ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟನೆಯೇ ಹವ್ಯಾಸ ನಟನೆಯೇ ಚಟ...

Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

‘ಓದಿದ್ದು ಎಂಜಿನಿಯರಿಂಗ್. ಚಿಕ್ಕವಳಿಂದಲೂ ನಟನೆಯ ಬಗ್ಗೆ ಆಸಕ್ತಿ. ಆದರೂ ಓದು ಮುಗಿಸದೇ ಚಿತ್ರ ಜಗತ್ತಿನ ಮುಖವಾಡ ತೊಡುವುದಿಲ್ಲ ಎಂಬ ದೃಢ ನಿರ್ಧಾರ. ಓದು ಮುಗಿಯುತ್ತಿದ್ದಂತೆ ಕೆಲಸದ ಆಫರ್‌ಗಳು ಬಂದವು. ಯಾವ ಕಡೆ ಹೆಜ್ಜೆ ಇಡಬೇಕು ಎಂಬ ಗೊಂದಲದಲ್ಲಿ ಗೆದ್ದಿದ್ದು ಮಾತ್ರ ಬಣ್ಣದ ಲೋಕದ ಗೀಳು!’

–-ಇದು ಈಗಷ್ಟೇ ಸ್ಯಾಂಡಲ್‌ವುಡ್‌ನಲ್ಲಿ ಕಣ್ಣುಬಿಡುತ್ತಿರುವ ನಟಿ ಸಂಜನಾ ಪ್ರಕಾಶ್ ಅವರು ನಟನೆಯೆಡೆಗಿನ ತಮ್ಮ ಸೆಳೆತವನ್ನು ವಿವರಿಸುವ ಪರಿ.

ಸಿನಿಮಾ ನೋಡುವಾಗ ಎದುರಿನ ಪಾತ್ರಗಳಲ್ಲಿ ತನ್ನನ್ನು ಕಲ್ಪಿಸಿಕೊಂಡು, ಆ ಪಾತ್ರದಲ್ಲಿ ನಾನಿರಬೇಕಿತ್ತು, ನಾನಿದ್ದರೆ ಹೀಗೆಲ್ಲ ಮಾಡುತ್ತಿದ್ದೆ, ಹೀಗೆ ಕಾಣಿಸಿಕೊಳ್ಳುತ್ತಿದ್ದೆ ಎಂಬ ಕಲ್ಪನೆಗಳು ಅವರ ತಲೆಯಲ್ಲಿ ಸುತ್ತುತ್ತಿದ್ದವಂತೆ. ಆದರೆ ನಾನೂ ಒಂದಲ್ಲ ಒಂದು ದಿನ ತೆರೆಮೇಲೆ ಕಾಣಿಸಿಕೊಳ್ಳುತ್ತೇನೆ ಎಂಬ ವಿಚಾರ ಆಗ ಹೊಳೆದೇ ಇರಲಿಲ್ಲವಂತೆ.

ಚಿತ್ರದುರ್ಗದ ಈ ಚೆಲುವೆ ಓದಿದ್ದೆಲ್ಲ ರಾಜಧಾನಿಯಲ್ಲಿ. ಓದುತ್ತಲೇ ನಾಟಕ, ಮಾಡೆಲಿಂಗ್, ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಂಜನಾಗೆ ರ್‍್ಯಾಂಪ್ ಮೇಲಿನ ಮಾರ್ಜಾಲ ನಡಿಗೆ ಅನುಭವವೂ ಇದೆ. ಕಾಲೇಜು ದಿನಗಳಲ್ಲಿ ‘ಬೆಸ್ಟ್ ಮಾಡೆಲ್’ ಹೆಮ್ಮೆಗೂ ಪಾತ್ರರಾಗಿದ್ದಾರೆ. ಭರತ ನಾಟ್ಯ, ಬೆಲ್ಲಿ, ಸಾಲ್ಸಾ, ಜೈವ್ ನೃತ್ಯಗಳ ತರಬೇತಿಯೂ ಆಗಿದೆ. ಕ್ಯಾಮೆರಾ ಎದುರು ಒಂಚೂರೂ ಭಯ ಪಡುವ ಜಾಯಮಾನ ಅವರದಲ್ಲ. ಇಷ್ಟಿದ್ದೂ ಹೆತ್ತವರ ತುಸು ವಿರೋಧದ ನಡುವೆಯೇ ಸಂಜನಾ ಚಿತ್ರಗಳಲ್ಲಿ ಕಾಣಿಸಿಕೊಂಡರು. ಈಗ ಮಗಳನ್ನು ತೆರೆಮೇಲೆ ಕಂಡು ಹೆತ್ತವರಿಗೂ ಹಿಗ್ಗು.

ತೆರೆಕಂಡ ಲೆಕ್ಕದಲ್ಲಿ ಹೇಳುವುದಾದರೆ ಸಂಜನಾರ ಮೊದಲ ಚಿತ್ರ ‘ಪಂಗನಾಮ’. ಅದಕ್ಕೂ ಮುನ್ನ ‘ಹೋನಾ ಥಾ’ ಹಿಂದಿ ಚಿತ್ರದಲ್ಲಿ ನಟಿಸಿ ಬಂದಿದ್ದಾರೆ. ‘ಪಂಗನಾಮ’ ಸೋತಿದ್ದರೂ ಅದು ತನ್ನ ವೃತ್ತಿ ಬದುಕಲ್ಲಿ ಕಪ್ಪುಚುಕ್ಕೆಯಾಯಿತು ಎಂದು ಅವರಿಗೆ ಯಾವತ್ತೂ ಅನ್ನಿಸಿಲ್ಲವಂತೆ. ಅದರಲ್ಲಿ ಮುಗ್ಧ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಕ್ಕೆ ಸಂಜನಾಗೆ ಸಂತಸವಿದೆ. ‘ನಾನು ಆ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಕಾಣಿಸಿಕೊಂಡೆ’ ಎಂದು ಮುಲಾಜಿಲ್ಲದೇ ಹೇಳುತ್ತಾರೆ.

ಎರಡನೇ ಚಿತ್ರ ‘ಕಲಬೆರಕೆ’ ತೆರೆಗೆ ಬರಲು ಸಿದ್ಧವಾಗಿದೆ. ನಾಯಕ ಅನಿರುದ್ಧ್‌ಗೆ ಜೋಡಿಯಾಗಿ ವೈದ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಕಲಬೆರಕೆ’ಯಲ್ಲಿ ಸಂಜನಾ ಮೂವತ್ತು ಕುಡುಕರ ಜೊತೆ ಬೆರೆತಿದ್ದಾರೆ, ಕಲಿತಿದ್ದಾರೆ. ಚಿತ್ರತಂಡದ ತಾಳ್ಮೆ ಕಂಡ ಸಂಜನಾ ಕೂಡ ತಾಳ್ಮೆ ರೂಢಿಸಿಕೊಳ್ಳುತ್ತಿದ್ದಾರಂತೆ. ಅವರ ಪಾಲಿಗೆ ಇದೊಂಥರ ಕಲಿಯುವಿಕೆ ಮತ್ತು ಬೆರೆಯುವಿಕೆಗೆ ತಾವಾಗಿತ್ತು. ‘ಚಿಲ್ರೆ ಶೋಕಿ’ ಚಿತ್ರವನ್ನು ಬಹುತೇಕ ಮುಗಿಸಿದ್ದಾರೆ. ಅದಾದ ನಂತರ ಕೆಲ ಅವಕಾಶಗಳು ಬಂದರೂ ಯಾವುದಕ್ಕೂ ಸಹಿ ಹಾಕಿಲ್ಲ.

‘ಇದುವರೆಗೆ ಪಾತ್ರ ಒಪ್ಪುವ ಮೊದಲು ನನ್ನಿಂದ ಮಾಡಲು ಸಾಧ್ಯವಾ ಎಂದಷ್ಟೇ ಯೋಚಿಸುತ್ತಿದ್ದೆ. ಮುಂದೆ ನನ್ನ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇದೆ ಎನ್ನುವುದನ್ನು ಲೆಕ್ಕ ಹಾಕಿಯೇ ಒಪ್ಪಿಕೊಳ್ಳುವುದು’ ಎಂಬುದು ಎಂಜಿನಿಯರ್ ಸಂಜನಾರ ಲೆಕ್ಕಾಚಾರ. ಚಿತ್ರದುದ್ದಕ್ಕೂ ಅಸ್ತಿತ್ವದಲ್ಲಿರುವ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಬಯಸಿದ್ದಾರೆ. ಪಾತ್ರ ಇಷ್ಟವಾದರೆ ನಾಯಕಿಯಾಗಿಯೇ ತೆರೆಮೇಲೆ ಬರಬೇಕೆಂಬ ಹಠ ಅವರಿಗಿಲ್ಲ. ಅಂತಿಮವಾಗಿ ಪ್ರೇಕ್ಷಕರ ಮನಸಲ್ಲಿ ಉಳಿಯಬೇಕು ಎಂಬುದು ನಿಲುವು. ಒಟ್ಟಿನಲ್ಲಿ ನಟನೆ ಬಿಟ್ಟು ಮತ್ತೇನೂ ಅವರ ತಲೆಯಲ್ಲಿಲ್ಲ. ‘ನಟನೆಯೇ ನನ್ನ ಹವ್ಯಾಸ, ನಟನೆಯೇ ನನ್ನ ಚಟ’ ಎನ್ನುತ್ತಾರೆ.

ಮೈ ಮುಚ್ಚುವ ಬಟ್ಟೆ ತೊಟ್ಟಿದ್ದರೂ ಅಸಭ್ಯವಾಗಿ ತೋರಿಸಲು ಸಾಧ್ಯವಿದೆ. ಹೀಗಾಗಿ ಬಟ್ಟೆಯ ನಿಬಂಧನೆ ಎನ್ನುವುದಕ್ಕಿಂತ ಸಭ್ಯತೆಯೆ ಎಲ್ಲೆ ಮೀರುವ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಅವರು ಇಷ್ಟಪಡುವುದಿಲ್ಲ. ‘ನಾನು ಎಲ್ಲ ರೀತಿಯ ತೊಡುಗೆಯಲ್ಲೂ ಕಂಫರ್ಟ್ ಆಗಿರುತ್ತೇನೆ. ಆದ್ದರಿಂದ ನನ್ನನ್ನು ಹೇಗೆ ಬಿಂಬಿಸುತ್ತಾರೆ ಎಂಬುದರ ಮೇಲೆ ನನ್ನ ವಸ್ತ್ರ ಸಂಹಿತೆ ನಿಂತಿದೆ’ ಎನ್ನುತ್ತಾರೆ. ಹೆಚ್ಚೆಚ್ಚು ಗ್ಲಾಮರ್ ಆಗಿ ಕಾಣಿಸಕೊಳ್ಳಬೇಕೆಂಬ ಆಸೆ ಅವರಿಗೆ. ಹಾಗೆಂದು ಸದ್ಯಕ್ಕಂತೂ ತುಂಡುಡುಗೆಗಳಲ್ಲಿ ಕಾಣಿಸಿಕೊಳ್ಳಲು ಒಲ್ಲದ ಸಂಜನಾ, ‘ಮುಂದೆ ಜನಪ್ರಿಯತೆ ಸಿಕ್ಕಮೇಲೆ ಚಿತ್ರಕ್ಕೆ ತೀರಾ ಅಗತ್ಯವಿದ್ದಲ್ಲಿ...’ ಎಂದು ಮಾತು ಮುರಿಯುತ್ತಾರೆ.

ರೊಮ್ಯಾಂಟಿಕ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವಲ್ಲಿ ತಮಗೆ ತಾವೇ ಬೌಂಡರಿ ಹಾಕಿಕೊಂಡಿದ್ದಾರೆ. ‘ಪಂಗನಾಮ’ದಲ್ಲಿ ಮುಗ್ಧೆಯಂತೆ ‘ಪಿಕ್ಚರ್‌ಗಳಲ್ಲೆಲ್ಲ ಮುತ್ತು ಕೊಡ್ತಾರಲ್ಲ, ಅವ್ರಿಗೆ ಏನೂ ಅನ್ಸಲ್ವ’ ಎಂದು ಕೇಳುವ ಸಂಜನಾ, ‘ನಿಜವಾಗಿ ನಾನು ಮುಗ್ಧೆಯೇ’ ಎಂದು ನಗುತ್ತಾರೆ. ತಾನು ಕಿಸ್ಸಿಂಗ್ ಸೀನ್‌ಗಳಲ್ಲೆಲ್ಲ ಕಾಣಿಸಿಕೊಳ್ಳುವುದೇ ಇಲ್ಲ ಎಂದು ಹೇಳುವ ವಿಧಾನ ಇದು.

ಆರಂಭದಲ್ಲೇ ದ್ವಿಭಾಷಾ ನಟಿಯಾಗಿ ಕಾಣಿಸಿಕೊಂಡ ಸಂಜನಾ ಬಹುಭಾಷಾ ನಟಿಯಾಗುವ ಕನಸನ್ನೂ ಹೊತ್ತಿದ್ದಾರೆ. ಆದರೆ ಯಾವುದೇ ಭಾಷೆ ಚಿತ್ರಗಳಲ್ಲಿ ನಟಿಸಿದರೂ ತನ್ನ ಪಾತ್ರಕ್ಕೆ ತಾನೇ ಕಂಠ ನೀಡುವ ಷರತ್ತು ಅನ್ವಯಿಸಿಕೊಂಡಿದ್ದಾರೆ. ಈವರೆಗಿನ ಚಿತ್ರಗಳಿಗೂ ಅವರೇ ಕಂಠವಿದೆ. ಹೀಗಾಗಿ ಬೇರೆ ಭಾಷೆಗಳಲ್ಲಿ ನಟಿಸುವ ಮುನ್ನ ಆ ಭಾಷೆಗಳನ್ನು ಕಲಿತೇ ಮುಂದಡಿ ಇಡುವ ಯೋಜನೆ. ಇಲ್ಲದಿದ್ದರೆ ಅಂಥ ಚಿತ್ರಗಳತ್ತ ನೋಡುವುದೇ ಇಲ್ಲ ಎಂಬ ಸಮರ್ಥನೆ. ಎಲ್ಲಕ್ಕಿಂತ ಮಿಗಿಲಾಗಿ ತಾಯ್ನೆಲದಲ್ಲೇ ಹೆಸರು ಮಾಡುವತ್ತ ಅವರ ಚಿತ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT