ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಪೊಲೀಸರಿಗೆ 10 ಲಕ್ಷ ‘ಫಾಲೋವರ್ಸ್’!

ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ಫೇಸ್‌ಬುಕ್‌ ಮೂಲಕ ದೂರುಗಳಿಗೆ ನಿತ್ಯ ಸ್ಪಂದನೆ
Last Updated 31 ಜುಲೈ 2015, 5:57 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ಜಾಲತಾಣಗಳಾದ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಬೆಂಗಳೂರು ನಗರ ಪೊಲೀಸರು (ಬಿಸಿಪಿ), 10 ಲಕ್ಷಕ್ಕೂ ಹೆಚ್ಚು ಹಿಂಬಾಲಿಸುವವರನ್ನು (ಫಾಲೋವರ್ಸ್) ಹೊಂದುವ ಮೂಲಕ, ಹೊಸದೊಂದು ಮೈಲಿಗಲ್ಲು ಸಾಧಿಸಿದ್ದಾರೆ. ಈ ಮೂಲಕ, ಸಣ್ಣಪುಟ್ಟ ದೂರುಗಳನ್ನು ತಮ್ಮ ಅಧಿಕೃತ ಟ್ವಿಟರ್‌ ಮತ್ತು ಫೇಸ್‌ಬುಕ್‌ ಖಾತೆಗಳಲ್ಲಿ ಸ್ವೀಕರಿಸಿ, ತಕ್ಷಣವೇ ಸ್ಪಂದಿಸಿ ಪರಿಹರಿಸುವ ಮೂಲಕ ‘ತಂತ್ರಜ್ಞಾನಸ್ನೇಹಿ ಪೊಲೀಸರು’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ಸಾಮಾಜಿಕ ಜಾಲತಾಣಗಳ ಬಳಕೆಯನ್ನು, ಮನಗಂಡ ಪೊಲೀಸರು, 2014ರ ಆಗಸ್ಟ್‌ 14ರಲ್ಲಿ ಅಧಿಕೃತವಾಗಿ ತಮ್ಮ ಟ್ವಿಟರ್‌ ಖಾತೆ ತೆರೆದರು. ಆಗಷ್ಟೆ ನಗರ ಪೊಲೀಸ್ ಕಮಿಷನರ್ ಆಗಿ ಎಂ.ಎನ್‌. ರೆಡ್ಡಿ ಅವರು ಅಧಿಕಾರ ವಹಿಸಿಕೊಂಡಿದ್ದರು. ಇದಕ್ಕೂ ಮುಂಚೆ ಪೊಲೀಸರು ಫೇಸ್‌ಬುಕ್‌ನಲ್ಲಿ ಸಕ್ರಿಯರಾಗಿದ್ದರು.

24X7 ಸೇವೆ: ಟ್ವಿಟರ್ ಮತ್ತು ಫೇಸ್‌ಬುಕ್‌ ಖಾತೆಗಳ ಮೂಲಕ ಸಾರ್ವಜನಿಕರ ದೂರುಗಳಿಗೆ ಪೊಲೀಸರು ತಕ್ಷಣ ಸ್ಪಂದಿಸತೊಡಗಿದರು. ಇಂದರಿಂದಾಗಿ ಅಪರಾಧ ಮತ್ತು ಸಂಚಾರ ಸಮಸ್ಯೆಗಳ ಬಗ್ಗೆ ಜನರಿಂದ ನಿತ್ಯ ನೂರಾರು ದೂರುಗಳು ಹರಿದು ಬರಲಾರಂಭಿಸಿದವು. ಇದರ ಜತೆ ಜತೆಗೆ ಪೊಲೀಸರ ಸ್ಪಂದನೆಗೆ ಮೆಚ್ಚುಗೆ ಕೂಡ ವ್ಯಕ್ತವಾಗತೊಡಗಿತು.

ಇದರ ಮಹತ್ವವನ್ನು ಅರಿತ ಕಮಿಷನರ್ ಎಂ.ಎನ್‌. ರೆಡ್ಡಿ ಅವರು, ಕಮಾಂಡ್ ಕೇಂದ್ರದ ಡಿಸಿಪಿ ಅಧೀನದಲ್ಲಿ ಸಾಮಾಜಿಕ ಜಾಲತಾಣಗಳ ಪ್ರತ್ಯೇಕ ವಿಭಾಗವೊಂದನ್ನು ಅಸ್ತಿತ್ವಕ್ಕೆ ತಂದರು. ಈ ವಿಭಾಗದಲ್ಲಿ ಸುಮಾರು 20 ಸಿಬ್ಬಂದಿ ಮೂರು ಪಾಳಿಗಳಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಸದ್ಯ ಕಮಿಷನರ್, ಹೆಚ್ಚುವರಿ ಪೊಲೀಸ್ ಕಮಿಷನರ್‌ಗಳು, ಡಿಸಿಪಿಗಳು ಸೇರಿದಂತೆ, ಪ್ರತಿ ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ಠಾಣೆಯೂ ಅಧಿಕೃತ ಟ್ವಿಟರ್ ಖಾತೆ ಹೊಂದಿವೆ. ಅಲ್ಲದೆ, ತಮ್ಮ ಅಧಿಕೃತ ಖಾತೆಗಳ ಮೂಲಕ ಅಧಿಕಾರಿಗಳು ಸಾರ್ವಜನಿಕರ ದೂರುಗಳಿಗೆ ನೇರವಾಗಿ ಸ್ಪಂದಿಸುತ್ತಿದ್ದಾರೆ.

ಸಂಚಾರ ದಟ್ಟಣೆ ಮಾಹಿತಿ: ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುವ ಸಿಬ್ಬಂದಿ, ಸಂಚಾರದಟ್ಟಣೆ ಇರುವ ರಸ್ತೆಗಳ ಬಗ್ಗೆ ಆಗಾಗ್ಗೆ

ಮಾಹಿತಿ ನೀಡುತ್ತಿರುತ್ತಾರೆ. ಜತೆಗೆ, ಯಾವುದಾದರೂ ರಸ್ತೆ ಬಂದ್ ಆಗಿದ್ದರೆ,  ಪರ್ಯಾಯ ಮಾರ್ಗಗಳ ಮಾಹಿತಿಯನ್ನು ಹಾಕುತ್ತಾರೆ. ಅಲ್ಲದೆ, ಯಾವುದಾದರೂ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆ ಆಗುತ್ತಿರುವುದರ ಕುರಿತು ಸಾರ್ವಜನಿಕರು ಟ್ವಿಟರ್ ಅಥವಾ ಫೇಸ್‌ಬುಕ್‌ನಲ್ಲಿ ತಿಳಿಸಿದರೆ, ಕೂಡಲೇ ಸಂಬಂಧಪಟ್ಟ ಠಾಣೆಗೆ ವಿಷಯ ಮುಟ್ಟಿಸಿ, ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುತ್ತಾರೆ.

ದೂರು ಆಧರಿಸಿ ಅಮಾನತು: ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ಅಧಿಕಾರಿಗಳ ಅಸಭ್ಯ ವರ್ತನೆ, ವಿನಾ ಕಾರಣ ಹಲ್ಲೆ ಮತ್ತು ಲಂಚ ವಸೂಲಿ ಕುರಿತು ಸಹ ಟ್ವಿಟರ್‌ ಮತ್ತು ಫೇಸ್‌ಬುಕ್‌ನಲ್ಲಿ ಹಲವರು ದೂರು ಸಲ್ಲಿಸಿದ್ದಾರೆ. ಹೀಗೆ ಬಂದ ಒಂದು ದೂರಿನ ಕುರಿತು ತನಿಖೆ ನಡೆಸಿದ್ದ ಹಿರಿಯ ಅಧಿಕಾರಿಗಳು, ತಪ್ಪಿತಸ್ಥ ಸಿಬ್ಬಂದಿಯನ್ನು ಅಮಾನತು ಮಾಡಿದ್ದನ್ನು ನೆನೆಯಬಹುದು.

ಟ್ವಿಟರ್‌ನಲ್ಲೇ ಕ್ರಮದ ವರದಿ: ‘ದೂರುಗಳ ಪೈಕಿ ಯೋಗ್ಯವಾದವುಗಳನ್ನು ಆಯಾ ಠಾಣಾ ವ್ಯಾಪ್ತಿಯ ಗಮನಕ್ಕೆ ತಂದು ದೂರಿನ ವರದಿಯೊಂದನ್ನು ಸಿದ್ಧಪಡಿಸಿ ಕಳುಹಿಸಿಕೊಡಲಾಗುತ್ತದೆ. ನಂತರ ಸಂಬಂಧಪಟ್ಟ ಠಾಣೆಯಲ್ಲಿ ಕೈಗೊಂಡ ಕ್ರಮದ ವರದಿಯನ್ನು (ಆ್ಯಕ್ಷನ್ ರಿಪೋರ್ಟ್‌) ಟ್ವಿಟರ್‌ ಖಾತೆಯಲ್ಲಿ ಹಾಕಲಾಗುತ್ತದೆ. ಹಾಗಾಗಿ ಸಾರ್ವಜನಿಕರು ಸಣ್ಣಪುಟ್ಟ ದೂರುಗಳಿದ್ದಾಗ ಠಾಣೆಗೆ ತೆರಳದೆ, ಕುಳಿತಲ್ಲೇ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು’ ಎಂದು ಕಮಾಂಡ್ ಸೆಂಟರ್‌ನ ಡಿಸಿಪಿ ಎಂ.ಜಿ. ನಾಗೇಂದ್ರ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಇಲ್ಲಿನ ಪೊಲೀಸರು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವುದನ್ನು ಮನಗಂಡು, ಮೈಸೂರು ಮತ್ತು ಬೆಳಗಾವಿ ಜಿಲ್ಲೆಗಳ ಪೊಲೀಸರು ಸಹ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಅಧಿಕೃತ ಖಾತೆಗಳನ್ನು ತೆರೆದಿದ್ದಾರೆ’ ಎಂದು ಮಾಹಿತಿ ನೀಡಿದರು.

*
ಹೊರರಾಜ್ಯಗಳಿಗೂ ಮಾದರಿ

ಇತ್ತೀಚೆಗೆ ತಮಿಳುನಾಡು ಮತ್ತು ಹೈದರಾಬಾದ್‌ನ ಪೊಲೀಸ್ ಅಧಿಕಾರಿಗಳ ತಂಡ, ನಗರದ ಪೊಲೀಸ್ ಕಮಿಷನರ್‌ ಅವರ ಕಚೇರಿಗೆ ಭೇಟಿ ನೀಡಿತ್ತು. ಸಾಮಾಜಿಕ ಜಾಲತಾಣಗಳಾದ ಟ್ವಿಟರ್ ಮತ್ತು ಫೇಸ್‌ಬುಕ್ ಮೂಲಕ, ಇಲ್ಲಿನ ಪೊಲೀಸರು ಹೇಗೆ ಸಾರ್ವಜನಿಕರಿಗೆ ಸ್ಪಂದಿಸುತ್ತಾರೆ ಎಂಬುದರ ಕುರಿತು ತಂಡ ಮಾಹಿತಿ ಸಂಗ್ರಹಿಸಿಕೊಂಡು ಹೋಗಿದೆ.  ಅಲ್ಲದೆ, ತಮ್ಮ ರಾಜಧಾನಿಗಳಲ್ಲೂ ನಮ್ಮ ಮಾದರಿಯಲ್ಲಿ ಸಾಮಾಜಿಕ ಜಾಲತಾಣಗಳ ವಿಭಾಗವೊಂದನ್ನು ಸ್ಥಾಪಿಸುವ ಇರಾದೆಯನ್ನು ತಂಡದಲ್ಲಿದ್ದ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಎಂದು  ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದರು.

ಸಾಮಾಜಿಕ ಜಾಲತಾಣಗಳ ಬಳಕೆಯಿಂದಾಗಿ ಜನರು ಮತ್ತು ಪೊಲೀಸರ ಮಧ್ಯೆ ಸೇತುವೆಯೊಂದು ನಿರ್ಮಾಣವಾಗಿದೆ. ಜತೆಗೆ ಪೊಲೀಸ್ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಹೆಚ್ಚಾಗಿದೆ.
ಎಂ.ಎನ್‌. ರೆಡ್ಡಿ,
ನಗರ ಪೊಲೀಸ್ ಕಮಿಷನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT