ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟನಾ ಪಯಣದಲ್ಲಿ ಕಾರ್ತಿಕ್‌ ಸಮಗ್‌

Last Updated 3 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಸಿನಿಮಾ ನಾಯಕನಾಗಬೇಕೆಂದು ನಾಲ್ಕನೇ ತರಗತಿಯಲ್ಲೇ ಗುಂಗು ಹತ್ತಿಸಿಕೊಂಡು ತನಗೆ ತಾನೇ ನಾಯಕನಂತೆಯೇ ‘ಬಿಲ್ಡಪ್’ ಕೊಟ್ಟುಕೊಳ್ಳುತ್ತ, ತರಗತಿಯಲ್ಲಿ ಸ್ನೇಹಿತರಿಗೆಲ್ಲ ತಾನು ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್, ನನ್ನ ಸುದ್ದಿಗೆ ಬಂದರೆ ಚೆನ್ನಾಗಿರಲ್ಲ ಹಾಗೆ ಹೀಗೆ ಎಂದೆಲ್ಲ ಸುಳ್ಳೇ ಪೋಸ್ ಕೊಟ್ಟುಕೊಳ್ಳುತ್ತಿದ್ದ ಹುಡುಗ ಕಾರ್ತಿಕ್ ಸಮಗ್ ಆಗಲೇ ಹಲವಾರು ನಟರನ್ನು ಅನುಸರಿಸುವುದನ್ನು ರೂಢಿಸಿಕೊಂಡಿದ್ದರು.

ಸಿನಿಮಾ ಉದ್ಯಮಕ್ಕೆ ಬರಲೇಬೇಕೆಂಬ ಹಂಬಲ ಮತ್ತು ಇಲ್ಲಿಗೆ ಬಂದ ಮೇಲೆ ‘ಇವನಿಗೆ ಏನೂ ಗೊತ್ತಿಲ್ಲ’ ಎಂದು ಹಿನ್ನಡೆಯಾಗಬಾರದೆಂಬ ಕಾರಣಕ್ಕೆ ತಾನು ಮೊದಲು ಹೇಳಿದ್ದ ಎಲ್ಲ ಸುಳ್ಳುಗಳನ್ನು ಒಂದೊಂದಾಗಿ ನಿಜವಾಗಿಸಿಕೊಳ್ಳುತ್ತ ಬಂದರು ಕಾರ್ತಿಕ್. ಸಿನಿಮಾಕ್ಕೆ ಏನೆಲ್ಲ ಅವಶ್ಯವಿದೆ ಎಂಬುದನ್ನು ತಿಳಿವ ಆಸಕ್ತಿ ಮತ್ತು ಅದನ್ನು ಸಾಧಿಸಿಕೊಳ್ಳುವ ಪರಿಶ್ರಮವೇ ಇಂದು ಅವರಿಗೆ ನಾಯಕನ ಪಟ್ಟವನ್ನು ತಂದುಕೊಟ್ಟಿದೆ ಎಂದರೆ ಸುಳ್ಳಲ್ಲ.

ಕಿರುತೆರೆಯ ಅವಕಾಶ...
ಉಡುಪಿಯಲ್ಲಿ ಶಿಕ್ಷಣ ಮುಗಿಸಿದ ಕಾರ್ತಿಕ್ ಎಂ.ಕಾಂ ಪದವೀಧರರು. ಕಾಲೇಜಿನಲ್ಲಿದ್ದಾಗಲೇ ‘ಕಂಚಿಂದ ಬಾಲೆ’ ಎಂಬ ತುಳು ಚಿತ್ರಕ್ಕೆ ಕಲಾ ನಿರ್ದೇಶನ ಮಾಡಿದ್ದ ಕಾರ್ತಿಕ್ ಉದ್ಯಮದ ಸಂಪರ್ಕ ಬೆಳೆಸಿಕೊಂಡರು. ಅದರ ಫಲವಾಗಿ ಶಿವಧ್ವಜ್ ಶೆಟ್ಟಿ ಎಂಬುವವರ ಕೊಡವ ಚಿತ್ರವೊಂದಕ್ಕೆ ಆಯ್ಕೆಯಾದರು. ದುರಾದೃಷ್ಟವೆಂದರೆ ‘ಕಂಚಿಂದ ಬಾಲೆ’ಯಲ್ಲಿನ ಅಹೋರಾತ್ರಿ ಕೆಲಸದ ಪರಿಣಾಮವಾಗಿ ಒಂದೇ ತಿಂಗಳಲ್ಲಿ ಹತ್ತು ಕೆಜಿಯಷ್ಟು ತೂಕ ಇಳಿದುಹೋದ ಕಾರ್ತಿಕ್‌ಗೆ ಆ ಅವಕಾಶ ಕೈ ತಪ್ಪಿತು. ಕಲಾವಿದನಾಗಿ ಅಲ್ಲದಿದ್ದರೂ ಚಿತ್ರ ತಂಡದಲ್ಲಿ ಯಾವುದಾದರೂ ಕೆಲಸ ಸಿಕ್ಕರೆ ಸಾಕು ಎಂದುಕೊಂಡ ಅವರು ಅಲ್ಲಿಯೂ ಕಲಾ ನಿರ್ದೇಶಕನಾಗಿಯೇ ದುಡಿದರು. ಇವರ ಆಸಕ್ತಿಯನ್ನು ಕಂಡ ಶಿವಧ್ವಜ್ ಧಾರಾವಾಹಿ ನಿರ್ದೇಶಕ ರವಿ ಗರಣಿ ಅವರ ಬಳಿ ಕಳುಹಿಸಿಕೊಟ್ಟರು. ಗರಣಿ ಅವರ ‘ಕೃಷ್ಣ ರುಕ್ಮಿಣಿ’ ಧಾರಾವಾಹಿಗೆ ಕ್ಯಾಷಿಯರ್ ಆದ ಕಾರ್ತಿಕ್‌ಗೆ ಮುಂದೆ ಗರಣಿ ಅವರದೇ ‘ಅರಗಿಣಿ’ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿತು. ಈ ಬಿಡುವಿನಲ್ಲಿ ‘ಗುರುರಾಘವೇಂದ್ರ ವೈಭವ’, ‘ಪ್ರೀತಿಯಿಂದ’ ಧಾರಾವಾಹಿಗಳಲ್ಲೂ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದರು.
‘ಅರಗಿಣಿ’ಯ ಅಭಿನಯದಿಂದಾಗಿ ಸೀತಾರಾಂ ಭಟ್ ಅವರ ಪರಿಚಯವಾಗಿ ಅವರ ಮೊದಲ ನಿರ್ದೇಶನದ ‘ಡೈನಮಿಕ್’ ಚಿತ್ರಕ್ಕೆ ನಾಯಕನಾದರು.

ಖಳನಿಂದ ನಾಯಕನವರೆಗೆ...
‘ಅರಗಿಣಿ’ಯಲ್ಲಿ ನೆಗೆಟಿವ್ ಶೇಡ್ ಇರುವ ಪಾತ್ರ ಮಾಡಿದ್ದ ಕಾರ್ತಿಕ್‌ಗೆ, ಈ ಪಾತ್ರಕ್ಕೆ ತಾನು ಸರಿಹೊಂದುತ್ತೇನಾ ಎಂಬ ಪ್ರಶ್ನೆಯಿತ್ತು. ಆದರೆ ಅದು ಅಂಥ ಕಷ್ಟವೇನೂ ಆಗಲಿಲ್ಲವಂತೆ. ನೋಡೋಕೆ ಚಾಕಲೇಟ್ ಹೀರೊ ಥರ ಕಾಣುವ ಕಾರ್ತಿಕ್ ಮೊದಲ ಚಿತ್ರ ‘ಡೈನಾಮಿಕ್’ನಲ್ಲೂ ‘ರಫ್ ಅಂಡ್ ಟಫ್’ ಪಾತ್ರವೇ.

ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂಬುದು ಕಾರ್ತಿಕ್ ಆಸೆ. ಆದರೆ ನಾಯಕನಿಗೆ ಸಿಕ್ಕಷ್ಟು ಪ್ರಚಾರ ಬೇರೆಯವರಿಗೆ ಸಿಗುವುದಿಲ್ಲ ಎಂಬ ಕಾರಣಕ್ಕೆ ನಾಯಕನೇ ಆಗಬೇಕು ಎಂದು ಹಂಬಲಿಸಿದರು. ವಿಲನ್ ಪಾತ್ರಕ್ಕೂ ಹೆಚ್ಚಿನ ಮಹತ್ವ ಇರುತ್ತದಾದ್ದರಿಂದ ಆ ಪಾತ್ರಕ್ಕೂ ಸೈ. ಮೊದಲ ಚಿತ್ರ ಬಿಡುಗಡೆ ಆಗುವ ಮುನ್ನವೇ ಮತ್ತೊಂದೆರಡು ಅವಕಾಶಗಳೂ ಬಂದಿದೆ. ಸದ್ಯ ‘ಅಕ್ಕ’ ಧಾರಾವಾಹಿಯಲ್ಲೂ ನಟಿಸುತ್ತಿರುವ ಕಾರ್ತಿಕ್, ಸಿನಿಮಾದಲ್ಲಿ ಒಂದು ಹಂತಕ್ಕೆ ಬೆಳೆದ ಮೇಲೆ ಅದೇ ಅವರ ಕರ್ಮಭೂಮಿಯಾಗಲಿದೆ.

ವಿಭಿನ್ನ ಆಸಕ್ತಿ
ಉಡುಪಿಯ ಸ್ಥಳೀಯ ವಾಹಿನಿಯಲ್ಲಿ ನಿರೂಪಣೆ ಮಾಡಿದ ಅನುಭವವೂ ಕಾರ್ತಿಕ್ ಅವರಿಗಿದೆ. ತೆರೆಯ ಮೇಲೆ ಬರುವ ಮೊದಲು ಮಂಡ್ಯ ರಮೇಶ್ ಅವರ ಜೊತೆ ನಾಲ್ಕಾರು ನಾಟಕಗಳಲ್ಲೂ ಅಭಿನಯಿಸಿ ಪಳಗಿದ್ದಾರೆ. ರಂಗಭೂಮಿಯಲ್ಲಿ ಆಸಕ್ತಿಯಿರುವ ಕಾರಣಕ್ಕೆ ಕಲಾತ್ಮಕ ಚಿತ್ರಗಳ ಕುರಿತಾಗಿಯೂ ಒಲವಿದೆ. ಭರತನಾಟ್ಯ, ಕರಾಟೆ, ಕರ್ನಾಟಕ ಸಂಗೀತ, ಚಿತ್ರಕಲೆಯೂ ಗೊತ್ತು. ಒಳ್ಳೆಯ ಕ್ರಿಕೆಟ್‌ ಆಟಗಾರರೂ ಹೌದು. ಹತ್ತನೇ ತರಗತಿ ನಂತರ ಸಂಸ್ಕೃತ ಅಧ್ಯಯನ ಮಾಡಿದ ಅಪ್ಪಟ ಬ್ರಾಹ್ಮಣ ಕುಟುಂಬದ ಈ ಕುಡಿ ಪೌರೋಹಿತ್ಯವನ್ನೂ ಮಾಡಿ ಬಲ್ಲವರು.

ಧಾರಾವಾಹಿ ಜನಪ್ರಿಯತೆಯೇ ಬೇರೆ, ಸಿನಿಮಾ ಜನಪ್ರಿಯತೆಯೇ ಬೇರೆ. ಅವೆರಡರ ವೀಕ್ಷಕರೂ ಬೇರೆ ಬೇರೆ. ಧಾರಾವಾಹಿಗಳಲ್ಲಿ ಬೇಗನೆ ಜನ ಗುರ್ತಿಸುತ್ತಾರೆ. ಆದರೆ ಸಿನಿಮಾವನ್ನು ಎಷ್ಟು ಜನ ನೋಡುತ್ತಾರೆ ಎನ್ನುವುದು ತಿಳಿಯುವುದಿಲ್ಲ. ಹಾಗಾಗಿ ಧಾರಾವಾಹಿಯಲ್ಲಿ ದೊರೆತ ಜನಪ್ರಿಯತೆ ಜನರನ್ನು ಸಿನಿಮಾ ಮಂದಿರಕ್ಕೆ ಕರೆತರುವಲ್ಲಿ ಸಫಲವಾಗುತ್ತದೆ ಎನ್ನುವುದರ ಬಗ್ಗೆ ಕಾರ್ತಿಕ್‌ಗೆ ಅನುಮಾನವಿದೆ. ಆದರೂ ತಮ್ಮ ಅಭಿಮಾನಿಗಳು ಸಿಕ್ಕಾಗಲೆಲ್ಲ ಸಿನಿಮಾದ ಬಗ್ಗೆ ಮಾತನಾಡುವ ಕಾರ್ತಿಕ್, ಒಂದಷ್ಟು ಜನರಾದರೂ ಸಿನಿಮಾ ನೋಡಿ ತನ್ನನ್ನು ಹರಸುತ್ತಾರೆಂಬ ನಂಬಿಕೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT