ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಸಾರಿಗೆ ಮೂಲೆಗುಂಪು

ಸರ್ಕಾರ ನೀಡಿರುವ 25 ಆಧುನಿಕ ಬಸ್‌ಗಳಲ್ಲಿ ಸಂಚರಿಸುತ್ತಿರುವುದು 5 ಮಾತ್ರ
Last Updated 30 ಮಾರ್ಚ್ 2015, 8:47 IST
ಅಕ್ಷರ ಗಾತ್ರ

ಗಂಗಾವತಿ: ಸಮಸ್ಯೆಗಳ ಸರಮಾಲೆಯಿಂದಾಗಿ ನಗರ ಸಾರಿಗೆ ಆರಂಭವಾದ ಸಂದರ್ಭದಲ್ಲಿಯೇ ಮರೆಗೆ ಸರಿದಿದೆ. ಪರಿಣಾಮ ಮಂಜೂರಾಗಿದ್ದ 25 ಬಸ್‌ಗಳ ಪೈಕಿ ಕೇವಲ 4– 5 ವಾಹನ ಮಾತ್ರ ನಿತ್ಯ ಓಡಾಡುತ್ತಿವೆ.

ರಸ್ತೆಯ ಸಮಸ್ಯೆ ಮತ್ತು ಬಸ್‌ಗಳಿದ್ದರೂ ಚಾಲಕ, ನಿರ್ವಾಹಕರ ಕೊರತೆಯಿಂದ ನಗರ ಸಾರಿಗೆ ಸಮರ್ಪಕವಾಗಿ ಸಂಚಾರ ಆರಂಭಿಸಿಲ್ಲ.
ಗಂಗಾವತಿಯಂತಹ ಸಣ್ಣ ನಗರದಲ್ಲಿ ಕನಿಷ್ಠ ಸೌಕರ್ಯಗಳಿಲ್ಲದಿದ್ದರೂ ಮಾ. 15ರಂದು ಸಚಿವ ರಾಮಲಿಂಗಾರೆಡ್ಡಿ, ಶಾಸಕ ಇಕ್ಬಾಲ್ ಅನ್ಸಾರಿ ನಗರ ಸಾರಿಗೆಗೆ ಚಾಲನೆ ನೀಡಿದರು. ಸಚಿವರು ಅತ್ತ ಹೋಗುತ್ತಿದ್ದಂತಯೆ ನಗರ ಸಾರಿಗೆಯ ಒಂದೊಂದೇ ವಾಹನಗಳು ಘಟಕ ತಲುಪಿದವು. ಆ ಬಳಿಕ ಇಂದಿಗೂ ರಸ್ತೆಗೆ ಇಳಿದಿಲ್ಲ.

ಅಧುನಿಕ ವಾಹನಗಳನ್ನು ‘ನಗರ ಸಾರಿಗೆ’ ಯೋಜನೆಯಡಿ ನೀಡಿದ್ದೀರಿ. ಆದರೆ ಅಗತ್ಯ ಸಿಬ್ಬಂದಿಯನ್ನು ನೀಡಿಲ್ಲ. ಇದರಿಂದಾಗಿ ವಾಹನಗಳನ್ನು ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಇಲ್ಲಿನ ಘಟಕ ವ್ಯವಸ್ಥಾಪಕ ರಾಜಶೇಖರ್ ಅವರು ಮಾ. 16ರಂದೇ ಸಾರಿಗೆ ಇಲಾಖೆ ಈಶಾನ್ಯ ವಲಯದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. 15 ದಿನ ಕಳೆದರೂ ಅವರಿಂದ ಪ್ರತಿಕ್ರಿಯೆ ದೊರೆತಿಲ್ಲ.

ನಗರ ಸಾರಿಗೆ ವಾಹನ ಹೊರತುಪಡಿಸಿ ಘಟಕದಲ್ಲಿ 100 ವಾಹನಗಳಿದ್ದು, 98 ಮಾರ್ಗದಲ್ಲಿ (ಶೆಡ್ಯೂಲ್ಡ್) ನಿತ್ಯ ಸಂಚರಿಸುತ್ತಿವೆ. ಈ ವಾಹನಗಳ ನಿರ್ವಹಣೆಗೆ  ಕನಿಷ್ಠ 380 ಸಿಬ್ಬಂದಿ ಅಗತ್ಯವಿದೆ. ಆದರೆ ಇರುವುದು ಕೇವಲ 302 ಸಿಬ್ಬಂದಿ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ನಗರ ಸಾರಿಗೆಯ ಆರು ವಾಹನಗಳನ್ನು ಕಾರಟಗಿ-– ಗಂಗಾವತಿ, ಆನೆಗೊಂದಿ–- ಕೇಸರಹಟ್ಟಿ ಮತ್ತು ಕಂಪ್ಲಿ-– ದಾಸನಾಳ ಮಧ್ಯೆ ಓಡಿಸಲಾಗುತ್ತಿದೆ. ಸಾರ್ವಜನಿಕರ ಅನುಕೂಲಕ್ಕೆ ನಗರದ ಒಳಭಾಗದ ರಸ್ತೆ, ವೃತ್ತ ಬಳಸಿ ವಾಹನಗಳನ್ನು ಓಡಿಸಲಾಗುತ್ತಿದೆ.
ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕನಿಷ್ಠ ಎರಡು ಲಕ್ಷ ಜನಸಂಖ್ಯೆ ಇರಬೇಕು. ಇಲ್ಲವೇ ನಗರದ ಕೇಂದ್ರ ಭಾಗದಿಂದ ಸುತ್ತಲೂ ಕನಿಷ್ಠ ಹತ್ತು ಕಿ.ಮೀ. ವಿಸ್ತಾರದಲ್ಲಿ ಜನಸಾಂದ್ರತೆ ಇದ್ದರೆ ಮಾತ್ರ ಸಿಟಿ ಬಸ್‌ಗೆ ಹೆಚ್ಚುಪ್ರಾಶಸ್ತ್ಯ ಲಭಿಸುತ್ತದೆ. 

ಮಾನದಂಡವಿಲ್ಲದೆ ನಗರ ಸಾರಿಗೆ ಆರಂಭಿಸಿರುವ ಪರಿಣಾಮ ಕಾರ್ಯಾಚರಣೆ ಸ್ಥಗಿತವಾಗಿದೆ ಎಂದು ಇಲಾಖೆಯ ಸಿಬ್ಬಂದಿಯೊಬ್ಬರು ತಿಳಿಸಿದರು. ಚಾಲಕರು ಸೇರಿದಂತೆ ಇತರ ಸೌಲಭ್ಯ ನೀಡದೆ ನಗರ ಸಾರಿಗೆ ಆರಂಭಿಸುವ ಅಗತ್ಯ ಏನಿತ್ತು ಎಂದು ನಿವಾಸಿ ಜಾವಿದ್ ಹುಸೇನ್‌ ಜಾಗೀರದಾರ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT