೂಚನೆ ಅರಿತಿದ್ದಂತೆ ಕಾಣುತ್ತದೆ. ಹೀಗಾಗಿ ಆತ ಹಲವು ಭಕ್ತರನ್ನು ದೇವಾಲಯದೊಳಗೆ ಕರೆಸಿಕೊಂಡು ಜೀವ ರಕ್ಷಿಸಿದ’ ಎಂದರು ಸರೋಜಾ ರಾವ್. ‘ಸಂಜೆವರೆಗೂ ದೇಗುಲದಲ್ಲೇ ಕಳೆದೆವು. ಅಲ್ಲಿಂದ ಸುರಕ್ಷಿತವಾಗಿ ಹೊರತಂದ ರಕ್ಷಣಾ ಪಡೆಯ ಸಿಬ್ಬಂದಿ, ವಿಮಾನದ ಮೂಲಕ ದೆಹಲಿ ತಲುಪಿಸಿದರು. ಬದುಕಿ ಬಂದ ಖುಷಿಯ ಜತೆಗೆ, ಸಾವಿರಾರು ಮಂದಿ ಮೃತಪಟ್ಟರು ಎಂಬ ನೋವಿದೆ’ ಎಂದರು.

ಗೀತಾ ಸುಬ್ರಮಣಿಯನ್, ‘1934 ರಲ್ಲಿ ಭೂಕಂಪ ಸಂಭವಿಸಿದಾಗಲೂ ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದರು. ಕಠ್ಮಂಡು ನಗರ ಸಂಪೂರ್ಣ ಹಾನಿಗೊಳಗಾಗಿತ್ತು. ಆಗಲೂ ಪಶುಪತಿ ದೇಗುಲ ಸುರಕ್ಷಿತವಾಗಿತ್ತು. ಹೀಗಾಗಿ ಪಶುಪತಿನಾಥನು ತಮ್ಮ ಭಕ್ತರನ್ನು ಅಂದಿನಿಂದಲೂ ಕಾಪಾಡಿಕೊಂಡು ಬಂದಿದ್ದಾನೆ.

ರಕ್ಷಣಾ ಪಡೆಗೆ ‘ಸೆಲ್ಯೂಟ್’: ‘ರಕ್ಷಣಾ ದಳ’ ಎನ್ನುವ ಹೆಸರಿಗೆ ಸಾರ್ಥಕ ಆಗುವ ರೀತಿಯಲ್ಲಿ ಭಾರತೀಯ ರಕ್ಷಣಾ ದಳದ ಸಿಬ್ಬಂದಿ ನಮ್ಮನ್ನು ಕಾಪಾಡಿದರು. ಮುಂದೇನು ಮಾಡುವುದು ಎಂಬ ಆತಂಕದಲ್ಲಿ ಮುಳುಗಿದ್ದ ನಮ್ಮನ್ನು ಸ್ವಂತ ಕುಟುಂಬದವರಂತೆ ರಕ್ಷಿಸಿದರು.. 

ಕುಮಾರಕೃಪಾ ಬಡಾವಣೆಯ ಡಾ.ಉಷಾರಾಣಿ ಅವರ ಧನ್ಯತಾ ಭಾವ ತುಂಬಿದ ಮಾತುಗಳಿವು. ‘ಭಾರತೀಯ ಸೈನ್ಯ ಹಾಗೂ ರಕ್ಷಣಾ ದಳದ ಕಾಳಜಿಯನ್ನು ಎಂದಿಗೂ ಮರೆಯಲಾಗುವುದಿಲ್ಲ. ಭೂಕಂಪ ಪೀಡಿತ ಪ್ರದೇಶದಲ್ಲಿ ಸಿಲುಕಿದ್ದ ಸಾವಿರಾರು ಮಂದಿಯನ್ನು ರಕ್ಷಿಸುವಾಗ ಅವರು ತೋರಿದ ಕಾಳಜಿಗೆ ಎಲ್ಲರೂ ‘ಸೆಲ್ಯೂಟ್’ ಮಾಡಬೇಕು’ ಎಂದರು.

‘ಏ.20 ರಂದು ಬೆಂಗಳೂರಿನಿಂದ ಹೊರಟಿದ್ದ 37 ಮಂದಿ, ವಾರಣಾಸಿ, ಕಾಶಿ ದರ್ಶನ ಪಡೆದು ಶುಕ್ರವಾರವಷ್ಟೇ ನೇಪಾಳ ತಲುಪಿದೆವು. ಮರುದಿನ ಪ್ರವಾಸಿ ತಾಣಗಳ ವೀಕ್ಷಣೆಗೆ ತೆರಳಿದಾಗ ಭೂಕಂಪ ಸಂಭವಿಸಿತು. ಮನೆಗೆ ವಾಪಸ್ ಮರಳುವ ವಿಶ್ವಾಸ ಕಳೆದುಕೊಂಡೆವು. ದಾರಿ ಕಾಣದ ಸ್ಥಿತಿಯಲ್ಲಿದ್ದಾಗ ರಕ್ಷಣಾ ದಳದ ಸಿಬ್ಬಂದಿ ದೇವರಂತೆ ಬಂದರು. ನಂತರ ವಿಮಾನದ ಮೂಲಕ ಬೆಂಗಳೂರಿಗೆ ಕಳುಹಿಸಿಕೊಟ್ಟರು. ತಮ್ಮವರ ರಕ್ಷಣೆಗೆ ಶ್ರಮಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೂ ಚಿರಋಣಿ’ ಎಂದು ಹೇಳಿದರು.

ಸಾವಿರ ಸಂಕಟಗಳು: ತಮ್ಮವರನ್ನು ಕಳೆದುಕೊಂಡು ರೋದಿಸುತ್ತಿದ್ದ ಆ ಜನ. ಇದ್ದ ಮನೆ–ಕಟ್ಟಡ ಕಣ್ಣೆದುರೇ ಕುಸಿದು ಬಿದ್ದಾಗ ಮುಗಿಲು ಮುಟ್ಟುವಂತೆ ಅಳುತ್ತಿದ್ದ ಸಾವಿರಾರು ಜನರ ಸಂಕಟವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ...

ಆರ್‌ಪಿಸಿ ಲೇಔಟ್‌ನ ಎಸ್.ಸಂಪತ್ ದಂಪತಿ ಕಂಡ ಅನುಭವಗಳಿವು. ವಿಧಾನಸೌಧದ ನಿವೃತ್ತ ನೌಕರರಾದ ಸಂಪತ್ ದಂಪತಿ, ಮುಕ್ತಿನಾಥ, ಖೋದ್ರಾ, ಮಾನಸ ದೇವಿ, ಪಶುಪತಿನಾಥ ದೇವಸ್ಥಾನಗಳ ದರ್ಶನಕ್ಕೆ ತೆರಳಿದ್ದರು. ಭೂಕಂಪನದ ಭೀಕರಂತೆ ಅವರನ್ನು ಅಲುಗಾಡಿಸಿಬಿಟ್ಟಿತು. ರಾತ್ರಿ ಎಂಟು ಗಂಟೆಗೆ ದೆಹಲಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹೊರಟಿದ್ದಾಗ ‘ಪ್ರಜಾವಾಣಿ’ ಜತೆ ಮಾತನಾಡಿದರು.

‘ಭಯಾನಕ ಅನುಭವ. ಅಂಥ ಅನಾಹುತ–ಸಾವಿರಾರು ಮಂದಿಯ ಸಂಕಷ್ಟವನ್ನು ಒಟ್ಟೊಟ್ಟಿಗೆ ಯಾವತ್ತೂ ನೋಡಿರಲಿಲ್ಲ. ಈ ಆಘಾತದಿಂದ ಹೊರಬರಲು ಎಷ್ಟು ದಿನ ಬೇಕಾಗುತ್ತದೋ ಗೊತ್ತಿಲ್ಲ. ನಮ್ಮ ಜತೆ ಬಂದಿದ್ದ 18 ಮಂದಿಯೂ ಸುರಕ್ಷಿತವಾಗಿದ್ದು, ವಿಮಾನ ಹತ್ತುವ ತಯಾರಿಯಲ್ಲಿದ್ದೇವೆ’ ಎಂದರು.

ಭಯಾನಕ ದೃಶ್ಯ: ಅನಾರೋಗ್ಯದ ಕಾರಣ ಪ್ರವಾಸ ಸ್ಥಳಗಳ ವೀಕ್ಷಣೆಗೆ ತೆರಳದೆ ವಸತಿಗೃಹದಲ್ಲೇ ಮಲಗಿದ್ದೆ. ಏಕಾಏಕಿ ಕಟ್ಟಡ ಅಲುಗಾಡಿ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾದೆವು. ಕಿಟಕಿಯಿಂದ ಹೊರ ನೋಡಿದಾಗ ಕಣ್ಣಿಗೆ ಕಂಡ ಆ ದೃಶ್ಯ ನಿಜಕ್ಕೂ ಭಯಾನಕ. ಪತ್ನಿ ಅಕ್ಕಮಹಾದೇವಿ ಜತೆ ನೇಪಾಳ ಪ್ರವಾಸದಲ್ಲಿದ್ದ ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ ಚಂದ್ರಶೇಖರ್ ಅವರ ಮಾತುಗಳಿವು. ಈ ದಂಪತಿ ಈಗ ಸುರಕ್ಷಿತವಾಗಿ ದೆಹಲಿ ಕರ್ನಾಟಕ ಭವನ ತಲುಪಿದೆ.

‘ಭೂಕಂಪನ ಎಂದು ಗೊತ್ತಾದ ಕೂಡಲೇ ಕಟ್ಟಡದಿಂದ ಹೊರ ಹೋಗಿ, ಮೈದಾನವೊಂದರಲ್ಲಿ ನಿಂತುಕೊಂಡೆ. ಈ ವೇಳೆಗಾಗಲೇ ಆ ಮೈದಾನದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದರು. ಪತ್ನಿ ಹಾಗೂ ಜತೆಗಿದ್ದವರೂ ಪ್ರೇಕ್ಷಣೀಯ ಸ್ಥಳಗಳಿಗೆ ತೆರಳಿದ್ದರಿಂದ ಅವರನ್ನು ಮತ್ತೆ ಕಾಣುವ ಭರವಸೆ ಇರಲಿಲ್ಲ. ಆದರೆ, ಅದೃಷ್ಟವಷಾತ್ ಸಂಜೆ ವೇಳೆಗೆ ಅವರು ಜೀವಂತವಾಗಿಯೇ ಸಿಕ್ಕರು’ ಎಂದು ಅವರು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT