ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗುವೆಂಬ ಒಡವೆ ತೊಟ್ಟು...

Last Updated 1 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

‘ಸೌಂದರ್ಯವೆಂದರೆ ಹೆಣ್ಣು. ಆದರೆ ಆ ಸೌಂದರ್ಯವನ್ನು ಪ್ರೆಸೆಂಟ್ ಮಾಡಲು ಜೊತೆಯಾಗುವುದೇ ಒಡವೆ ಎಂಬ ಗೆಳತಿ’ ಎಂದು ತಾವು ತೊಟ್ಟಿದ್ದ ದೊಡ್ಡ ದೊಡ್ಡ ಚಿನ್ನದ ಆಭರಣಗಳನ್ನು ತೋರಿಸುತ್ತಿದ್ದರು ನಟಿ ಅನು ಪ್ರಭಾಕರ್. ಈ ಬಾರಿಯ ‘ಜ್ಯುವೆಲ್ಸ್ ಆಫ್ ಇಂಡಿಯಾ’ ಪ್ರದರ್ಶನಕ್ಕೆ ನಟಿಯರಾದ ಅನು ಪ್ರಭಾಕರ್ ಹಾಗೂ ಪ್ರಣೀತಾ ರಾಯಭಾರಿಯಾಗಿದ್ದಾರೆ. ಈ ಕುರಿತು ಮಾತನಾಡಲು ಬಂದಿದ್ದ ನಟಿ ಅನು ಪ್ರಭಾಕರ್ ತಮ್ಮ ಸಹಜ, ಸುಂದರ ನಗುವಿನೊಂದಿಗೆ ಒಡವೆ ಒಡನಾಟಗಳ ಕುರಿತೂ ಚರ್ಚಿಸಿದರು.

ಒಡವೆಗಳ ಒಡನಾಟವೆಂದರೆ...
ಚಿನ್ನ ಎನ್ನುವ ಪದವೇ ಚೆನ್ನ. ಅದು ಆಪ್ತ ಹಾಗೂ ಅಮೂಲ್ಯ ಎಂಬುದರ ಸಂಕೇತ. ಚಿನ್ನ ಮೆಚ್ಚದವರುಂಟೇ? ಎಲ್ಲ ಹೆಣ್ಣು ಮಕ್ಕಳಂತೆ ನನಗೂ ಒಡವೆಗಳೆಂದರೆ ತುಂಬಾ ಇಷ್ಟ. ಚಿನ್ನವನ್ನು ಕೇವಲ ಒಡವೆಯಾಗಿ ಇಷ್ಟಪಡುವುದಿಲ್ಲ, ಅದು ಪರಂಪರೆ ಹಾಗೂ ಬಳುವಳಿಯಾಗಿ ಬಂದ ಬಾಂಧವ್ಯವೂ ಹೌದು.

ಜ್ಯುವೆಲ್ಸ್ ಆಫ್ ಇಂಡಿಯಾ ರಾಯಭಾರಿಯಾಗಿದ್ದೀರಿ. ಏನೆನ್ನಿಸುತ್ತಿದೆ...
ಜ್ಯುವೆಲ್ಸ್ ಆಫ್ ಇಂಡಿಯಾದ್ದು ಈ ಬಾರಿ 16ನೇ ಪ್ರದರ್ಶನ. 2005ರಲ್ಲಿ ನಾನು ಇದನ್ನು ಉದ್ಘಾಟಿಸಿದ್ದೆ. ಈ ಬಾರಿ ರಾಯಭಾರಿಯಾಗಿದ್ದೇನೆ.  ತುಂಬಾ ಖುಷಿ ಎನಿಸಿದೆ. ಪ್ರದರ್ಶನದಲ್ಲಿರುವ ಎಲ್ಲ ಬಗೆಯ ಒಡವೆಗಳನ್ನು ಧರಿಸುವ ಅವಕಾಶ ನನ್ನದು. ತುಂಬಾ ಚೆನ್ನಾಗಿ ಕಾಣುತ್ತಿದ್ದೀಯ ಅಂತ ಎಲ್ಲರೂ ಪ್ರಶಂಸೆ ಕೊಟ್ಟಿದ್ದಾರೆ.

ನಿಮ್ಮ ಮನ ಮೆಚ್ಚಿದ ಒಡವೆ...
ಹೋದಲೆಲ್ಲಾ ಜುಮುಕಿ, ಮೂಗುಬೊಟ್ಟುಗಳನ್ನು ಸಂಗ್ರಹಿಸುತ್ತೇನೆ. ಅದರ ಬಗ್ಗೆ ನನಗೆ ತುಂಬಾ ಕ್ರೇಝ್ ಇದೆ. ಎಲ್ಲೇ ಹೋದರೂ ಹೊಸ ವಿನ್ಯಾಸಕ್ಕಾಗಿ ತಡಕಾಡುತ್ತೇನೆ. ಅಥವಾ ನನಗೇ ವಿನ್ಯಾಸ ಹೊಳೆದರೆ ಹೇಳಿ ಮಾಡಿಸಿಕೊಳ್ಳುತ್ತೇನೆ. ಸರಳ, ಸುಂದರವಾಗಿ ಕಾಣುವಂಥ ಆಭರಣಗಳು ನನಗಿಷ್ಟ. ವಯಸ್ಸಿಗೆ ತಕ್ಕಂತೆ ಆದ್ಯತೆಗಳೂ ಬದಲಾಗುತ್ತವೆ. ಮೊದಲು ಟ್ರೆಂಡಿ ಒಡವೆಗಳನ್ನು ಇಷ್ಟಪಡುತ್ತಿದ್ದೆ ಈಗೀಗ ಸಾಂಪ್ರದಾಯಿಕ ಮತ್ತು ಆ್ಯಂಟಿಕ್ ಲುಕ್ ನೀಡುವ ಒಡವೆಗಳನ್ನು ತುಂಬಾ ಇಷ್ಟಪಟ್ಟು ಕೊಂಡುಕೊಳ್ಳುತ್ತೇನೆ. ಇದು ನೋಡಲು ಚೆನ್ನಾಗಿರುವುದಲ್ಲದೇ, ಧರಿಸಿದರೂ ಒಂದು ಲುಕ್ ಇರುತ್ತದೆ.

ಹೆಣ್ಣಿಗೆ ಚಿನ್ನ ಎಷ್ಟು ಮುಖ್ಯ?
ಹೆಣ್ಣಿನ ಅಂದವನ್ನು ಇಮ್ಮಡಿಗೊಳಿಸುವುದೇ ಈ ಚಿನ್ನ. ಇದು ಬರೀ ಆಭರಣವಲ್ಲ, ಕೂಡಿಟ್ಟ ಹಣದಂತೆ. ಕಷ್ಟಕಾಲಕ್ಕೂ ಆಗಿಬರುವುದರಿಂದ ಇದರಲ್ಲಿ ಬಂಡವಾಳ ಹೂಡಿದರೆ ಒಳ್ಳೆಯದು. ವಯಸ್ಸು ಎಷ್ಟೇ ಇರಲಿ, ಚಿನ್ನದ ಒಡನಾಟ ಜೀವನವಿಡೀ ಒಂದಲ್ಲಾ ಒಂದು ರೀತಿ ಇದ್ದೇ ಇರುತ್ತದಲ್ಲವೇ? ಆದ್ದರಿಂದ ಚಿನ್ನ ತುಂಬಾ ಮುಖ್ಯ.

ಜ್ಯುವೆಲ್ಸ್ ಆಫ್ ಇಂಡಿಯಾ ಪ್ರದರ್ಶನದ ಬಗ್ಗೆ...
ಆಭರಣ ಕೊಂಡುಕೊಳ್ಳಬೇಕಾದರೆ ಎಷ್ಟೋ ಅಂಗಡಿಗಳನ್ನು ತಿರುಗಬೇಕಾಗುತ್ತದೆ. ನಿಶ್ಚಿತಾರ್ಥ, ಮದುವೆ ಯಾವುದೇ ಶುಭ ಸಮಾರಂಭಕ್ಕೆ ವಿಭಿನ್ನ ಒಡವೆಗಳನ್ನು ಹುಡುಕುತ್ತಾ ಕೊನೆಗೆ ಯಾವುದೋ ಒಂದನ್ನು ಆರಿಸಿಕೊಳ್ಳುವ ಅನಿವಾರ್ಯತೆ ಇರುತ್ತದೆ. ಆದರೆ ಒಂದೇ ಸೂರಿನಲ್ಲಿ ಇಲ್ಲಿ ಎಲ್ಲ ರೀತಿಯ, ವಿನ್ಯಾಸದ ಆಭರಣಗಳೂ ಸಿಗುತ್ತವೆ. ಆಯ್ಕೆ, ಹೋಲಿಕೆಗೆ ಇಲ್ಲಿ ಅವಕಾಶ ಹೆಚ್ಚು. ದೇಶದ ನಾನಾ ಕಡೆಯ ನೂರಾ ಹತ್ತಕ್ಕೂ ಹೆಚ್ಚು ಮಳಿಗೆಗಳು ಇಲ್ಲಿರಲಿವೆ. ಅಕ್ಟೋಬರ್ 10 ರಿಂದ 13ರವರೆಗೆ ಕಂಠೀರವ ಕ್ರೀಡಾಂಗಣದ ಸಮೀಪದಲ್ಲಿರುವ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲಿನ ಆವರಣದಲ್ಲಿ ನಡೆಯಲಿದೆ.

ಯಾವ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದೀರಿ?
ಸದ್ಯಕ್ಕೆ ಫೇರ್‌ ಅಂಡ್‌ ಲವ್ಲಿ ಚಿತ್ರದಲ್ಲಿ ಅಭಿನಯಿಸಿದ್ದು, ಸ್ವಲ್ಪ ದಿನಗಳಲ್ಲೇ ಬಿಡುಗಡೆಯಾಗಲಿದೆ. ‘ಅಕ್ಕ ಮಹಾದೇವಿ’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಅಕ್ಕ ಮಹಾದೇವಿ ಕುರಿತು ಸಂಶೋಧನೆಯಲ್ಲಿ ತೊಡಗಿಕೊಂಡ ಜ್ಯೋತಿ ಎಂಬ ಹುಡುಗಿ ಪಾತ್ರ ನನ್ನದು. ಜ್ಯೋತಿಗೂ, ಅಕ್ಕ ಮಹಾದೇವಿಯ ಜೀವನಕ್ಕೂ ಇರುವ ಹೋಲಿಕೆಗಳನ್ನು ಈ ಚಿತ್ರ ತೆರೆದಿಡಲಿದೆ. ನನ್ನ ಮೆಚ್ಚಿನ ಪಾತ್ರ ಇದು.
ಹೆಣ್ಣಿಗೆ ಒಡವೆಯ ಹೊರತು ತುಂಬಾ ಮುಖ್ಯವಾದದ್ದು...  ನಗುವೆಂಬ ಒಡವೆ. ಅದು ಮುಖದ ಮೇಲಿದ್ದಷ್ಟೂ ಅಂದ ಹೆಚ್ಚು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT