ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗೆಪಾಟಲು... ನಾಚಿಕೆಗೇಡು

Last Updated 9 ಜೂನ್ 2014, 19:30 IST
ಅಕ್ಷರ ಗಾತ್ರ

ಇದು ನಗೆಪಾಟಲು. ಅದಕ್ಕಿಂತ ಹೆಚ್ಚಾಗಿ ನಾಚಿಕೆಗೇಡು. ಮಂಗಳೂರು ಕಾರಾಗೃಹದ ಒಳಗೆ ಕೈದಿಗಳ ಗುಂಪೊಂದು ಸಹಾಯಕ ಪೊಲೀಸ್‌ ಕಮಿಷನರ್‌, ಇನ್‌ಸ್ಪೆಕ್ಟರ್‌ ಮತ್ತು  ಕಾನ್‌ಸ್ಟೆಬಲ್‌ಗಳ ಮೇಲೆ ಕೈ ಮಾಡಿ ಗಾಯ­ಗೊಳಿಸಿದ್ದನ್ನು ಇದಕ್ಕಿಂತ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಲು ಸಾಧ್ಯ­ವಿಲ್ಲ.

ಈ ಪ್ರಸಂಗ ನಮ್ಮ ಪೊಲೀಸರ ‘ಕೌಶಲ, ಕಾರ್ಯತತ್ಪರತೆ, ಸಮಯ­ಪ್ರಜ್ಞೆ’ ಬಗ್ಗೆಯೇ ಅಪನಂಬಿಕೆ ಹುಟ್ಟುಹಾಕಿದೆ. ಇಲ್ಲಿ ಇನ್ನೊಂದು ಆಘಾತದ ಅಂಶವೂ ಇದೆ. ಜೈಲಿನ ಬ್ಯಾರಕ್‌ನಲ್ಲಿ ಗಲಾಟೆ ನಡೆದಾಗ ಇದ್ದ ಕೈದಿಗಳ ಸಂಖ್ಯೆ 28. ಅವರನ್ನು ಹದ್ದುಬಸ್ತಿನಲ್ಲಿ ಇಡಲು ಸಮವಸ್ತ್ರದಲ್ಲಿ ಹೋದ ಪೊಲೀಸರು 30. ಇವರಲ್ಲಿ 20 ಪೊಲೀಸರು ಏಟು ತಿಂದಿದ್ದಾರೆ.

ಕೈದಿಗಳು ಹಲ್ಲೆ ಮಾಡುತ್ತಿದ್ದರೆ ಅದನ್ನು ತಡೆದು ಆತ್ಮರಕ್ಷಣೆ ಮಾಡಿಕೊಳ್ಳಲು ಈ  ಪೊಲೀಸರ ಕೈಯಲ್ಲಿ ಲಾಠಿ ಕೂಡ ಇರಲಿಲ್ಲ ಎಂದು ವರದಿಯಾಗಿದೆ.  ನಾಲ್ಕು ಗೋಡೆಗಳ ಮಧ್ಯೆ ತಮಗಿಂತ ಕಡಿಮೆ ಸಂಖ್ಯೆಯಲ್ಲಿದ್ದ ಕೈದಿಗಳ ಅಟಾಟೋಪ ನಿಯಂತ್ರಿಸದೇ ಸೋತು ಅವರ ಕೈಯಲ್ಲಿಯೇ ಏಟು ತಿನ್ನುವ, ಕಡೇ ಪಕ್ಷ ಲಾಠಿ ಕೂಡ ಇಟ್ಟುಕೊಳ್ಳದ ಇಂಥ ಪೊಲೀಸರು ಜನ­ಸಾಮಾನ್ಯ­ರಿಗೆ ಯಾವ ರೀತಿಯ ರಕ್ಷಣೆ ಕೊಟ್ಟಾರು ಎಂಬ ಪ್ರಶ್ನೆ ಮೂಡುತ್ತದೆ. 

ಪುಂಡ ಕೈದಿಗಳು ಜೈಲಿನ ಟಿ.ವಿ. ಪುಡಿ ಮಾಡಿ ಅದರ ಗಾಜುಗಳನ್ನು, ಜೈಲಿನ ಅಡುಗೆ ಮನೆಯಲ್ಲಿದ್ದ ಮೆಣಸಿನ ಪುಡಿ, ಮೊಟ್ಟೆ, ತಟ್ಟೆಗಳನ್ನು ಪೊಲೀಸರ ಮೇಲೆ ಪ್ರಯೋಗಿಸಿದ್ದಾರೆ. ಇಲ್ಲಿ ಜೈಲಿನ ಸಿಬ್ಬಂದಿಯ ಅದಕ್ಷತೆಯೂ ಎದ್ದು ಕಾಣುತ್ತದೆ. ಅಡುಗೆ ಮನೆ ಸಾಮಗ್ರಿಗಳು ಕೈದಿಗಳ ಕೈಯಲ್ಲಿ ಅಸ್ತ್ರವಾಗ­ಬಹುದು ಎಂಬುದನ್ನು ಊಹಿಸುವಲ್ಲಿ ಅವರು ವಿಫಲರಾಗಿದ್ದಾರೆ.

ಅಷ್ಟಕ್ಕೂ ಹೆಚ್ಚಾಗಿ ಮಂಗಳೂರಿನಿಂದ ಧಾರವಾಡ ಜೈಲಿಗೆ ಹೋಗಲು ಕೈದಿಗಳು ವಿರೋಧಿಸುವುದರ ಮರ್ಮ ಏನು? 
ಇದನ್ನೆಲ್ಲ ನೋಡಿದರೆ ರಾಜ್ಯದಲ್ಲಿ ಕಾಯ್ದೆ ಮತ್ತು ಸುವ್ಯವಸ್ಥೆ ಕುಸಿಯು­ತ್ತಿದೆ, ಇಂಥ ಸಂದರ್ಭವನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಪೊಲೀಸರಿಗೆ ಸರಿಯಾದ ಮಾರ್ಗದರ್ಶನ ಸಿಗುತ್ತಿಲ್ಲ ಎಂಬ ಶಂಕೆ ಮೂಡುತ್ತದೆ.

ಒಂದು ಕಡೆಯಿಂದ ಇನ್ನೊಂದು ಕಡೆ ಕರೆದುಕೊಂಡು ಹೋಗುವಾಗ ಕಾವಲು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, ಹಲ್ಲೆ ನಡೆಸಿ ಕೈದಿಗಳು ಪರಾರಿಯಾದ ಸಾಕಷ್ಟು ಘಟನೆಗಳು ಹಿಂದೆ ನಡೆದಿವೆ. ಆದರೆ ಕಂಬಿ ಹಿಂದಿರುವ ಕೈದಿಗಳು ತಮಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರ ಮೇಲೆ ನಿರ್ಭಯವಾಗಿ ಹಲ್ಲೆ ಮಾಡುತ್ತಾರೆ ಎನ್ನುವುದು ಅಪರೂಪ.

ಮಂಗಳೂರು ಜೈಲಿನ ಈ ಪ್ರಕರಣದಲ್ಲಿ ಕೈದಿಗಳ ತಪ್ಪು ಎಷ್ಟಿದೆಯೋ ಅದಕ್ಕಿಂತ ದೊಡ್ಡ ತಪ್ಪು ಅವರ ತಾಕತ್ತನ್ನು ಸರಿಯಾಗಿ ಅಂದಾಜು ಮಾಡದೆ ನುಗ್ಗಿ ಏಟು ತಿಂದ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯದು. ಇವರು ದೌರ್ಬಲ್ಯ ಪ್ರದರ್ಶಿಸಿ ಇಡೀ ಇಲಾಖೆ ತಲೆತಗ್ಗಿಸುವಂತೆ ಮಾಡಿದ್ದಾರೆ.  ಇದು ಸಣ್ಣ ಪ್ರಕರಣ ಎಂದು ಮೇಲಧಿಕಾರಿಗಳು ತಾತ್ಸಾರ ಮಾಡಬಾರದು.

ಕೈದಿಗಳ ವರ್ತನೆ ಬಗ್ಗೆ ತನಿಖೆ ಮಾಡುವುದರ ಜತೆಗೆ ನಿರಾಯುಧರಾಗಿ ಹೋದ ಪೊಲೀಸರ ನಡವಳಿಕೆ­ಯನ್ನೂ ವಿಮರ್ಶೆಗೆ ಒಳಪಡಿಸಬೇಕು. ಜೈಲಿನ ಒಳಗೂ ಪುಂಡಾ­ಟಿಕೆ ನಡೆಸ­ಬಹುದು ಎಂಬ ದಾರ್ಷ್ಟ್ಯವನ್ನು ಮೂಲದಲ್ಲೇ ಚಿವುಟಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT