ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗೆಮಲ್ಲಿಗೆ... ಅಲ್ಲಿಂದಿಲ್ಲಿಗೆ...

Last Updated 15 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಪಡ್ಡೆ ಹುಡುಗರ ತುಂಟಾಟಗಳನ್ನು ಮುಖ್ಯ ವಸ್ತುವಾಗಿ ಇಟ್ಟು­ಕೊಂಡು ಮಾಡುವ ಸಿನಿಮಾಗಳು ಮನರಂಜನೆಯ ಚೌಕಟ್ಟನ್ನು ದಾಟು­ವುದಿಲ್ಲ. ರಂಜನೆ ಒದಗಿಸಲು ನಾಲ್ಕಾರು ಹಾಡು, ಹೊಡೆದಾಟ, ಐಟಂ ಸಾಂಗ್‌ನಂಥ ತಂತ್ರಕ್ಕೆ ನಿರ್ದೇಶಕರು ಮೊರೆ ಹೋಗು­ವುದು ಮಾಮೂಲು. ನಂದಕಿಶೋರ್‌ ನಿರ್ದೇಶನದ ‘ಶರಣ್‌ ಅಧ್ಯಕ್ಷ’ ಚಿತ್ರದಿಂದ ಇದಕ್ಕಿಂತ ಹೆಚ್ಚೇನೂ ನಿರೀಕ್ಷಿಸುವಂತಿಲ್ಲ.

ಕಳೆದ ವರ್ಷ ತಮಿಳಿನಲ್ಲಿ ತೆರೆ ಕಂಡ ‘ವರುದಪಡತ ವಾಲಿಬರ್ ಸಂಘಂ’ ಚಿತ್ರದ ರೀಮೇಕ್‌ ಇದು. ಕಥೆಯನ್ನು ಅಲ್ಲಿನ ಪಾತ್ರಗಳನ್ನೂ ಯಥಾವತ್ತಾಗಿ ಎತ್ತಿಕೊಂಡು ಕನ್ನಡಕ್ಕೆ ತಂದಿರುವ ನಂದಕಿಶೋರ್‌, ಸಂಯೋಜಿಸಿದ ದೃಶ್ಯಗಳಲ್ಲಿ ಕೂಡ ಮೂಲ ಸಿನಿಮಾಕ್ಕೆ ಹೆಚ್ಚು ನಿಷ್ಠೆ ತೋರಿದ್ದಾರೆ. ಹಳ್ಳಿ ಹೈದರ ಸಂಘವೊಂದರ ಅಧ್ಯಕ್ಷನ ಹುಡುಗಾಟಗಳು, ಆತ ಪ್ರೀತಿಯ ಬಲೆಯಲ್ಲಿ ಸೆರೆಯಾದಾಗ ಅನುಭವಿಸುವ ತಾಪತ್ರಯಗಳು ಎರಡು ವಿಭಿನ್ನ ಛಾಯೆಗಳಲ್ಲಿ ತೆರೆದುಕೊಳ್ಳುತ್ತವೆ. ಊರ ಗೌಡನ ಮಗಳನ್ನು ಪ್ರೀತಿಸುವ ನಾಯಕ, ಆಗಾಗ್ಗೆ ಮಾಡುವ ತಂತ್ರಗಳು ಕಾಮಿಡಿ ನೆಲೆಯಲ್ಲೇ ಬಂದುಹೋಗುತ್ತವೆ.

ಈ ನಿಟ್ಟಿನಿಂದ ನೋಡಿದಾಗ ಇಡೀ ಸಿನಿಮಾ ಹಾಸ್ಯದ ಔತಣದಂತೆ ಕಾಣುತ್ತದೆ. ಫ್ಲ್ಯಾಶ್‌ಬ್ಯಾಕ್‌ನೊಂದಿಗೆ ಆರಂಭವಾಗುವ ಚಿತ್ರ, ಕೊನೆಯ ಭಾಗಕ್ಕೆ ಬರುತ್ತಲೇ ಮನಬಂದಂತೆ ಹೊರಳಿ ಮತ್ತದೇ ತಮಾಷೆ ಟ್ರ್ಯಾಕ್‌ಗೆ ಬಂದು ಮುಕ್ತಾಯವಾಗುತ್ತದೆ. ಚಿ.ತು. ಸಂಘ– ಅಂದರೆ ಚಿಂತೆಯಿಲ್ಲದ ತುಂಡ್‌ಹೈಕ್ಳ ಸಂಘದ ಅಧ್ಯಕ್ಷ ಶರಣ್ ಇಡೀ ಸಿನಿಮಾವನ್ನು ಆವರಿಸಿಕೊಳ್ಳುವ ಯತ್ನ ಮಾಡಿದ್ದಾರೆ. ತಮ್ಮದೇ ವಿಶಿಷ್ಟ ಹಾವಭಾವಗಳಲ್ಲಿ ಸಾಕಷ್ಟು ನಗೆಯುಕ್ಕಿಸುತ್ತಾರೆ. ಚಿತ್ರದೊಳಗಿನ ಕಥೆ ಹಾಗೂ ಅಭಿನಯದಲ್ಲಿ ಶರಣ್‌ ಏಕಸ್ವಾಮ್ಯ ಮುರಿಯುವ ಉಪಾಧ್ಯಕ್ಷನ ಪಾತ್ರ ಚಿಕ್ಕಣ್ಣ ಅವರದು. ಇವರಿಬ್ಬರಿಗೆ ಸರಿಸಮನಾಗಿ ಅಬ್ಬರಿಸುವ ಗೌಡನಾಗಿ ರವಿಶಂಕರ್ ಅವತರಿಸಿದ್ದಾರೆ.

ಆಕ್ರೋಶದಿಂದ ಬುಸುಗುಡುವ ಗೌಡ ಕೊನೆಕೊನೆಗೆ ತಮಾಷೆ ಮಾಡುತ್ತ ಎಲ್ಲರನ್ನು ನಗಿಸುತ್ತಾನೆ. ಇದನ್ನು ನೋಡಿದರೆ ಹಾಸ್ಯನಟನಾಗಿಯೂ ಅವರಿಗೆ ಒಳ್ಳೆಯ ಭವಿಷ್ಯವಿದೆ! ಇವರೆಲ್ಲರ ಮಧ್ಯೆ ನಾಯಕಿ ರಕ್ಷಾ ಆಟಕ್ಕುಂಟು ಲೆಕ್ಕಕ್ಕಿಲ್ಲ. ಪ್ರಶಾಂತ್ ಚುರುಕು ಸಂಭಾಷಣೆಯೇ ಚಿತ್ರದ ಜೀವಾಳ. ಭೇದ–ಭಾವ ಮಾಡದೇ ಎಲ್ಲ ಪಾತ್ರಗಳಿಗೂ ಒಳ್ಳೊಳ್ಳೆಯ ಸಂಭಾ­ಷಣೆ ಹಂಚಿಕೆ ಮಾಡಿದ್ದಾರೆ. ಹಾಡುಗಳಿಗೆ ಹಾಕಿದ ರಂಗು­ರಂಗಾದ ಸೆಟ್‌ಗಳನ್ನು ಸುಂದರವಾಗಿ ತೋರಿಸಿರುವ ಛಾಯಾ­ಗ್ರಾಹಕ ಸುಧಾಕರ್, ಹೊರಾಂಗಣ ದೃಶ್ಯ ಸೆರೆಹಿಡಿ­ಯುವಲ್ಲಿ ಸೋತಿದ್ದಾರೆ. ಅರ್ಜುನ್‌ ಜನ್ಯ ಸಂಗೀತದ ಹಾಡುಗಳು ಮೆಲುಕು ಹಾಕುವಂತಿವೆ. ರೂಪಶ್ರೀ ಅಭಿನಯದ ‘ವಿಶೇಷ ಹಾಡು’ ಸಭ್ಯತೆಯ ಎಲ್ಲೆ ಮೀರುವಷ್ಟರಲ್ಲೇ, ರವಿಶಂಕರ್ ಧಾವಿಸಿ ತಾವೂ ಹೆಜ್ಜೆ ಹಾಕುತ್ತಾರೆ. ಹೀಗೆ ಮೊದಲ ಬಾರಿಗೆ ಸೊಂಟ ಬಳುಕಿಸಿ ಅವರಿಂದ ಡಾನ್ಸ್ ಮಾಡಿಸಿರುವುದು ನಂದಕಿಶೋರ್‌ ಹೆಗ್ಗಳಿಕೆ!

ಊರ ಗೌಡನ ಮಗಳನ್ನು ಸಾಮಾನ್ಯ ಹುಡುಗನೊಬ್ಬ ಪ್ರೀತಿಸಿ, ಪಡಬಾರದ ಕಷ್ಟ ಅನುಭವಿಸಿ ಕೊನೆಗೆ ‘ಶುಭಂ’ ಆಗುವ ಸಿನಿಮಾ ಎಷ್ಟೋ ಬಂದು ಹೋಗಿವೆ. ಈ ಸಾಮಾನ್ಯ ಕಥೆಗೆ ವಿಭಿನ್ನ ಆಯಾಮಗಳನ್ನು ಸೇರಿಸಿ ತಯಾರಿಸಿದ ಸಿನಿಮಾವನ್ನು ರೀಮೇಕ್‌ ಮಾಡುವ ಮುನ್ನ ನಿರ್ದೇಶಕ ನಂದಕಿಶೋರ್ ಹೆಚ್ಚೇನೂ ಶ್ರಮಿಸಿಲ್ಲ. ಪಕ್ಕಾ ಮನರಂಜನೆ ಸಿನಿಮಾ ಕೊಡುವಷ್ಟಕ್ಕೇ ಅವರ ಪ್ರಯತ್ನ ಸೀಮಿತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT